ನೂರು ವರ್ಷದ ಹಳೆಯ ಸೇತುವೆ ಬಗ್ಗೆ ಜನ ಪ್ರತಿನಿಧಿಗಳಿಗೇಕೆ ಇಷ್ಟೊಂದು ನಿರ್ಲಕ್ಷ್ಯ?!
ಜ ಸಿಶೇ ಕಜೆಮಾರ್
ಪುತ್ತೂರು: ಮುಳುಗು ಸೇತುವೆ ಎಂದು ಪ್ರಸಿದ್ಧಿ ಪಡೆದುಕೊಂಡಿರುವ ಚೆಲ್ಯಡ್ಯದ ಸೇತುವೆಗಿಲ್ಲ ನವೀಕರಣದ ಭಾಗ್ಯ. ನೂರು ವರ್ಷಗಳ ಹಳೆಯ ಸೇತುವೆ ಮೇಲೆ ಈಗಲೂ ಜನ, ವಾಹನ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಮಳೆಗಾಲದಲ್ಲಿ ಕನಿಷ್ಟ ಎಂದರೂ 10 ಕ್ಕೂ ಅಧಿಕ ಬಾರಿ ಮುಳುಗಡೆಯಾಗುವ ಈ ಸೇತುವೆ ಬಗ್ಗೆ ಜನಪ್ರತಿನಿಧಿಗಳು ಅದೇಕೆ ಮೌನ ವಹಿಸಿದ್ದಾರೋ ಗೊತ್ತಿಲ್ಲ. ಪುತ್ತೂರು-ಪರ್ಲಡ್ಕದಿಂದ ದೇವಸ್ಯದ ಮೂಲಕ ಸಂಟ್ಯಾರು-ಬೆಟ್ಟಂಪಾಡಿ ರಸ್ತೆಗೆ ಚೆಲ್ಯಡ್ಕದಲ್ಲಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಚೆಲ್ಯಡ್ಕದಲ್ಲಿರುವ ಈ ಸೇತುವೆಗೆ ಇಷ್ಟರ ತನಕ ಯಾವ ಅನುದಾನವೂ ದೊರೆಯದಿರುವುದು ವಿಪರ್‍ಯಾಸವೇ ಸರಿ. ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂದು ಹೇಳಲಾಗುವ ಈ ಸೇತುವೆ ಈಗ ಬಹುತೇಕ ಶಿಥಿಲಾವಸ್ಥೆಗೆ ತಲುಪಿದೆ. ಇದೇ ಸೇತುವೆ ಪಕ್ಕದಲ್ಲಿ ಅಂದರೆ ಕೇವಲ ನೂರು ಮೀಟರ್ ಅಂತರದಲ್ಲಿ ಸುಮಾರು 3 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಗಲೀಕರಣ ಮಾಡಲಾಗಿದ್ದರೂ ಚೆಲ್ಯಡ್ಕ ಸೇತುವೆಗೆ ಬಿಡಿಗಾಸಿನ ಅನುದಾನ ನೀಡದಿರುವುದು ಗ್ರಾಮಸ್ಥರಲ್ಲಿ ಆಕ್ರೋಶ ಉಂಟು ಮಾಡಿದೆ.
ಮುಳುಗು ಸೇತುವೆ:
ಚೆಲ್ಯಡ್ಕದ ಈ ಸೇತುವೆ ಮುಳುಗು ಸೇತುವೆ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಪ್ರತಿ ಮಳೆಗಾಲದಲ್ಲಿ ಕನಿಷ್ಠ ಎಂದರೂ 10ಕ್ಕಿಂತಲೂ ಅಧಿಕ ಬಾರಿ ಮುಳುಗಡೆಯಾಗುವ ಈ ಸೇತುವೆಯಿಂದ ಅದೆಷ್ಟೋ ಮಂದಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಪುತ್ತೂರು ದೇವಸ್ಯ ಮಾರ್ಗವಾಗಿ ಸಂಟ್ಯಾರು ಮಾರ್ಗಕ್ಕೆ ಸೇರುವ ವಾಹನಗಳು ಸೇರಿದಂತೆ ಬುಳೇಕರಿಕಟ್ಟೆ ಸಾಜ ಮಾರ್ಗವಾಗಿ ಸಂಟ್ಯಾರು ರಸ್ತೆಗೆ ಬರುವ ವಾಹನಗಳು ಕೂಡ ತೊಂದರೆಗೆ ಸಿಲುಕಿಕೊಳ್ಳುತ್ತವೆ. ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸೇರಿದಂತೆ ಪ್ರತಿನಿತ್ಯ ನೂರಾರು ಮಂದಿ ಈ ಸೇತುವೆಯನ್ನು ಅವಲಂಬಿಸಿದ್ದಾರೆ. ಕೆಲವೊಮ್ಮೆ ರಾತ್ರಿ ವೇಳೆ ಸೇತುವೆ ಮುಳುಗಡೆಯಾದರೆ ಮಧ್ಯಾಹ್ನದ ತನಕವೂ ಮುಳುಗಡೆಯಾಗಿಯೇ ಇರುತ್ತದೆ. ಒಂದಿಡೀ ದಿನ ಮುಳುಗಡೆಯಾದ ಘಟನೆಯೂ ನಡೆದಿದೆ. ಇದರಿಂದ ಈ ಭಾಗದ ಗ್ರಾಮಸ್ಥರಿಗೆ ಬಹಳಷ್ಟು ತೊಂದರೆಯುಂಟಾಗಿದೆ.
ಅಪಾಯಕಾರಿ ಸೇತುವೆ:
ಚೆಲ್ಯಡ್ಕ ಸೇತುವೆಯು ಅಪಾಯಕಾರಿ ಸೇತುವೆಯಾಗಿದೆ. ಸೇತುವೆಯ ಇಕ್ಕೆಲಗಳಲ್ಲಿ ಯಾವುದೇ ತಡೆ ಬೇಲಿಗಳಿಲ್ಲದೆ ಇರುವುದರಿಂದ ಸೇತುವೆ ಮೇಲೆ ನೀರು ಹರಿಯುತ್ತಿರುವಾಗ ಸೇತುವೆ ದಾಟುವ ಸಾಹಸ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಸೇತುವೆಯ ಕೆಳಭಾಗದಲ್ಲಿರುವ ಪಿಲ್ಲರ್‌ಗಳು ಬಿರುಕು ಬಿಟ್ಟಿವೆ. ಇತ್ತೀಚೆಗೆ ಬಿರುಕು ಬಿಟ್ಟ ಜಾಗಕ್ಕೆ ತೇಪೆ ಹಚ್ಚುವ ಕೆಲಸ ನಡೆದಿದ್ದರೂ ಸೇತುವೆ ಮೇಲ್ಭಾಗದಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಂದಲ್ಲ ನಾಳೆಯಾದರೂ ಈ ಸೇತುವೆ ಕುಸಿದು ಬೀಳುವ ಅಪಾಯವಿದೆ.
3 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಗಲೀಕರಣ..!
ಚೆಲ್ಯಡ್ಕದ ಮುಳುಗು ಸೇತುವೆಯಿಂದ ನೂರು ಮೀಟರ್ ಅಂತರದಲ್ಲಿ ಚೆಲ್ಯಡ್ಕ ಜಂಕ್ಷನ್‌ನಲ್ಲಿ ರಸ್ತೆ ಅಗಲೀಕರಣ ಮಾಡಲಾಗಿದೆ. ಸುಮಾರು 3 ಕೋಟಿ ರೂ.ವೆಚ್ಚದಲ್ಲಿ ಈ ಅಗಲೀಕರಣ ಕಾಮಗಾರಿ ನಡೆದಿದೆ. ಬೇಸಿಗೆಗಾಲದಲ್ಲಿ ಕಾಮಗಾರಿ ನಡೆದಿದ್ದು ಕಾಮಗಾರಿ ಮುಗಿದಾಗ ನೋಡಲು ಬಹಳ ಸುಂದರವಾಗಿ ಕಾಣುತ್ತಿತ್ತು. ಮಳೆಗಾಲದ ಆರಂಭದ ಬೆನ್ನಲ್ಲೆ 3 ಕೋಟಿ ರೂ.ನೀರಿನಲ್ಲಿ ಕೊಚ್ಚಿಕೊಂಡು ಹೋಗಲು ತಯಾರಾಗಿದೆ. ರಸ್ತೆಯ ಒಂದು ಬದಿ ಕುಸಿತಕ್ಕೊಳಗಾಗಿದ್ದು ರಸ್ತೆ ಬದಿಗೆ ಹಾಕಿದ್ದ ತಡೆಬೇಲಿ, ಕಲ್ಲುಗಳು ಮಣ್ಣಿನೊಳಗೆ ಹೂತು ಹೋಗಿವೆ. ಈ ರಸ್ತೆ ಅಗಲೀಕರಣಕ್ಕೆ 3 ಕೋಟಿ ರೂ.ವ್ಯಯ ಮಾಡುವಾಗ ಚೆಲ್ಯಡ್ಕ ಸೇತುವೆಗೆ ಕನಿಷ್ಟ ಅನುದಾನವನ್ನಾದರೂ ಇಟ್ಟು ಸೇತುವೆಯನ್ನು ನವೀಕರಣಗೊಳಿಸಬಹುದಿತ್ತಲ್ಲ ಎನ್ನುವುದು ಸಾರ್ವಜನಿಕರ ಮಾತುಗಳಾಗಿವೆ.
ಶಾಸಕ ಅಶೋಕ್ ಕುಮಾರ್ ರೈಯವರ ಅವಧಿಯಲ್ಲಾದರೂ ಸೇತುವೆ ನಿರ್ಮಾಣವಾಗುತ್ತಾ.?!
ನೂರು ವರ್ಷಗಳ ಇತಿಹಾಸವಿರುವ ಚೆಲ್ಯಡ್ಕ ಸೇತುವೆಯ ಅಭಿವೃದ್ಧಿ ಬಗ್ಗೆ ಕಳೆದ ಹಲವು ವರ್ಷಗಳಿಂದ ಈ ಭಾಗದ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಸ್ತುತ ಶಾಸಕರಾಗಿರುವ ಅಶೋಕ್ ಕುಮಾರ್ ರೈಯವರಿಗೂ ಸೇತುವೆ ಬಗ್ಗೆ ಮನವಿ ನೀಡಲಾಗಿದೆ. ಅಶೋಕ್ ಕುಮಾರ್ ರೈಯವರಾದರೂ ಈ ಬಗ್ಗೆ ಪರಿಶೀಲನೆ ನಡೆಸಿ ಚೆಲ್ಯಡ್ಕದ ಮುಳುಗು ಸೇತುವೆಗೆ ಮುಕ್ತಿ ತೋರಿಸುತ್ತಾರೋ ಎನ್ನುವ ನಿರೀಕ್ಷೆಯಲ್ಲಿದ್ದಾರೆ ನಾಗರಿಕರು.
ಶಾಸಕ ಅಶೋಕ್ ಕುಮಾರ್ ರೈಗೆ ಮನವಿ ಸಲ್ಲಿಸಿದ್ದೇವೆ : ಕೃಷ್ಣ ಪ್ರಸಾದ್ ಆಳ್ವ
ಚೆಲ್ಯಡ್ಕ ಸೇತುವೆ ಅಭಿವೃದ್ಧಿ ಎಂಬುದು ಒಂದು ಮರೀಚಿಕೆ ಆಗಿ ಹೋಗಿದೆ. ಕಳೆದ ಹಲವು ವರ್ಷಗಳಿಂದ ಈ ಸೇತುವೆ ಅಭಿವೃದ್ಧಿಯಾಗಲೇ ಇಲ್ಲ. ಶಕುಂತಳಾ ಶೆಟ್ಟಿ ಶಾಸಕಿಯಾಗಿದ್ದ ಸಮಯದಲ್ಲಿ ಈ ರಸ್ತೆಯನ್ನು ಪಿಡಬ್ಲ್ಯೂಡಿ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಿದ್ದರು. ಇದೀಗ ದೇವಸ್ಯ-ಶೇಖಮಲೆ ಪಿಡಬ್ಲ್ಯೂಡಿ ರಸ್ತೆಯಾಗಿದೆ. ಚೆಲ್ಯಡ್ಕ ಸೇತುವೆ ಅಭಿವೃದ್ಧಿ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿ ನೀಡಿದ್ದೇವೆ. ಅವರು ಪಿಡಬ್ಲ್ಯೂಡಿ ಸಚಿವರೊಂದಿಗೆ ಮಾತನಾಡಿ ಹೊಸ ಸೇತುವೆ ನಿರ್ಮಾಣದ ಭರವಸೆ ನೀಡಿದ್ದಾರೆ. ಚೆಲ್ಯಡ್ಕ ಮುಳುಗು ಸೇತುವೆಗೆ ಶಾಸಕ ಅಶೋಕ್ ಕುಮಾರ್ ರೈಯವರು ಮುಕ್ತಿ ಕೊಡುತ್ತಾರೆ ಎಂಬ ಆಶಾಭಾವನೆ ನಮಗಿದೆ ಎಂದು ಸಾಮಾಜಿಕ ಕಾರ್ಯಕರ್ತ, ಕೆಡಿಪಿ ಮಾಜಿ ಸದಸ್ಯ ಕೃಷ್ಣ ಪ್ರಸಾದ್ ಆಳ್ವ ಪ್ರತಿಕ್ರಿಯೆ ನೀಡಿದ್ದಾರೆ