ವರ್ಷ 4 ಕಳೆದರೂ ಕೆಪಿಎಸ್ ಆಂಗ್ಲ ಮಾಧ್ಯಮ ಶಾಲೆಗೆಆಂಗ್ಲ ಮಾಧ್ಯಮ ಶಿಕ್ಷಕರ ನೇಮಕವಾಗಿಲ್ಲ- ಕನ್ನಡ ಮಾಧ್ಯಮ ಶಿಕ್ಷಕರಿಂದಲೇ ಇಂಗ್ಲೀಷ್ ಬೋಧನೆ

0

* ಸಿಶೇ ಕಜೆಮಾರ್
ಪುತ್ತೂರು: ನಗರ ಪ್ರದೇಶದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ರೀತಿಯಲ್ಲೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಆಂಗ್ಲ ಮಾಧ್ಯಮ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು 2018-19ರಲ್ಲಿ ಸರಕಾರ ಆರಂಭಿಸಿದ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳಿಗೆ ಇನ್ನೂ ಕೂಡ ಆಂಗ್ಲ ಭಾಷಾ ಶಿಕ್ಷಕರ ನೇಮಕವಾಗಿಲ್ಲ. ಶಾಲೆಯಲ್ಲಿರುವ ಕನ್ನಡ ಮಾಧ್ಯಮ ಶಿಕ್ಷಕರೇ ಮಕ್ಕಳಿಗೆ ಆಂಗ್ಲ ಭಾಷಾ ಶಿಕ್ಷಣದ ಪಾಠ ಹೇಳಿಕೊಡಬೇಕಾಗಿದೆ. ವರ್ಷ 4 ಕಳೆದರೂ ಇನ್ನೂ ಕೂಡ ಆಂಗ್ಲ ಮಾಧ್ಯಮ ಶಿಕ್ಷಕರ ನೇಮಕಾತಿ ಮಾಡದೇ ಇರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಆಂಗ್ಲ ಭಾಷಾ ಶಿಕ್ಷಕರೇ ಇಲ್ಲದಿದ್ದರೆ ನಾವು ಆಂಗ್ಲ ಮಾಧ್ಯಮ ಶಾಲೆಗೆ ಕಳಿಸಿ ಏನು ಪ್ರಯೋಜನ ಎಂದು ಪೋಷಕರು ಪ್ರಶ್ನಿಸುವಂತಾಗಿದೆ.
ಗುಣಮಟ್ಟದ ಶಿಕ್ಷಣಕ್ಕಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು ಸರಕಾರ 2018-19ರಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ತಾಲೂಕಿಗೆ ಒಂದರಂತೆ ಮಾಡಿತ್ತು. ಪುತ್ತೂರು ತಾಲೂಕಿನಲ್ಲಿ ಕುಂಬ್ರ ಮತ್ತು ಕೆಯ್ಯೂರು ಎರಡು ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಿವೆ. ಎಲ್‌ಕೆಜಿಯಿಂದ 12ನೇ ತರಗತಿ ತನಕ ಒಂದೇ ಸೂರಿನಡಿ ಬರುವಂತೆ ನೋಡಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಉದ್ದೇಶವಾಗಿದೆ. ಶಾಲೆಗಳ ಗುಣಮಟ್ಟವನ್ನು ಸುಧಾರಿಸುವ ಮೂಲಕ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಈ ಶಾಲೆಗಳ ಉದ್ದೇಶವಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಶಾಲೆಗಳ ಅಭಿವೃದ್ಧಿಯೂ ಆಗಿಲ್ಲ.
ಪರಿಣಿತ ಆಂಗ್ಲ ಮಾಧ್ಯಮ ಶಿಕ್ಷಕರ ನೇಮಕವೇ ಆಗಿಲ್ಲ: ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ರೀತಿಯಲ್ಲೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡ ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಶಾಲೆಗಳಲ್ಲಿ ಆರಂಭಿಸಿದ ಆಂಗ್ಲ ಮಾಧ್ಯಮ ವಿಭಾಗಕ್ಕೆ ಆಂಗ್ಲ ಭಾಷೆಯಲ್ಲಿ ಪರಿಣತಿ ಹೊಂದಿದ ಆಂಗ್ಲ ಮಾಧ್ಯಮ ಶಿಕ್ಷಕರ ನೇಮಕಾತಿಯನ್ನು ಮಾಡದೇ ಸರಕಾರ ಮಕ್ಕಳ ಶೈಕ್ಷಣಿಕ ಬದುಕಿನ ಜೊತೆ ಚೆಲ್ಲಾಟ ನಡೆಸಿದೆ. ಆಂಗ್ಲ ಮಾಧ್ಯಮಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪರಿಣಿತ ಆಂಗ್ಲ ಮಾಧ್ಯಮ ಶಿಕ್ಷಕರಿಲ್ಲದೆ ಕನ್ನಡ ಮಾಧ್ಯಮದ ಶಿಕ್ಷಕರು ಅಥವಾ ಅತಿಥಿ ಶಿಕ್ಷಕರು ಪಾಠ ಮಾಡಬೇಕಾಗಿದೆ. ಪರಿಣಿತ ಶಿಕ್ಷಕರಿಲ್ಲದೆ ಮಕ್ಕಳು ಪೂರ್ಣ ಪ್ರಮಾಣದ ಆಂಗ್ಲ ಮಾಧ್ಯಮವಿಲ್ಲದೆ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಪ್ರಾಥಮಿಕ ಹಂತದಲ್ಲಿ ಸರಿಯಾದ ಶಿಕ್ಷಣ ದೊರೆಯದೇ ಇದ್ದರೆ ಮುಂದೆ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ.
ಶಿಕ್ಷಕರಿಗೆ ಹೊರೆ: ಆಂಗ್ಲ ಮಾಧ್ಯಮ ವಿಭಾಗ ಇರುವ ಶಾಲೆಗಳಲ್ಲಿ ಪರಿಣತಿ ಹೊಂದಿದ ಆಂಗ್ಲ ಮಾಧ್ಯಮ ಶಿಕ್ಷಕರ ನೇಮಕಾತಿ ಇಲ್ಲದೇ ಇರುವುದರಿಂದ ಕನ್ನಡ ಮಾಧ್ಯಮ ಶಿಕ್ಷಕರೇ ಆಂಗ್ಲ ಮಾಧ್ಯಮ ವಿಭಾಗವನ್ನು ಕೂಡ ನಿರ್ವಹಿಸಬೇಕಾದ ಅನಿವಾರ್‍ಯತೆ ಇದೆ. ಇದರಿಂದಾಗಿ ಶಿಕ್ಷಕರಿಗೆ ಕನ್ನಡ ಮಾಧ್ಯಮಕ್ಕೆ ಮತ್ತು ಆಂಗ್ಲ ಮಾಧ್ಯಮಕ್ಕೆ ಪಾಠ ಮಾಡಬೇಕಾದ ಪ್ರಸಂಗ ಇದೆ. ಅತ್ತ ಕನ್ನಡ ಮಾಧ್ಯಮಕ್ಕೆ ಮತ್ತು ಈ ಕಡೆ ಆಂಗ್ಲ ಮಾಧ್ಯಮಕ್ಕೂ ಪಾಠ ಮಾಡಬೇಕಾದ ಪರಿಸ್ಥಿತಿ ಇರುವುದರಿಂದ ಇದು ಶಿಕ್ಷಕರಿಗೆ ಹೊರೆಯಾಗಿ ಪರಿಣಮಿಸಿದೆ.

ಈ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗಗಳಿವೆ
ಕರ್ನಾಟಕ ಪಬ್ಲಿಕ್ ಸ್ಕೂಲ್ ಅಲ್ಲದೆ ಪುತ್ತೂರು ಮತ್ತು ಕಡಬ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದಲ್ಲಿ ಆಂಗ್ಲ ಮಾಧ್ಯಮ ವಿಭಾಗಗಳಿವೆ. 12 ಪ್ರಾಥಮಿಕ ಶಾಲೆಗಳಲ್ಲಿ ಹಾಗೂ ಕೆಪಿಎಸ್ ಸೇರಿ 7 ಪ್ರೌಢ ಶಾಲಾ ವಿಭಾಗಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗಗಳಿವೆ. ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಆಂಗ್ಲ ಮಾಧ್ಯಮ ವಿಭಾಗಗಳಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಯಾವುವು ಎಂದರೆ ಸರಕಾರಿ ಪ.ಪೂ ಕಾಲೇಜು ಕಡಬ, ಕಾಣಿಯೂರು, ಕೊಂಬೆಟ್ಟು, ಸವಣೂರು, ಉಪ್ಪಿನಂಗಡಿ, ಕೆಪಿಎಸ್ ಕೆಯ್ಯೂರು ಮತ್ತು ಕುಂಬ್ರ, ಸರಕಾರಿ ಪ್ರೌಢ ಶಾಲೆ ಬಜತ್ತೂರು, ಬೊಬ್ಬೆಕೇರಿ, ಕಾಣಿಯೂರು,ನೆಲ್ಯಾಡಿ, ಹಾರಾಡಿ, ಆಲಂಕಾರು, ಕಾವು, ಇರ್ದೆ, ಹಿರೆಬಂಡಾಡಿ ಮತ್ತು ಉಪ್ಪಿನಂಗಡಿ ಆಗಿದೆ.

ಶಾಸಕರಿಂದ ಶಿಕ್ಷಣ ಸಚಿವರಿಗೆ ಮನವಿ
ಈಗಾಗಲೇ ಶಾಸಕ ಅಶೋಕ್ ಕುಮಾರ್ ರೈಯವರು ಶಿಕ್ಷಣ ಸಚಿವರಿಗೆ ಮನವಿಯೊಂದನ್ನು ನೀಡಿದ್ದು ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಆಂಗ್ಲ ಮಾಧ್ಯಮ ವಿಭಾಗಕ್ಕೆ ಪರಿಣಿತ ಆಂಗ್ಲ ಭಾಷಾ ಶಿಕ್ಷಕರ ನೇಮಕಾತಿಯ ಜೊತೆಗೆ ಭಾಷಾವಾರು ಶಿಕ್ಷಕರ ಅಗತ್ಯವೂ ಇದ್ದು ಈ ಬಗ್ಗೆಯೂ ಶಾಸಕರು ಪ್ರಯತ್ನಿಸುತ್ತಿದ್ದಾರೆ. ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಮತ್ತು ಶಾಲೆಗಳ ಅಭಿವೃದ್ಧಿ ಬಗ್ಗೆಯೂ ಪ್ರಯತ್ನಿಸುತ್ತಿರುವುದಾಗಿ ಶಾಸಕರು ಈಗಾಗಲೇ ಹೇಳಿದ್ದಾರೆ.

ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪರಿಣಿತ ಆಂಗ್ಲ ಮಾಧ್ಯಮ ಭಾಷಾ ಶಿಕ್ಷಕರ ಅವಶ್ಯಕತೆ ಇದೆ. ಇದಲ್ಲದೆ ಭಾಷಾವಾರು ಶಿಕ್ಷಕರ ನೇಮಕವೂ ಅಗತ್ಯ ಇದೆ. ಈ ಬಗ್ಗೆ ಈಗಾಗಲೇ ಶಾಸಕ ಅಶೋಕ್ ಕುಮಾರ್ ರೈಯವರು ಶಿಕ್ಷಣ ಸಚಿವರಿಗೆ ಮನವಿಯನ್ನು ನೀಡಿದ್ದಾರೆ. ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಮತ್ತು ಶಾಲೆಗಳ ಅಭಿವೃದ್ಧಿ ಬಗ್ಗೆ ಶಾಸಕರು ಚಿಂತನೆ ಮಾಡುತ್ತಿದ್ದಾರೆ.

  • ಕುಂಬ್ರ ದುರ್ಗಾಪ್ರಸಾದ್ ರೈ,
    ನ್ಯಾಯವಾದಿ ಪುತ್ತೂರು

LEAVE A REPLY

Please enter your comment!
Please enter your name here