ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಭಾಭವನದಲ್ಲಿ ಸಂತ ಫಿಲೋಮಿನಾ ಪ್ರೌಢಶಾಲೆ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ಸಂತ ಫಿಲೋಮಿನಾ ಕಾಲೇಜಿನ ಎನ್‌ಸಿಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜಿ20 ಶೃಂಗ ಸಭೆಯ ಬಗ್ಗೆ ಕಾರ್ಯಗಾರವನ್ನು ಆಯೋಜಿಸಲಾಯಿತು. ಕಾರ್‍ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಆಂಟೊನಿ ಪ್ರಕಾಶ್ ಮೊಂತೆರೋರವರು ಜಿ20 ಶೃಂಗ ಸಭೆಯಲ್ಲಿ ವಿಶ್ವದ ಪ್ರಮುಖ ನಾಯಕರು ಪಾಲ್ಗೊಳ್ಳುತ್ತಾರೆ. ಇದು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಜಿ20 ಶೃಂಗ ಸಭೆಯ ಬಗ್ಗೆ ಪ್ರತಿಯೊಬ್ಬ ನಾಗರಿಕನಿಗೂ ಅರಿವಿರಬೇಕು. ಈ ಸಭೆಯಲ್ಲಿ ಹವಾಮಾನ ಬದಲಾವಣೆಯಿಂದ ಹಿಡಿದು ಜಾಗತಿಕ ಆರೋಗ್ಯದವರೆಗಿನ ಹಲವಾರು ಪ್ರಮುಖ ವಿಷಯಗಳು ಚರ್ಚೆಗೆ ಬರುತ್ತವೆ.ಇಲ್ಲಿ ತೆಗೆದುಕೊಂಡ ನಿರ್ಧಾರಗಳು ನಮ್ಮ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿವೆ
ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಸಂತ ಫಿಲೋಮಿನಾ ಕಾಲೇಜಿನ ಬಿಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ರೈ ಜಾಗತಿಕ ಆರ್ಥಿಕತೆ, ಜಿಡಿಪಿ, ಜಾಗತಿಕ ಆರ್ಥಿಕ ದೃಷ್ಟಿಕೋನ, ಅಂತರ್ರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಬಗ್ಗೆ, ಜಾಗತಿಕ ಆರೋಗ್ಯ ಮುಂತಾದ ವಿಷಯಗಳ ಕುರಿತು ವಿವರಿಸಿದರು. ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅಶೋಕ್ ರಾಯನ್ ಕ್ರಾಸ್ತಾ ಉಪಸ್ಥಿತರಿದ್ದರು.
ನೌಕಾದಳದ ಅಧಿಕಾರಿ ತೇಜಸ್ವಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎನ್ ಸಿ ಸಿ ಆಫೀಸರ್ ಲೆಫ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾ, ಸಂತ ಫಿಲೋಮಿನಾ ಪ್ರೌಢಶಾಲೆಯ ಎನ್ ಸಿ ಸಿ ಅಧಿಕಾರಿಗಳಾದ ನರೇಶ್ ಲೋಬೋ, ಕ್ಲೆಮೆಂಟ್ ಪಿಂಟೋ, ಹಾಗೂ ರೋಶನ್ ಸಿಕ್ವೇರಾ ಉಪಸ್ಥಿತರಿದ್ದರು.