ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಜಲಸಿರಿ ನೀರು ಸರಬರಾಜು ಯೋಜನೆಗೆ ರಸ್ತೆ ಬದಿ ಕೊಳವೆ ಅಳವಡಿಸಿ ಮುಚ್ಚಿದ ಮಣ್ಣು ಮಳೆಗೆ ಸಡಿಲಗೊಂಡು ಕುಸಿಯುತ್ತಿದ್ದು, ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಇದೀಗ ಅಪಾಯ ಎದುರಾಗಿದೆ.
ನಗರಸಭೆ, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್ಸಿ) ಜಂಟಿ ಸಹಯೋಗದಲ್ಲಿ ಎಡಿಬಿ ಎರಡನೇ ಹಂತದ ಹೊಸ ಯೋಜನೆ ಆರಂಭಗೊಂಡು ವರ್ಷಗಳು ಉರುಳಿದರೂ ಇನ್ನೂ ಯೋಜನೆ ಪೂರ್ಣಗೊಂಡಿಲ್ಲ. ನೆಕ್ಕಿಲಾಡಿಯಿಂದ ಪುತ್ತೂರು ಪಟ್ಟಣಕ್ಕೆ ಬೃಹತ್ ಗಾತ್ರದ ಕೊಳವೆಯನ್ನು ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದರೂ, ಪೈಪ್ ಅಳವಡಿಸಿದ ಬಳಿಕ ಸರಿಯಾಗಿ ಮಣ್ಣು ಮುಚ್ಚದೆ ಮಳೆಯ ಸಂದರ್ಭ ಅಲ್ಲಲ್ಲಿ ಭುಕುಸಿತ ಉಂಟಾಗುತ್ತಿದೆ. ಇದು ರಸ್ತೆ ಬದಿ ಹೋಗುವ ಸಾರ್ವಜನಿಕರಿಗೆ ಮತ್ತು ರಸ್ತೆ ಬದಿ ವಾಹನ ನಿಲುಗಡೆ ಮಾಡುವವರಿಗೆ ಅಪಾಯ ತಂದೊಡ್ಡಲಿದೆ. ಪುತ್ತೂರು ಸಾಲ್ಮರ ಕ್ರಾಸ್ ಬಳಿಯ ಆಟೋ ರಿಕ್ಷಾ ಪಾರ್ಕ್ ನಲ್ಲಿ ಭಾರಿ ಗಾತ್ರದ ಹೊಂಡ ನಿರ್ಮಾಣ ಆಗಿದೆ. ಸದ್ಯ ಅಲ್ಲಿ ಸ್ಥಳೀಯರು ಬ್ಯಾರಿಕೇಟ್ ಅಳವಡಿಸಿ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದಾರೆ.