ಪೇಟೆ ಬೆಳೆದರೂ, ರಸ್ತೆ ಬೆಳೆದಿಲ್ಲ- ಉಪ್ಪಿನಂಗಡಿಯಲ್ಲಿ ನಿತ್ಯ ಟ್ರಾಫಿಕ್ ಜಾಮ್ ಕಿರಿಕಿರಿ

0

ಪಾರ್ಕಿಂಗ್‌ಗೂ ಸ್ಥಳವಿಲ್ಲ: ಪಾದಚಾರಿಗಳ ಓಡಾಟಕ್ಕೂ ಜಾಗವಿಲ್ಲ

ಈಗ ಜನದಟ್ಟಣೆ, ವಾಹನ ದಟ್ಟಣೆ ಹೆಚ್ಚಿದ್ದು, ಉಪ್ಪಿನಂಗಡಿಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಸಾಕಷ್ಟಿದೆ. ಇದರ ನಿವಾರಣೆಗೆಂದೇ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಒಂದು ಸಭೆಯೂ ಆಗಿತ್ತು. ಆದರೆ ಅಲ್ಲಿಯೂ ಸರಿಯಾದ ನಿರ್ಧಾರಕ್ಕೆ ಬರಲಾಗಲಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಒಂದು ಸಭೆ ಕರೆದು ಅಲ್ಲಿ ಪ್ರಕಟವಾಗುವ ಉತ್ತಮ ಅಭಿಪ್ರಾಯಗಳನ್ನು ಕ್ರೋಢೀಕರಿಸಿಕೊಂಡು ಅದನ್ನು ಇಲ್ಲಿ ಅನುಷ್ಠಾನಕ್ಕೆ ತರುವುದು ಅತೀ ಅವಶ್ಯಕವಾಗಿದೆ- ಪ್ರಶಾಂತ್ ಡಿಕೋಸ್ತ, ಅಧ್ಯಕ್ಷರು, ವಾಣಿಜ್ಯಮತ್ತು ಕೈಗಾರಿಕ ಸಂಘ, ಉಪ್ಪಿನಂಗಡಿ

ಉಪ್ಪಿನಂಗಡಿಯಲ್ಲಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜು.14ರಂದು ಉಪ್ಪಿನಂಗಡಿಯಲ್ಲಿ ಗ್ರಾ.ಪಂ. ವತಿಯಿಂದ ಸಭೆ ಕರೆಯಲಾಗಿದೆ. ಈ ಸಭೆಗೆ ಪುತ್ತೂರು ಉಪವಿಭಾಗ ಡಿವೈಎಸ್ಪಿಯವರಿಗೆ, ಪೊಲೀಸರಿಗೆ, ಕಂದಾಯ ಇಲಾಖಾಧಿಕಾರಿಗಳಿಗೆ, ವರ್ತಕರ ಸಂಘದವರಿಗೆ ಹಾಗೂ ಶಾಲಾ- ಕಾಲೇಜು ಶಿಕ್ಷಕರಿಗೆ, ಜೀಪು ಮತ್ತು ರಿಕ್ಷಾ ಚಾಲಕ- ಮಾಲಕ ಸಂಘದವರಿಗೆ ಆಹ್ವಾನ ನೀಡಲಾಗುತ್ತದೆ. ಅಲ್ಲಿ ಎಲ್ಲರ ಸಲಹೆ- ಸೂಚನೆಗಳನ್ನು ಪಡೆದು ನಿಯಮಾವಳಿಗಳನ್ನು ರೂಪಿಸಿ, ಅದನ್ನು ಅನುಷ್ಠಾನಗೊಳಿಸಲಾಗುವುದು- ಉಷಾಚಂದ್ರ ಮುಳಿಯ, ಅಧ್ಯಕ್ಷರು, ಉಪ್ಪಿನಂಗಡಿ ಗ್ರಾ.ಪಂ.

ಉಪ್ಪಿನಂಗಡಿ: ಪುತ್ತೂರಿನ ಬಳಿಕ ತಾಲೂಕಿನ ಪ್ರಮುಖ ವಾಣಿಜ್ಯ ನಗರವಾಗಿ ಉಪ್ಪಿನಂಗಡಿ ಬೆಳೆದರೂ, ಇಲ್ಲಿನ ರಸ್ತೆಗಳು ಮಾತ್ರ ಆಧುನಿಕತೆಗೆ ತೆರೆದುಕೊಂಡಿಲ್ಲ. ಪೇಟೆಯೊಳಗೆ ವಾಹನಗಳ ಪಾರ್ಕಿಂಗ್‌ಗೂ ಸ್ಥಳವಿಲ್ಲ. ಪಾದಚಾರಿಗಳ ಓಡಾಟಕ್ಕೂ ಜಾಗವಿಲ್ಲದಂತಾಗಿದ್ದು, ಟ್ರಾಫಿಕ್ ಜಾಮ್‌ನ ಕಿರಿಕಿರಿ ಇಲ್ಲಿ ಮಾಮೂಲಿಯಾಗಿದೆ.

ಅಭಿವೃದ್ಧಿಯ ಪಥದಲ್ಲಿ ಸಾಗಾಟ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಉಪ್ಪಿನಂಗಡಿಯು ದಿನೇ ದಿನೇ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ವಾಣಿಜ್ಯ ವಹಿವಾಟುಗಳು ಹೆಚ್ಚಾಗಿವೆ. ಹಲವು ಹೊಸ ಹೊಸ ವಾಣಿಜ್ಯ ಕಟ್ಟಡಗಳು ತಲೆಯೆತ್ತುತ್ತಿವೆ. ಪೇಟೆಯೊಳಗೆ ಜನನಿಭಿಡತೆ, ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ದಿನೇ ದಿನೇ ಇಲ್ಲಿನ ರಸ್ತೆಗಳು ಕುಗ್ಗುತ್ತಿವೆಯೇ ಹೊರತು ಹಿಗ್ಗುತ್ತಿಲ್ಲ. ಹೊಸತನಕ್ಕೆ ತೆರೆದುಕೊಳ್ಳಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ.

ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ: ಇಲ್ಲಿನ ಗ್ರಾ.ಪಂ.ನ ಈ ಮೊದಲಿನ ಆಡಳಿತ ಪೇಟೆಯೊಳಗೆ ವಾಹನ ನಿಲುಗಡೆಗೆ ನಿಯಮವೊಂದನ್ನು ಜಾರಿಗೆ ತಂದಿತ್ತು. ಕೆಲವು ಕಡೆ ಪೇ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿತ್ತು. ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ಹೋಗುವ ಹಾಗೂ ಬರುವ ಸಮಯದಲ್ಲಿ ಅಂಗಡಿಗಳಿಗೆ ಸಾಮಾನು ಸರಂಜಾಮುಗಳನ್ನು ತರುವ ಲಾರಿ, ಟೆಂಪೋ ಸೇರಿದಂತೆ ವಾಹನಗಳ ಅನ್‌ಲೋಡಿಂಗ್‌ಗೆ ನಿರ್ಬಂಧ ಹೇರಿತ್ತು. ಅಂಗಡಿಗಳವರು ಫಟ್‌ಪಾತ್‌ಗಳನ್ನು ಆಕ್ರಮಿಸಿಕೊಳ್ಳುವುದನ್ನು ನಿಷೇಽಸಿತ್ತು. ಇದರಿಂದಾಗಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಸಂಪೂರ್ಣ ಪರಿಹಾರ ದೊರೆಯದಿದ್ದರೂ, ತಕ್ಕ ಮಟ್ಟಿಗೆ ಸಮಸ್ಯೆಯನ್ನು ನೀಗಿಸಿತ್ತು. ಆದರೆ ಕೊರೋನಾ ಕಾಲಘಟ್ಟದ ಬಳಿಕ ಈ ನಿಯಮಗಳ ಅನುಷ್ಠಾನ ಎಲ್ಲೂ ಕಾಣಲಿಲ್ಲ.

ಲಂಗು- ಲಗಾಮಿಲ್ಲ: ಹೆಚ್ಚಿನವರಿಗೆ ದೂರದಲ್ಲಿ ವಾಹನ ನಿಲ್ಲಿಸಿ ಅಂಗಡಿಗಳಿಗೆ ನಡೆದುಕೊಂಡು ಬರುವಷ್ಟು ವ್ಯವಧಾನವಿಲ್ಲ. ಅಂಗಡಿಯ ಬಾಗಿಲವರೆಗೂ ವಾಹನದಲ್ಲೇ ಬರುವ ಮನೋಸ್ಥಿತಿ. ನಿಲ್ಲಿಸಲು ಜಾಗವಿಲ್ಲದಿದ್ದರೆ ಮಾರ್ಗದಲ್ಲೇ ವಾಹನಗಳನ್ನು ನಿಲ್ಲಿಸಿ ಅಂಗಡಿಗಳಿಗೆ ತೆರಳುತ್ತಾರೆ. ಹೆಚ್ಚಿನ ಅಂಗಡಿಗಳವರ ಸಾಮಾನು ಸರಂಜಾಮುಗಳು ಪುಟ್ ಪಾತ್ ಅನ್ನೇ ಆವರಿಸಿವೆ. ವಾಹನ ನಿಲುಗಡೆಗೆ ಎಲ್ಲಾದರೂ ಸ್ವಲ್ಪ ಸ್ಥಳಾವಕಾಶವಿದ್ದರೂ, ಇಲ್ಲಿಂದ ದೂರದ ಪ್ರದೇಶಕ್ಕೆ ಕೆಲಸಗಳಿಗೆ ತೆರಳುವವರು, ವಿದ್ಯಾರ್ಥಿಗಳು ತಮ್ಮ ವಾಹನಗಳನ್ನು ಅಲ್ಲಿ ನಿಲ್ಲಿಸಿ ತೆರಳುತ್ತಾರೆ. ಹಾಗೆ ವಾಹನ ನಿಲ್ಲಿಸಿ ಹೋದವರು ಅದನ್ನು ತೆಗೆಯುವುದು ಸಂಜೆಯ ಬಳಿಕವೇ. ಹೀಗಾಗಿ ಇಲ್ಲಿ ಸಂಚಾರ ದಟ್ಟಣೆ ಅನ್ನುವುದು ಮಾಮೂಲಿಯಾಗಿಬಿಟ್ಟಿದೆ. ಶಾಲಾ ಕಾಲೇಜು ಬಿಡುವ ಸಂದರ್ಭದಲ್ಲಿ ಪೇಟೆಯೊಳಗಿನ ಬ್ಯಾಂಕ್ ರಸ್ತೆ ಸಂಪೂರ್ಣ ಜನ ಹಾಗೂ ವಾಹನ ದಟ್ಟಣೆಯಿಂದ ಕೂಡಿರುತ್ತದೆ.

ರಸ್ತೆ ಮಾರ್ಜಿನ್‌ನಲ್ಲೇ ಕಟ್ಟಡಗಳು: ಹೊಸದಾಗಿ ನಿರ್ಮಾಣವಾಗಿರುವ ಕೆಲ ವಾಣಿಜ್ಯ ಮಳಿಗೆಗಳು ಈಗಿನ ನಿಯಮದಂತೆ ರಸ್ತೆ ಮಾರ್ಜಿನ್ ಬಿಟ್ಟು ನಿರ್ಮಾಣವಾಗಿದ್ದರೂ, ಇಲ್ಲಿರುವುದು ಹೆಚ್ಚಿನ ಹಳೆಯ ವಾಣಿಜ್ಯ ಕಟ್ಟಡಗಳು ರಸ್ತೆಯ ಬದಿಯಲ್ಲಿಯೇ ಇವೆ. ಇದರಿಂದ ಒಂದು ಸಮಸ್ಯೆಯಾದರೆ, ಹೊಸದಾಗಿ ನಿರ್ಮಾಣವಾದ ಕೆಲವು ಬಹುಮಹಡಿ ವಾಣಿಜ್ಯ ಕಟ್ಟಡಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಮೊದಲು ಕಟ್ಟಡದ ತಳ ಅಂತಸ್ತನ್ನು ವಾಹನ ಪಾರ್ಕಿಂಗ್‌ಗೆ ತೋರಿಸಿ ಎನ್‌ಒಸಿ ಪಡೆಯಲಾಗುತ್ತದೆಯಾದರೂ, ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಿ ನಾಲ್ಕೈದು ತಿಂಗಳ ಬಳಿಕ ಪಾರ್ಕಿಂಗ್‌ಗೆ ತೋರಿಸಿರುವ ಜಾಗದಲ್ಲಿ ಒಂದೊಂದೇ ಅಂಗಡಿ ಕೋಣೆಗಳು ತಲೆಯೆತ್ತಲು ಆರಂಭವಾಗುತ್ತದೆ. ಇಲ್ಲಿರುವ ಭ್ರಷ್ಟ ವ್ಯವಸ್ಥೆಗಳಿಂದ ಅದಕ್ಕೆ ಗ್ರಾ.ಪಂ.ನಿಂದ ಡೋರ್ ನಂಬರ್ ಕೂಡಾ ಸಿಗುತ್ತದೆ. ಇದು ಕೂಡಾ ಇಲ್ಲಿನ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ ಎನ್ನುವ ಆರೋಪಗಳೂ ಕೇಳಿ ಬರುತ್ತಿದೆ.

ಅಸ್ತ್ರವಿಲ್ಲದ ಪೊಲೀಸರು!: ವಾಹನ ನಿಲುಗಡೆಗೆ ಗ್ರಾ.ಪಂ. ನಿಯಮವನ್ನೇ ಅನುಷ್ಠಾನ ಮಾಡಿಲ್ಲ. ಹಾಗಾಗಿ ಪೇಟೆಯೊಳಗೆ ವಾಹನಗಳು ನಿಂತಾಗ ಪೊಲೀಸರಿಗೂ ಕ್ರಮ ತೆಗೆದುಕೊಳ್ಳಲು ಕಷ್ಟಸಾಧ್ಯವಾಗುವಂತಹ ಪರಿಸ್ಥಿತಿ ಇದೆ. ಯಾಕೆಂದರೆ ಇಲ್ಲಿ ನೋ ಪಾರ್ಕಿಂಗ್ ಅಂತ ಬೋರ್ಡ್ ಇದೆಯಾ? ಪಾರ್ಕಿಂಗ್ ಜಾಗ ಎಲ್ಲಿದೆ ಎಂದರೆ ಪೊಲೀಸರ ಬಳಿಯೂ ಅದಕ್ಕೆ ಉತ್ತರವಿಲ್ಲ. ಆದರೂ ರಸ್ತೆಯಲ್ಲೇ ವಾಹನವನ್ನು ನಿಲ್ಲಿಸಿ ಹೋಗುವಂತವರ ಮೇಲೆ ಪೊಲೀಸರು ಕಾನೂನು ಕ್ರಮ ಜರಗಿಸುತ್ತಿರಬೇಕು. ಆಗ ವಾಹನ ಸಂಚಾರಕ್ಕೆ ತೊಂದರೆಯಾಗುವ ಹಾಗೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವವರಿಗೆ ಸ್ವಲ್ಪ ಭಯ ಹುಟ್ಟುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಒಟ್ಟಿನಲ್ಲಿ ಇಲ್ಲಿನ ಗ್ರಾ.ಪಂ., ಪೊಲೀಸರು, ವರ್ತಕರು ಒಂದೇ ವೇದಿಕೆಯಡಿ ಕೂತು ಚರ್ಚಿಸಿ ಒಮ್ಮತದ ನಿರ್ಧಾರವನ್ನು ತೆಗೆದುಕೊಂಡು, ಅದು ಅನುಷ್ಠಾನವಾದರೆ ಮಾತ್ರ ಇಲ್ಲಿನ ಟ್ರಾಫಿಕ್ ಸಮಸ್ಯೆಗೆ ಸ್ವಲ್ಪವಾದರೂ ಮುಕ್ತಿ ಸಿಗಲು ಸಾಧ್ಯ.

LEAVE A REPLY

Please enter your comment!
Please enter your name here