30 ದಿನಗಳವರೆಗೆ ಪಿಡಿಒಗೆ ಅಧಿಕಾರ
ಬಳಿಕದ ವಿಳಂಬ ನೋಂದಣಿ ಅಧಿಕಾರ ವಿಎಗೆ
ಪುತ್ತೂರು:ಗ್ರಾಮೀಣ ಪ್ರದೇಶದಲ್ಲಿ ನಾಗರಿಕ ನೋಂದಣಿ ಪದ್ಧತಿಯನ್ನು ಬಲಪಡಿಸಲು ಹಾಗೂ ಘಟಿಸುವ ಜನನ,ಮರಣಗಳನ್ನು ಶೇ.100ರಷ್ಟು ದಾಖಲಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಜನನ,ಮರಣ ಘಟಿಸಿದ 30 ದಿನಗಳವರೆಗೆ ನೋಂದಾಯಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಉಪನೋಂದಣಾಧಿಕಾರಿಗಳನ್ನಾಗಿ ಮತ್ತು 30 ದಿನಗಳ ನಂತರದ ವಿಳಂಬ ನೋಂದಣಿಯಡಿ ನೋಂದಾಯಿಸಲು ಗ್ರಾಮಲೆಕ್ಕಾಧಿಕಾರಿಗಳನ್ನು ನೋಂದಣಾಧಿಕಾರಿಗಳನ್ನಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
ಜನನ ಮರಣ ನೋಂದಣಿ ಅಧಿನಿಯಮ 1969ರ ಪ್ರಕರಣ7(5)ರನ್ವಯ, ಜನನ ಮರಣ ಘಟನೆಗಳು ಸಂಭವಿಸಿದ 30 ದಿನಗಳವರೆಗೆ ಘಟನೆಗಳನ್ನು ನೋಂದಾಯಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಉಪನೋಂದಣಾಧಿಕಾರಿಗಳನ್ನಾಗಿ ಹಾಗೂ ಪ್ರಕರಣ 7(1)ರನ್ವಯ ಜನನ ಮರಣ ಘಟನೆಗಳು ಸಂಭವಿಸಿದ 30 ದಿನಗಳ ನಂತರದ ವಿಳಂಬ ನೋಂದಣಿಯಡಿ ನೋಂದಾಯಿಸಲು ಗ್ರಾಮ ಲೆಕ್ಕಾಧಿಕಾರಿಗಳನ್ನು ನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಗ್ರಾಮ ಲೆಕ್ಕಾಧಿಕಾರಿ(ಜನನ ಮರಣ ನೋಂದಣಾಧಿಕಾರಿ)ಗಳು ಸಂಬಂಧಿಸಿದ ಸಕ್ಷಮ ಪ್ರಾಧಿಕಾರದ ಅನುಮೋದನೆ/ಆದೇಶ ಪಡೆದು ನಿಗದಿಪಡಿಸಿದ ವಿಳಂಬ ಶುಲ್ಕದೊಂದಿಗೆ ನೋಂದಾಯಿಸಲು ಆದೇಶಿಸಲಾಗಿದೆ.ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು ಹೊರಡಿಸಿದ ನಂತರ ಈ ಆದೇಶ ಜಾರಿಗೆ ಬರುತ್ತದೆ ಎಂದು ಕರ್ನಾಟಕ ಸರಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿನಾಥ ಅವರು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಜನನ ಮರಣಗಳ ನೋಂದಣಾಧಿಕಾರಿಗಳನ್ನಾಗಿ ಹಾಗೂ ಗ್ರಾಮಲೆಕ್ಕಾಧಿಕಾರಿಗಳನ್ನು ಜನನ ಮರಣಗಳ ಉಪನೋಂದಣಾಧಿಕಾರಿಗಳನ್ನಾಗಿ ನೇಮಕಗೊಳಿಸಿ 2022ರ ಫೆ.22ರಂದು ಆದೇಶ ಮಾಡಲಾಗಿತ್ತು.ಈ ಆದೇಶಕ್ಕೆ ಇದೀಗ ತಿದ್ದುಪಡಿ ಮಾಡಲಾಗಿದ್ದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಉಪನೋಂದಣಾಧಿಕಾರಿಗಳನ್ನಾಗಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳನ್ನು ನೋಂದಣಾಧಿಕಾರಿಗಳನ್ನಾಗಿ ನೇಮಕಗೊಳಿಸಲಾಗಿದೆ.