ಪುತ್ತೂರು: ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಪಕ್ಷ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ.
ವಿಧಾನಸಭಾ ಚುನಾವಣೆಗೆ ಅರ್ಜಿ ಆಹ್ವಾನಿಸಿದ್ದ ಮಾದರಿಯಲ್ಲಿಯೇ ವಿಧಾನ ಪರಿಷತ್ತಿಗೆ ನಡೆಯಲಿರುವ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧಾ ಆಕಾಂಕ್ಷಿಗಳು ಕೆಪಿಸಿಸಿಗೆ 2 ಲಕ್ಷ ರೂಪಾಯಿ ಮತ್ತು ಅರ್ಜಿ ಶುಲ್ಕ 5000 ರೂ. ಪಾವತಿಸಬೇಕಿದೆ.
ಕೆಪಿಸಿಸಿಗೆ ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನವಾಗಿದೆ. ಪಕ್ಷದೊಳಗೆ ಆಕಾಂಕ್ಷಿಗಳ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿದ್ದು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ದಾವಣಗೆರೆ ವ್ಯಾಪ್ತಿಯನ್ನು ಹೊಂದಿರುವ ನೈಋತ್ಯ ಪದವೀಧರರ ಕ್ಷೇತ್ರದಿಂದ ಮೂಲತಃ ಕೋಡಿಂಬಾಡಿಯ ಮಠಂತಬೆಟ್ಟು ನಿವಾಸಿಯಾಗಿದ್ದು, ಪ್ರಸ್ತುತ ಉಡುಪಿಯಲ್ಲಿ ವಾಸವಾಗಿರುವ ಹರಿಪ್ರಸಾದ್ ರೈ ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಇವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಹೆಚ್.ಪಿ.ಆರ್. ಫೌಂಡೇಶನ್ ಮುಖ್ಯಸ್ಥರಾಗಿರುವ ಹರಿಪ್ರಸಾದ್ ರೈ ಅವರು ಪುತ್ತೂರು, ಮಂಗಳೂರು, ಸೊರಬ ಮತ್ತು ಉಡುಪಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರದ ಜತೆಗೆ ಸಾಮಾಜಿಕವಾಗಿಯೂ ತೊಡಗಿಸಿಕೊಂಡಿರುವ ಹರಿಪ್ರಸಾದ್ ರೈ ಅವರು ಲಯನ್ಸ್ ಜಿಲ್ಲೆ 317ಸಿ ಯಲ್ಲಿ ಪ್ರಾಂತೀಯ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷರಾಗಿ, ಕಾಂಗ್ರೆಸ್ ಪಕ್ಷದ ಬೂತ್ ಅಧ್ಯಕ್ಷ ಸ್ಥಾನದಿಂದ ಜಿಲ್ಲಾ ಉಪಾಧ್ಯಕ್ಷ ಸ್ಥಾನದವರೆಗೆ ಜವಾಬ್ದಾರಿ ನಿರ್ವಹಿಸಿದ್ದಾರೆ. ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ದರ್ಬೆ ಸಂತ ಫಿಲೋಮಿನಾ ವಿದ್ಯಾಸಂಸ್ಥೆಯಲ್ಲಿ ಪ್ರೌಢ, ಪದವಿಪೂರ್ವ ಮತ್ತು ಪದವಿ ಶಿಕ್ಷಣ ಪಡೆದಿರುವ ಹರಿಪ್ರಸಾದ್ ರೈ ಅವರು ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ಪುತ್ತೂರು ಎನ್.ಎಸ್.ಯು.ಐ. ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ರಾಜ್ಯಪಾಲರು ಅಧ್ಯಕ್ಷರಾಗಿರುವ ರೆಡ್ ಕ್ರಾಸ್ ಉಡುಪಿ ಘಟಕದ ಪ್ರತಿನಿಧಿಯಾಗಿರುವ ಹರಿಪ್ರಸಾದ್ ರೈಯವರು ಉಡುಪಿ ಪ್ರಗತಿ ಸಹಕಾರಿ ಕೋ-ಅಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಭಾರತ ಸರಕಾರದ ಜನಸಂಖ್ಯಾ ಸ್ಥಿರತಾ ಕೋಶದ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಬ್ರಹ್ಮಾವರದ ಫಾರ್ಚುನ್ ಆರೋಗ್ಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಹರಿಪ್ರಸಾದ್ ರೈಯವರ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರದ ಚಟುವಟಿಕೆಗೆ ಪತ್ನಿ ವಿಜೇತಾ ಹೆಚ್. ರೈ ಅವರು ಕೈ ಜೋಡಿಸುತ್ತಿದ್ದಾರೆ. ಮಠಂತಬೆಟ್ಟು ಶ್ರೀನಿವಾಸ ರೈಯವರ ಪುತ್ರರಾದ ಹರಿಪ್ರಸಾದ್ ರೈ ಅವರನ್ನು ನೈಋತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಲು ಕೆಪಿಸಿಸಿ ಮುಂದಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.