ಮಂಗಳೂರು: ಆರೋಗ್ಯವಂತ ಸಮಾಜ ಕಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ `ಸುಪ್ರಜಾ ಆಯುಷ್’ ತಾಯಿ ಮತ್ತು ನವಜಾತ ಶಿಶುಗಳ ಮಧ್ಯಸ್ಥಿಕೆ ಯೋಜನೆ ರಾಜ್ಯದಲ್ಲಿ ಪ್ರಥಮವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಮಂಜೂರಾಗಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.
ಗರ್ಭಿಣಿ, ಬಾಣಂತಿ ಮತ್ತು ಮಗುವಿನ ಆರೋಗ್ಯ ಕೇಂದ್ರೀಕರಿಸಿ ಈ ಯೋಜನೆ ರೂಪಿತವಾಗಿದೆ. ಮಹಿಳೆಯ ಗರ್ಭಧಾರಣೆಯಿಂದ ಹೆರಿಗೆಯವರೆಗೆ ಮತ್ತು ಹೆರಿಗೆಯ ನಂತರ ಮಗುವಿಗೆ ಎರಡು ವರ್ಷ ತುಂಬುವ ತನಕ ಆಯುಷ್ ಪದ್ಧತಿಯ ಆಹಾರ ಕ್ರಮ, ಜೀವನ ವಿಧಾನ ರೂಪಿಸಿಕೊಳ್ಳಲು ಆಯುಷ್ ವೈದ್ಯರು ಮಾರ್ಗದರ್ಶನ ಮಾಡಲಿದ್ದಾರೆ.
ಮೊದಲ ಹಂತದಲ್ಲಿ 10 ಸಾವಿರ ಜನಸಂಖ್ಯೆ ವ್ಯಾಪ್ತಿಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರನ್ನು ಗುರುತಿಸಿ ಯೋಜನೆ ಅನುಷ್ಠಾನಗೊಳ್ಳಲಿದೆ.ಈ ಸಂಬಂಧ ಆರೋಗ್ಯ ಇಲಾಖೆ ಜತೆ ಆಯುಷ್ ಇಲಾಖೆ ಒಡಂಬಡಿಕೆ ಮಾಡಿಕೊಂಡು, ಗರ್ಭಿಣಿ ಮತ್ತು ಬಾಣಂತಿಯರನ್ನು ವೈಯಕ್ತಿಕವಾಗಿ ಸಂಪರ್ಕಿಸುವ ಕಾರ್ಯ ಮಾಡುತ್ತಿದೆ.ಈ ಯೋಜನೆಗೆ ಒಳಪಡಲು ಆಸಕ್ತಿ ತೋರುವ ಗರ್ಭಿಣಿಯರಿಗೆ ಗರ್ಭಸಂಸ್ಕಾರ, ಪ್ರತಿ ತಿಂಗಳು ಅನುಸರಿಸಬೇಕಾದ ಆಹಾರ ಕ್ರಮ, ಕೌಟುಂಬಿಕ ಕೌನ್ಸೆಲಿಂಗ್, ಯೋಗ ಥೆರಪಿ ಬಗ್ಗೆ ವೈದ್ಯರು ತಿಳಿವಳಿಕೆ ನೀಡುತ್ತಾರೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಇಕ್ಬಾಲ್ ಅಹಮ್ಮದ್ ತಿಳಿಸಿದರು.
ಗರ್ಭಿಣಿಯರಲ್ಲಿ ರಕ್ತಹೀನತೆ ಪ್ರಕರಣಗಳನ್ನು ತಗ್ಗಿಸುವ ಜತೆಗೆ, ಹೆರಿಗೆ ವೇಳೆ ಆಗುವ ಕ್ಲಿಷ್ಟಕರ ಸಂದರ್ಭಗಳನ್ನು ತಪ್ಪಿಸಿ ಸಹಜ ಹೆರಿಗೆಗೆ ಅನುಕೂಲ ಆಗುವಂತೆ ಜೀವನ ಕ್ರಮ, ಆಹಾರ ಪದ್ಧತಿ, ಅಗತ್ಯ ಯೋಗ, ಧ್ಯಾನ ಹೇಳಿಕೊಡುವುದು, ಹೆರಿಗೆಯಾದ ಮೇಲೆ ಬಾಣಂತಿಗೆ ಪೌಷ್ಟಿಕ ಆಹಾರ ಸೇವನೆಯ ಮಾರ್ಗದರ್ಶನ ಮತ್ತು ಶಿಶುವಿನ ಆರೋಗ್ಯಕರ ಬೆಳವಣಿಗೆ, ಮನೆಮದ್ದು ಜಾಗೃತಿ ಮೂಡಿಸುವ ಮೂಲಕ ಸದೃಢ ಪ್ರಜೆಗಳ ನಿರ್ಮಾಣ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಯೋಜನೆ ಅನುಷ್ಠಾನಕ್ಕೆ ಒಬ್ಬರು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತೆ ನೇಮಕಕ್ಕೆ ಸರ್ಕಾರ ಅನುಮತಿ ನೀಡಿದೆ.
ಮಹಿಳೆಯ ಗರ್ಭ ಧಾರಣೆಯಿಂದ ಹೆರಿಗೆಯವರೆಗೆ ಮತ್ತು ಹೆರಿಗೆಯ ನಂತರ ಮಗುವಿಗೆ ಎರಡು ವರ್ಷ ತುಂಬುವ ತನಕ ಆಯುಷ್ ಪದ್ಧತಿಯ ಆಹಾರ ಕ್ರಮ, ಜೀವನ ವಿಧಾನ ರೂಪಿಸಿಕೊಳ್ಳಲು ಆಯುಷ್ ವೈದ್ಯರು ಮಾರ್ಗದರ್ಶನ ಮಾಡಲಿದ್ದಾರೆ.