ರಾಮಕುಂಜ ಆ.ಮಾ.ಶಾಲೆಯಲ್ಲಿ ಆಟಿ ಅಮಾವಾಸ್ಯೆ ದಿನಾಚರಣೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆ ಹಾಗೂ ನೇತ್ರಾವತಿ ತುಳುಕೂಟ ರಾಮಕುಂಜ ಇದರ ವತಿಯಿಂದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಆಟಿ ಅಮಾವಾಸ್ಯೆ ಆಚರಣೆ ಮಾಡಲಾಯಿತು.


ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ, ನ್ಯಾಯವಾದಿ ದುರ್ಗಾಪ್ರಸಾದ್ ರೈ ಕುಂಬ್ರ ಅವರು ಮಾತನಾಡಿ, ನಾಗಾರಾಧನೆ, ಯಕ್ಷರಾಧನೆ, ಭೂತರಾಧನೆಗೆ ತುಳುನಾಡು ಪ್ರಸಿದ್ಧಿ ಪಡೆದುಕೊಂಡಿದೆ. ತುಳು ಸಂಸ್ಕೃತಿಯೂ ಅಗಾಧವಾಗಿದ್ದು ಪ್ರತಿಯೊಬ್ಬರಿಗೂ ಪ್ರೀತಿ ಹಂಚುತ್ತದೆ. ಇದಕ್ಕೆ ಜಾತಿ, ವಿದ್ಯೆ,ಪಾಂಡಿತ್ಯ ಅಡ್ಡಿ ಬರುವುದಿಲ್ಲ. ಆಟಿ ಕಷ್ಟದ ತಿಂಗಳು ಆಗಿದೆ. ಈ ತಿಂಗಳಲ್ಲಿ ಹಿಂದಿನ ದಿನಗಳನ್ನು ಮೆಲುಕು ಹಾಕಲಾಗುತ್ತದೆ. ಆದ್ದರಿಂದ ನಾವೆಲ್ಲರೂ ತುಳು ಸಂಸ್ಕೃತಿ ಬೆಳೆಸುವ ಎಂದು ಹೇಳಿದ ಅವರು, ಆಟಿ, ತುಡರ್ ಪರ್ಬ ಸೇರಿದಂತೆ ತುಳುನಾಡಿನ ವಿವಿಧ ಹಬ್ಬ ಆಚರಿಸುವ ಮೂಲಕ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯು ತುಳು ಸಂಸ್ಕೃತಿಯನ್ನು ಪ್ರಚುರಪಡಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಇನ್ನೋರ್ವ ಅತಿಥಿ ಬೆಂಗಳೂರು ಯನಿವರ್ಸಿಟಿಯ ಸಿಂಡಿಕೇಟ್ ಸದಸ್ಯ ಡಾ.ಅನಿಲ್ ಈಶೋರವರು ಮಾತನಾಡಿ, ಆಟಿ ತಿಂಗಳಿನ ಆಚರಣೆಗಳು ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ತುಳುನಾಡಿನ ಸಂಸ್ಕೃತಿಯ ಪ್ರದರ್ಶನ ಆಗುತ್ತಿದೆ ಎಂದರು. ದೈವ ನರ್ತಕ ಕಿಟ್ಟುಕಲ್ಲುಗುಡ್ಡೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಸಾಯಿರಾಂ ಸಂದರ್ಭೋಚಿತವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು, ಕಳೆದ 21 ವರ್ಷಗಳಿಂದ ಶಾಲೆಯಲ್ಲಿ ಆಟಿ ಅಮಾವಾಸ್ಯೆ ಆಚರಣೆ ಮಾಡಲಾಗುತ್ತಿದೆ. ಆಯುರ್ವೇದ, ನಾಟಿ ಔಷಧಿಗೆ ರೋಗರುಜಿನ ತಡೆಗಟ್ಟುವ ಶಕ್ತಿ ಇದೆ ಎಂಬುದನ್ನು ನೆನಪಿಸುವ ಕೆಲಸ ಆಗುತ್ತಿದೆ. ಈ ಬಾರಿ ಸುಮಾರು 70 ಔಷಧಿಯ ಗುಣದ ಸಸ್ಯ,ಗಿಡಗಳಿಂದ ವಿವಿಧ ರೀತಿಯ ತಿನಸು ತಯಾರಿಸಲಾಗಿದೆ. ಮಕ್ಕಳು, ಅವರ ಪೋಷಕರೇ ಇವೆಲ್ಲವನ್ನೂ ಸಂಗ್ರಹಿಸಿದ್ದಾರೆ. ಆದ್ದರಿಂದ ಇದೂ ಮಕ್ಕಳ ವಿದ್ಯಾಭ್ಯಾಸದ ಒಂದು ಭಾಗವೂ ಆಗಿದೆ ಎಂದರು. ರಾಜ್ಯದಲ್ಲಿಯೇ ಮೊದಲ ಬಾರಿ ರಾಮಕುಂಜದಲ್ಲಿ ಹೈಸ್ಕೂಲ್‌ನಲ್ಲಿ ತುಳು ಭಾಷೆ ಕಲಿಕೆ ಆರಂಭಿಸಲಾಗಿದೆ. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತುಳು ಭಾಷೆಯಲ್ಲಿ 100ಕ್ಕೆ 100 ಅಂಕ ಪಡೆದ ರಾಜ್ಯದ 222 ವಿದ್ಯಾರ್ಥಿಗಳಿಗೆ ಸದ್ಯದಲ್ಲೇ ರಾಮಕುಂಜದಲ್ಲಿ ಗೌರವಾರ್ಪಣೆ ಮಾಡಲಾಗುವುದು ಎಂದರು. ಜ್ಯೋತಿ ಮಸ್ಕತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿವಿಧ ಸ್ಪರ್ಧೆ:
ಆಟಿ ಅಮಾವಾಸ್ಯೆ ದಿನಾಚರಣೆ ಅಂಗವಾಗಿ ಶಾಲೆಯ ಮಕ್ಕಳ ಪೋಷಕರಿಗೆ ಪಾಡ್ದನ, ಬೀಜು ಕುಟ್ಟುನು, ಚೆನ್ನೆಮಣೆ, ಗೇನ ಶಕ್ತಿ ಪಂತ, ಸಬಿ ಸವಾಲ್ ಎಂಬ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಆಟಿ ತಿಂಗಳ ಖಾದ್ಯ ತಯಾರಿಗೆ ಬೇಕಾದ ಸಸ್ಯ ಸೇರಿದಂತೆ ಇನ್ನಿತರ ಔಷಧೀಯ ಗಿಡಗಳ ಅತೀ ಹೆಚ್ಚು ಸಂಗ್ರಹ ಮಾಡಿದ ವಿದ್ಯಾರ್ಥಿಗಳನ್ನು ತರಗತಿವಾರು ಬಹುಮಾನ ನೀಡಿ ಗೌರವಿಸಲಾಯಿತು. ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಗಾಯತ್ರಿ ಸ್ವಾಗತಿಸಿ, ಮೇನೇಜರ್ ರಮೇಶ್ ರೈ ವಂದಿಸಿದರು. ಶಿಕ್ಷಕಿಯರಾದ ಅಕ್ಷತಾ, ಸರಿತಾ ಕಾರ್ಯಕ್ರಮ ನಿರೂಪಿಸಿದರು.

ಆತ್ಮಿ ಗೌಡಗೆ ಸನ್ಮಾನ:
ಜೀ ಕನ್ನಡ ವಾಹಿನಿಯ ಛೋಟಾ ಚಾಂಪಿಯನ್ ಗೇಮ್ ಶೋನಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡ ಶಾಲೆಯ ನರ್ಸರಿ ವಿದ್ಯಾರ್ಥಿನಿ ಆತ್ಮಿ ಗೌಡರನ್ನು ಆಕೆಯ ಪೋಷಕರ ಜೊತೆ ಸನ್ಮಾನಿಸಿ ಗೌರವಿಸಲಾಯಿತು.


70 ಬಗೆಯ ಖಾದ್ಯ:
ಸುಮಾರು 70 ಬಗೆಯ ಔಷಧಿಯ ಗುಣವುಳ್ಳ ಖಾದ್ಯಗಳನ್ನು ತಯಾರಿಸಿ ಮಧ್ಯಾಹ್ನದ ಊಟದ ಜೊತೆ ನೀಡಲಾಯಿತು. ನೆಲನೆಲ್ಲಿ ಕಷಾಯ, ಪಾಲೆಕೆತ್ತೆ ಕಷಾಯ, ಕುಂಟೋಲು ಕಾಪಿ, ಕಡೀರಬೇರಿನ ಕಷಾಯ, ಪುನರ್ಪುಳಿ ಸಾರು, ನುಗ್ಗೆಸೊಪ್ಪು ಸಾರು, ಚೀಮುಳ್ಳು ಸಾರು, ಲಿಂಬೆಹಣ್ಣು ಸಾರು, ಜಾರಿಗೆಪುಳಿ ಸಾರು, ಮಂತುಪುಳಿ ಸಾರು, ನಾಚಿಕೆ ಮುಳ್ಳಿನ ಬೇರಿನ ಕಷಾಯ, ಉಪ್ಪಿನಕಾಯಿ, ಚಟ್ನಿಲ ಹಲಸು, ಮಾವು, ಬಾಳೆ, ಗೆಣಸು, ಕಣಿಲೆ ಸೇರಿದಂತೆ ವಿವಿಧ ಜಾತಿಯ ಔಷಧೀಯ ಗುಣವುಳ್ಳ ಸಸ್ಯಗಳಿಂದ ಮಾಡಿದ ಖಾದ್ಯ ನೀಡಲಾಯಿತು.

LEAVE A REPLY

Please enter your comment!
Please enter your name here