ಬೆಳಿಗ್ಗೆ 9.15ರ ಬದಲು 7 ಗಂಟೆಗೆ ಹೊರಡಲಿರುವ ರೈಲು-ನಾಳೆಯಿಂದಲೇ ಆರಂಭ
ಪುತ್ತೂರು: ಮಂಗಳೂರು ಜಂಕ್ಷನ್‌ನಿಂದ ಯಶವಂತಪುರ ನಡುವೆ ಸಂಚರಿಸುವ ವಿಸ್ಟಾಡಾಮ್ ಕೋಚ್ ಹೊಂದಿರುವ ಹಗಲು ರೈಲು ಸಂಚಾರದ ಭಾನುವಾರದ ವೇಳಾಪಟ್ಟಿಯಲ್ಲಿ ಮಾರ್ಪಾಟು ಮಾಡಲಾಗಿದೆ.ನಿಗದಿತ ಸಮಯಕ್ಕಿಂತ 2.15 ಗಂಟೆ ಮುಂಚಿತವಾಗಿ ರೈಲು ಮಂಗಳೂರಿನಿಂದ ಹೊರಡಲಿದ್ದು, ಯಶವಂತಪುರಕ್ಕೆ ರಾತ್ರಿಯ ಬದಲು ಸಂಜೆ ತಲುಪಲಿದೆ.ರೈಲು ಪ್ರಯಾಣಿಕರ ಪಾಲಿಗೆ ಇದು ವರದಾನವಾಗಲಿದ್ದು ಜು.16ರಿಂದ ಬದಲಾದ ಸಮಯದಲ್ಲಿ ಸಂಚಾರ ಮುಂದುವರಿಯಲಿದೆ.
2.15 ಗಂಟೆ ಮುಂಚಿತವಾಗಿ ಅಂದರೆ ಬೆಳಿಗ್ಗೆ 7 ಗಂಟೆಗೆ ಹೊರಟು ಸಂಜೆ 4.15ಕ್ಕೆ ಯಶವಂತಪುರ ತಲುಪಲಿದೆ.ಇದರಿಂದಾಗಿ ವಿಸ್ಟಾಡೋಮ್ ಕೋಚ್ ಒಳಗೊಂಡಿರುವ ಈ ರೈಲು ಪಶ್ಚಿಮ ಘಟ್ಟದಲ್ಲಿ ಮಾತ್ರವಲ್ಲ ಯಶವಂತಪುರ ತನಕ ಪೂರ್ತಿ ಹಗಲು ಹೊತ್ತಿನಲ್ಲಿ ಪ್ರಯಾಣಿಕರಿಗೆ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ಸಹಕಾರಿಯಾಗಲಿದೆ.
ಪ್ರತಿ ಭಾನುವಾರ ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 7 ಗಂಟೆಗೆ ಹೊರಡುವ ಈ ರೈಲು 7.33 ಬಂಟ್ವಾಳ, 8.20 ಕಬಕ ಪುತ್ತೂರು, 9 ಗಂಟೆ ಸುಬ್ರಹ್ಮಣ್ಯ ಮಾರ್ಗ, 11:30, ಸಕಲೇಶಪುರ, 12.40 ಹಾಸನ, 1.22 ಶ್ರವಣಬೆಳಗೊಳ, 1.47 ಬಿ.ಜಿ.ನಗರ್,2.0 ಗಂಟೆ ಯಡಿಯೂರು, 2.18 ಕುಣಿಗಲ್, ಸಂಜೆ 3 ಗಂಟೆಗೆ ನೆಲಮಂಗಲ, 3.44 ಚಿಕ್ಕಬಾಣಾವರ ಹಾಗೂ 4.30ಕ್ಕೆ ಯಶವಂತಪುರ ತಲುಪಲಿದೆ.
ಹಗಲು ರೈಲಿನ ಸಮಯವನ್ನು ಬದಲಾಯಿಸುವಂತೆ ರೈಲ್ವೇ ಯಾತ್ರಿಕ ಸಮಿತಿಯವರು ಸಂಸದ ನಳಿನ್ ಕುಮಾರ್ ಕಟೀಲ್‌ರವರಿಗೆ ಮನವಿ ಮಾಡಿದ್ದರು.ಸಂಸದರು ರೈಲ್ವೇ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಮಾತುಕತೆ ನಡೆಸಿ,ಮೊದಲ ಹಂತದಲ್ಲಿ ಕೇವಲ ಭಾನುವಾರದ ರೈಲ್ವೇ ವೇಳಾಪಟ್ಟಿಯನ್ನು ಪರಿಷ್ಕರಿಸಲು ರೈಲ್ವೇ ಮಂಡಲಿ ಸಮ್ಮತಿಸಿ, ಈ ಬದಲಾವಣೆ ಮಾಡಿದೆ.ಈ ರೈಲನ್ನು ಉಳಿದ ದಿನಗಳಲ್ಲೂ ಇದೇ ವೇಳಾಪಟ್ಟಿಯಲ್ಲಿ ಓಡಿಸಲು ಕ್ರಮಕೈಗೊಳ್ಳುವಂತೆ ಪಶ್ಚಿಮ ಕರಾವಿ ರೈಲ್ವೆ ಯಾತ್ರಿ ಸಮಿತಿ ರೈಲ್ವೆ ಇಲಾಖೆಯನ್ನು ಒತ್ತಾಯಿಸಿದೆ.
ಪ್ರತಿ ಭಾನುವಾರ ಸಮಯ ಬದಲಾವಣೆಯಾಗಿದೆ.ಮಂಗಳೂರಿನಿಂದ 7 ಗಂಟೆಗೆ ಹೊರಟು 8 ಗಂಟೆಗೆ ಪುತ್ತೂರಿಗೆ ಆಗಮಿಸಲಿದೆ.ಇದರಿಂದ ಪಶ್ಚಿಮ ಘಟ್ಟದಲ್ಲಿ ಪ್ರಕೃತಿ ಸೌಂದರ್ಯ ವೀಕ್ಷಣೆಗೆ ಉತ್ತಮ ಅವಕಾಶವಾಗಲಿದೆ.ಬೆಳಿಗ್ಗೆ ತೆರಳಿ ಪ್ರಕೃತಿ ಸೌಂಧರ್ಯವನ್ನು ವೀಕ್ಷಣೆ ಮಾಡಿ ಮತ್ತೆ ಹಿಂತಿರುಗಬಹುದು.ಮಳೆಗಾಲದಲ್ಲಿ ಪ್ರಕೃತಿ ವೀಕ್ಷಣೆಗೆ ಅವಕಾಶವಿದೆ.ಟನಲ್ಸ್ ಒಳಗಡೆ ಹೋಗಲಿದೆ.ಸಮಯ ಬದಲಾವಣೆಯಿಂದ ಪ್ರಯಾಣಿಕರಿಗೆ ಅನುಕೂಲವಾಗಬಹುದು-
ವಿಠಲ್ ನಾಕ್ ನೇರಳಕಟ್ಟೆ,
ಮುಖ್ಯ ಟಿಕೆಟ್ ನಿರೀಕ್ಷಕರು ನೈರುತ್ಯ ರೈಲ್ವೇ ಮೈಸೂರು