ಉಪ್ಪಿನಂಗಡಿ: ನಿನ್ನೆ, ಮೊನ್ನೆಯೆಲ್ಲಾ ತನ್ನ ಒಡಲಿನ ದರುಷನ ನೀಡುತ್ತಿದ್ದ ನೇತ್ರಾವತಿ ನದಿಯಲ್ಲಿ ಜು.6ರ ಬೆಳಗ್ಗೆಯಿಂದಲೇ ನೀರ ಹರಿವು ಹೆಚ್ಚಳಗೊಂಡಿದ್ದು, ಮಧ್ಯಾಹ್ನದ ಬಳಿಕ ಇನ್ನಷ್ಟು ನೀರನ್ನು ಹೆಚ್ಚಿಸಿಕೊಂಡು ಉಪ್ಪಿನಂಗಡಿಯಲ್ಲಿ ಕುಮಾರಧಾರ ನದಿಯ ಜೊತೆಗೂಡಿ ಶಾಂತವಾಗಿ ಪಶ್ಚಿಮಾಭಿಮುಖವಾಗಿ ಹರಿಯಲು ಆರಂಭಿಸಿದ್ದಾಳೆ. ಕಳೆದ ಮೂರು ದಿನಗಳಿಂದಲೂ ಕುಮಾರಧಾರ ನದಿಯಲ್ಲಿ ನೀರು ಹೆಚ್ಚಳವಿದ್ದು, ಇಂದು ಅದೇ ಸ್ಥಿತಿ ಮುಂದುವರೆದಿದೆ. ಆದರೆ ಉಭಯ ನದಿಗಳೂ ಯಾವುದೇ ಅಪಾಯವನ್ನು ಈವರೆಗೆ ತಂದೊಡ್ಡಿಲ್ಲ.
ನಿನ್ನೆ, ಮೊನ್ನೆಯೆಲ್ಲಾ ನೇತ್ರಾವತಿಯಲ್ಲಿ ಉತ್ತಮ ನೀರು ಹರಿದು ಬಂದಿರಲಿಲ್ಲ. ನದಿಯ ತಳಮಟ್ಟದಲ್ಲೇ ತನ್ನ ಅಗಲಕ್ಕನುಣವಾಗಿ ನೀರಿನ ವಿಸ್ತರಣೆಯಾಗದ್ದರಿಂದ ನದಿಯ ಒಡಲಲ್ಲಿದ್ದ ಮರಳುಗಳು ಕಾಣುತ್ತಿದ್ದವು. ಆದರೆ ಜು.6ರ ಬೆಳಗ್ಗೆಯಿಂದ ನೀರಿನ ಹರಿವು ಹೆಚ್ಚಳಗೊಂಡಿದ್ದು, ಮಧ್ಯಾಹ್ನದ ಬಳಿಕ ಇನ್ನಷ್ಟು ಹೆಚ್ಚಿಸಿಕೊಂಡು ಶಾಂತವಾಗಿ ಹರಿಯುತ್ತಿದೆ. ಕುಮಾರಧಾರ ನದಿಯಲ್ಲಿ ಕಳೆದ ಮೂರು ದಿನಗಳಿಂದಲೇ ನೀರಿನ ಹರಿವು ಉತ್ತಮ ಸ್ಥಿತಿಯಲ್ಲಿತ್ತು. ಈಗ ಕೂಡಾ ನೇತ್ರಾವತಿ ನದಿಗಿಂತ ಕುಮಾರಧಾರ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಸಂಸೆಯಲ್ಲಿ ನೇತ್ರಾವತಿ ನದಿ ಹುಟ್ಟಿದರೆ, ಸುಬ್ರಹ್ಮಣ್ಯದ ಕುಮಾರಪರ್ವತದಲ್ಲಿ ಕುಮಾರಧಾರ ನದಿಯ ಉಗಮವಾಗುತ್ತದೆ. ಉಗಮ ಸ್ಥಳಗಳಲ್ಲಿ ಉತ್ತಮ ಮಳೆಯಾದರೆ ಅದರ ಪ್ರಭಾವ ಈ ಭಾಗದಲ್ಲಿ ನದಿ ಹರಿಯುವಿಕೆಯ ಮೂಲಕ ಗೋಚರಿಸುತ್ತದೆ. ಮತ್ತೆ ಈ ಬಾರಿಯ ಬೇಸಿಗೆಯಲ್ಲಿ ಭೂಮಿಯು ಸಂಪೂರ್ಣ ಒಣಗಿ ಹೋಗಿದ್ದು, ಹೆಚ್ಚಿನ ಮಳೆಯ ನೀರನ್ನು ಭೂಮಿಯೇ ಎಳೆದುಕೊಂಡಾಗಿದೆ. ಆದ್ದರಿಂದ ಇಲ್ಲಿ ಮಳೆ ಉತ್ತಮವಿದ್ದರೂ, ನೀರಿನ ಹರಿವು ಮಾತ್ರ ಕಡಿಮೆ ಇರುವಂತಾಗಿದೆ.
ಸಂಗಮವಾದ ವರ್ಷಗಳು: ಲಭ್ಯ ದಾಖಲೆ ಪ್ರಕಾರ 26.7.1974ರಂದು ಉಪ್ಪಿನಂಗಡಿಯಲ್ಲಿ ಅತೀ ದೊಡ್ಡ ನೆರೆ ಬಂದಿತ್ತು. ಈ ಸಂದರ್ಭ ಸಂಗಮವಾಗಿತ್ತು. ಅದಲ್ಲದೆ, 27.8.1997, 13.8.2008 ಹಾಗೂ 18.7.2009 ಹಾಗೂ 2013ರಂದು ಉಪ್ಪಿನಂಗಡಿಯಲ್ಲಿ ಸಂಗಮವಾಗಿತ್ತು. 2018 ರಂದು ಆ.14 ಮತ್ತು 16ರಂದು ಸಂಗಮವಾಗಿತ್ತು. ಲಭ್ಯ ಇತಿಹಾಸದ ಪ್ರಕಾರ ಒಂದೇ ವರ್ಷದಲ್ಲಿ ಎರಡು ಬಾರಿ ಸಂಗಮವಾಗಿರುವುದು ಇದೇ ಪ್ರಥಮ. ಬಳಿಕ 2019ರಲ್ಲಿಯೂ ಸಂಗಮವಾಗಿದ್ದು, ಆದಿನ ಆಗಸ್ಟ್ 9ರಂದು ಆದ ಸಂಗಮ 10ರಂದೂ ಮುಂದುವರಿದಿತ್ತು. ಹಿರಿಯರ ಪ್ರಕಾರ ಅಂದಿನ ನೆರೆ ಮಾತ್ರ 1974 ಅತೀ ದೊಡ್ಡ ನೆರೆಯನ್ನು ನೆನಪಿಸಿತ್ತಂತೆ. ಆ ಬಳಿಕದ ವರ್ಷಗಳಲ್ಲಿ ಉಭಯ ನದಿಗಳು ಮೈದುಂಬಿ ಹರಿದರೂ, ಕೆಲವು ಕಡೆ ನದಿ ಪಾತ್ರದ ಸ್ವಲ್ಪ ಪ್ರದೇಶಗಳು ಮುಳುಗಿದ್ದು ಬಿಟ್ಟರೆ, ದೊಡ್ಡ ಮಟ್ಟದ ನೆರೆ ಬಂದಿಲ್ಲ.
ಸಂಗಮವೆಂದರೇನು?: ಕುಮಾರಧಾರ ಹಾಗೂ ನೇತ್ರಾವತಿ ನದಿಗಳು ಒಳಹರಿವಿನ ಮೂಲಕ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ನಿತ್ಯ ಸಂಗಮವಾಗುತ್ತದೆ. ಆದರೆ ಮಳೆಗಾಲದಲ್ಲಿ ದೇವಾಲಯದ ಎಡ ಹಾಗೂ ಬಲ ಭಾಗದಿಂದ ಬಂದ ಉಭಯ ನದಿಯ ನೀರು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಅಂಗಣಕ್ಕೆ ಹೊಕ್ಕು ಅಲ್ಲಿನ ಧ್ವಜ ಸ್ತಂಭವನ್ನು ಸ್ಪರ್ಶಿಸಿದಾಗ ಪವಿತ್ರ ಸಂಗಮ ಘಟಿಸುತ್ತದೆ. ಬಳಿಕ ದೇವಾಲಯದ ಅರ್ಚಕರು ಗಂಗಾಪೂಜೆ ಮಾಡಿ ನೀರಾಂಜನ ತೇಲಿ ಬಿಡುತ್ತಾರೆ. ಆಗ ಬೇರೆ ಬೇರೆ ಕಡೆಗಳಿಂದ ನೂರಾರು ಭಕ್ತರು ಬಂದು ಸಂಗಮ ಸ್ನಾನ ಮಾಡುತ್ತಾರೆ. ಸಂಗಮ ಘಟಿಸಿತ್ತೆಂದರೆ ಇಲ್ಲಿನ ಪಂಜಳ, ಹಿರ್ತಡ್ಕ -ಮಠ, ಹಳೆಗೇಟು, ಕೂಟೇಲು, ಕಡವಿನ ಬಾಗಿಲು, ದೇವಸ್ಥಾನ ಬಳಿಯ ಪ್ರದೇಶಗಳು ಹೀಗೆ ನದಿ ಪಾತ್ರದ ಪ್ರದೇಶಗಳಲ್ಲದೆ, ನದಿಯನ್ನು ಸಂಪರ್ಕಿಸುವ ತೋಡುಗಳ ಬಳಿಯಿರುವ ಪ್ರದೇಶಗಳೂ ಸಂಪೂರ್ಣ ಜಲಾವೃತಗೊಳ್ಳುತ್ತವೆ. ಅಪಾಯದ ಭೀತಿಯನ್ನು ತಂದೊಡ್ಡುತ್ತವೆ. ಹಲವು ಮನೆಗಳಿಗೆ ನೀರು ನುಗ್ಗುತ್ತದೆ.
ಜು.6ರ ಸ್ಥಿತಿ: ಜು.5 ಬೆಳಗ್ಗೆಯಿಂದ ಜು.6ರ ಬೆಳಗ್ಗೆ ತನಕ ಉಪ್ಪಿನಂಗಡಿಯಲ್ಲಿ 97.4 ಮಿ.ಮೀ. ಮಳೆಯಾಗಿದೆ. ದೇವಸ್ಥಾನದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಿದ್ದು, ಅದರಲ್ಲಿ ಈಗಾಗಲೇ 20 ಮೆಟ್ಟಿಲುಗಳು ನದಿ ನೀರಿನಲ್ಲಿ ಮುಳುಗಿವೆ. ಶಂಭೂರು ಅಣೆಕಟ್ಟು ಆಧಾರಿತ ಜಲಮಾಪಕದ ಪ್ರಕಾರ ಉಪ್ಪಿನಂಗಡಿಯಲ್ಲಿ ಅಪಾಯದ ಮಟ್ಟ 31.0 ಮೀ ಆಗಿದೆ. ನದಿಗಳ ಉಗಮ ಸ್ಥಾನದಲ್ಲಿ ಎಡೆಬಿಡದೇ ಮಳೆ ಸುರಿದಾಗ ಮಾತ್ರ ಇಲ್ಲಿ ನದಿಗಳಲ್ಲಿ ನೀರು ಹೆಚ್ಚಳಗೊಳ್ಳಲಿವೆ. ಗೃಹರಕ್ಷಕ ದಳದವರನ್ನೊಳಗೊಂಡ ಪ್ರಾಕೃತಿಕ ವಿಕೋಪ ತಂಡ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ದಿನ 24 ಗಂಟೆಯೂ ಸನ್ನದ್ಧ ಸ್ಥಿತಿಯಲ್ಲಿದೆ.