ಕಾಣಿಯೂರು: ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಆಸ್ತಿಯ ಬಗ್ಗೆ ಮತ್ತು ನೆರೆ ಹರಿದು ಮನೆಗೆ, ಶಾಲೆಗೆ ಹಾನಿಯಾಗುವ ಬಗ್ಗೆ ಮಾಹಿತಿ ನೀಡಬೇಕು. ಶಿಥಿಲಗೊಂಡ ಶಾಲಾ ಕಟ್ಟಡ ನೆರೆ ನೀರು ನುಗ್ಗುವ ಮನೆಗಳಿಗೆ ಮುಂಜಾಗೃತ ಕ್ರಮ ವಹಿಸಿ, ಸಮಸ್ಯೆ ಎದುರಾಗುವ ಮೊದಲೇ ಜಾಗೃತ ವಹಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಬೇಕೆಂದು ಕಡಬ ತಾಲೂಕು ಉಪ ತಹಶೀಲ್ದಾರ್ ಗೋಪಾಲ್ ಹೇಳಿದರು. ಅವರು ಬೆಳಂದೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಾಕೃತಿಕ ವಿಕೋಪ, ನೆರೆ ಪರಿಹಾರದ ಕುರಿತು ಮುಂಜಾಗೃತ ಸಭೆಯಲ್ಲಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ವಹಿಸಿದ್ದರು.
ಬೈತಡ್ಕ – ನಾಣಿಲ ರಸ್ತೆಯ ಬೈತಡ್ಕ ಎಂಬಲ್ಲಿ ರಸ್ತೆಯ ತಡೆಗೋಡೆ ಕುಸಿದಿದ್ದು, ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸದಸ್ಯ ವಿಠಲ ಗೌಡ ಅಗಳಿ ಹೇಳಿದರು. ಕಾಣಿಯೂರು ಪ್ರಗತಿ ಶಾಲಾ ಸಮೀಪ ರೈಲ್ವೆ ಸೇತುವೆ ಕೆಳಭಾಗದಲ್ಲಿ ನದಿಯ ಬದಿಯಲ್ಲಿ ತಡೆಗೋಡೆ ರಚಿಸುವಂತೆ ಸದಸ್ಯ ಜಯಂತ ಅಬೀರ ಸಭೆಯಲ್ಲಿ ಪ್ರಸ್ತಾಪಿಸಿದರು. ಬೆಳಂದೂರು ಗ್ರಾಮದ ಅಮೈ ಶಾಲೆಗೆ ಸಂಪರ್ಕಿಸುವ ರಸ್ತೆಗೆ ತಡೆಗೋಡೆ ನಿರ್ಮಾಣ ಮಾಡುವಂತೆ ಗ್ರಾ.ಪಂ. ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ ಹೇಳಿದರು. ಕಾಯಿಮಣ ಗ್ರಾಮದ ಮರಕ್ಕಡ ಎಂಬಲ್ಲಿ ಕಾಲುಸಂಕ ದುರಸ್ಥಿ ಮಾಡುವಂತೆ ಸದಸ್ಯ ವಿಠಲ ಅಗಳಿ ಹೇಳಿದರು. ಕಾಮಣ ಗ್ರಾಮದ ಅಂಕಜಾಲು ಟಿಸಿಯಿಂದ ಅಗಳಿ ಕೂರೋಡಿಯವರೆಗೆ ವಿದ್ಯುತ್ ಲೈನು ತುಂಬಾ ಹಳೆಯದಾಗಿದ್ದು, ತಂತಿ ಬದಲಾವಣೆ ಮಾಡುವಂತೆ ಸದಸ್ಯ ಮೋಹನ್ ಅಗಳಿ ಹೇಳಿದರು. ಪಳ್ಳತ್ತಾರು ಕುವೆತ್ತೋಡಿ, ಕುದ್ಮಾರು ಪ.ಜಾತಿ ಕಾಲೋನಿ ರಸ್ತೆ ಹಾಗೂ ಏರ್ಕಮೆ ಕೂರ ರಸ್ತೆ ತೀರ ಹದಗೆಟ್ಟಿದ್ದು ದುರಸ್ಥಿಗೊಳಿಸುವಂತೆ ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಹೇಳಿದರು. ಗ್ರಾ.ಪಂ.ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಗ್ರಾ.ಪಂ.ಸದಸ್ಯರಾದ ಜಯಂತ ಅಬೀರ, ವಿಠಲ ಗೌಡ ಅಗಳಿ, ಮೋಹನ ಅಗಳಿ, ರವಿಕುಮಾರ್ ಕೆಡೆಂಜಿ, ಪ್ರವೀಣ್ ಕೆರೆನಾರು, ಜಯರಾಮ ಬೆಳಂದೂರು, ಉಮೇಶ್ವರಿ ಅಗಳಿ, ಕುಸುಮಾ ಅಂಕಜಾಲು, ಗೌರಿ ಮಾದೋಡಿ, ಗೀತಾ ಕುವೆತ್ತೋಡಿ, ಹರಿಣಾಕ್ಷಿ ಬನಾರಿ, ಪಾರ್ವತಿ ಮರಕ್ಕಡ, ತಾರಾ ಅನ್ಯಾಡಿ, ಬೆಳಂದೂರು ಗ್ರಾಮಕರಣಿಕ ಪುಷ್ಪರಾಜ್, ಲೆಕ್ಕಸಹಾಯಕಿ ಸುನಂದ, ಮತ್ತಿತರರು ಉಪಸ್ಥಿತರಿದ್ದರು. ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ್ ಸ್ವಾಗತಿಸಿ,ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.