ಮಂಗಳೂರು: ಐಎಸ್ ಉಗ್ರ ಸಂಘಟನೆಯ ಜೊತೆ ಸೇರಿ ದೇಶದಾದ್ಯಂತ ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ 9 ಮಂದಿಯ ವಿರುದ್ದ ರಾಷ್ಟ್ರೀಯ ತನಿಖಾ ದಳವು ಮೊದಲ ಪೂರಕ ಆರೋಪ ಪಟ್ಟಿ ಸಲ್ಲಿಸಿದೆ.
ಮಹಮ್ಮದ್ ಶಾರೀಕ್(25), ಮಾಝ್ ಮುನೀರ್ ಅಹಮ್ಮದ್ (23), ಸೈಯದ್ ಯಾಸೀನ್ (22), ರಿಶಾನ್ ತಾಜುದ್ದೀನ್ ಶೇಖ್ (22), ಹುಝೈರ್ ಫರ್ಹಾನ್ ಬೇಗ್ (22), ಮಝೀನ್ ಅಬ್ದುಲ್ ರಹಿಮಾನ್ (22), ನದೀಮ್ ಅಹಮ್ಮದ್ ಕೆ (22), ಜಬೀವುಲ್ಲಾ (32) ಮತ್ತು ನದೀಮ್ ಫೈಝಲ್ ಎನ್. (27) ಎಂಬವರ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಲಾಗಿದೆ.
ಈ ಎಲ್ಲಾ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆ(ಯುಎಪಿಎ)ಯಡಿ ಮತ್ತು ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು ಎಂದು ಎನ್‌ಐಎ ತಿಳಿಸಿದೆ. ದಾಳಿಗಳನ್ನು ನಡೆಸುವ ಕೌಶಲ್ಯಕ್ಕಾಗಿ ಆರೋಪಿಗಳಲ್ಲಿ ಐವರಿಗೆ ರೋಬೊಟಿಕ್ ಕೋರ್ಸ್ ಮಾಡಲು ಐಎಸ್ ಸಂಘಟನೆಯನ್ನು ನಿರ್ವಹಣೆ ಮಾಡುವವರು ಸೂಚಿಸಿದ್ದರು ಎಂದು ಆರೋಪಿಸಿದೆ.
ಉಗ್ರ ಚಟುವಟಿಕೆಗಳಿಗೆ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಸಲುವಾಗಿ ಶಾರೀಕ್, ಮುನೀರ್ ಮತ್ತು ಯಾಸೀನ್ ವಿದೇಶದಲ್ಲಿರುವ ಐಎಸ್ ಉಗ್ರರ ಜೊತೆ ಸೇರಿ ಕ್ರಿಮಿನಲ್ ಪಿತೂರಿ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ. ದೇಶದ ಸುರಕ್ಷತೆ, ಏಕತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಈ ಮೂವರೂ ಇತರ ಆರೋಪಿಗಳನ್ನು ತಮ್ಮ ಜೊತೆ ಸೇರಿಸಿಕೊಂಡಿದ್ದರು ಎಂದು ಎನ್‌ಐಎ ಹೇಳಿದೆ. ಐಎಸ್ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಆನ್‌ಲೈನ್ ಮೂಲಕ ನಿರ್ವಹಣೆ ಮಾಡುವವರು ಈ ಆರೋಪಿಗಳಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸಿನ ನೆರವು ನೀಡಿದ್ದರು ಎಂದು ಎನ್‌ಐಎ ಹೇಳಿದೆ.
2022ರ ಸೆ.19ರಂದು ಶಿವಮೊಗ್ಗ ಗ್ರಾಮೀಣ ಪೊಲೀಸರು ಮೊದಲು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ನ.15ರಂದು ಈ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿತ್ತು.