




ಕಡಬ:ಎಡೆಬಿಡದೆ ಸುರಿಯುತ್ತಿರುವ ಬಾರೀ ಮಳೆಗೆ ಮನೆ ಸಮಿಪದ ತಡೆಗೋಡೆ ಕುಸಿದು ಶೌಚಾಲಯ, ಮನೆಗೆ ಹಾನಿಯಾಗಿದ್ದು ಮನೆ ಮಂದಿಯನ್ನು ಸ್ಥಳಾಂತರಿಸಿದ ಘಟನೆ ಕಡಬದಿಂದ ವರದಿಯಾಗಿದೆ.ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ಪರಮೇಶ್ವರ ಸಂಕೇಶ ಎಂಬವರ ಮನೆ ಸಮೀಪದ ತಡೆಗೋಡೆ ಕುಸಿದು, ಸಮೀಪದ ಶೌಚಾಲಯ, ಸ್ನಾನಗೃಹದಲ್ಲಿ ಬಿರುಕು ಕಂಡಿದೆ. ಒಂದು ಭಾಗದ ಮನೆಯ ಗೋಡೆಯಲ್ಲೂ ಬಿರುಕು ಉಂಟಾಗಿದೆ.ಘಟನೆ ಬಗ್ಗೆ ಕಂದಾಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತಾ ಹಿನ್ನೆಲೆಯಲ್ಲಿ ಮನೆ ಮಂದಿಯ ಸ್ಥಳಾಂತರಕ್ಕೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆ ಮಂದಿ ಬೇರೆ ಕಡೆಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಮನೆಮಂದಿಯ ಸ್ಥಳಾಂತರ ಸ್ಥಳಕ್ಕೆ ಮತ್ತು ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು, ಸ್ಥಳೀಯ ಪ್ರಮುಖರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.













