ಉಪ್ಪಿನಂಗಡಿ: ಮಾನಸಿಕ ಅಸ್ವಸ್ಥನಾದರೂ, ಸೌಮ್ಯ ಸ್ವರೂಪಿಯಾಗಿ ಯಾರಿಗೂ ಕಿರುಕುಳ ನೀಡದೇ 2020ರ ಇಸವಿಯ ಲಾಕ್‌ಡೌನ್ ಸಮಯದಲ್ಲಿ ಉಪ್ಪಿನಂಗಡಿಯಲ್ಲಿದ್ದ ಜಗ್ಗು ಆಲಿಯಾಸ್ ಜಗನ್ ಎಂಬಾತನೇ ಮಂಗಳೂರಿನ ಪಾಂಡೇಶ್ವರ ಠಾಣಾ ವ್ಯಾಪ್ತಿಯ ಮುಳಿಹಿತ್ಲು ಎಂಬಲ್ಲಿ ಎರಡು ದಿನಗಳ ಹಿಂದೆ ತೌಸೀಫ್ ಹುಸೈನ್ ಎಂಬಾತನಿಂದ ಬೆಂಕಿ ಹಚ್ಚಲ್ಪಟ್ಟು ಅಮಾನುಷವಾಗಿ ಕೊಲೆಯಾಗಲ್ಪಟ್ಟಿದ್ದಾನೆ ಎಂಬ ಸುದ್ದಿ ಕೇಳಿ ಅವನನ್ನು ಹತ್ತಿರದಿಂದ ಕಂಡಿದ್ದವರ ಕಣ್ಣಂಚಿನಲ್ಲಿ ನೀರು ಸುರಿಯುವಂತಾಗಿದೆ.
ಲಾಕ್ ಡೌನ್ ಘೋಷಣೆಯಾಗದ ಸಮಯ ಅದೊಂದು ದಿನ ಉಪ್ಪಿನಂಗಡಿ ಸನಿಹದ 34ನೇ ನೆಕ್ಕಿಲಾಡಿಯಲ್ಲಿ ವಾರದ ಸಂತೆ ನಡೆಯುತ್ತಿದ್ದ ಸ್ಥಳದಲ್ಲಿ ಹಸಿವಿನಿಂದ ಆಹಾರವನ್ನು ಯಾಚಿಸುತ್ತಿದ್ದ ಈ ಯುವಕನ ಬಗ್ಗೆ ಕರುಣೆ ತೋರಿ ಸಂತೆಗೆ ಹೋಗಿದ್ದ ಉಪ್ಪಿನಂಗಡಿಯ ತರಕಾರಿ ವ್ಯಾಪಾರಿ ಬಶೀರ್ ಎಂಬವರು ಆಹಾರ ನೀಡಿ, ತರಕಾರಿ ಲೋಡ್ ಮಾಡಲು ತಿಳಿಸಿದ್ದರು. ಶ್ರದ್ಧೆ ಹಾಗೂ ಉತ್ಸಾಹದಿಂದ ಲೋಡ್, ಅನ್‌ಲೋಡ್ ಮಾಡುತ್ತಿದ್ದ ಈತನನ್ನು ಬಳಿಕ ತನ್ನ ತರಕಾರಿ ಅಂಗಡಿಗೆ ಕರೆ ತಂದಿದ್ದರು. ಬಳಿಕ ಲಾಕ್ ಡೌನ್ ಘೋಷಣೆಯಾಗಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರೂ, ಅಂಗಡಿಗಳು ತೆರೆಯಲ್ಪಟ್ಟ ಸಮಯದಲ್ಲಿ ಕೆಲಸ ಮಾಡುತ್ತಾ, ಯಾರಾದರೂ ತಿಂಡಿ ಕೊಟ್ಟರೆ ಈತ ತಿನ್ನುತ್ತಿದ್ದ. ಇಲ್ಲದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತನ್ನಷ್ಟಕ್ಕೆ ತಾನೇ ಮುಖ ಅಡಿಗೆ ಹಾಕಿಕೊಂಡು ಬಿರುಸಿನ ನಡಿಗೆಯಲ್ಲಿ ಕಿ.ಮೀ.ಗಟ್ಟಲೆ ದೂರ ಹೋಗಿ ಬರುತ್ತಿದ್ದ. ಇವನನ್ನು ಕಂಡು ಯಾರಾದರೂ ಹಣ ನೀಡಲು ಮುಂದಾದರೂ, ಹಿಂದಿಯಲ್ಲಿ ನಹೀ'
ನಹೀ’ ಎಂದು ಹೇಳಿ ತನ್ನಷ್ಟಕ್ಕೆ ಮುಂದುವರಿಯುತ್ತಿದ್ದ. ಕೆಲಸ ಮಾಡಿದರೂ ಈತ ಹಣಕ್ಕಾಗಿ ಏನನ್ನೂ ಮಾಡುತ್ತಿರಲಿಲ್ಲ. ಹಣದ ಬಗ್ಗೆ ಅರಿವೂ ಹೊಂದಿರದ ಈತ ಹೊಟ್ಟೆ ತುಂಬಾ ಊಟ, ಧರಿಸಲು ಅಂದ ಚಂದದ ಡ್ರೆಸ್ ಮಾತ್ರ ಬಯಸುತ್ತಿದ್ದ. ಮಾತು ತೀರಾ ಕಡಿಮೆಯಾಡುತ್ತಿದ್ದ ಈತ ಯಾವಾಗಾದರೊಮ್ಮೆ ಮಾತನಾಡುತ್ತಿದ್ದ. ತನ್ನ ಹೆಸರನ್ನು ಜಗನ್ ಎಂದು ತಿಳಿಸಿ, ವಿಳಾಸವನ್ನು ಅಸ್ಸಾಂ ರಾಜ್ಯದ ಸುಂದರ್‌ಗಡ್ ಎಂದು ಅರೆಬರೆಯಾಗಿ ತಿಳಿಸುತ್ತಿದ್ದ. ಆತ ನೀಡುತ್ತಿದ್ದ ಮಾಹಿತಿಯನ್ನು ಶೋಧಿಸಿದಾಗ ಸುಂದರ್ ಗಡ್ ಎಂಬುವುದು ಒರಿಸ್ಸಾದಲ್ಲಿ ಇದ್ದಂತಿತ್ತು. ದಿನ ನಿತ್ಯ ಸ್ನಾನ ಶೌಚಾದಿಗಳನ್ನು ಕ್ರಮಶಃ ಮಾಡುತ್ತಿದ್ದ ಮಡಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದ ಎಂಬುದು ಈತನನ್ನು ಕಂಡಾಗಲೇ ಗೊತ್ತಾಗುತ್ತಿತ್ತು. ನಿರುಪದ್ರವಿ ವ್ಯಕ್ತಿಯಾಗಿದ್ದ. ರಸ್ತೆಯಲ್ಲಿ ಅಲೆದಾಡುವ ಸಮಯದಲ್ಲಿ ಸ್ತ್ರೀಯರನ್ನು ಎದುರುಗೊಂಡರೆ ನಾಚಿಕೊಂಡು ಮುಖವನ್ನು ವಿರುದ್ಧ ದಿಕ್ಕಿಗೆ ತಿರುಗಿಸುತ್ತಿದ್ದ.
ಅದೊಂದು ದಿನ ತರಕಾರಿ ವ್ಯಾಪಾರಿ ಬಶೀರ್ ಜೊತೆಗೂಡಿ ಮಂಗಳೂರಿಗೆ ಹೋದಾತ ಈತ ವಾಹನಕ್ಕೆ ತರಕಾರಿ ಲೋಡ್ ಮಾಡಿ ಊರಿಗೆ ಹೊರಡೋಣವೆಂದು ಬಶೀರ್ ಅವರ ಸೂಚನೆಯಂತೆ ವಾಹನ ಹತ್ತಲೆಂದು ಬಂದ ಈತ ಬಳಿಕ ನಾಪತ್ತೆಯಾಗಿದ್ದ. ಅಂದು ನಾಪತ್ತೆಯಾದಾತ ಹಂತಕ ತೌಷಿಪ್ ಹುಸೇನ್ ಅಂಗಡಿಯಲ್ಲಿ ಕೆಲಸಕ್ಕಿದ್ದು, ಆತನಿಂದ ಸತತ ಹಿಂಸೆ ಅನುಭವಿಸಿ ಅಂತಿಮವಾಗಿ ದಾರುಣ ರೀತಿಯಲ್ಲಿ ಸಾವನ್ನಪ್ಪಿರುವುದು ಆತನನ್ನು ಬಲ್ಲ ಉಪ್ಪಿನಂಗಡಿ ನಿವಾಸಿಗರಿಗೆ ವೇದನೆಯನ್ನು ತಂದಿದೆ.
ಮೇಲ್ನೋಟಕ್ಕೆ ಆದಿವಾಸಿ ಜನಾಂಗದವನಂತೆ ಕಾಣುತ್ತಿದ್ದ ಈತ ಮನೋವೇದನೆಗೆ ಸಿಲುಕಿ ತನ್ನ ಊರು ಸಂಬಂಧಿಕರನ್ನು ಮರೆತಂತೆ ಭಾಸವಾಗುತ್ತಿತ್ತು. ಉಪ್ಪಿನಂಗಡಿಯಲ್ಲಿ ಆತನ ಬಗ್ಗೆ ವಿಚಾರಿಸಿಕೊಂಡು ಆತ್ಮೀಯತೆಯ ಒಡನಾಟವಿರಿಸಿಕೊಂಡಿದ್ದ ದಿನಸಿ ವ್ಯಾಪಾರಿ ಶಫೀಕ್ ಗಾಂಧೀಪಾರ್ಕ್‌ರವರು ಜಗನ್ ಕ್ರೂರ ರೀತಿಯಲ್ಲಿ ಸಾವನ್ನಪ್ಪಿರುವ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.