ಮಹಿಳೆಯರು ಆರ್ಥಿಕವಾಗಿ ಬಲಿಷ್ಠವಾದರೆ ಪ್ರತಿ ಕುಟುಂಬ ಬಲಿಷ್ಠವಾಗುತ್ತದೆ: ರಾಜೇಶ್ ನಾಯ್ಕ್
ವಿಟ್ಲ: ಮಹಿಳೆಯರು ಆರ್ಥಿಕವಾಗಿ ಬಲಿಷ್ಠವಾದರೆ ಪ್ರತಿ ಕುಟುಂಬ ಬಲಿಷ್ಠವಾಗುತ್ತದೆ, ಕುಟುಂಬ ಬಲಿಷ್ಠವಾದರೆ,ಗ್ರಾಮ,ರಾಜ್ಯ,ದೇಶ ಬಲಿಷ್ಠವಾಗುತ್ತದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತುರವರು ಹೇಳಿದರು.
ಅವರು ಸ್ತ್ರೀ ಶಕ್ತಿ ಭವನದಲ್ಲಿ ಸುಗ್ರಾಮ ಗ್ರಾಮ ಪಂಚಾಯತ್ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ವತಿಯಿಂದ ಶಾಸಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನೆಯ ಪ್ರತಿ ಸದಸ್ಯರು ದುಡಿದರೆ ಮಾತ್ರ ಮನೆ ಆರ್ಥಿಕವಾಗಿ ಸದೃಢವಾಗಬಹುದು. ಗ್ರಾಮ ಪಂಚಾಯತ್ ಸದಸ್ಯರ ಅಧಿಕಾರದ ವ್ಯಾಪ್ತಿಯನ್ನು ಮೊದಲು ತಿಳಿದುಕೊಂಡು ಕರ್ತವ್ಯ ಮಾಡಿ, ಗ್ರಾಮದ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಎಂದು ಅವರು ಸಲಹೆ ನೀಡಿದರು. ಗ್ರಾಮ ಪಂಚಾಯತ್‌ನಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳಾದ ಸದಸ್ಯರಿಗೆ ಬಹಳಷ್ಟು ಜವಾಬ್ದಾರಿಯಿದೆ. ಸಂಘದ ಮೂಲಕ ಸಂಘಟಿತರಾಗಿ, ಗ್ರಾಮದ ಸಮಸ್ಯೆಗಳಿಗೆ ಪರಿಹಾರದ ಸೇವೆ ಮಾಡಿ. ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಿ ಉಳಿದ ಅವಧಿಯಲ್ಲಿ ಅಭಿವೃದ್ಧಿಗಾಗಿ ಜೊತೆಯಾಗಿ ಕೆಲಸ ಮಾಡಿ. ಮನೆಯಲ್ಲಿ ಮಹಿಳೆಯೊಬ್ಬಳು ಶಿಕ್ಷಣ ಪಡೆದರೆ ಇಡೀ ಕುಟುಂಬ ಶಿಕ್ಷಿತರಾಗುತ್ತಾರೆ, ಅದೇ ರೀತಿಯಲ್ಲಿ ಮಹಿಳೆ ಸ್ವಾವಲಂಬಿ ಜೀವನ ಮಾಡಿದರೆ ಅ ಮನೆ ಆರ್ಥಿಕವಾಗಿ ಹೆಚ್ಚು ಬಲಿಷ್ಠ ವಾಗುತ್ತದೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ಅಧ್ಯಕ್ಷೆ ಶಕೀಲಕೃಷ್ಣಪ್ಪ ಪೂಜಾರಿ ನೆಟ್ಲಮುಡ್ನೂರು,ಉಪಾಧ್ಯಕ್ಣೆ ಪ್ರೇಮಲತಾ ವಿಟ್ಲಪಡ್ನೂರು, ಕಾರ್ಯದರ್ಶಿ ಸೌಮ್ಯಲತಾ ಕೊಳ್ನಾಡು, ಕೋಶಾಧಿಕಾರಿ ವಿಜಯ ಮಂಚಿ, ಸುಗ್ರಾಮ ಗ್ರಾಮ ಪಂಚಾಯತ್ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ಕಾರ್ಯಕ್ರಮ ಸಂಯೋಜಕ ಚೇತನ್, ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.