ಶ್ರೀಧಾಮ ಮಾಣಿಲದ ಶ್ರೀವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವದ ಪೂರ್ವಭಾವಿ ಸಭೆ

0

ಸಾಮೂಹಿಕ ಶ್ರೀಲಕ್ಷ್ಮೀ ಪೂಜೆ, ಶ್ರೀವರಮಹಾಲಕ್ಷ್ಮೀ ವ್ರತಾಚರಣೆಯ ಪ್ರಸಾದ ಎಲ್ಲಾ ಮನೆಗಳಿಗೂ ಸಿಗಬೇಕು-ಶ್ರೀಮೋಹನದಾಸ ಸ್ವಾಮೀಜಿ

ಪುತ್ತೂರು: ಮಾಣಿಲ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮ ಮಾಣಿಲದಲ್ಲಿ ನಡೆಯುತ್ತಿರುವ ಶ್ರೀವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವದ ಪ್ರಯುಕ್ತ ಜು.16ರಿಂದ ಆ.25ರವರೆಗೆ ನಡೆಯುವ 48 ದಿನಗಳ ಪರ್ಯಂತ ಸಾಮೂಹಿಕ ಶ್ರೀಲಕ್ಷ್ಮೀಪೂಜೆ ಹಾಗೂ ಆ.25ರಿಂದ 27ರವರೆಗೆ ನಡೆಯುವ ಶ್ರೀವರಮಹಾಲಕ್ಷ್ಮೀ ವ್ರತಾಚರಣೆ ಕಾರ್ಯಕ್ರಮದ ಅಂಗವಾಗಿ ಪುತ್ತೂರು ವಲಯ ಸಮಿತಿ ರಚನೆ ಹಾಗೂ ಪೂರ್ವಭಾವಿ ಸಭೆ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆಯಿತು.


ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಾರ್ಗದರ್ಶನ ನೀಡಿ ಮಾತನಾಡಿ ಭಾರತದ ಕರ್ಮಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಸಾರ್ಥಕತೆ ಪಡೆಯಬೇಕು. ನಿತ್ಯಾನಂದ ಸ್ವಾಮಿಗಳು ಅನುಗ್ರಹಿಸಿದ ನೆಲೆ ಮಾಣಿಲ ಕ್ಷೇತ್ರವಾಗಿದೆ. ಆರಾಧನೆಗಳು ಭಕ್ತಿಮಾರ್ಗದ ಮೂಲಕ ಬೆಳೆದು ದೇಶದ ಅಸ್ತಿತ್ವ ಉಳಿಯಬೇಕೆನ್ನುವ ದೃಷ್ಟಿಯಲ್ಲಿ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀವರಮಹಾಲಕ್ಷ್ಮೀ ವೃತಾಚರಣೆ ಕಾರ್ಯಕ್ರಮ ನಡೆಯುತ್ತಿದೆ. ಮನುಷ್ಯನು ದುರ್ಗುಣ ಬಿಟ್ಟು ಸದ್ಗುಣದೆಡೆಗೆ ಸಾಗಬೇಕು. ಸ್ವಾರ್ಥಪರ ಜೀವನದ ಜಂಜಾಟದಲ್ಲಿ ಮನುಷ್ಯನು ಪ್ರೀತಿ ಹೊಂದಬೇಕು ಎನ್ನುವುದು ಈ ಕಾರ್ಯಕ್ರಮದ ಉದ್ಧೇಶವಾಗಿದೆ ಎಂದು ಹೇಳಿದರು. ಕ್ಷೇತ್ರದಲ್ಲಿ ನಡೆಯುವ 48 ದಿನಗಳ ಪರ್ಯಂತದ ಸಾಮೂಹಿಕ ಶ್ರೀಲಕ್ಷ್ಮೀ ಪೂಜೆ ಹಾಗೂ ಸಾಮೂಹಿಕ ಶ್ರೀವರಮಹಾಲಕ್ಷ್ಮೀ ವ್ರತಾಚರಣೆಯ ಪ್ರಸಾದ ಎಲ್ಲಾ ಮನೆಗಳಿಗೂ ಸಿಗಬೇಕು. ಎಂದು ಕಾರ್ಯಕ್ರಮದ ಮಾಹಿತಿ ನೀಡಿದರು.


ಯಕ್ಷಗಾನ ಕಲಾವಿದ ಹಾಗೂ ಶ್ರೀಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಮಾತನಾಡಿ ಮಾಣಿಲ ಕ್ಷೇತ್ರಕ್ಕೆ 28ವರ್ಷಗಳ ಇತಿಹಾಸವಿದೆ. ಕ್ಷೇತ್ರದ ಸ್ವಾಮೀಜಿಯ ತಪಸ್ಸಿನ ಫಲವಾಗಿ ಕ್ಷೇತ್ರ ಬೆಳಗುತ್ತಿದೆ. ನಮ್ಮ ಬದುಕಿಗೆ ಬೆಳಕನ್ನು ತೋರುವ ವ್ಯಕ್ತಿ ಸ್ವಾಮೀಜಿಯವರು. ಇವರ ಮಾರ್ಗದರ್ಶನದಲ್ಲಿ ವಿವಿಧ ಕಡೆ ದೇವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶ ನಡೆಯುತ್ತಿದೆ. ಇದೀಗ ಭಕ್ತಾದಿಗಳು ಕ್ಷೇತ್ರದಲ್ಲಿ ಸಾಮೂಹಿಕ ಶ್ರೀವರಮಹಾಲಕ್ಷ್ಮೀ ಪೂಜೆಯ ಬೆಳ್ಳಿಹಬ್ಬ ಮಹೋತ್ಸವವನ್ನು ವಿಜ್ರಂಭಣೆಯಿಂದ ಮಾಡುತ್ತಿದ್ದಾರೆ. ಸಮಾಜದ ಎಲ್ಲಾ ಭಾಂಧವರನ್ನು ಒಟ್ಟು ಸೇರಿಸಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಭಜರಂಗದಳದ ಪ್ರಾಂತ ಪ್ರಮುಖ್ ಮುರಳೀಕೃಷ್ಣ ಮಾತನಾಡಿ ಮಾಣಿಲದಲ್ಲಿ ಶ್ರದ್ಧಾಭಕ್ತಿಪೂರ್ವಕವಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದು ಸ್ವಾಮೀಜಿಯವರ ಒಬ್ಬರ ಕಾರ್ಯಕ್ರಮವಾಗದೆ ಹಿಂದೂ ಸಮಾಜದ ಕಾರ್ಯಕ್ರಮವಾಗಬೇಕು. ಇದರಲ್ಲಿ ಎಲ್ಲರೂ ಕೈಜೋಡಿಸಬೇಕು. ಇದರ ಪರಿಪೂರ್ಣ ಫಲ ನಮಗೆಲ್ಲರಿಗೂ ಸಿಗುತ್ತದೆ. ಎಂದು ಹೇಳಿ ಹಿಂದೂ ಸಂಘಟನೆಗಳ ಸಂಪೂರ್ಣ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ವಿಶ್ವಹಿಂದೂಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಮಾತನಾಡಿ ಹಿಂದೂ ಸಮಾಜಕ್ಕಾಗಿ ಸ್ವಾಮೀಜಿಯವರು ತುಂಬಾ ಮೃತುವರ್ಜಿಯಿಂದ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ೪೮ ದಿನಗಳ ಒಂದು ಮಂಡಲ ಪೂರ್ಣ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ ಈ ಕಾರ್ಯಕ್ರಮದ ಫಲ ಹಾಗೂ ಶ್ರೀಲಕ್ಷ್ಮೀಕಟಾಕ್ಷ ಎಲ್ಲರಿಗೂ ಸಿಗಲಿ ಎಂದು ಹೇಳಿದರು. ಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಮಾತನಾಡಿ ಮಾಣಿಲದಲ್ಲಿ ಲೋಕಕಲ್ಯಾಣಾರ್ಥವಾಗಿ ಹಲವು ಕಾರ್ಯಕ್ರಮ ನಡೆಯುತ್ತಿದೆ. 48 ದಿನಗಳ ಕಾಲ ಸಾಮೂಹಿಕ ಶ್ರೀವರಮಹಾಲಕ್ಷ್ಮೀ ವೃತಾಚರಣೆ ಪೂಜೆ ನಡೆಯುತ್ತಿರುವುದು ವಿಶೇಷವಾಗಿದೆ. ಇದರ ಬೆಳ್ಳಿಹಬ್ಬದ ಕಾರ್ಯಕ್ರಮದ ಪ್ರಸಾದ ಎಲ್ಲರಿಗೂ ಸಿಗಬೇಕು ಎನ್ನುವ ಕಾರಣಕ್ಕಾಗಿ ಸಮಿತಿಗಳ ರಚನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಪುತ್ತೂರು ವಲಯದ ಸಮಿತಿಯನ್ನು ಈ ಸಂದರ್ಭದಲ್ಲಿ ನಡೆಸಲಾಯಿತು. ಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಸಮಿತಿ ರಚನೆಯನ್ನು ನೆರವೇರಿಸಿಕೊಟ್ಟರು. ಪುತ್ತೂರು ವಲಯ ಸಮಿತಿಯ ಗೌರವಾಧ್ಯಕ್ಷರಾಗಿ ಆಯ್ಕೆಗೊಂಡ ಡಾ.ಸುರೇಶ್ ಪುತ್ತೂರಾಯ ಮಾತನಾಡಿ ಈ ಸಮಿತಿಯು ಉತ್ತಮವಾಗಿ ಕೆಲಸ ಮಾಡಲಿ. ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಲಿ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು. ಸಮಿತಿಯ ಅಧ್ಯಕ್ಷರಾಗಿ ಆಯ್ಕೆಗೊಂಡ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ ಸ್ವಾಮೀಜಿಯವರ ಮೇಲಿನ ಪ್ರೀತಿಯಿಂದ ಈ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದೇನೆ. ಹಿಂದೂ ಕಾರ್ಯಕರ್ತರಿಗೆ ಸಮಸ್ಯೆಯಾದಲ್ಲಿ ಸ್ವಾಮೀಜಿಯವರು ಕೂಡಲೇ ಸ್ಪಂದಿಸುತ್ತಿದ್ದಾರೆ. ಹಿಂದೂ ಸಮಾಜಕ್ಕಾಗಿ ದುಡಿಯುವವರಾಗಿದ್ದಾರೆ ಎಂದು ಹೇಳಿ ಸಹಕಾರ ಕೋರಿದರು. ಪುತ್ತೂರು ಶ್ರೀಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಶಶಾಂಕ್ ಕೊಟೇಚಾ, ಸೇವಾ ಪ್ರತಿಷ್ಠಾನದ ಕರುಣೇಂದ್ರ ಪೂಜಾರಿ, ಸಂಚಾಲಕರು ಹಾಗೂ ಉದ್ಯಮಿ ಯು.ರಾಮ ಉಪ್ಪಿನಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಸ್ವಾಮೀಜಿಗಳಿಗೆ ತುಲಸಿಮಾಲೆ ಅರ್ಪಣೆ ಮಾಡಿ ಸ್ವಾಗತಿಸಿದರು. ಪುತ್ತೂರು ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ್ ಕುಲಾಲ್ ಪುತ್ತೂರು ಕಾರ್ಯಕ್ರಮ ನಿರೂಪಿಸಿ ಕೋಶಾಧಿಕಾರಿ ಜನಾರ್ಧನ ಸಾರ್ಯ ವಂದಿಸಿದರು.

ಕ್ಷೇತ್ರದಲ್ಲಿ ನಡೆಯುತ್ತಿರುವ ಕಟೀಲು ಮೇಳದ ಯಕ್ಷಗಾನ ಕಾರ್ಯಕ್ರಮ, ಶ್ರೀದರ್ಮಸ್ಥಳ ಮೇಳದ ಯಕ್ಷಗಾನ ಹಾಗೂ ಕ್ಷೇತ್ರದ ಪ್ರತಿಷ್ಠಾವರ್ಧಂತಿ ಉತ್ಸವ ಕಾರ್ಯಕ್ರಮಗಳು ೨೫ನೇ ವರ್ಷಾಚರಣೆಥಿ ಬೆಳ್ಳಿಹಬ್ಬ ಸಂಭ್ರಮದಲ್ಲಿದೆ. ಈ ಕಾರ್ಯಕ್ರಮಗಳು ಮುಂದಿನ ಫೆಬ್ರವರಿ ತಿಂಗಳವರೆಗೆ ನಡೆಯಲಿದೆ. ಅಲ್ಲಿಯವರೆಗೆ ಪುತ್ತೂರು ವಲಯ ಸಮಿತಿ ಕಾರ್ಯನಿರ್ವಹಿಸಲಿದೆ. ಅಲ್ಲದೆ ಈ ಬೆಳ್ಳಿಹಬ್ಬ ಕಾರ್ಯಕ್ರಮಗಳ ಪ್ರಯುಕ್ತ ಸ್ಮರಣಸಂಚಿಕೆ ಹೊರತರಲಾಗುತ್ತಿದೆ. 48 ದಿನಗಳ ಪರ್ಯಂತದ ಸಾಮೂಹಿಕ ಶ್ರೀಲಕ್ಷ್ಮೀಪೂಜೆಯ ಸಂದರ್ಭದಲ್ಲಿ ಪ್ರತೀದಿನ ಬಾಲಭೋಜನ, ಮತೃಭೋಜನ, ಹರಿನಾಮ ಸಂಕೀರ್ತನೆಗಳು ನಡೆಯಲಿದೆ ಎಂದು ಸ್ವಾಮೀಜಿಯವರು ತಿಳಿಸಿದರು.

LEAVE A REPLY

Please enter your comment!
Please enter your name here