ಬ್ಯಾಂಕ್‌ಗಳಲ್ಲಿ ಕನ್ನಡ ಬಲ್ಲ ಸಿಬ್ಬಂದಿಗಳ ನೇಮಕ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ

0

ಮಂಗಳೂರು:ದ.ಕ. ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಗೊತ್ತಿಲ್ಲದ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಮಾತ್ರ ಗೊತ್ತಿರುವ ಅಧಿಕಾರಿಗಳಿಂದಾಗಿ ಗ್ರಾಮೀಣ ಜನತೆಗೆ ವಹಿವಾಟು ನಡೆಸಲು ಭಾಷಾ ತೊಡಕು ಉಂಟಾಗುತ್ತಿದ್ದು ಗ್ರಾಮೀಣ ಜನತೆ ಸಹಕಾರಿ ಬ್ಯಾಂಕ್‌ಗಳತ್ತ ಮುಖಮಾಡುವಂತಾಗಿದೆ ಎಂದು ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.


ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ನಡೆದ ದ.ಕ.ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ(ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಬಲ್ಲ ಸಿಬ್ಬಂದಿಗಳನ್ನೇ ಬ್ಯಾಂಕ್‌ಗಳಲ್ಲಿ ನೇಮಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.ಉತ್ತರಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕನ್ನಡ ಗೊತ್ತಿರದ ಅಧಿಕಾರಿ, ಸಿಬ್ಬಂದಿಗಳ ಪಟ್ಟಿ ಸಿದ್ಧಪಡಿಸಿ ಜಿ.ಪಂ.ಗೆ ಸಲ್ಲಿಸಿ.ಬ್ಯಾಂಕ್‌ಗಳಲ್ಲಿ ಕನ್ನಡ ಗೊತ್ತಿರುವವರನ್ನು ನೋಡೆಲ್ ಆಗಿ ನೇಮಕಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗೆ ಸೂಚನೆ ನೀಡಿದರು.


ಮೇಲ್ಸೇತುವೆ ಕಾಮಗಾರಿ ಅಡೆತಡೆ ನಿವಾರಿಸಿ:
ನಂತೂರು, ಕೆಪಿಟಿ ಹಾಗೂ ಕೂಳೂರುಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿಗೆ ಎದುರಾಗಿರುವ ಅಡೆತಡೆಯನ್ನು ನಿವಾರಿಸಿ ವಾರದೊಳಗೆ ಕಾಮಗಾರಿ ಆರಂಭಿಸುವಂತೆ ಸಂಸದರು ಹೆದ್ದಾರಿ ಇಲಾಖಾ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.ಎನ್‌ಎಚ್‌ಐಎ, ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ಎಲ್ಲ ಕಾಮಗಾರಿ ಪ್ರಗತಿ ಕುರಿತಂತೆ ಪ್ರತಿ 15 ದಿನಕ್ಕೊಮ್ಮೆ ಪರಿಶೀಲನಾ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಸೂಚಿಸಿದರು.


ಬ್ರಹ್ಮರಕೂಟ್ಲುವಿನಲ್ಲಿ ಬ್ರಹ್ಮಸ್ಥಾನ ಸ್ಥಳಾಂತರಗೊಂಡರೆ, ಅಲ್ಲಿ ನಾಲ್ಕು ಪಥದ ಕಾಮಗಾರಿ ನಡೆಸಬೇಕು. ಸುರತ್ಕಲ್‌ನ ಎನ್‌ಐಟಿಕೆ ಹಳೆ ಟೋಲ್‌ಗೇಟ್‌ನ್ನು ತೆರವುಗೊಳಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.


ಕಾಮಗಾರಿ ತಡೆದರೆ ಮತ್ತೆ ವಿಳಂಬ:
ಟೆಂಡರ್ ಹಂತದಲ್ಲಿರುವ ಕಾಮಗಾರಿಗೆ ರಾಜ್ಯ ಸರ್ಕಾರ ತಡೆಹಿಡಿದೆ.ಇದರಿಂದಾಗಿ ಮತ್ತೆ ಕಾಮಗಾರಿ ನಡೆಸಬೇಕಾದರೆ, ಎಲ್ಲ ಕಡತಗಳು ಬೆಂಗಳೂರಿಗೆ ಹೋಗಿ ಮರು ಅನುಮೋದನೆಗೊಂಡು ಬರಬೇಕು.ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಸೇರಿದಂತೆ ವಿವಿಧ ಕಾಮಗಾರಿ ಅನುಷ್ಠಾನಗೊಳ್ಳದೆ ಆರಂಭದಲ್ಲೇ ವಿಳಂಬವಾಗುವಂತೆ ಆಗಿದೆ. ಇದನ್ನು ಸರ್ಕಾರದ ಗಮನಕ್ಕೆ ತರುವಂತೆ ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿದರು.


ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಅನುಷ್ಠಾನವಾಗುತ್ತಿದೆ. ಆದರೆ ಬದಿಬದಿಗಳಲ್ಲಿ ತಳ್ಳುಗಾಡಿ ವ್ಯಾಪಾರಸ್ಥರು ಎಲ್ಲೆಂದರಲ್ಲಿ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.ಅವರಿಗೆ ಪ್ರತ್ಯೇಕ ಜಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ವೇದವ್ಯಾಸ್ ಕಾಮತ್ ಆಗ್ರಹಿಸಿದರು.


ಮಾಜಿ ಶಾಸಕರ ಹಸ್ತಕ್ಷೇಪ:
ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಿಗದಿತ ಸ್ಕೆಚ್‌ನಂತೆಯೇ ನಡೆಸಬೇಕು. ಇಲ್ಲಿ ಮಾಜಿ ಶಾಸಕರು ಹಸ್ತಕ್ಷೇಪಕ್ಕೆ ಮುಂದಾಗಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಶಾಸಕ ಹರೀಶ್ ಪೂಂಜಾ ಆಗ್ರಹಿಸಿದರು.ನಿಗದಿತ ಸ್ಕೆಚ್ ಪ್ರಕಾರವೇ ಕಾಮಗಾರಿ ನಡೆಸುವಂತೆ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ನಳಿನ್ ಕುಮಾರ್ ಸೂಚಿಸಿದರು.ಮಹಾನಗರ ಪಾಲಿಕೆ ಮೇಯರ್ ಜಯಾನಂದ ಅಂಚನ್, ಜಿ.ಪಂ. ಸಿಇಒ ಡಾ|ಆನಂದ್, ಪಾಲಿಕೆ ಆಯುಕ್ತ ಆನಂದ್ ಇದ್ದರು.

LEAVE A REPLY

Please enter your comment!
Please enter your name here