ಪಡುಬೆಟ್ಟು: ಕೀರ್ತಿಶೇಷ ಗೋಪಾಲಕೃಷ್ಣ ಶಗ್ರಿತ್ತಾಯರಿಗೆ ನುಡಿನಮನ

0

ನೆಲ್ಯಾಡಿ: ಯಕ್ಷಗಾನ ಲೋಕದ ಭೀಷ್ಮ, ಸಾಹಿತ್ಯ ರತ್ನ, ನೆಲ್ಯಾಡಿ ಗ್ರಾಮದ ಪಡುಬೆಟ್ಟು ಸರಕಾರಿ ಹಿ.ಪ್ರಾ.ಶಾಲೆಯ ನಿವೃತ್ತ ಮುಖ್ಯಗುರು ಕೀರ್ತಿಶೇಷ ಗೋಪಾಲಕೃಷ್ಣ ಶಗ್ರಿತ್ತಾಯರಿಗೆ ಕೀರ್ತಿಶೇಷ ಗೋಪಾಲಕೃಷ್ಣ ಶಗ್ರಿತ್ತಾಯ ಮತ್ತು ಜಾನಕಿ ಅಮ್ಮ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಪಡುಬೆಟ್ಟು ಶಾಲಾ ಎಸ್‌ಡಿಎಂಸಿ, ಪೂರ್ವವಿದ್ಯಾರ್ಥಿ ಸಂಘ, ಬಲ್ಯ ಶ್ರೀ ವಿನಾಯಕ ಯಕ್ಷಗಾನ ಸಂಘ ಹಾಗೂ ಶಿಕ್ಷಕರ ವೃಂದ, ಪೋಷಕರ ಸಂಯುಕ್ತ ಆಶ್ರಯದಲ್ಲಿ ನುಡಿನಮನ ಕಾರ್ಯಕ್ರಮ ಪಡುಬೆಟ್ಟು ಶಾಲೆಯಲ್ಲಿ ಜು.15ರಂದು ನಡೆಯಿತು.


ಹಿರಿಯ ಸಾಮಾಜಿಕ ಮುಖಂಡ ಗಂಗಪ್ಪ ಗೌಡ ಮುಂಡ್ರುಗೇರಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಉಪನ್ಯಾಸಕ, ಯಕ್ಷಗಾನ ಕಲಾವಿದ ಗುಡ್ಡಪ್ಪ ಗೌಡ ಬಲ್ಯರವರು ನುಡಿನಮನ ಸಲ್ಲಿಸಿ, ಶಗ್ರಿತ್ತಾಯರವರು ಯಕ್ಷಗಾನ ಲೋಕದ ಭೀಷ್ಮ ಎಂದೇ ಕರೆಸಿಕೊಂಡಿದ್ದರು. 40 ವರ್ಷದ ಹಿಂದೆ ಪಡುಬೆಟ್ಟುವಿನಲ್ಲಿ ಬಾಲಸುಬ್ರಹ್ಮಣ್ಯ ಮಕ್ಕಳ ಯಕ್ಷಗಾನ ಮಂಡಳಿ ಸ್ಥಾಪಿಸಿ, ರಾಜ್ಯಾದ್ಯಂತ ಮಕ್ಕಳಿಂದಲೇ ನಡೆಸಲ್ಪಡುವ ಹಿಮ್ಮೇಳ ಮತ್ತು ಮುಮ್ಮೇಳ ಒಳಗೊಂಡ ಯಕ್ಷಗಾನ ಮಂಡಳಿಯ ಮೂಲಕ ಯಕ್ಷಗಾನ ಪ್ರದರ್ಶನ ನೀಡಿದ್ದರು. ಈ ಮೂಲಕ ಮಕ್ಕಳಲ್ಲಿನ ಅದ್ಭುತವಾದ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು. 15ಕ್ಕೂ ಮಿಕ್ಕಿ ಮಕ್ಕಳ ಕವನ ಸಂಕಲನ ರಚಿಸಿ ಸಾಹಿತ್ಯ ರತ್ನ ಬಿರುದಾಂಕಿತರಾದರು. ಪಡುಬೆಟ್ಟು ಶಾಲೆಗೆ ಸುಮಾರು 4 ಎಕ್ರೆ ಜಾಗವನ್ನು ಆಗಿನ ಕಾಲದಲ್ಲಿ ಮೀಸಲಾಗಿರಿಸಿದ್ದರು. ಊರಿನ ಕೀರ್ತಿ ಬೆಳಗಿದ ಗೋಪಾಲಕೃಷ್ಣ ಶಗ್ರಿತ್ತಾಯರ ಪವಿತ್ರವಾದ ಆತ್ಮ ಮಹಾವಿಷ್ಣುವಿನ ಸಾಯುಜ್ಯವನ್ನು ಸೇರಲಿ ಎಂದರು.


ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆಯವರು ಸಂಸ್ಮರಣ ಮಾತುಗಳನ್ನಾಡಿ, ಗೋಪಾಲಕೃಷ್ಣ ಶಗ್ರಿತ್ತಾಯರವರು ಗ್ರಾಮೀಣ ಪ್ರದೇಶವಾದ ಪಡುಬೆಟ್ಟುವಿನ ಜನರಿಗೆ ಯಕ್ಷಗಾನ ಏನು ಎನ್ನುವುದನ್ನು ತೋರಿಸಿಕೊಟ್ಟ ಮಹಾನ್ ಚೇತನ ಆಗಿದ್ದಾರೆ. ಆಗಿನ ಕಾಲದಲ್ಲಿ ಯಾವುದೇ ಪ್ರತಿಫಲದ ಅಪೇಕ್ಷೆ ಪಡೆಯದೆ ಮಕ್ಕಳಿಗೆ ನಾಟ್ಯಾಭ್ಯಾಸ ಮತ್ತು ಹಿಮ್ಮೇಳವನ್ನು ಕಲಿಸಿ ಯಕ್ಷಗಾನ ಲೋಕದ ಇತಿಹಾಸದಲ್ಲಿ ದಾಖಲೆಯೋ ಎಂಬಂತೆ ಮಕ್ಕಳ ಮೇಳವನ್ನು ಸ್ಥಾಪಿಸಿ ಅದ್ಭುತವಾದ ಪ್ರದರ್ಶನವನ್ನು ನೀಡಿ ಇತಿಹಾಸ ನಿರ್ಮಿಸಿದ್ದಾರೆ. ಅಗಾಧವಾದ ಪಾಂಡಿತ್ಯವನ್ನು ಹೊಂದಿದ್ದ ಅವರು ಅನನ್ಯ ಸಾಧಕರಾಗಿದ್ದರು. ಅವರ ಅಗಲುವಿಕೆಯು ಮಕ್ಕಳ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿ ಗುಣಗಾನ ಮಾಡಿದರು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ರಸಾದ್ ಪಡುಬೆಟ್ಟುರವರು ಮಾತನಾಡಿ, ಗೋಪಾಲಕೃಷ್ಣ ಶಗ್ರಿತ್ತಾಯರವರು ಸಾವಿರಾರು ವಿದ್ಯಾರ್ಥಿಗಳಿಗೆ ಸುಜ್ಞಾನದ ಬೆಳಕು ನೀಡಿ ಮಕ್ಕಳಲ್ಲಿನ ಅಜ್ಞಾನದ ಕತ್ತಲನ್ನು ದೂರ ಮಾಡಿದ್ದಾರೆ. ನನ್ನ ತಂದೆಗೂ ಗುರುಗಳಾಗಿದ್ದ ಅವರ ಸಂಸ್ಮರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ನನ್ನ ಜೀವನದ ಯೋಗವಾಗಿದೆ ಎಂದರು. ನೆಲ್ಯಾಡಿ ಗ್ರಾ.ಪಂ.ಸದಸ್ಯ ರವಿಪ್ರಸಾದ್ ಶೆಟ್ಟಿ ರಾಮನಗರ, ಪಡುಬೆಟ್ಟು ಸರಕಾರಿ ಹಿ.ಪ್ರಾ.ಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು, ಗಿ.ಗೋಪಾಲಕೃಷ್ಣ ಶಗ್ರಿತ್ತಾಯರವರ ಪುತ್ರ, ಚೆಂಡೆವಾದಕ ಸುಬ್ರಹ್ಮಣ್ಯ ಶಗ್ರಿತ್ತಾಯ, ಬಲ್ಯ ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಅಧ್ಯಕ್ಷ ಜಯರಾಮ ಗೌಡ ನಾಲ್ಗುತ್ತು, ಶಾಲಾ ಮುಖ್ಯಗುರು ಜೆಸ್ಸಿ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ನಿವೃತ್ತ ಕನ್ನಡ ಪ್ರಾಧ್ಯಾಪಕ ವಿ.ಆರ್ ಹೆಗಡೆಯವರು ಸಂಸ್ಮರಣೆಯ ಮಾತುಗಳನ್ನಾಡಿದರು.


ಪಡುಬೆಟ್ಟು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ವಲಯಾರಣ್ಯಧಿಕಾರಿ ರವಿಚಂದ್ರ ಪಡುಬೆಟ್ಟುರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಡುಬೆಟ್ಟು ಎಂಬ ಹೆಸರನ್ನು ರಾಜ್ಯಾದ್ಯಂತ ಪಸರಿಸಿ ಯಕ್ಷಲೋಕಕ್ಕೆ ಕೀರ್ತಿಯನ್ನು ತಂದುಕೊಟ್ಟ ಮತ್ತು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ನೀಡಿ ಸಂಸ್ಕಾರವಂತರಾಗಿ ಮಾಡಿದ ದಿ.ಗೋಪಾಲಕೃಷ್ಣ ಶಗ್ರಿತ್ತಾಯರ ಸೇವೆ ಅನನ್ಯವಾದದ್ದು. ಅವರ ಸೇವೆಯನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಹೇಳಿದರು. ಬಲ್ಯ ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಕಾರ್ಯದರ್ಶಿ, ಯುವ ಯಕ್ಷಗಾನ ಕಲಾವಿದ ಕಿರಣ್ ಗೌಡ ಪುತ್ತಿಲ ವಂದಿಸಿದರು. ಪಡುಬೆಟ್ಟು ಶಾಲೆಯ ಶಿಕ್ಷಕಿ ಕಮಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

ದಿ.ಗೋಪಾಲಕೃಷ್ಣ ಶಗ್ರಿತ್ತಾಯರ ಬಗ್ಗೆ ರಾಧೇಶ್ ತೋಳ್ಪಾಡಿಯವರು ರಚಿಸಿದ ಯಕ್ಷಗಾನ ಹಾಡನ್ನು ಆಲಂಕಾರು ಶ್ರೀ ದುರ್ಗಾಂಬಾ ಯಕ್ಷಗಾನ ಮಂಡಳಿಯ ಭಾಗವತರಾದ ಡಿ.ಕೆ ಆಚಾರ್ಯರವರು ಹಾಡಿ ನಮನ ಸಲ್ಲಿಸಿದರು. ಹಿಮ್ಮೇಳವಾದಕ ಮೋಹನ ಶರವೂರುರವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಕರಾಯ ಶಾಲೆಯ ಮುಖ್ಯಗುರು ಮಹಾಲಿಂಗ ಮಾಸ್ಟರ್, ಶಿಕ್ಷಕ ಪುರಂದರ ಗೌಡ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಗೌಡ, ಊರಿನ ಹಿರಿಯರಾದ ವಿಠಲ ಮಾರ್ಲ, ಸಾಮಾಜಿಕ ಮುಖಂಡರಾದ ರಮೇಶ್ ಗೌಡ ನಾಲ್ಗುತ್ತು, ತಿಮ್ಮಪ್ಪ ಗೌಡ, ರಾಧಾಕೃಷ್ಣ ಗೌಡ, ಶೀನಪ್ಪ ಗೌಡ, ಕುತ್ರಾಡಿ ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಕಾರ್ಯದರ್ಶಿ ಸುರೇಶ್ ಪಡಿಪಂಡ, ದಿ.ಗೋಪಾಲಕೃಷ್ಣ ಶಗ್ರಿತ್ತಾಯವರ ಮಕ್ಕಳಾದ ಜಯಶ್ರೀ, ಉಮಾದೇವಿ, ಗುರುಮೂರ್ತಿ ಶಗ್ರಿತ್ತಾಯ, ಸುಬ್ರಹ್ಮಣ್ಯ ಶಗ್ರಿತ್ತಾಯ, ಮೊಮ್ಮಗ ಸುಜನ್ ಶಗ್ರಿತ್ತಾಯ, ಅಳಿಯಂದಿರು, ಶಿಷ್ಯಂದಿರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸನ್ಮಾನ:
ಕೀರ್ತಿಶೇಷ ಶಾಂತಿಗೋಡು ಗೋಪಾಲಕೃಷ್ಣ ಶಗಿತ್ತಾಯ ಮತ್ತು ಜಾನಕಿ ಅಮ್ಮ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ದಿ.ಗೋಪಾಲಕೃಷ್ಣ ಶಗ್ರಿತ್ತಾಯರವರ ಒಡನಾಡಿ, ನಿವೃತ್ತ ಶಿಕ್ಷಣ ಸಂಯೋಜಕ ಮನೋಹರ, ನಿವೃತ್ತ ಶಿಕ್ಷಕ ಚಂದ್ರಶೇಖರ ಶೆಟ್ಟಿ, ಶಿಷ್ಯ ಚಂದ್ರಶೇಖರ ಮಣಿಯಾಣಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸುಬ್ರಹ್ಮಣ್ಯ ಶಗ್ರಿತ್ತಾಯರವರು ಅಭಿನಂದನೆ ಸಲ್ಲಿಸಿದರು. ಸನ್ಮಾನಿತರಾದ ನಿವೃತ್ತ ಶಿಕ್ಷಣ ಸಂಯೋಜಕ ಮನೋಹರರವರು ಗೋಪಾಲಕೃಷ್ಣ ಶಗ್ರಿತ್ತಾಯರೊಂದಿಗಿನ ಒಡನಾಟದ ದಿನಗಳನ್ನು ಮೆಲುಕು ಹಾಕಿ ಶ್ರದ್ಧಾಂಜಲಿ ಅರ್ಪಿಸಿದರು.


ಯಕ್ಷಗಾನ ತಾಳಮದ್ದಳೆ:
ಶ್ರದ್ಧಾಂಜಲಿ ಕಾರ್ಯಕ್ರಮದ ಬಳಿಕ ಬಲ್ಯ ಶ್ರೀ ವಿನಾಯಕ ಯಕ್ಷಗಾನ ಮಂಡಳಿ ಮತ್ತು ದಿ.ಗೋಪಾಲಕೃಷ್ಣ ಶಗ್ರಿತ್ತಾಯರವರ ಶಿಷ್ಯಂದಿರಿಂದ ಯಕ್ಷಗಾನ ತಾಳಮದ್ದಲೆ ‘ವಿಶ್ವರೂಪ ದರ್ಶನ’ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಡಿ.ಕೆ ಆಚಾರ್ಯ ಹಳೆನೇರೆಂಕಿ, ಮೃದಂಗದಲ್ಲಿ ಮೋಹನ ಶರವೂರು, ಸುಬ್ರಹ್ಮಣ್ಯ ಶಗ್ರಿತ್ತಾಯ, ಚೆಂಡವಾದಕರಾಗಿ ಮುರಳೀಧರ ಆಚಾರ್ಯ ಹಳೆನೇರೆಂಕಿ, ಮುಮ್ಮೇಳದಲ್ಲಿ ಗುಡ್ಡಪ್ಪ ಗೌಡ, ಗಂಗಾಧರ ಶೆಟ್ಟಿ ಹೊಸಮನೆ, ತಿಮ್ಮಪ್ಪ ಗೌಡ, ಜಯರಾಮ ಗೌಡ, ಅಮ್ಮಿ ಗೌಡ, ಕೊರಗಪ್ಪ ಗೌಡ, ಕಿರಣ್ ಪುತ್ತಿಲ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here