ಪುತ್ತೂರು: ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ ನ ಅವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಬಿಲ್ಲವ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗ ನಿಯಂತ್ರಣಾಧಿಕಾರಿಗಳಿಗೆ ಜು.17 ರಂದು ಮನವಿ ಸಲ್ಲಿಸಿದ್ದಾರೆ.
ತಾಲೂಕಿನಲ್ಲಿ ಪ್ರಸ್ತುತ ಸರಕಾರಿ ಬಸ್ ಗಳನ್ನೇ ಅವಲಂಬಿಸಿ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತ ವಿದ್ಯಾಮಾನದಲ್ಲಿ ಸರಕಾರಿ ಬಸ್ಸುಗಳ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ತುಂಬಾ ಹೆಚ್ಚಾಗಿದೆ.ಸುಬ್ರಹ್ಮಣ್ಯ-ಕಾಣಿಯೂರು, ಮಾಡಾವು-ಬೆಳ್ಳಾರೆ, ವಿಟ್ಲ-ಅನಂತಾಡಿ ಕಡೆಯಿಂದ ಬರುವಂತಹ ವಿದ್ಯಾರ್ಥಿಗಳಿಗೆ ಬಸ್ಸಿನ ತೊಂದರೆ ಬಹಳಷ್ಟಿದೆ ಅಲ್ಲದೆ ಇರುವ ಕೆಲವೇ ಕೆಲವು ಬಸ್ಸುಗಳಲ್ಲಿ ಸ್ಥಳಾವಕಾಶ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ಬರಲು ಅನಾನುಕೂಲವಾಗಿರುತ್ತದೆ. ಇದಕ್ಕಾಗಿ ಬೆಳಗ್ಗಿನ ಶಾಲಾ ಅವಧಿ ಮತ್ತು ಸಾಯಂಕಾಲದ ಶಾಲಾ ಅವಧಿಗೆ ನಗರ-ಪುತ್ತೂರು-ದರ್ಬೆ ಮಾರ್ಗದಲ್ಲಿ ಸರಕಾರಿ ಸಿಟಿ ಬಸ್ಸುಗಳನ್ನು ಆಯೋಜಿಸಬೇಕು.
ಈ ಮನವಿಯನ್ನು ಸಾರಿಗೆ ಸಂಸ್ಥೆಯು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿಯೇ ಎಲ್ಲಾ ಶಾಲಾ-ಕಾಲೇಜುಗಳಿಗೆ ಬರುವಂತಹ ವಿದ್ಯಾರ್ಥಿಗಳು ಯಾವ ಮಾರ್ಗದಲ್ಲಿ ಇದ್ದರೂ ಅವರಿಗೆ ಬಸ್ಸು ನಿಲುಗಡೆ ಮಾಡುವಂತೆ ತಮ್ಮ ಸಿಬ್ಬಂದಿಗಳಿಗೆ ಸೂಚಿಸಬೇಕು ಜೊತೆಗೆ ಬಸ್ಸಿನ ಕೊರತೆ ಇರುವಲ್ಲಿ ಹೆಚ್ಚುವರಿ ಬಸ್ಸುಗಳನ್ನು ಶಾಲಾ-ಕಾಲೇಜಿನ ಸಮಯದಲ್ಲಿ ಓಡಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ.ಎಲ್ಲಾ ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ಅಭ್ಯುದಯವೇ ನಮ್ಮ ಗುರಿಯಾಗಿದ್ದು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿ ನೀಡುತ್ತಿರುವ ಸಂದರ್ಭದಲ್ಲಿ ತಾಲೂಕು ಬಿಲ್ಲವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಭವಿಷ್ ವಿ.ಸುವರ್ಣ, ಕೋಶಾಧಿಕಾರಿ ಎಸ್.ಧ್ಯುತಿ, ಸಾಂಸ್ಕೃತಿಕ ಕಾರ್ಯದರ್ಶಿ ಗ್ರೀಶ್ಮಾ ಎನ್, ವಿದ್ಯಾರ್ಥಿ ನಾಯಕರುಗಳಾದ ಯಶ್ವಂತ್ ಅಂಚನ್ ಕೆ.ಎನ್, ಹೇಮಂತ್ ಎಬ್.ಎಂ, ಧನುಷ್ ರವರು ಉಪಸ್ಥಿತರಿದ್ದರು.