ನೆಲ್ಯಾಡಿ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಡಬ ತಾಲೂಕು ಇದರ ಗೋಳಿತೊಟ್ಟು ವಲಯದ ಶಾಂತಿನಗರ ಒಕ್ಕೂಟ, ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಶಾಂತಿನಗರ, ಗೋಳಿತೊಟ್ಟು ಹಾಗೂ ಶ್ರೀ ಶೌರ್ಯ ವಿಪತ್ತು ತಂಡ ಗೋಳಿತೊಟ್ಟು ಇದರ ಆಶ್ರಯದಲ್ಲಿ ಪರಿಸರ ಸಂರಕ್ಷಣೆ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ ಶಾಂತಿನಗರ ಶಾಲೆಯಲ್ಲಿ ನಡೆಯಿತು.
ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮಸ್ಥರು ತಮ್ಮ ಮನೆಯಲ್ಲಿ ಆಗುವ ಒಣಕಸ ಮತ್ತು ಹಸಿಕಸವನ್ನು ಬೇರ್ಪಡಿಸಿ ಗ್ರಾಮ ಪಂಚಾಯತ್‌ನಿಂದ ಬರುವ ವಾಹನಕ್ಕೆ ನೀಡಬೇಕು. ಈ ರೀತಿ ಮಾಡುವುದೇ ಪರಿಸರ ಸಂರಕ್ಷಣೆ ಕೆಲಸ ಎಂದರು. ಅತಿಥಿಯಾಗಿದ್ದ ನೆಲ್ಯಾಡಿ ಶಾಖೆಯ ಗಸ್ತು ಅರಣ್ಯಾಧಿಕಾರಿ ದೇವಿಪ್ರಸಾದ್‌ರವರು ಮಕ್ಕಳಿಗೆ ಹಣ್ಣಿನ ಗಿಡಗಳನ್ನು ವಿತರಿಸಿ ಮಾತನಾಡಿ, ಪ್ರತಿ ಮಕ್ಕಳು ತಮ್ಮ ಹುಟ್ಟಿದ ದಿನದಂದು ಒಂದು ಗಿಡಗಳನ್ನು ನೆಡಬೇಕು. ಆಗ ಮಕ್ಕಳಿಗೆ ಆ ಗಿಡಗಳ ಮೇಲೆ ಪ್ರೀತಿ ಬೆಳೆಯುತ್ತದೆ ಎಂದು ಹೇಳಿದರು. ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಗೋಳಿತ್ತೊಟ್ಟು ವಲಯಾಧ್ಯಕ್ಷರೂ ಆದ ಬಾಲಕೃಷ್ಣ ಅಲೆಕ್ಕಿಯವರು ಸಂದರ್ಭೋಚಿತವಾಗಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗುರುಂಪು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮುಖ್ಯಗುರು ಪ್ರದೀಪ್ ಬಾಕಿಲ, ಶಾಂತಿನಗರ ಒಕ್ಕೂಟದ ಅಧ್ಯಕ್ಷೆ ರತಿ ದಾಮೋದರ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಮೀನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಗೋಳಿತ್ತೊಟ್ಟು ವಲಯ ಮೇಲ್ವಿಚಾರಕಿ ಸುಜಾತರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಿನಗರ ಒಕ್ಕೂಟದ ನಿಕಟಪೂರ್ವಾಧ್ಯಕ್ಷ ಮಹೇಶ್ ಪಿ., ವಂದಿಸಿದರು. ಶಿಕ್ಷಕ ಮಂಜುನಾಥ ಮಣಕವಾಡರವರು ಕಾರ್ಯಕ್ರಮ ನಿರೂಪಿಸಿದರು. ನಂತರ ಶಾಲಾ ವಠಾರದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡ ನೆಡಲಾಯಿತು.