ಉಪ್ಪಿನಂಗಡಿ : “ಹಲಸಿನ ಹಬ್ಬ” ಕಾರ್ಯಕ್ರಮ

0

ಮನ ಮತ್ತು ಮರದ ಮೇಲೆ ಪ್ರೀತಿ ಮೂಡಿಸುವ ಪ್ರಯತ್ನವಾಗಬೇಕು: ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: ಮನ ಮತ್ತು ಮರದ ಮೇಲೆ ಪ್ರೀತಿ ಮೂಡಿದಾಗ ಮಾತ್ರ ಪರಿಸರದ ಮೇಲೆ ಪ್ರೀತಿ ಬರಲು ಸಾಧ್ಯವಾಗುತ್ತದೆ. ಹಣ್ಣಿನ ಗಿಡವೊಂದನ್ನು ನೆಟ್ಟಾಗ ಅದರ ಹಣ್ಣನ್ನು ನಾವು ಮಾತ್ರ ತಿನ್ನಬೇಕು ಎಂಬ ದುರಾಸೆ ನಮ್ಮದಾಗಬಾರದು. ಮಾನವನೊಟ್ಟಿಗೆ ಪ್ರಾಣಿ- ಪಕ್ಷಿಗಳಿಗೂ ಹಣ್ಣನ್ನು ತಿನ್ನಲು ನೀಡುವ ಮುಖೇನ ಪರಿಸರವನ್ನು ಬೆಳೆಸಬೇಕು. ಪರಿಸರದೊಂದಿಗೆ ಸಂಬಂಧ ಕಳೆದುಕೊಳ್ಳುವ ಕಾಲಘಟ್ಟದಲ್ಲಿ ನಮ್ಮ ಮಕ್ಕಳಿಂದು ಬೆಳೆಯುತ್ತಿದ್ದು, ಅವರಿಗೆ ಇಂತಹ ಪರಿಸರ ಪ್ರೀತಿ ಪೋಷಕರು ಮೂಡಿಸಬೇಕು. ಓದಿನ ಜೊತೆಗೆ ಆಟ, ಪರಿಸರದ ಪಾಠವನ್ನು ತಿಳಿಸಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.


ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್, ಜೇಸಿಐ ಉಪ್ಪಿನಂಗಡಿ, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಯ ಬೀದರ್, ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಹಾಗೂ ನವತೇಜ ಟ್ರಸ್ಟ್ ಪುತ್ತೂರು ಇವುಗಳ ಸಂಯುಕ್ತಾಶ್ರಯದಲ್ಲಿ ಉಪ್ಪಿನಂಗಡಿಯ ಶ್ರೀ ಗುರು ಸುಧೀಂದ್ರ ಕಲ್ಯಾಣ ಮಂಟಪದಲ್ಲಿ ಜು.9ರಂದು ನಡೆದ `ಹಲಸಿನ ಹಬ್ಬ’ವನ್ನು ಹಲಸಿನ ಹಣ್ಣನ್ನು ತುಂಡರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.


ಹಲಸು ಎಂಬುದು ಈಗ ಹೆಚ್ಚಿನ ಮಾನ್ಯತೆಯನ್ನು ಪಡೆಯುತ್ತಿದೆ. ಒಂದು ಕಾಲದಲ್ಲಿ ನಮ್ಮಲ್ಲಿ ಕೂಡುಕುಟುಂಬ ಪದ್ಧತಿ ಇತ್ತು. ಬಡತನವೂ ಇತ್ತು. ಆಗ ಹಲಸಿನ ಹಣ್ಣು ತಿನ್ನುವ ಸಂಖ್ಯೆಯೂ ಹೆಚ್ಚಿತ್ತು. ಪ್ರತಿ ಮನೆಯಲ್ಲಿಯೂ ಅದರ ಉತ್ಪನ್ನಗಳನ್ನು ತಯಾರಾಗುತ್ತಿತ್ತು. ಆದರೆ ಬದಲಾದ ಈ ಕಾಲಘಟ್ಟದಲ್ಲಿ ಸುಲಭವಾಗಿ ಸಿಗುವಂತದ್ದನ್ನು ತಿನ್ನುವ ಹವ್ಯಾಸ ರೂಢಿಯಾಗಿದೆ. ಆದ್ದರಿಂದ ತಿನ್ನುವ ವಿಚಾರವನ್ನು ಈ ಕಾಲಕ್ಕೆ ಜೋಡಿಸಬೇಕು. ಹಲಸಿನ ನಾನಾ ವಿಧದ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಬೇಕು. ಆಗ ತಿನ್ನುವವರ ಸಂಖ್ಯೆಯೂ ಜಾಸ್ತಿಯಾಗುತ್ತದೆ. ಹಲಸಿಗೂ ಮೌಲ್ಯವರ್ಧನೆ ಬರುತ್ತದೆ. ಉದ್ಯೋಗವೂ ಸೃಷ್ಟಿಯಾಗುತ್ತದೆ. ಉದ್ದಿಮೆ, ಉದ್ಯಮಗಳ ಮೂಲಕ ಸಮಾಜದಲ್ಲಿ ಬೆಳೆಯುವ ಅವಕಾಶಗಳು ಬೇಕಾದಷ್ಟಿವೆ. ಆದರೆ ಅದಕ್ಕೆ ತಾಳ್ಮೆ, ಉತ್ತಮ ಯೋಜನೆ, ಯೋಚನೆಗಳು ಬೇಕು. ಹಂತ ಹಂತವಾಗಿ ಬೆಳೆದಾಗ ಮಾತ್ರ ಯಶಸ್ಸು ನಮ್ಮದಾಗಲು ಸಾಧ್ಯ ಎಂದ ಅವರು, ಕೃಷಿಗೆ ಪೂರಕವಾಗಿ ಪುತ್ತೂರಿನಲ್ಲಿ ಹಲಸಿನ ಖಾದ್ಯಗಳ ಆಹಾರ ಹಬ್ಬವನ್ನು ನಿಮ್ಮೆಲ್ಲರ ಸಹಕಾರದಿಂದ ಆಯೋಜಿಸುವ ಕನಸಿದೆ. ಹಲಸಿಗೆ ಉತ್ತಮ ಸ್ಥಾನಮಾನ ಸಿಗುವ ಬಗ್ಗೆ ಸದನದಲ್ಲಿ ಧ್ವನಿಯೆತ್ತುವ ಪ್ರಯತ್ನವನ್ನು ಮಾಡುತ್ತೇನೆ ಎಂದರು.


ಐ.ಸಿ.ಆರ್. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಜೆ. ರಮೇಶ್ ಮಾತನಾಡಿ, ಒಂದು ಕಾಲದಲ್ಲಿ ಬಡವರೇ ಇದನ್ನು ಹೆಚ್ಚಾಗಿ ತಿನ್ನುತ್ತಿದ್ದುದರಿಂದ ಸಮಾಜದಲ್ಲಿ ಹಲಸಿನ ಬಗ್ಗೆ ಕೀಳರಿಮೆ ಇತ್ತು. ಆದರೆ ಹಲಸು ಉತ್ತಮ ವ್ಯವಸಾಯಿಕ ಉತ್ಪನ್ನವಾಗಿದ್ದು, ಹಲಸಿನ ಹಣ್ಣಿನ ಎಲ್ಲಾ ಭಾಗಗಳು ಸೇವೆನೆಗೆ ಯೋಗ್ಯವಾಗಿದೆ. ಇದೊಂದು ಕಲ್ಪವೃಕ್ಷವಿದ್ದಂತೆ. ಬಿ.ಪಿ, ಶುಗರ್, ಕಣ್ಣಿನ ದೃಷ್ಟಿ ನಿವಾರಣೆಗೆ ಇದು ಯೋಗ್ಯ ಆಹಾರ ಕೂಡಾ ಆಗಿದೆ. ಈ ಬೆಳೆಗೆ ಹೆಚ್ಚಿನ ನಿರ್ವಹಣೆ ಬೇಕಿಲ್ಲ. ಇದರ ಸದ್ಭಳಕೆಗೆ ಮುಂದಾದಾಗ ಉತ್ತಮ ಮೌಲ್ಯವರ್ಧನೆಯೊಂದಿಗೆ ಉದ್ಯೋಗ ಸೃಷ್ಟಿಯೂ ಆಗುತ್ತದೆ ಎಂದರು.


ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಮಾತನಾಡಿ, ಕೃಷಿಕರು, ತಯಾರಕರು, ಗ್ರಾಹಕರನ್ನು ಒಂದೇ ಸ್ಥಳದಲ್ಲಿ ಸೇರಿಸಿಕೊಂಡು ಇಂತಹ ಮೇಳಗಳನ್ನು ಆಯೋಜನೆ ಮಾಡಿದಾಗ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಬರಲು ಸಾಧ್ಯ. ಇದು ಸವಾಲಿನ ಕೆಲಸ. ಇದಕ್ಕೆ ಸಾಕಷ್ಟು ಪೂರ್ವ ತಯಾರಿ ಮಾಡಬೇಕು. ಅಚ್ಚುಕಟ್ಟಿನ ವ್ಯವಸ್ಥೆಗಳು ಬೇಕು. ಅದನ್ನು ಇಲ್ಲಿ ಜೇಸಿಐ ಮಾಡಿದೆ. ರೈತ ಬೆಳೆದ ಬೆಳೆಗಳಿಗೆ ಉತ್ತಮ ಮೌಲ್ಯವರ್ಧನೆ ಸಿಗಬೇಕೆಂಬ ನಿಟ್ಟಿನಲ್ಲಿ ಸುದ್ದಿ ಸಂಸ್ಥೆ ಕೂಡಾ ಕಾರ್ಯಪ್ರವೃತವಾಗಿದ್ದು, ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ ಎಂದರು.


ಜೇಸಿಐ ವಲಯ ೧೫ರ ಕಾರ್ಯಕ್ರಮ ನಿರ್ದೇಶಕಿ ಅಕ್ಷತಾ ಗಿರೀಶ್ ಮಾತನಾಡಿ, ಹಲಸು ಪ್ರತಿಯೋರ್ವನ ಜೀವನದಲ್ಲಿ ಒಂದಲ್ಲ ಒಂದು ಮರೆಯಲಾಗದ ನೆನಪನ್ನು ತಂದಿಟ್ಟಿದೆ. ಇಲ್ಲಿ ಹಲಸಿನ ಹಬ್ಬ ಆಚರಿಸುವ ಮೂಲಕ ಉಪ್ಪಿನಂಗಡಿ ಜೇಸಿಐಯು ರೈತರಿಗೆ ಉಪಯೋಗವಾಗುವಂತಹ ಕಾರ್ಯಕ್ರಮವನ್ನು ಮಾಡಿದೆ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ನವತೇಜ ಟ್ರಸ್ಟ್ ಪುತ್ತೂರು ಇದರ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಮಾತನಾಡಿ, ಇಂದು ಪಾರಂಪಾರಿಕ ಹಲಸಿನ, ಮಾವಿನ ತಳಿಗಳು ನಶಿಸಿ ಹೋಗಿವೆ. ಆದ್ದರಿಂದ ಇಂತಹ ತಳಿಗಳನ್ನು ಸಂರಕ್ಷಣೆ ಮಾಡಬೇಕು ಹಾಗೂ ಹಣ್ಣುಗಳ ಮಹತ್ವವನ್ನು ಯುವ ಜನಾಂಗಕ್ಕೆ ತಿಳಿಸುವ ಸಲುವಾಗಿ, ಹಣ್ಣುಗಳನ್ನಾಧರಿತ ಉದ್ಯಮಗಳ ಸ್ಥಾಪನೆಗೆ ಪ್ರೇರಣೆ ನೀಡುವ ಸಲುವಾಗಿ ಹಲಸು ಹಬ್ಬವನ್ನು ನಡೆಸಲಾಗುತ್ತಿದೆ ಎಂದರು.


ಕೃಷಿಕರಾದ ಎನ್.ಪಿ. ಮಂಜುನಾಥ ಭಟ್ ಪೆರಿಯಡ್ಕ, ಜಯಪ್ರಸಾದ್ ಕಡಮ್ಮಾಜೆ, ರಾಜೀವ ಪೂಜಾರಿ ಹಳೆಯೂರು ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜೇಸಿಐ ವಲಯ 15 ಎಸ್‌ಎಂಎಸ್‌ನ ಸ್ಥಾಪಕಾಧ್ಯಕ್ಷ ಜಗನ್ನಾಥ ರೈ ಜಿ., ಜೇಸಿಐ ಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ರೋಟರಿ ಕ್ಲಬ್‌ನ ಪೂರ್ವಾಧ್ಯಕ್ಷ ಅಝೀಝ್ ಬಸ್ತಿಕ್ಕಾರ್, ಬ್ಯಾಂಕ್ ಆಫ್ ಬರೋಡಾದ ಉಪ್ಪಿನಂಗಡಿ ಶಾಖಾ ವ್ಯವಸ್ಥಾಪಕ ವಿಶ್ರುತ್ ಕುಮಾರ್, ಉಪ್ಪಿನಂಗಡಿ ಜೇಸಿಐ ಅಧ್ಯಕ್ಷ ಶೇಖರ ಗೌಂಡತ್ತಿಗೆ, ಕಾರ್ಯದರ್ಶಿ ಸುರೇಶ್, ಜೇಸಿಐ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಕೆ.ವಿ. ಕುಲಾಲ್ ಉಪಸ್ಥಿತರಿದ್ದರು. ಬೆಳಗ್ಗೆ ಮಳಿಗೆಗಳಿಗೆ ಜೇಸಿಐ ಪೂರ್ವಾಧ್ಯಕ್ಷ ಡಾ. ಎಂ. ಆರ್. ಶೆಣೈ ಉದ್ಘಾಟಿಸಿದರು. ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಗಣೇಶ್ ಶೆಣೈ ಅತಿಥಿಗಳಾಗಿ ಉಪಸ್ಥಿತರಿದ್ದರು.


ಅಧ್ಯಕ್ಷತೆ ವಹಿಸಿದ್ದ ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ ಸ್ವಾಗತಿಸಿದರು. ಜೇಸಿಐ ಪೂರ್ವಾಧ್ಯಕ್ಷ ಮೋಹನಚಂದ್ರ ವಂದಿಸಿದರು. ಅವಿನಾಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಜೇಸಿಗಳಾದ ಕೇಶವ ರಂಗಾಜೆ, ಹರೀಶ್ ನಾಯಕ್ ನಟ್ಟಿಬೈಲ್, ಗೋವಿಂದ ಪ್ರಸಾದ್ ಕಜೆ, ಶಶಿಧರ ನೆಕ್ಕಿಲಾಡಿ, ಉಮೇಶ್ ಆಚಾರ್ಯ ಮತ್ತಿತರರು ಸಹಕರಿಸಿದರು.


ಹಲಸು, ಹಲಸಿನ ಖಾದ್ಯಗಳ ಘಮ… ಘಮ… ಹೋಂ ಪ್ರೊಡಕ್ಟ್‌ಗಳ ಮಾರಾಟ
ಹಬ್ಬದಲ್ಲಿ ದೂರದೂರಿನ ಊರಿನಿಂದ ಬಂದವರು ತಮ್ಮ ಉತ್ಪನ್ನಗಳ ಮಳಿಗೆಗಳನ್ನು ತೆರೆದಿದ್ದು, ತುಮಕೂರಿನ ಗುಬ್ಬಿಯ ನರಸಿಂಹ ಮೂರ್ತಿಯವರು ಲೋಡ್‌ಗಟ್ಟಲೆ ನಾಗು ಹಲಸು, ನಂದು ಹಲಸು, ಚಂದ್ರ ಹಲಸನ್ನು ಮಾರಾಟಕ್ಕಿಟ್ಟಿದ್ದರು. ಪುತ್ತೂರಿನ ನಿತ್ಯ ಫುಡ್ ಪ್ರಾಡಕ್ಟ್‌ನವರಲ್ಲಿ ಹಲಸಿನ ಬೀಜದ ಬಿಸ್ಕೆಟ್, ವಿವಿಧ ಧಾನ್ಯಗಳ ಚಪಾತಿ, ಸಿರಿಧಾನ್ಯ ಉತ್ಪನ್ನಗಳಿದ್ದವು. ಕುಂದಾಪುರದ ಸಾಲಿಗ್ರಾಮದ ಶ್ಯಾಮಲಾ ಕಾರಂತ ಅವರು ತಾವೇ ತಯಾರಿಸಿದ ಹ್ಯಾಂಡ್‌ಬ್ಯಾಗ್‌ಗಳ ಜೊತೆಗೆ, ಹಲಸಿನ, ಮಾವಿನ ಹಣ್ಣಿನ ವಿಧ, ವಿಧದ ತಿಂಡಿಗಳು, ಉಪ್ಪಿನಕಾಯಿಯನ್ನು ಮಾರಾಟಕ್ಕಿಟ್ಟಿದ್ದರು. ಆಯುವೇದ ಉತ್ಪನ್ನಗಳು ಮಂಗಳೂರಿನ ಆದಿತ್ಯ ಹರ್ಬಲ್ ಪ್ರಾಡಕ್ಟ್‌ನವರಲ್ಲಿತ್ತು. ತೆಂಗಿನ ಕಾಯಿಯ ಉಂಡೆ ಸೇರಿದಂತೆ ತೆಂಗಿನ ಕಾಯಿಯಿಂದ ಮಾಡಿದ ತಿಂಡಿಗಳು ಕಾಸರಗೋಡಿನ ಶಿಬಿ ಮ್ಯಾಥ್ಯೂ ಅವರ ಮಳಿಗೆಯಲ್ಲಿತ್ತು. ಮಹಿಳೆಯರ ಖಾದಿ ಉಡುಪುಗಳ ಮಳಿಗೆಯನ್ನು ಸೋಮೇಶ್ವರದ ಶ್ವೇತಾ ಅವರು ತೆರೆದಿದ್ದರೆ, ಪುರುಷರ ಖಾದಿ ಉಡುಪುಗಳ ಮಳಿಗೆಯನ್ನು ವಸಂತ ಕುಮಾರ್ ತೆರೆದಿದ್ದರು. ಹೀರೆಕಾಯಿಯ ಮೈಯುಜ್ಜುವ ಬ್ರೆಷ್‌ನ ಮಳಿಗೆಯನ್ನು ತೀರ್ಥಹಳ್ಳಿಯ ಪ್ರಭಾಕರ ತೆರೆದಿದ್ದರು. ಗಿಡಗಳಿಗೆ ಉತ್ತಮ ಪೋಷಕಾಂಶ ನೀಡುವಂತಹ ಎರೆಜಲ, ಜೀವಾಮೃತ, ಪಂಚಗವ್ಯ ಮತ್ತಿತ್ತರ ಗೊಬ್ಬರಗಳು ಆತ್ಮಭಾವ್ ಆರ್ಗಾನಿಕ್ಸ್ ಮಳಿಗೆಯಲ್ಲಿತ್ತು. ಕೃಷಿಕರಿಗೆ ಸಂಬಂಧಿಸಿದ ಏಣಿ ಸೇರಿದಂತೆ ಯಂತ್ರೋಪಕರಗಳು ಎಸ್‌ಆರ್‌ಕೆ ಲ್ಯಾಡರ್‌ನಲ್ಲಿತ್ತು. ಕಾರ್ಕಳದ ಮತ್ಸ್ಯ ಕನ್ಯೆ ಸ್ಟಾಲ್‌ನಲ್ಲಿ ವಿವಿಧ ಅಲಂಕಾರಿಕ ಮೀನುಗಳು ಕಂಡು ಬಂದವು. ಸೇಡಿಯಾಪು ಅಗ್ರೋ ಸೇಲ್ಸ್‌ನವರ ಮಳಿಗೆಯಲ್ಲಿ ಅವರ ತೋಟದಲ್ಲೇ ಬೆಳೆದ ರಂಬೂಟಾನ್ ಹಣ್ಣುಗಳು, ತರಕಾರಿ ಬೀಜ, ಪುನರ್ಪುಳಿ, ನೇರಳೆ ಹಣ್ಣಿನ ಜ್ಯೂಸ್‌ಗಳಿತ್ತು. ಉರುವಾಲಿನ ಭಾರತಿ ವಿದ್ಯಾ ಸಂಸ್ಥೆ ಸೇರಿದಂತೆ ಹಲವು ಮಳಿಗೆಗಳಲ್ಲಿ ಸ್ಥಳದಲ್ಲಿಯೇ ಹಲಸಿನ ಹಣ್ಣಿನ ಖಾದ್ಯಗಳನ್ನು ತಯಾರಿ ಮಾಡಿಕೊಡಲಾಗುತ್ತಿತ್ತು. ಒಟ್ಟಿನಲ್ಲಿ ವಿವಿಧ ಬಗೆಯ ಉತ್ಪನ್ನ, ತಿಂಡಿತಿನಿಸುಗಳನ್ನು ಕೊಳ್ಳುವ ಭಾಗ್ಯ ಜನರಿಗೆ ಈ ಹಲಸಿನ ಹಬ್ಬ ಒದಗಿಸಿಕೊಟ್ಟಿತು.

LEAVE A REPLY

Please enter your comment!
Please enter your name here