ಕಾಣಿಯೂರಿನಲ್ಲಿ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ, ಉಪನ್ಯಾಸ

0

ಸಕಾಲಕ್ಕೆ ಸುದ್ದಿ ನೀಡುವ ಪತ್ರಕರ್ತರ ಸಾಮಾಜಿಕ ಹೊಣೆಗಾರಿಕೆ ದೊಡ್ಡದು- ಭಾಗೀರಥಿ ಮುರುಳ್ಯ

ಕಾಣಿಯೂರು: ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಿಕೆಗಳ ಪಾತ್ರ ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದೆ, ಜೊತೆಗೆ ಅವರಿಗೆ ಹೊಣೆಗಾರಿಕೆಯೂ ದೊಡ್ಡದಿದೆ. ಮಾಧ್ಯಮಗಳ ಮೂಲಕ ಸಕಾಲಕ್ಕೆ ಸುದ್ದಿಯನ್ನು ನೀಡುವ ಪತ್ರಕರ್ತರ ಸಾಮಾಜಿಕ ಬದ್ದತೆ ನಿಜಕ್ಕೂ ಅಭಿನಂದನಾರ್ಹವಾದುದು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಹೇಳಿದರು.


ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗಳ ಸಹಯೋಗದೊಂದಿಗೆ ಜು.೮ರಂದು ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಗಳ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸಕ್ತ ಕಾಲಘಟ್ಟದಲ್ಲಿ ಮಾಧ್ಯಮ ರಂಗವು ಅತ್ಯಂತ ಪ್ರಭಾವಶಾಲಿ ಶಕ್ತಿಯಾಗಿದೆ. ಸಮಾಜದ ಧನತ್ಮಾಕ ಬೆಳವಣಿಗೆಯಲ್ಲಿ ಮಾಧ್ಯಮದ ಪಾತ್ರ ಅನನ್ಯ. ಪ್ರತಿನಿತ್ಯದ ಆಗು ಹೋಗುಗಳನ್ನು ತಿಳಿಯಬೇಕಾದರೆ ಅದು ಮಾಧ್ಯಮದಿಂದ ಸಾಧ್ಯ ಎಂದ ಅವರು, ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ ಸಮಾಜ ಬದಲಾವಣೆಯ ಸುದ್ದಿಗಳು ಹೆಚ್ಚು ಪ್ರಕಟಗೊಂಡಾಗ ಸಮಾಜ ಎಚ್ಚರದಿಂದ ಇರುತ್ತದೆ. ವಿವಿಧ ಕಡೆ ನಡೆಯುವ ಸಮಾಜದ ಆಗುಹೋಗುಗಳನ್ನು ಸಮಾಜದ ಎಲ್ಲರಿಗೂ ತಿಳಿಸುವ ಕಾರ್ಯ ಮಾಡುತ್ತಿರುವ ಪತ್ರಕರ್ತರಿಗೆ ವಿಶೇಷವಾದ ಗೌರವ ಇದೆ. ಸಮಾಜದಲ್ಲಿ ಏನೇ ಬೆಳವಣಿಗೆಯಾದರೂ ಪತ್ರಕರ್ತರ ಕಾರ್ಯ ನಿರಂತರವಾಗಿ ನಡೆಯುತ್ತದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ ವಹಿಸಿ ಮಾತನಾಡಿ, ಕಡಬ ತಾಲೂಕು ಮಾಧ್ಯಮ ಬಳಗ ಎಂದು ಆರಂಭಗೊಂಡ ನಮ್ಮ ಸಂಘವನ್ನು ಬಳಿಕದ ದಿನಗಳಲ್ಲಿ ತಾಲೂಕು ಪತ್ರಕರ್ತರ ಸಂಘ ಎಂದು ನಾಮಕರಣಗೊಳಿಸಲಾಯಿತು. ಸಂಘ ಅಸ್ತಿತ್ವ ಬಂದಾಗಿನಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಂಘದ ಪ್ರೋತ್ಸಾಹದೊಂದಿಗೆ ಪ್ರತಿವರ್ಷ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತಿದೆ. ನಾವು ಕಾರ್ಯಕ್ರಮ ಹಮ್ಮಿಕೊಂಡ ವಿದ್ಯಾಸಂಸ್ಥೆಗಳು ಉತ್ತಮ ಪ್ರೋತ್ಸಾಹ ನೀಡಿದೆ. ಅಂತೆಯೇ ಈ ಬಾರಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಕಾರ್ಯಕ್ರಮಕ್ಕೆ ವೇದಿಕೆ ಒದಗಿಸಿ, ಸಂಸ್ಥೆಯಿಂದ ಉತ್ತಮ ಬೆಂಬಲವು ದೊರೆತಿದೆ ಎಂದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಸಾಮಾಜಿಕ ಜಾಲತಾಣದ ಭರಾಟೆಯ ಮಧ್ಯೆ ಕೂಡಾ ಮುದ್ರಣ, ದೃಶ್ಯ ಮಾಧ್ಯಮಗಳು ತಮ್ಮ ಸ್ಥಾನವನ್ನು ಉಳಿಸಿಕೊಂಡಿದೆ. ಇಂತಹ ಮಾಧ್ಯಮಗಳ ಮೇಲೆ ಜನ ನಂಬಿಕೆಯಿಟ್ಟಿದ್ದಾರೆ. ಪತ್ರಕರ್ತರು ತನ್ನ ಬದ್ದತೆಯನ್ನು ಅರಿತು ಕೆಲಸ ನಿರ್ವಹಿಸಿದಾಗ ಸಾಮಾಜಿಕ ಸ್ಥಾನಮಾನ ಸಿಗುತ್ತದೆ ಎಂದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಉನ್ನತ ಮಟ್ಟದ ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಶಿಕ್ಷಣ ಸಿಗಬೇಕೆಂಬ ಉದ್ದೇಶದೊಂದಿಗೆ 1993ರಲ್ಲಿ ಪ್ರಗತಿಯನ್ನು ಸ್ಥಾಪಿಸಿದ್ದು, ಶಿಕ್ಷಕರ, ಪೋಷಕರ ಹಾಗೂ ಆಡಳಿತ ಮಂಡಳಿಯ ಸಹಕಾರದಿಂದ ಕಳೆದ 20 ವರ್ಷಗಳಿಂದ ಆಂಗ್ಲಮಾಧ್ಯಮ ಹಾಗೂ 13 ವರ್ಷಗಳಿಂದ ಕನ್ನಡ ಮಾಧ್ಯಮ ವಿಭಾಗದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬರುತ್ತಿದೆ. ಈ ಬಾರಿ ಫಲಿತಾಂಶದಲ್ಲಿ ಸಂಸ್ಥೆಯ ವಿದ್ಯಾರ್ಥಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದು ಹೆಮ್ಮೆಯ ವಿಚಾರ ಎಂದರು. ಇನ್ನೋರ್ವ ಸನ್ಮಾನಿತ ಕಾಣಿಯೂರಿನ ಹಿರಿಯ ಪತ್ರಿಕಾ ವಿತರಕರಾದ ಅನಂತರಾಮ ಉಪಾಧ್ಯಾಯ ತುಂಬ್ಯ ಮಾತನಾಡಿ, ಕಷ್ಟಪಟ್ಟು ದುಡಿದರೆ ಅದಕ್ಕೆ ಖಂಡಿತಾ ಪ್ರತಿಫಲ ದೊರಕುತ್ತದೆ. ಶಿಕ್ಷಣ,ಉದ್ಯೋಗ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ನಿರಂತರ ಶ್ರಮ ಅಗತ್ಯ. 40 ವರ್ಷಗಳ ಹಿಂದೆ ಪತ್ರಿಕೆಯನ್ನು ಮನೆ ಮನೆ ತಲುಪಿಸುವುದು ಬಹಳ ಕಷ್ಟಕರ ಸ್ಥಿತಿ.ಆದರೂ ಪ್ರೀತಿಯಿಂದ ನಿರಂತರವಾಗಿ ಪತ್ರಿಕೆ ವಿತರಿಸುವ ಕೆಲಸ ಮಾಡಿದ್ದೇನೆ ಎಂದರು.


ಕಡಬ ತಾಲೂಕು ಪತ್ರಕರ್ತರ ಸಂಘದ ಸದಸ್ಯರಿಗೆ ಕೊಡುಗೆಯಾಗಿ ನೀಡಿದ ರೈನ್ ಕೋಟ್ ವಿತರಿಸಿ ಮಾತನಾಡಿದ ಕೊಲ ಪಶುಸಂಗೋಪನಾ ಕ್ಷೇತ್ರದ ಉಪನಿರ್ದೇಶಕ ಡಾ.ಧರ್ಮಪಾಲ ಕರಂದ್ಲಾಜೆಯವರು, ಪತ್ರಕರ್ತರು ಸಮಾಜದ ನಾಯಕರ, ಅಧಿಕಾರಿಗಳ ಕಣ್ಣು ತೆರೆಸುವ ವರದಿಗಳಿಂದ ಸಾಕಷ್ಟು ಬದಲಾವಣೆಯಾಗಿರುವ ಇತಿಹಾಸವಿದೆ. ಸಮಾಜದ ಅಭಿವೃದ್ದಿಗಾಗಿ ನಿಖರ ಮತ್ತು ಸಮಗ್ರ ಮಾಹಿತಿಯಾಧರಿಸಿ ವರದಿ ಬಿತ್ತರಿಸುವ ಹೊಣೆಗಾರಿಯನ್ನು ಪ್ರತಿಯೊಬ್ಬ ಪತ್ರಕರ್ತ ಅರಿಯುವುದು ಇಂದಿನ ಕಾಲಘಟ್ಟದಲ್ಲಿ ಅಗತ್ಯವಾಗಿದೆ ಎಂದರು. ಪ್ರಗತಿ ವಿದ್ಯಾಸಂಸ್ಥೆಯ ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ರೈ ಮಾದೋಡಿ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ.ಎಂ.ಬಿ, ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಸರಸ್ವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಡಬ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಬಾಲಕೃಷ್ಣ ಕೊಲ, ವಿಜಯ ಕುಮಾರ್ ಪೆರ್ಲ, ಹರೀಶ್ ಬಾರಿಂಜ, ಪ್ರವೀಣ್‌ರಾಜ್ ಕೊಲ, ಸುಧಾಕರ್ ಕಾಣಿಯೂರು, ಪ್ರವೀಣ್ ಚೆನ್ನಾವರ, ಪ್ರಕಾಶ್ ಕೊಡಿಂಬಾಳ, ದಿವಾಕರ್ ಮುಂಡಾಲ, ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ ಅತಿಥಿಗಳನ್ನು ಗೌರವಿಸಿದರು. ದಯಾನಂದ ಕಲ್ನಾರು, ಬಾಲಕೃಷ್ಣ ಕೊಲ, ನಝೀರ್ ಕೊಲ ಸ್ಮರಣಿಕೆ ನೀಡಿ ಗೌರವಿಸಿದರು. ಪ್ರಗತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಸ್ವಾಗತಿಸಿದರು. ಕಡಬ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಕೊಲ ವಂದಿಸಿದರು. ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕಡಬ ತಾಲೂಕು ಪತ್ರಕರ್ತರ ಸಂಘದ ಸದಸ್ಯರಿಗೆ ಕೊಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ| ಧರ್ಮಪಾಲ ಕರಂದ್ಲಾಜೆಯವರು ರೈನ್ ಕೋಟ್ ಹಾಗೂ ಕಾಣಿಯೂರು ರಾಶಿ ಕಾಂಪ್ಲೆಕ್ಸ್ ಮಾಲಕರಾದ ಚಂದ್ರಶೇಖರ್ ಬರೆಪ್ಪಾಡಿ, ಕಾಣಿಯೂರು ಮಠದ ನಿರಂಜನ್ ಆಚಾರ್ ಅವರು ಕೊಡುಗೆಯಾಗಿ ನೀಡಿರುವ ಕೊಡೆಯನ್ನು ಸದಸ್ಯರಿಗೆ ಹಸ್ತಾಂತರಿಸಲಾಯಿತು. ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕಿ ಅನಿತಾ ಜೆ ರೈ ಬಿ.ವಿ ಸೂರ್ಯನಾರಾಯಣ ಅವರ ಪರಿಚಯ ಓದಿದರು.
ಕಾಣಿಯೂರು ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ, ಜಿ.ಪಂ. ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನ, ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ ಸಕ್ರಮ ಸದಸ್ಯ ರಾಕೇಶ್ ರೈ ಕೆಡೆಂಜಿ, ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಡಳಿತ ಸಮಿತಿ ಸದಸ್ಯ ನಾಗೇಶ್ ರೈ ಮಾಳ, ಗ್ರಾ.ಪಂ. ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಜಯಂತ ಅಬೀರ, ಕಾಣಿಯೂರು ವಿಶ್ವಜ್ಞ ಯುವಕ ಮಂಡಲದ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ಕಾಣಿಯೂರು ಸ. ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಮೀಜೆ ಮತ್ತಿತರರು ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗಳ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಕಾಣಿಯೂರಿನ ಹಿರಿಯ ಪತ್ರಿಕಾ ವಿತರಕ ಅನಂತರಾಮ ಉಪಾಧ್ಯಾಯ ತುಂಬ್ಯ, ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಉತ್ತಮ್ ಕಾಣಿಯೂರು ಇವರನ್ನು ಸನ್ಮಾನಿಸಲಾಯಿತು. ಪತ್ರಕರ್ತರ ಸಂಘದ ಕಾರ್ಯದರ್ಶಿ ವಿಜಯ ಕುಮಾರ್ ಪೆರ್ಲ, ಉಪಾಧ್ಯಕ್ಷ ಸುಧಾಕರ್ ಕಾಣಿಯೂರು, ಸದಸ್ಯ ಪ್ರವೀಣ್ ಚೆನ್ನಾವರ ಸನ್ಮಾನಿತರ ಪರಿಚಯ ವಾಚಿಸಿದರು.

ಎಸ್‌ಎಸ್‌ಎಲ್‌ಸಿ ನಂತರದ ಶೈಕ್ಷಣಿಕ ಅವಕಾಶಗಳು
ಬೆಳ್ಳಾರೆ ಸರಕಾರಿ ಪ.ಪೂ.ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಸೂರ್ಯನಾರಾಯಣ ಬಿ.ವಿ ಅವರು `ಎಸೆಸ್ಸೆಲ್ಸಿ ನಂತರದ ಶೈಕ್ಷಣಿಕ ಅವಕಾಶಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ಪತ್ರಿಕೆಗಳು ಶೈಕ್ಷಣಿಕ ಹಾಗೂ ಔದ್ಯೋಗಿಕ ಸುದ್ದಿಗಳನ್ನು ಪ್ರಕಟಿಸುತ್ತಿದ್ದು ವಿದ್ಯಾರ್ಥಿ ಸಮೂಹ ಇಂತ ವಿಚಾರಗಳನ್ನು ಗಮನಿಸಬೇಕೆಂದರು.

LEAVE A REPLY

Please enter your comment!
Please enter your name here