ಮಧ್ಯಾಹ್ನದ ವೇಳೆಗೆ ಬರುತ್ತೇನೆಂದು ಪತ್ನಿಗೆ ಕರೆ ಮಾಡಿದ್ದರು
ಬೆಳಿಗ್ಗೆ ಬೇಗನೇ ಮನೆಯಿಂದ ತೆರಳಿದ್ದ ಉಸ್ಮಾನ್ ಅವರು ಕುದ್ರೆಪಾಯ ತಲುಪಿದ ಬಳಿಕ ಪತ್ನಿಗೆ ಕರೆ ಮಾಡಿ ಅಳತೆ ಮಾಡುವ ಅಽಕಾರಿಗಳು ಬಂದಿಲ್ಲ, ಅವರಿಗಾಗಿ ಕಾಯುತ್ತಿದ್ದೇವೆ, ಮಧ್ಯಾಹ್ನದ ವೇಳೆಗೆ ಮನೆಗೆ ಬರುತ್ತೇನೆ ಎಂದು ಹೇಳಿದ್ದರು ಎಂದು ತಿಳಿದು ಬಂದಿದೆ.
ಮನುಷ್ಯತ್ವ ಎಲ್ಲಿಗೆ ಹೋಯಿತು..?
ಉಸ್ಮಾನ್ ಅವರ ಕೊಲೆಯ ವಿಚಾರ ಕೇಳಿ ನಮಗೆಲ್ಲಾ ದಿಗ್ಭ್ರಮೆಯಾಗಿದೆ. ಏನೇ ತಕರಾರುಗಳಿದ್ದರೂ ಅದನ್ನು ಮಾತುಕತೆಯ ಮೂಲಕ ಬಗೆಹರಿಸಬಹುದಿತ್ತೇ ವಿನಃ ಕೊಲೆ ಮಾಡುವುದಲ್ಲ. ಇದು ನಾಗರಿಕ ಸಮಾಜವನ್ನೇ ಬೆಚ್ಚಿಬೀಳಿಸುವ ಕೃತ್ಯವಾಗಿದ್ದು ಒಡ ಹುಟ್ಟಿದವರೇ ಈ ರೀತಿ ಕೊಲೆ ಮಾಡುತ್ತಾರೆಂದರೆ ಮನುಷ್ಯತ್ವ ಎಲ್ಲಿಗೆ ಹೋಯಿತು ಎಂದು ಸಂಪ್ಯ ಜಮಾಅತ್ ಸದಸ್ಯರು, ಆರ್ಯಾಪು ಗ್ರಾ.ಪಂ ಮಾಜಿ ಸದಸ್ಯರೂ ಆಗಿರುವ ಜಬ್ಬಾರ್ ಸಂಪ್ಯ ತಿಳಿಸಿದ್ದಾರೆ.
ಪುತ್ತೂರು: ಸಂಪ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ವ್ಯಕ್ತಿಯೋರ್ವರನ್ನು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಮ್ಮಂದಿರೇ ಇರಿದು ಕೊಲೆಗೈದ ಘಟನೆ ಸಂಪಾಜೆ ಸಮೀಪದ ಚೆಂಬು ಗ್ರಾಮದಲ್ಲಿ ಜು.14ರಂದು ನಡೆದಿದೆ. ಚೆಂಬು ಗ್ರಾಮದ ಕುದ್ರೆಪಾಯ ನಿವಾಸಿಯಾಗಿದ್ದು ಪ್ರಸ್ತುತ ಸಂಪ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಉಸ್ಮಾನ್(50.ವ) ಕೊಲೆಗೀಡಾದವರು.
ಉಸ್ಮಾನ್ ಹಾಗೂ ಸಹೋದರರಾದ ಸತ್ತಾರ್, ರಫೀಕ್, ಇಸುಬು, ಅಬ್ಬಾಸ್‌ರವರಿಗೆೆ ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ಸುಮಾರು 50 ಎಕ್ರೆ ಭೂಮಿಯಿದ್ದು ಅದೇ ಜಾಗದ ವಿಚಾರವಾಗಿ ಸಹೋದರರಿಬ್ಬರು ಸೇರಿ ಉಸ್ಮಾನ್‌ರನ್ನು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಉಸ್ಮಾನ್ ಅವರ ತಂದೆ ಇಲ್ಲಿನ ಸಂಟ್ಯಾರ್ ಮೂಲದ ಇಬ್ರಾಹಿಂ ಹಾಜಿ ಎಂಬವರು ಅರಂತೋಡಿನಲ್ಲಿ ನೆಲೆಸಿ ಕುದ್ರೆಪಾಯದಲ್ಲಿ ಸುಮರು 50 ಎಕ್ರೆ ಕೃಷಿ ಭೂಮಿ ಖರೀದಿಸಿ ಕೃಷಿ ಪ್ರಾರಂಭಿಸಿದ್ದು ಸುಮಾರು 25 ವರ್ಷಗಳ ಹಿಂದೆ ಇಬ್ರಾಹಿಂ ಅವರು ನಿಧನ ಹೊಂದಿದ್ದರು. ನಂತರ ಆ ಜಾಗವನ್ನು ಉಸ್ಮಾನ್ ನೋಡಿಕೊಳ್ಳುತ್ತಿದ್ದರು. ಆ ಬಳಿಕ ಜಾಗ ಪಾಲು ಮಾಡಲಾಗಿದ್ದು ಉಸ್ಮಾನ್ ಅವರಿಗೆ ಹೆಚ್ಚು ಜಾಗ ಸಿಕ್ಕಿದೆ ಎಂದು ರಫೀಕ್, ಸತ್ತಾರ್, ಸಹೋದರರು ತಕರಾರು ತೆಗೆದಿದ್ದರೆಂದೂ ಆ ಬಳಿಕ ಸಹೋದರರೊಳಗೆ ಆಗಾಗ ಜಗಳವಾಗುತ್ತಿತ್ತು ಎಂದು ಹೇಳಲಾಗುತ್ತಿದೆ.
ಜು.14ರಂದು ಬೆಳಿಗ್ಗೆ ಕುದ್ರೆಪಾಯದ ಜಾಗದಲ್ಲಿ ಸರ್ವೇ ಇದ್ದ ಕಾರಣ ಉಸ್ಮಾನ್ ಅವರು ಬೆಳಿಗ್ಗೆ ಬೇಗನೇ ಸಂಪ್ಯದ ಮನೆಯಿಂದ ಕುದ್ರೆಪಾಯಕ್ಕೆ ಹೋಗಿದ್ದರು. ಅಲ್ಲಿಗೆ ಸಹೋದರರಾದ ರಫೀಕ್ ಮತ್ತು ಸತ್ತಾರ್ ಕೂಡಾ ಬಂದಿದ್ದರು. ಸರ್ವೇಗೆ ಬಂದಿದ್ದ ಅಽಕಾರಿಗಳು ತಮ್ಮ ಕಾರ್ಯವನ್ನು ಮುಗಿಸಿ ಹೊರಡುವ ಸಂದರ್ಭದಲ್ಲಿ ಅಲ್ಲೇ ಅಲ್ಪ ದೂರದಲ್ಲಿ ಉಸ್ಮಾನ್, ರಫೀಕ್ ಹಾಗೂ ಸತ್ತಾರ್ ಪರಸ್ಪರ ಮಾತನಾಡುತ್ತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದಾಗ ಸತ್ತಾರ್ ಮತ್ತು ರಫೀಕ್ ಅವರು ಅಣ್ಣ ಉಸ್ಮಾನ್ ಅವರಿಗೆ ಚೂರಿಯಿಂದ ಏಕಾಏಕಿ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. ಉಸ್ಮಾನ್ ಅವರ ಕಿರುಚಾಟ ಕೇಳಿ ಅಲ್ಲೇ ಅಲ್ಪ ದೂರದಲ್ಲಿದ್ದ ಅಽಕಾರಿಗಳು ಸ್ಥಳಕ್ಕೆ ಓಡಿ ಹೋದಾಗ ಉಸ್ಮಾನ್ ರಕ್ತದ ಮಡುವಿನಲ್ಲಿ ಬಿದ್ದಿದ್ದು ಸತ್ತಾರ್ ಮತ್ತು ರಫೀಕ್ ಅಲ್ಲಿಂದ ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಕೊಲೆಯಾದ ಉಸ್ಮಾನ್ ಅವರು ತೋಟ ಲೀಸಿಗೆ ಪಡೆದು ಕೆಲಸ ಮಾಡಿಕೊಂಡಿದ್ದು ಅವರ ಪಾಡಿಗೆ ಅವರಿದ್ದರು. ಸಂಪ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅವರು ಎಲ್ಲರೊಂದಿಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಉಸ್ಮಾನ್ ಅವರ ಸಹೋದರರ ಪೈಕಿ ರಫೀಕ್ ಮತ್ತು ಮಾಯಿಂಞಯವರು ಸುಳ್ಯದ ಅರಂತೋಡಿನಲ್ಲಿ ನೆಲೆಸಿದ್ದರೆ, ಇನ್ನೋರ್ವ ಸಹೋದರ ಸತ್ತಾರ್ ಮಡಿಕೇರಿಯ ಹಾಕತ್ತೂರಲ್ಲಿ ವಾಸ್ತವ್ಯವಿದ್ದು ಇತರ ಸಹೋದರರು ಬೇರೆ ಕಡೆಗಳಲ್ಲಿ ನೆಲೆಸಿದ್ದಾರೆ.
ಅಳತೆ ಮಾಡಲು ಇದೆ, ಬನ್ನಿ ಎಂದಿದ್ದರು: ಉಸ್ಮಾನ್ ಸಹೋದರರು ಜಾಗದ ಅಳತೆ ಮಾಡಲು ಇದೆ, ಬೆಳಿಗ್ಗೆ ಬರಬೇಕು ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಉಸ್ಮಾನ್ ಅವರು ಸಂಪ್ಯದಿAದ ಕುದ್ರೆಪಾಯಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದೆ.
ರಿಕ್ಷಾದಲ್ಲಿ ಬಂದಿದ್ದ ಆರೋಪಿಗಳು: ಬೆಳಿಗ್ಗೆ ಸುಳ್ಯದ ಅರಂತೋಡಿನಿಂದ ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ಬಂದಿದ್ದ ಸತ್ತಾರ್ ಮತ್ತು ರಫೀಕ್ ಸಹೋದರರು ಕುದ್ರೆಪಾಯಕ್ಕೆ ಹೋಗಿದ್ದರು.ಅಲ್ಲಿ ಕೃತ್ಯವೆಸಗಿದ ಬಳಿಕ ಅದೇ ರಿಕ್ಷಾದಲ್ಲಿ ಮತ್ತೆ ಅರಂತೋಡಿಗೆ ಬಂದಿದ್ದರು.ಈ ವೇಳೆ ಅವರ ಕೈಗೆ ಗಾಯವಾಗಿರುವುದನ್ನು ಮನೆಯವರು ವಿಚಾರಿಸಿದ ವೇಳೆ, ಅಡಿಕೆ ಮರ ಕೊಯ್ಯುವಾಗ ಗಾಯವಾಗಿರುವುದಾಗಿ ತಿಳಿಸಿದ್ದರು.ಬಳಿಕ ಬೇರೊಂದು ರಿಕ್ಷಾದಲ್ಲಿ ಆಲೆಟ್ಟಿ ತನಕ ಬಂದಿದ್ದ ಅವರು ಅಲ್ಲಿ ರಿಕ್ಷಾದಿಂದ ಇಳಿದು ಪರಾರಿಯಾಗಿದ್ದಾರೆ.ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಮೃತ ಉಸ್ಮಾನ್ ಅವರು ಪತ್ನಿ ನಬೀಸಾ, ಪುತ್ರಿ ಮಂಗಳೂರು ಪಿಎ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಜಾ, ಇನ್ನೋರ್ವ ಪುತ್ರಿ 3ನೇ ತರಗತಿಯ ನಶ್ವ ಹಾಗೂ ಪುತ್ರ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ವರ್ಷದ ಪದವಿ ಓದುತ್ತಿರುವ ಫಾಝಿಲ್ ಅವರನ್ನು ಅಗಲಿದ್ದಾರೆ.
ಮುಗಿಲು ಮುಟ್ಟಿದ ರೋದನ: ಉಸ್ಮಾನ್ ಕೊಲೆಯಾದ ವಿಚಾರ ತಿಳಿಯುತ್ತಿದ್ದಂತೆ ಸಂಪ್ಯದಲ್ಲಿ ಅವರ ಮನೆಯಲ್ಲಿ ಪತ್ನಿ, ಮಕ್ಕಳ ರೋದನ ಮುಗಿಲು ಮುಟ್ಟಿತ್ತು. ಹಲವಾರು ಮಂದಿ ಮೃತರ ಮನೆ ಭೇಟಿ ನೀಡಿ ಪತ್ನಿ ಮಕ್ಕಳನ್ನು ಸಮಾಧಾನಪಡಿಸುತ್ತಿದ್ದ ದೃಶ್ಯವೂ ಕಂಡು ಬಂತು.
ಸಂಪ್ಯದಲ್ಲಿ ದಫನ ಕಾರ್ಯ: ಮೃತರ ಮರಣೋತ್ತರ ಪರೀಕ್ಷೆಯನ್ನು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ನಡೆಸಿದ ಬಳಿಕ ಸಳ್ಯ ಗಾಂಧಿನಗರ ಮಸೀದಿಯಲ್ಲಿ ಮಯ್ಯತ್ ಪರಿಪಾಲನೆ ನಡೆಸಲಾಗಿದ್ದು ರಾತ್ರಿ ಸುಮಾರು 10 ಗಂಟೆಯ ಬಳಿಕ ಸಂಪ್ಯ ಮಸೀದಿಗೊಳಪಟ್ಟ ಖಬರ್‌ಸ್ಥಾನದಲ್ಲಿ ದಫನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸರಿಂದ ಪರಿಶೀಲನೆ: ಮಡಿಕೇರಿ ಡಿವೈಎಸ್‌ಪಿ ಸುಂದರ್‌ರಾಜ್, ಸರ್ಕಲ್ ಇನ್ಸ್ಪೆಕ್ಟರ್, ಎಸ್ಸೈ ಹಾಗೂ ಸಂಪಾಜೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.