ಬೆಟ್ಟಂಪಾಡಿ: ಮಳೆಗೆ ಅಲ್ಲಲ್ಲಿ ಗುಡ್ಡ ಜರಿತ, ಮರ ಬಿದ್ದು ಹಾನಿ

0

ಬೆಟ್ಟಂಪಾಡಿ: ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬೆಟ್ಟಂಪಾಡಿ ಪ್ರದೇಶದ ವಿವಿಧ ಕಡೆ ಜು. 6 ರಂದು ಹಾನಿ ಸಂಭವಿಸಿರುವ ಘಟನೆ ನಡೆದಿದೆ.

ವಿದ್ಯುತ್ ತಂತಿಗೆ ಬಿದ್ದ ಮರ
ಬೆಟ್ಟಂಪಾಡಿ ರೆಂಜ ವಿಘ್ನೇಶ್ವರ ಸಂಕೀರ್ಣದ ಮುಂಭಾಗದಲ್ಲಿ ಬೃಹತ್ ಮರವೊಂದು ಹೆಚ್‌ಟಿ ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಲೈನ್ ಮತ್ತು ಕಂಬಕ್ಕೆ ಹಾನಿಯಾಗಿದೆ. ಬೆಳಿಗ್ಗೆ ಸುಮಾರು 8.30 ರ ವೇಳೆಗೆ ಮರ ಬಿದ್ದಿದ್ದು ರಸ್ತೆಯಲ್ಲಿ ಯಾವುದೇ ವಾಹನಗಳ ಸಂಚಾರ ಇಲ್ಲದ್ದಿದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಒಂದು ಕಂಬ ಮುರಿದುಬಿದ್ದು ವಿದ್ಯುತ್ ತಂತಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದವು. ಮೆಸ್ಕಾಂಗೆ ಸುಮಾರು 70 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಬೆಟ್ಟಂಪಾಡಿ ಶಾಖಾ ಇಂಜಿನಿಯರ್ ಪುತ್ತು ರವರು ತಿಳಿಸಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಬೆಳಗ್ಗಿನಿಂದಲೇ ಮೆಸ್ಕಾಂ ಲೈನ್‌ಮ್ಯಾನ್ ಗಳು ಮತ್ತು ಕಾರ್ಮಿಕರು ವಿದ್ಯುತ್ ಲೈನ್ ದುರಸ್ತಿಪಡಿಸುವಲ್ಲಿ ನಿರತರಾಗಿದ್ದರು. ಇದರಿಂದಾಗಿ ಸಂಜೆಯ ವೇಳೆಗೆ ವಿದ್ಯುತ್ ಮರುಪೂರಣ ಮಾಡಲಾಗಿದೆ.

ಮಿತ್ತಡ್ಕದಲ್ಲಿ ಮನೆಯ ಹಿಂಭಾಗದ ಗುಡ್ಡ ಜರಿತ
ಮಿತ್ತಡ್ಕ ಲಕ್ಷ್ಮೀಶ ಗೌಡರ ಮನೆಯ ಹಿಂಭಾಗದಲ್ಲಿ ಗುಡ್ಡ ಜರಿದು ಮನೆಗೆ ಭಾಗಶಃ ಹಾನಿಯಾಗಿದೆ. ಲಕ್ಷ್ಮೀಶರವರ ಪತ್ನಿ ಜಯಂತಿಯವರು ಕ್ಷಣ ಮೊದಲು ಜರಿದ ಸ್ಥಳದಲ್ಲಿಯೇ ಇದ್ದಿದ್ದು, ಅಪಾಯದಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ. ಬೃಹತ್ ಗುಡ್ಡ ಇನ್ನೂ ಜರಿಯುವ ಅಪಾಯ ಸ್ಥಿತಿಯಲ್ಲಿದ್ದು ಮನೆಯವರು ಆತಂಕದಲ್ಲಿರುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಕೊರಿಂಗಿಲದಲ್ಲಿ ಗುಡ್ಡ ಜರಿತ
ಕೊರಿಂಗಿಲ ಎಂಬಲ್ಲಿ ಮುಖ್ಯರಸ್ತೆಯ ಬದಿಯಲ್ಲಿರುವ ಗುಡ್ಡ ಜರಿದು ರಸ್ತೆಗೆ ಮಣ್ಣು ಬಿದ್ದಿದೆ. ಗುಡ್ಡದ ಮೇಲ್ಭಾಗದಲ್ಲಿ ನೀರಿನ ಹರಿವಿಗೆ ಸರಿಯಾದ ಚರಂಡಿ ಮಾಡದಿರುವುದು ಜರಿತಕ್ಕೆ ಕಾರಣ ಎನ್ನಲಾಗಿದೆ. ಗುಡ್ಡ ಜರಿದ ಸ್ಥಳದಲ್ಲಿಯೇ ವಿದ್ಯುತ್ ಕಂಬವೂ ಇದ್ದು, ಇನ್ನೂ ಜರಿಯುವ ಸ್ಥಿತಿಯಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here