ಬೆಟ್ಟಂಪಾಡಿ: ಇಲ್ಲಿನ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಇತಿಹಾಸ ಪ್ರಸಿದ್ಧ ಜಾಂಬ್ರಿ ಗುಹೆ, ಕಳೆಂಜನ ಗುಂಡಿ ವೀಕ್ಷಿಸಲು ಜೂ.25 ರಂದು ಚಾರಣಯಾನ ನಡೆಸಿದರು.
ಬೆಳಗ್ಗೆ ವಿದ್ಯಾರ್ಥಿ ಹಾಗೂ ಶಿಕ್ಷಕರು ಆರ್ಲಪದವು ದೈವ ಸಾನಿಧ್ಯ ಪೂಮಾಣಿ-ಕಿನ್ನಿಮಾಣಿ, ಮಲರಾಯ ರಾಜನ್ ದೈವಗಳ ಚಾವಡಿಯ ಆವರಣದಿಂದ ಹೊರಟು, ರಣಮಂಗಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದ ದಾರಿಯಾಗಿ ಚಾರಣ ಮಾಡಿದರು. 9ನೇ ತರಗತಿ ವಿದ್ಯಾರ್ಥಿನಿ ಯಶ್ವಿ ರೈಯವರ ಪೋಷಕರಾದ ಉಮೇಶ್ ರೈ ಗಿಳಿಯಾಳು ರವರು ತಮ್ಮ ಮನೆಯಲ್ಲಿ ಲಘು ಉಪಹಾರ ವ್ಯವಸ್ಥೆಗೊಳಿಸಿದ್ದರು.
ಪೋಷಕರಾದ ಗಿರೀಶ್ ಬೈಂಕ್ರೋಡು ಗುಹೆಯ ಬಗ್ಗೆ ಮಾಹಿತಿ ನೀಡಿ ‘ಈ ಗುಹೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪುರಾತನ ಕಾಲದಲ್ಲಿ ಒಬ್ಬ ಮಹಿಳೆ ನರೆ (ಗೆಡ್ಡೆ)ಯನ್ನು ಕತ್ತಿಯಿಂದ ಅಗೆಯುತ್ತಿರುವಾಗ, ಆ ಕತ್ತಿ ಮಹಾಲಿಂಗೇಶ್ವರ ದೇವರ ತಲೆಗೆ ಸ್ಪರ್ಶಿಸಿದ ಕಾರಣ ಬೇಸರಿಸಿದ ಮಹಾಲಿಂಗೇಶ್ವರ ದೇವರು ಈ ಗುಹಾ ಮಾರ್ಗವಾಗಿ ಪ್ರವೇಶಿಸಿ ನೆಟ್ಟಣಿಗೆಯಲ್ಲಿ ನೆಲೆ ನಿಂತರು ಎಂಬ ಪ್ರತೀತಿ ಇದೆ. ಇಲ್ಲಿ 12 ವರ್ಷಗಳಿಗೊಮ್ಮೆ ಉತ್ಸವ ನಡೆಯುತ್ತದೆ’ ಎಂಬ ಐತಿಹ್ಯವನ್ನು ತಿಳಿಸಿದರು. ಮಕ್ಕಳಿಗೆ ತಮ್ಮಲ್ಲೇ ಬೆಳೆದ ರಂಬೂಟಾನ್ ಹಾಗೂ ಹಲಸು ಹಣ್ಣು ವಿತರಿಸಿ ಭೋಜನದ ವ್ಯವಸ್ಥೆ ಮಾಡಿದ್ದರು. ಇನ್ನೋರ್ವ ಪೋಷಕರಾದ ಪ್ರವೀಣ್ ಶೆಟ್ಟಿ ಸೂರಂಬೈಲು ಸಿಹಿತಿಂಡಿ, ತಂಪು ಪಾನೀಯ ನೀಡಿದರು. ಶಿಕ್ಷಕರಾದ ವಿಪಿನ್, ಪವಿತ್ರ, ಶರ್ಮಿಳ ,ಸ್ನೇಹ, ಭವ್ಯ, ಸಂಧ್ಯ, ಕೃಷ್ಣವೇಣಿ, ಗೌತಮಿ, ಪ್ರಜ್ಞಾ ಚಾರಣದಲ್ಲಿ ಭಾಗವಹಿಸಿದ್ದರು. ಶಿಕ್ಷಕ ಪ್ರಶಾಂತ್ ಚಾರಣದ ನೇತೃತ್ವ ವಹಿಸಿಕೊಂಡಿದ್ದರು.