ಕಡಬ: ಪರಿಶಿಷ್ಟ ಜಾತಿ/ಪಂಗಡದವರ ಕ್ಷೇಮಾಭಿವೃದ್ಧಿ ಸಮಿತಿ ಸಭೆ

0

ಅಂಬೇಡ್ಕರ್ ಸಭಾಭವನದಲ್ಲಿ ರಾಜಕೀಯ ಸಭೆಗಳಿಗೆ ಅವಕಾಶ ನೀಡದಂತೆ ಆಗ್ರಹ
ಕಡಬ ಸಮುದಾಯ ಆಸ್ಪತ್ರೆಯ ಸಿಬ್ಬಂದಿಗಳು ಸಾರ್ವಜನಿಕರೊಡನೆ ಸರಿಯಾಗಿ ಸ್ಪಂದಿಸುತ್ತಿಲ್ಲ-ಆರೋಪ

ಕಡಬ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಿತರಕ್ಷಣೆ ಮತ್ತು ಕ್ಷೇಮಾಭಿವೃದ್ಧಿ ಸಮಿತಿಯ ಕಡಬ ತಾಲೂಕು ಮಟ್ಟದ ಸಭೆಯು ಕಡಬ ತಹಶೀಲ್ದಾರ್ ರಮೇಶ್ ಬಾಬು ಅವರ ಅಧ್ಯಕ್ಷತೆಯಲ್ಲಿ ಕಡಬ ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ಜರಗಿತು.

ಕಡಬ ಅಂಬೇಡ್ಕರ್ ಭವನದಲ್ಲಿ ಕೆಲ ದಿನಗಳ ಹಿಂದೆ ನಡೆದ ರಾಜಕೀಯ ಪಕ್ಷದ ಸಭೆಯೊಂದರಲ್ಲಿ ಘರ್ಷಣೆ ನಡೆದು ಚಯರ್‌ಗಳನ್ನು ಎಳೆದಾಡಿದ್ದಾರೆ, ನಾವು ಈ ಹಿಂದೆಯೇ ಅಂಬೇಡ್ಕರ್ ಭವನವನ್ನು ಯಾವುದೇ ರಾಜಕೀಯ ಸಭೆ ಸಮಾರಂಭಗಳಿಗೆ ನೀಡಬಾರದು ಎಂದು ಮನವಿ ಮಾಡಿದ್ದೇವು, ಆದರೆ ಮೊನ್ನೆ ರಾಜಕೀಯ ಪಕ್ಷವೊಂದಕ್ಕೆ ನೀಡಿ, ಅಲ್ಲಿ ದಾಂಧಲೆ ಮಾಡಲಾಗಿದೆ ಇದಕ್ಕೆ ಕಡಬ ಪಟ್ಟಣ ಪಂಚಾಯತ್ ಅಧಿಕಾರಿಗಳೇ ಹೊಣೆ ಎಂದು ದಲಿತ ಮುಖಂಡ ರಾಘವ ಕಳಾರ ಅವರು, ಅಂಬೇಡ್ಕರ್ ಭವನದಲ್ಲಿ ಯಾವುದೇ ರಾಜಕೀಯ ಪಕ್ಷದ ಸಭೆಗಳಿಗೆ ಅವಕಾಶ ನೀಡದಂತೆ ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಕೀರ ಮೂಲ್ಯ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಭೆಗಳು ಹಾಗೂ ಸರಕಾರಿ ಕಾರ್ಯಕ್ರಮಗಳಿಗೆ ಅಂಬೇಡ್ಕರ್ ಭವನವನ್ನು ಉಚಿತವಾಗಿ ಬಳಸಲು ನೀಡಲಾಗುತ್ತಿದೆ. ಇತರ ಕಾರ್ಯಕ್ರಮಗಳಿಗೆ ಶುಲ್ಕ ವಿಧಿಸಿ ನೀಡಲಾಗುತ್ತಿದೆ. ರಾಜಕೀಯ ಪಕ್ಷಗಳ ಸಭೆಗಳಿಗೆ ಅಂಬೇಡ್ಕರ್ ಭವನವನ್ನು ನೀಡಬಾರದು ಎನ್ನುವ ನಿಯಮವಿಲ್ಲ ಎಂದು ವಿವರಿಸಿದರು.

ಕಡಬ ಸಮುದಾಯ ಆಸ್ಪತ್ರೆಯ ಸಿಬ್ಬಂದಿಗಳು ಸಾರ್ವಜನಿಕರೊಡನೆ ಸರಿಯಾಗಿ ಸ್ಪಂಧಿಸುತ್ತಿಲ್ಲ:
ಕಡಬ ಸಮುದಾಯ ಆಸ್ಪತ್ರೆಯ ಲ್ಯಾಬ್‌ನಲ್ಲಿ ಮಧುಮೇಹ ಪರೀಕ್ಷೆಯ ವರದಿಗಳು ಸಮರ್ಪಕವಾಗಿ ಬರುತ್ತಿಲ್ಲ. ಆಸ್ಪತ್ರೆಯಲ್ಲಿ ರಾತ್ರಿ ವೇಳೆ ತುರ್ತು ಸಂದರ್ಭದಲ್ಲಿ ವೈದ್ಯರು ಸಕಾಲದಲ್ಲಿ ಲಭ್ಯರಿರುವುದಿಲ್ಲ, ಅಲ್ಲದೆ ಆಸ್ಪತ್ರೆಯ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂಧಿಸುವುದಿಲ್ಲ, ಅಷ್ಟು ದೊಡ್ಡ ಕಟ್ಟಡ ಕಟ್ಟಿರುವುದು ಮಾತ್ರ, ಕಡಬ ಸಮುದಾಯ ಆಸ್ಪತ್ರೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಗುರುವಪ್ಪ ಕಲ್ಲುಗುಡ್ಡೆ ದೂರಿದರು. ಅದಕ್ಕೆ ಕೆ.ಪಿ. ಆನಂದ ಅವರು ಧ್ವನಿಗೂಡಿಸಿದರು. ಆ ಬಗ್ಗೆ ಉತ್ತರಿಸಿದ ತಾಲೂಕು ವೈದ್ಯಾಧಿಕಾರಿ ಡಾ| ದೀಪಕ್ ರೈಯವರು ಲ್ಯಾಬ್ ವರದಿಗಳು ಬೇರೆ ಬೇರೆ ಕಡೆ ಮಾಡಿದಾಗ ಸಮಯಕ್ಕೆ ಅನುಗುಣವಾಗಿ ಕೆಲವು ಸಂದರ್ಭಗಳಲ್ಲಿ ವ್ಯತ್ಯಾಸ ಬರುವುದು ಸಹಜ. ಆದರೂ ನಾವು ಆ ಬಗ್ಗೆ ಗಮನಹರಿಸುತ್ತೇವೆ, ಉಳಿದ ವಿಚಾರಗಳಿಗೆ ವೈದ್ಯಾಧಿಕಾರಿಯವರು ಉತ್ತರ ನೀಡುತ್ತಾರೆ ಎಂದು ಹೇಳಿದರು, ಬಳಿಕ ಡಾ| ಸುಚಿತ್ರಾ ರಾವ್ ಅವರು ಉತ್ತರ ನೀಡಿದರು ಆಸ್ಪತ್ರೆಯ ವಿಚಾರದಲ್ಲಿ ಕೆಲಹೊತ್ತು ಚರ್ಚೆ ನಡೆಯಿತು. ಡಾ| ಸುಚಿತ್ರಾ ರಾವ್ ಮಾತನಾಡಿ, ಪ್ರಸ್ತುತ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ವೈದ್ಯರು ಲಭ್ಯರಿರುತ್ತಾರೆ ಎಂದು ಮಾಹಿತಿ ನೀಡಿದರು.

ಪೊಲೀಸ್ ಅಧಿಕಾರಿಗಳ ಹಾಜರಾತಿಗೆ ಆಗ್ರಹ:
ತಾಲೂಕು ಮಟ್ಟದ ಈ ಸಭೆಯಲ್ಲಿ ತಾಲೂಕಿನ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳು ಉಪಸ್ಥಿತರಿರಬೇಕಿದ್ದು, ಕೇವಲ ಕಡಬ ಠಾಣೆಯ ಎಎಸ್‌ಐ ಮಾತ್ರ ಆಗಮಿಸಿದ್ದಾರೆ. ಹಾಗಿದ್ದರೆ ಉಳಿದ ಠಾಣೆಗಳ ವ್ಯಾಪ್ತಿಯ ಪ್ರಕರಣಗಳ ಮಾಹಿತಿಯನ್ನು ಸಭೆಯಲ್ಲಿ ಯಾರು ಕೊಡುತ್ತಾರೆ ಎಂದು ಗುರುವಪ್ಪ ಕಲ್ಲುಗುಡ್ಡೆ ಪ್ರಶ್ನಿಸಿದರು. ಮುಂದಿನ ಸಭೆಗಳಲ್ಲಿ ತಾಲೂಕಿನ ಎಲ್ಲಾ ಠಾಣೆಗಳ ಎಸ್‌ಐ ಗಳು ಉಪಸ್ಥಿತರಿರುವಂತೆ ಎಸ್‌ಪಿಗೆ ಪತ್ರ ಬರೆಯಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಬೀದಿ ನಾಯಿಗಳ ನಿಯಂತ್ರಣಕ್ಕೆ ಆಗ್ರಹ:
ಕಡಬ ತಾಲೂಕಿನ ಎಲ್ಲೆಡೆ ಬೀದಿನಾಯಿಗಳ ಕಾಟ ಮಿತಿಮೀರಿದ್ದು, ಅವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಕೆ.ಪಿ.ಆನಂದ ಅವರು ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪಶು ವೈದ್ಯಾಧಿಕಾರಿ ಡಾ| ಅಜಿತ್ ಅವರು ಬೀದಿನಾಯಿಗಳನ್ನು ಕೊಲ್ಲಲು ಅವಕಾಶವಿಲ್ಲ. ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿ ನಿಯಂತ್ರಿಸಲು ಸರಕಾರದ ಸೂಚನೆ ಇದೆ. ಸ್ಥಳೀಯಾಡಳಿತಗಳು ಆ ನಿಟ್ಟಿನಲ್ಲಿ ವ್ಯವಸ್ಥೆ ಮಾಡಿದರೆ ನಮ್ಮ ಇಲಾಖೆ ಸಹಕರಿಸಲು ಸಿದ್ಧವಿದೆ ಎಂದರು.

ಕಾಡುತ್ಪತ್ತಿಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಗ್ರಾಮ ಅರಣ್ಯ ಸಮಿತಿಗಳ ಮೂಲಕ ಪರಿಶಿಷ್ಟ ಜಾತಿ/ಪಂಗಡದವರಿಗೆ ಅವಕಾಶ ನೀಡಬೇಕು. ಈ ಬಗ್ಗೆ ಗ್ರಾ.ಪಂ. ನೋಟಿಸ್ ಬೋರ್ಡ್‌ಗಳಲ್ಲಿ ಪ್ರಕಟನೆ ಹಾಕಬೇಕು ಎಂದು ಆಗ್ರಹ ವ್ಯಕ್ತವಾಯಿತು. ಐತ್ತೂರು ಅರಣ್ಯದಲ್ಲಿ ಕಾಡುತ್ಪತ್ತಿಯನ್ನು ನೆಟ್ಟಣದ ನಿತಿನ್ ಎಂಬವರಿಗೆ ನೀಡಲಾಗಿದೆ, ಇದರಲ್ಲಿ ಅರಣ್ಯ ಅಧಿಕಾರಿಯವರು ಶಾಮಿಲಾಗಿದ್ದಾರೆ ಎಂಬ ಆರೋಪವು ವ್ಯಕ್ತವಾಯಿತು. ಪ್ರತಿ ಗ್ರಾಮಗಳಲ್ಲಿಯೂ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿವೇಶನ ಗುರುತಿಸಿ ಮೀಸಲಿಡುವ ಕುರಿತು ಪಿಡಿಒ ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಕಡಬ ತಾ.ಪಂ. ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ ಅವರು ತಿಳಿಸಿದರು. ಕಡಬ ಪೇಟೆಯಲ್ಲಿರುವ ಅಂಬೇಡ್ಕರ್ ಭವನಕ್ಕೆ ಸೇರಿದ ಜಮೀನನ್ನು ಅತಿಕ್ರಮಣ ಮಾಡುವ ಹುನ್ನಾರ ನಡೆಯುತ್ತಿದೆ ಎನ್ನುವ ದೂರಿನ ಹಿನ್ನಲೆಯಲ್ಲಿ ಆ ಜಮೀನನ್ನು ಅಳತೆ ಮಾಡಿ ಗಡಿಗುರುತು ಮಾಡಲಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.
ಹೆದ್ದಾರಿ ಕಾಮಗಾರಿಯ ಕಾರಣದಿಂದಾಗಿ ನೆಲ್ಯಾಡಿ ಬಸ್ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯನ್ನು ಮುಚ್ಚಲಾಗಿದೆ. ಅದನ್ನು ಸರಿಪಡಿಸಿ ಬಸ್‌ಗಳು ನಿಲ್ದಾಣಕ್ಕೆ ಹೋಗಿ ಬರುವಂತೆ ಮಾಡಬೇಕೆಂದು ಸಭೆಯಲ್ಲಿ ಒತ್ತಾಯ ಕೇಳಿ ಬಂತು. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಇಂಜಿನಿಯರ್‌ಗೆ ಸೂಚನೆ ನೀಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು. ಬೆಳಗ್ಗೆ ಕಡಬದಿಂದ ನೆಲ್ಯಾಡಿ ಮೂಲಕ ಧರ್ಮಸ್ಥಳಕ್ಕೆ ತೆರಳುವ ಸರಕಾರಿ ಬಸ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನೆಲ್ಯಾಡಿಯ ಬೆಥನಿ ಐಟಿಐ ತನಕ ಹೋಗಲು ಸೂಚನೆ ನೀಡಬೇಕೆಂದು ಕೆ.ಪಿ.ಆನಂದ ಅವರು ಮನವಿ ಮಾಡಿದರು. ಈ ಕುರಿತು ವಿದ್ಯಾರ್ಥಿಗಳ ಮೂಲಕ ಮನವಿ ಸಲ್ಲಿಸಿದರೆ ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಅಬ್ಬಾಸ್ ಕೋಚಕಟ್ಟೆ ತಿಳಿಸಿದರು. ಆ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಶಿಕ್ಷಣ ಇಲಾಖಾಧಿಕಾರಿ ವಿಷ್ಣುಪ್ರಸಾದ್ ತಿಳಿಸಿದರು.

ಜಲಜೀವನ್ ಮಿಷನ್ ಎಇಇ ರೂಪಾ ನಾಕ್, ಕಡಬ ಸಮುದಾಯ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್, ಜಿ.ಪಂ. ಇಂಜಿನಿಯರ್ ಸಂಗಪ್ಪ ಹುಕ್ಕೇರಿ, ತೋಟಗಾರಿಕಾ ಇಲಾಖಾಧಿಕಾರಿ ರೇಖಾ, ಕೃಷಿ ಇಲಾಖಾಧಿಕಾರಿ, ಕಡಬ ಎಎಸ್‌ಐ ಚಂದ್ರಶೇಖರ್, ಲೋಕೋಪಯೋಗಿ ಇಂಜಿನಿಯರ್ ರವಿಚಂದ್ರ, ಮೆಸ್ಕಾಂ ಇಂಜಿನಿಯರ್ ಸತ್ಯನಾರಾಯಣ, ಶಿಕ್ಷಣ ಇಲಾಖಾಧಿಕಾರಿ ಓಬಳೇಶ್, ಆಹಾರ ನಿರೀಕ್ಷಕ ಶಂಕರ್, ಅರಣ್ಯ ಇಲಾಖಾಧಿಕಾರಿಗಳಾದ ಅಜಿತ್ ಕಡಬ, ಯೋಗೀಶ್ ಸುಂಕದಕಟ್ಟೆ, ಸಮಾಜ ಕಲ್ಯಾಣ ಇಲಾಖೆಯ ಲಕ್ಷ್ಮೀ ದೇವಿ ಮುಂತಾದವರು ಇಲಾಖಾ ಮಾಹಿತಿ ನೀಡಿದರು. ದಲಿತ ಮುಖಂಡರಾದ ಶಶಿಧರ ಬೊಟ್ಟಡ್ಕ, ವಸಂತ ಕುಬಲಾಡಿ, ಚಂದ್ರಪ್ಪ ಸಂಪಡ್ಕ, ಮಹಾಬಲ, ವಿ.ಕೆ.ಕಡಬ, ಲಕ್ಷಿ ಸುಬ್ರಹ್ಮಣ್ಯ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣ ಅವರು ಸ್ವಾಗತಿಸಿ, ವಂದಿಸಿದರು.

ಸಭೆಯಲ್ಲಿ ನಡೆದ ಪ್ರಮುಖ ಚರ್ಚೆಗಳು:
ಬಲ್ಯ, ನೆಲ್ಯಾಡಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಬೇಕು ಎಂಬ ಆಗ್ರಹ ವ್ಯಕ್ತವಾಯಿತು. ನೆಲ್ಯಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯವರು ಗ್ರಾಮದಲ್ಲಿ ಎಷ್ಟು ಪರಿಶಿಷ್ಟ ಜಾತಿ /ಪಂಗಡದವರು ಇದ್ದಾರೆಂದು ಮಾಹಿತಿಯೇ ನೀಡುವುದಿಲ್ಲ ಎಂದು ಕೆ.ಪಿ.ಆನಂದನವರು ಆರೋಪಿಸಿದರು. ಆಲಂಕಾರಿನ ಡಿಸಿ ಮನ್ನಾ ಭೂಮಿಯನ್ನು ೩ ತಿಂಗಳೊಳಗೆ ಮಂಜೂರು ಮಾಡುತ್ತೇವೆ ಎಂದು ತಹಸೀಲ್ದಾರ್ ಸಭೆಗೆ ತಿಳಿಸಿದರು. ಹಣ ಇದ್ದವರಿಗೆ ಮತ್ತು ರಾಜಕೀಯ ವ್ಯಕ್ತಿಗಳಿಗೆ ಅಧಿಕಾರಿಗಳು ಗೋಮಾಳ ಜಾಗವನ್ನು ಬೇಕಾದರೆ ಕೊಡ್ತಾರೆ ಎಂದು ಮಹಾಬಲ ಅವರು ಆರೋಪ ವ್ಯಕ್ತಪಡಿಸಿದರು. ಕಡಬದಲ್ಲಿ ರಾತ್ರಿ ವೇಳೆ ತಂಗುವ ಬಸ್ಸು ಸಿಬ್ಬಂದಿಗಳಿಗೆ ಸರಿಯಾದ ವ್ಯವಸ್ಥೆಯನ್ನು ಮಾಡುವಂತೆ ಕೆ.ಎಸ್.ಆರ್.ಟಿ.ಸಿ. ಅಧಿಕಾರಿ ಮನವಿ ಮಾಡಿದರು. ಸವಣೂರಿನ ಕುಮಾರ ಮಂಗಲ ಶಾಲೆಯ ಅವ್ಯವಸ್ಥೆಯ ಕುರಿತು ಅಲ್ಲಿನ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜಯಪ್ರಕಾಶ್ ಗಮನ ಸೆಳೆದರು. ಶಾಲೆಯಲ್ಲಿ ಓರ್ವ ವಿದ್ಯಾರ್ಥಿ 40 ದಿನದಿಂದ ಶಾಲೆಗೆ ಗೈರು ಹಾಜರಾಗುತ್ತಿದ್ದರೂ ಶಿಕ್ಷಕರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಶಿಕ್ಷಕರು ಶಾಲೆಗೆ 10.30 ಗಂಟೆಗೆ ಬರುತ್ತಾರೆ ಎಂದು ಜಯಪ್ರಕಾಶ್ ಆರೋಪಿಸಿದರು. ಈ ಬಗ್ಗೆ ಉತ್ತರಿಸಿದ ಶಿಕ್ಷಣಾಧಿಕಾರಿ ನಾನು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ ಎಂದರು. ಕಡಬ ಠಾಣೆಯಲ್ಲಿ ತಂದೆ ತಾಯಿಗೆ ಹೊಡೆದವರಿಗೆ ಯಾವುದೇ ಸೆಕ್ಷನ್ ಹಾಕುವುದಿಲ್ಲ ಯಾಕೆ ಎಂದು ಗುರುವಪ್ಪ ಕಲ್ಲುಗುಡ್ಡೆ ಪ್ರಶ್ನಿಸಿದರು. ಮತ್ತು ಕಡಬ ಠಾಣೆಯಲ್ಲಿ ಎಸ್.ಸಿ.ಎಸ್.ಟಿ. ಸಭೆಯನ್ನು ಕಾಟಾಚಾರಕ್ಕೆ ಮಾಡಲಾಗುತ್ತದೆ ಎಂಬ ಆರೋಪವೂ ವ್ಯಕ್ತವಾಯಿತು.

LEAVE A REPLY

Please enter your comment!
Please enter your name here