ಸೈರನ್ ಮೊಳಗದೆ ವರ್ಷಗಳೇ ಉರುಳಿದ ಗೋಪುರ ಗೆದ್ದಲು ಪಾಲಾಗುತ್ತಿರುವ ರೇಡಿಯೋ ಕಟ್ಟಡ

0

ನಿರ್ವಹಣೆಗೆ ಕಾಯುತ್ತಿರುವ ಅರ್ಧ ಶತಕ ದಾಟಿದ ಪುತ್ತೂರಿನ ಐತಿಹಾಸಿ ಸ್ಮಾರಕಗಳು !

ಪುತ್ತೂರು: ಪುತ್ತೂರಿನ ಜನತೆಯನ್ನು ಪ್ರತೀ ನಿತ್ಯ ಮೂರು ಬಾರಿ ಎಚ್ಚರಿಸುತ್ತಿದ್ದ ಪುತ್ತೂರು ಸೈರನ್ ಮೊಳಗದೇ ಹಲವು ವರ್ಷಗಳೇ ಉರುಳಿದೆ. ಇದರ ಜೊತೆಗೆ ಪಕ್ಕದ ರೇಡಿಯೋ ಕೊಠಡಿಯೂ ಮೌನವಾಗಿದೆ. ಪುತ್ತೂರಿನ ಈ ಐತಿಹಾಸಿಕ ಸ್ಮಾರಕಗಳು ಇದೀಗ ಗೆದ್ದಲು ಪಾಲಾಗುತ್ತಿದ್ದು, ನಿರ್ವಹಣೆಗಾಗಿ ಕಾಯುತ್ತಿವೆ.
ಕಿಲ್ಲೆ ಮೈದಾನದ ಬಳಿಯಿರುವ ಈ ಸೈರನ್ ಗೋಪುರ ಇರುವ ಪಕ್ಕದ ರೇಡಿಯೋ ಕಟ್ಟಡದ ಬಾಗಿಲುಗಳಿಗೆ ಗೆದ್ದಲು ಹಿಡಿದಿದೆ.2018ರಲ್ಲಿ ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಅವರ ಅಧ್ಯಕ್ಷತೆ ಅವಧಿಯಲ್ಲಿ ಕಟ್ಟಡ ದುರಸ್ತಿ ಕಂಡಿತ್ತಾದರೂ ಬಳಿಕದ ದಿನದಲ್ಲಿ ಯಾವುದೇ ನಿರ್ವಹಣೆಯಿಲ್ಲದೆ ಸೊರಗುತ್ತಿವೆ.ಈ ಸ್ಮಾರಕಗಳನ್ನು ಮುಂದಿನ ಪೀಳಿಗೆಯವರಿಗೆ ತಲುಪಿಸುವ ನಿಟ್ಟಿನಲ್ಲಿ ಇದರ ನಿರ್ವಹಣೆ ಅಗತ್ಯವಾಗಿದೆ ಎನ್ನುವ ಕೂಗು ಕೇಳಿ ಬರುತ್ತಿದೆ.


52 ವರ್ಷದ ಇತಿಹಾಸ: ಕಿಲ್ಲೆ ಮೈದಾನದಲ್ಲಿರುವ ಸೈರನ್ ಗೋಪುರಕ್ಕೆ 52 ವರ್ಷಗಳ ಇತಿಹಾಸವಿದೆ. ಲಯನ್ಸ್ ಕ್ಲಬ್ 1971ರಲ್ಲಿ 9 ಸಾವಿರ ರೂ.ಖರ್ಚು ಮಾಡಿ ಈ ಸೈರನ್‌ನ್ನು ಪುತ್ತೂರಿಗೆ ತಂದುಕೊಟ್ಟಿತ್ತು.ಆ ಬಳಿಕ ಪ್ರತಿ ನಿತ್ಯ ಬೆಳಗ್ಗೆ 8, ಮಧ್ಯಾಹ್ನ 12 ಮತ್ತು ರಾತ್ರಿ 8 ಗಂಟೆಗೆ ಸೈರನ್ ಮೊಳಗುತ್ತಿತ್ತು. ಆರಂಭದಲ್ಲಿ ನಾಲ್ಕು ನಿಮಿಷಗಳ ಕಾಲ ಮೊಳಗುತ್ತಿದ್ದ ಸೈರನ್ ಬಳಿಕ ಜನಾಭಿಪ್ರಾಯದ ಮೇರೆಗೆ ಒಂದು ನಿಮಿಷಕ್ಕೆ ಸೀಮಿತವಾಯಿತು. ಆ ಕಾಲದಲ್ಲಿ ಜನರಿಗೆ ಖಚಿತವಾದ ಸಮಯ ತಿಳಿಸಿ ಕರ್ತವ್ಯ ಪಾಲನೆಯಲ್ಲಿ ದಕ್ಷತೆ ಮೂಡಿಸಲು ಸೈರನ್ ಮೊಳಗಿಸಲಾಗುತ್ತಿತ್ತು. ಆದರೆ ಕಾಲ ಬದಲಾದಂತೆ ಸೈರನ್ ಕೂಗುವುದೂ ಅಪ್ರಸ್ತುತವಾಗತೊಡಗಿತು.ಮಾತ್ರವಲ್ಲ ಈ ಸೈರನ್ ಗೋಪುರದ ಪಕ್ಕದಲ್ಲೇ ನ್ಯಾಯಾಲಯಗಳು, ಸಹಾಯಕ ಕಮಿಷನರ್ ಕಚೇರಿ ಮುಂತಾಗಿ ಸರಕಾರಿ ಕಚೇರಿಗಳಿರುವುದರಿಂದ ಸೈರನ್ ಧ್ವನಿ ಈ ಕಚೇರಿಗಳ ಕಾರ್ಯಕಲಾಪಕ್ಕೆ ಅಡ್ಡಿ ಮಾಡುತ್ತಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಸೈರನ್ ಮೊಳಗುವಿಕೆ ನಿಲ್ಲಿಸಲಾಯಿತು. ಅದಾದನಂತರ ಸೈರನ್ ಯಂತ್ರವೂ ಕೆಟ್ಟುಹೋಗಿದ್ದು ಇನ್ನೂ ದುರಸ್ತಿಯಾಗದೇ ಇರುವುದರಿಂದ ಸೈರನ್ ಮೊಳಗುವುದೇ ಸ್ಥಗಿತಗೊಂಡಿದೆ. ಸ್ಥಳೀಯಾಡಳಿತದ ಉಸ್ತುವಾರಿಯಲ್ಲಿ ಈ ಸೈರನ್ ಗೋಪುರ ಇದೆ.ಹಿಂದೆಲ್ಲಾ ಗ್ರಾಮಗಳಲ್ಲಿ ರೇಡಿಯೋ ಗೋಪುರಗಳಿದ್ದವು.ಈಗ ಆ ಗೋಪುರಗಳೂ ಕಟ್ಟಡಗಳ ರೂಪದಲ್ಲಿ ನೆನಪಾಗಿ ಮಾತ್ರ ಉಳಿದಿವೆ. ಅದೇ ರೀತಿ ಸೈರನ್ ಗೋಪುರದ ಬಳಿ ಇರೋ ರೇಡಿಯೋ ಗೋಪುರ ಕೂಡಾ ಖಾಲಿ ಖಾಲಿಯಾಗಿದೆ. ಸೈರನ್ ಗೋಪುರ ಪುತ್ತೂರಿನ ಪಾಲಿಗೆ ಪಳೆಯುಳಿಕೆಯಂತಾಗಿದೆ.ಇನ್ನಾದರೂ ಇದರ ನಿರ್ವಹಣೆ ಆಗುವುದೇ ಎನ್ನುವ ನಿರೀಕ್ಷೆಯಲ್ಲಿ ನಾಗರಿಕರಿದ್ದಾರೆ.

LEAVE A REPLY

Please enter your comment!
Please enter your name here