ಉಪ್ಪಿನಂಗಡಿ: ಕಿಂಡಿ ಅಣೆಕಟ್ಟಿನ ಹಲಗೆ ಶಿಥಿಲಗೊಂಡಿದ್ದ ಕಾರಣ ಕೆಲ ವರ್ಷ ನೀರು ಸಂಗ್ರಹಣೆಯಾಗುತ್ತಿಲ್ಲದ ಪಂಚೇರು ಕಿಂಡಿ ಅಣೆಕಟ್ಟಿಗೆ ಕಳೆದ ವರ್ಷ ಬೇರೆ ಕಡೆಯಿಂದ ಹಲಗೆ ತಂದು ಜೋಡಿಸಿ, ನೀರು ಸಂಗ್ರಹ ಕಾರ್ಯ ನಡೆಸಲಾಗಿತ್ತು. ಆದರೆ ಈ ಬಾರಿಯ ಮಳೆಗಾಲದಲ್ಲಿ ಕಿಂಡಿ ಅಣೆಕಟ್ಟಿನಿಂದ ತೆಗೆದ ಹಲಗೆಯನ್ನು ಗೋದಾಮಿನಲ್ಲಿ (ದಾಸ್ತಾನು ಕೊಠಡಿ)ಯಲ್ಲಿ ಜೋಡಿಸಿಡದೇ ಬಿಸಿಲು, ಮಳೆ- ಗಾಳಿಗೆ ಸಿಲುಕಿ ಶಿಥಿಲಗೊಳ್ಳುವಂತೆ ಅಣೆಕಟ್ಟಿನ ಬದಿಯಲ್ಲೇ ಸುಮಾರು ಎಂಟು ದಿನಗಳಿಂದ ರಾಶಿ ಹಾಕಲಾಗಿದೆ.
ಕೃಷಿ ಚಟುವಟಿಕೆ ಹಾಗೂ ಅಂತರ್ಜಲ ವೃದ್ಧಿಸುವ ಮೂಲ ಉದ್ದೇಶದಿಂದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸುವ ಕಿಂಡಿ ಅಣೆಕಟ್ಟುಗಳಲ್ಲಿ ಆ ಬಳಿಕ ಸರಿಯಾದ ನಿರ್ವಹಣೆಯಿಲ್ಲದೆ ನೀರಿಂಗಿಸುವ ಮೂಲ ಉದ್ದೇಶವೇ ಈಡೇರುತ್ತಿರಲಿಲ್ಲ. ಅವುಗಳಲ್ಲಿ ಪಂಚೇರಿನ ಕಿಂಡಿ ಅಣೆಕಟ್ಟು ಕೂಡಾ ಒಂದು. ನೇತ್ರಾವತಿ ನದಿಯನ್ನು ಸೇರುವ ಸಣ್ಣ ಹೊಳೆಗೆ ಪಂಚೇರು ಎಂಬಲ್ಲಿ 2013ರಲ್ಲಿ ಕಿಂಡಿ ಅಣೆಕಟ್ಟೊಂದನ್ನು ನಿರ್ಮಿಸಲಾಗಿತ್ತು. ಇದು ಒಂದೆಡೆ ಪಂಚೇರು ಹಾಗೂ ಹಿರೇಬಂಡಾಡಿ ಗ್ರಾಮದ ಶಾಖೆಪುರವನ್ನು ಜೋಡಿಸಲು ಸಂಪರ್ಕ ಸೇತುವೆಯಾಗಿ ಉಪಯೋಗವಾದರೆ, ಇನ್ನೊಂದೆಡೆ ನೀರು ಶೇಖರಿಸಿದಾಗ ಇಲ್ಲಿನ ಅಂತರ್ಜಲ ವೃದ್ಧಿಯೂ ಆಗುತ್ತಿತ್ತು. ಆದರೆ ಇದರ ಹಲಗೆ ಗೆದ್ದಲು ಹಿಡಿದು ಶಿಥಿಲವಾಗಿ ಹೋಗಿದ್ದ ಕಾರಣ ಇಲ್ಲಿ ನೀರು ಸಂಗ್ರಹಿಸುವ ಕೆಲಸ ನಡೆಯುತ್ತಿರಲಿಲ್ಲ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿಯೂ ನೀರು ಶೇಖರಿಸುವ ಮೂಲ ಉದ್ದೇಶವೆ ಈಡೇರದೇ ಕೇವಲ ಸಂಪರ್ಕ ಸೇತುವಾಗಿ ಬಳಕೆಯಾಗುತ್ತಿದ್ದ ಈ ಭಾಗದ ಪಂಚೇರು ಹಾಗೂ ನಾಲಾಯದ ಗುಂಡಿ ಕಿಂಡಿ ಅಣೆಕಟ್ಟುಗಳ ಬಗ್ಗೆ ಮಾಧ್ಯಮಗಳು ವರದಿ ಮಾಡಿ, ಇಲಾಖೆಯನ್ನು ಎಚ್ಚರಿಸುವ ಕೆಲಸ ಮಾಡಿದ್ದವು. ಆಗಿನ ಶಾಸಕರಾಗಿದ್ದ ಸಂಜೀವ ಮಠಂದೂರು ಅವರು ಕೂಡಾ ಇದನ್ನು ಗಂಭೀರವಾಗಿ ತೆಗೆದುಕೊಂಡು ಎಲ್ಲಾ ಅಣೆಕಟ್ಟುಗಳಿಗೆ ಹಲಗೆ ಜೋಡಿಸಲು ವಿಶೇಷ ಮುತುವರ್ಜಿ ನೀಡಬೇಕೆಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಎಂಜಿನಿಯರ್‌ಗಳಿಗೆ ಸ್ಪಷ್ಟ ಸೂಚನೆ ನೀಡಿದ್ದರು. ಬಳಿಕ ಪಂಚೇರು ಹಾಗೂ ನಾಲಾಯದ ಗುಂಡಿ ಕಿಂಡಿ ಅಣೆಕಟ್ಟಿಗೆ ಹಲಗೆ ಜೋಡಿಸುವ ಕಾರ್‍ಯ 2022ರ ನವೆಂಬರ್ ಅಂತ್ಯದ ವೇಳೆಗೆ ನಡೆದು, ನೀರು ಸಂಗ್ರಹಿಸಲಾಗಿತ್ತು. ಪಂಚೇರಿನ ಕಿಂಡಿ ಅಣೆಕಟ್ಟಿಗೆ ಕೆಮ್ಮಾರದಲ್ಲಿ ಮುರಿದು ಹೋಗಿರುವ ಕಿಂಡಿ ಅಣೆಕಟ್ಟಿನ, ಉತ್ತಮ ಸ್ಥಿತಿಯಲ್ಲಿದ್ದ ಮರದ ಹಲಗೆಗಳನ್ನು ತಂದು ಜೋಡಿಸಲಾಗಿತ್ತು. ಈ ಬಾರಿ ಮಳೆಗಾಲ ಆರಂಭವಾದಾಗ ಅಣೆಕಟ್ಟಿನ ಹಲಗೆಗಳನ್ನು ತೆಗೆಯಲಾಗಿತ್ತು. ಆದರೆ ಪಂಚೇರಿನ ಕಿಂಡಿ ಅಣೆಕಟ್ಟಿನಿಂದ ತೆಗೆದ ಹಲಗೆಗಳನ್ನು ಮಾತ್ರ, ಹಲಗೆಗಳನ್ನು ಪೇರಿಸಿಡಲೆಂದೇ ಅಲ್ಲೇ ಇರುವ ದಾಸ್ತಾನು ಕೊಠಡಿಯಲ್ಲಿ ದಾಸ್ತಾನು ಮಾಡದೇ, ಅಣೆಕಟ್ಟಿನ ಬಳಿಯೇ ರಾಶಿ ಹಾಕಲಾಗಿದೆ. ಸುಮಾರು ಎಂಟು ದಿನಗಳಿಂದ ಮಳೆ- ಗಾಳಿ, ಬಿಸಿಲಿಗೆ ಈ ಹಲಗೆಗಳು ಮೈಯೊಡ್ಡಿರುವುದರಿಂದ ಸ್ವಲ್ಪ ದಿನದಲ್ಲಿಯೇ ಈ ಹಲಗೆಗಳೂ ಶಿಥಿಲಾವಸ್ಥೆಯನ್ನು ತಲುಪಲಿವೆ. ಹೀಗೆ ಆದಲ್ಲಿ ಮೊದಲಿದ್ದ ಹಾಗೆ ಹಲಗೆಗಳಿಲ್ಲದೆ ನೀರು ಶೇಖರಣೆ ಮಾಡದಂತಹ ಸ್ಥಿತಿ ಪಂಚೇರಿನ ಕಿಂಡಿ ಅಣೆಕಟ್ಟಿಗೆ ಬರಲಿದೆ. ಒಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಮಾತ್ರ ನೀರು ಪಾಲಾಗುತ್ತಿರುವುದು ಸುಳ್ಳಲ್ಲ ಎಂದು ನಾಗರಿಕ ವಲಯದಿಂದ ಆರೋಪ ವ್ಯಕ್ತವಾಗಿದೆ.
ಹಲಗೆಗಳು ಶಿಫ್ಟ್!
ಸುಮಾರು ಎಂಟು ದಿನಗಳಿಂದ ಕಿಂಡಿ ಅಣೆಕಟ್ಟಿನ ಬಳಿಯೇ ರಾಶಿ ಹಾಕಲಾಗಿದ್ದ ಹಲಗೆಗಳ ಬಗ್ಗೆ ಮಾಧ್ಯಮದವರ ಗಮನಕ್ಕೆ ಬಂದಿದೆ ಎಂಬ ಮುನ್ಸೂಚನೆ ದೊರೆತ ಕೂಡಲೇ ಜು.4ರಂದು ಸಂಜೆ ಜಡಿ ಮಳೆಗೆ ಅಲ್ಲಿಂದ ಹಲಗೆಗಳನ್ನು ಶಿಫ್ಟ್ ಮಾಡಿ ದಾಸ್ತಾನು ಕೊಠಡಿಯಲ್ಲಿಡಲಾಗಿದೆ ಎಂಬ ಮಾಹಿತಿ ಪತ್ರಿಕೆಗೆ ಲಭಿಸಿದೆ.