ಪುತ್ತೂರು: ಅಡಿಕೆ ಕರಿಮೆಣಸು ಸಹಿತ ವಾಣಿಜ್ಯ ಬೆಳೆಗಳಿಗೆ ನೀಡಲಾಗುವ ಹವಾಮಾನ ಆಧಾರಿತ ಬೆಳೆ ವಿಮೆಯ ಪ್ರೀಮಿಯಂ ಸಂಗ್ರಹಕ್ಕೆ ರಾಜ್ಯ ತೋಟಗಾರಿಕಾ ಇಲಾಖೆ ಅಧಿ ಸೂಚನೆ ಹೊರಡಿಸಿದೆ. ರಾಜ್ಯದ ಆರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಜು.6ರಂದು ಇಲಾಖೆಯು ಅಧಿಸೂಚನೆ ಹೊರಡಿಸಿದೆ. ಆದರೆ ಹೆಚ್ಚುಅಡಿಕೆ ಬೆಳೆಯುವ ದಕ್ಷಿಣ ಕನ್ನಡ ಜಿಲ್ಲೆ ಈ ಅಧಿಸೂಚನೆಯ ಪಟ್ಟಿಯಲ್ಲಿ ಸೇರದಿರುವುದು ಇಲ್ಲಿನ ರೈತರ ಆತಂಕಕ್ಕೆ ಕಾರಣವಾಗಿದೆ.
ಜು.6ರಂದು ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ ಕೋಲಾರ, ಹಾಸನ, ತುಮಕೂರು, ದಾವಣಗೆರೆ, ಉಡುಪಿ, ವಿಜಯಪುರ ಜಿಲ್ಲೆಗಳ ಹೆಸರಿದ್ದು ಉಳಿದ 25 ಜಿಲ್ಲೆಗಳಲ್ಲಿ ಸುಧಾರಿತ ಟರ್ಮ್ ಶೀಟ್ ಆಧಾರದಲ್ಲಿ ಮರು ಟೆಂಡರ್ ಮಾಡುವುದಾಗಿ ಸೂಚಿಸಲಾಗಿದೆ. ಇಲಾಖೆ ಹೊರಡಿಸಿರುವ ಪಟ್ಟಿ ಮಾವು, ದ್ರಾಕ್ಷಿ , ದಾಳಿಂಬೆ, ಪರಂಗಿ, ನಿಂಬೆ, ಅಡಿಕೆ, ಕಾಳುಮೆಣಸು, ವೀಳ್ಯದೆಲೆ, ಹಸಿಮೆಣಸಿನ ಕಾಯಿ, ಹೂಕೋಸು, ಶುಂಠಿ, ಬೆಳೆಯನ್ನು ಒಳಗೊಂಡಿದೆ. ದ.ಕ. ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳ ವಿಮೆಯ ವಿಚಾರದಲ್ಲಿ ಇನ್ನೂ ಟೆಂಡರ್ ಪ್ರಕ್ರಿಯೆ ನಡೆಯದಿರುವುದರಿಂದ ಅಧಿಸೂಚನೆಯನ್ನು ಹೊರಡಿಸಿಲ್ಲ. ಮರುಗುತ್ತಿಗೆ ಪ್ರಕ್ರಿಯೆ ಜು.10ರ ಬಳಿಕ ನಡೆಯಲಿದ್ದು, ಆ ಬಳಿಕ ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸಿಗೆ ಹವಾಮಾನ ಆಧರಿತ ಬೆಳೆ ವಿಮಯ ವಿಚಾರದಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.