ಪುತ್ತೂರು: ಮರಗಳನ್ನು ಕಡಿಯುವುದು ಅಪರಾಧ ಹಾಗಂತ ಅಪಾಯಕಾರಿ ಮರಗಳನ್ನು ಕಡಿಯದೇ ಬೇರೆ ದಾರಿ ಇಲ್ಲ. ರಸ್ತೆ ಬದಿಗಳಲ್ಲಿರುವ ಮರಗಳಿಂದ ಬಹಳಷ್ಟು ಅಪಾಯ ಸಂಭವಿಸಿದ್ದು ಜೀವ ಹಾನಿ ಕೂಡ ಆಗಿದೆ. ಹಳೆಯ ಮರಗಳನ್ನು ಅದರಲ್ಲೂ ಅಪಾಯಕಾರಿಯಾಗಿರುವ ಮರಗಳನ್ನು ರಸ್ತೆ ಬದಿಗಳಿಂದ ತೆರವುಗೊಳಿಸದೇ ಬೇರೆ ಉಪಾಯವಿಲ್ಲ. ಹೀಗೊಂದು ಅಪಾಯಕಾರಿ ಮರ ಪುತ್ತೂರು-ಕುಂಬ್ರ-ಬೆಳ್ಳಾರೆ ರಸ್ತೆಯಲ್ಲಿ ಕುಂಬ್ರದಿಂದ 1.5 ಕಿ.ಮೀ ದೂರದ ಸಾರೆಪುಣಿ ಸಮೀಪದ ಕೊಲ್ಲಾಜೆ ಎಂಬಲ್ಲಿದೆ. ಬಹಳ ಹಳೆಯದಾದ ಮರ ಇದಾಗಿದ್ದು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ.
ಜೀವ ಹಾನಿ ಸಂಭವಿಸುವ ಸಾಧ್ಯತೆ
ಬುಡ ಸಮೇತ ಮರ ರಸ್ತೆಗೆ ವಾಲಿ ನಿಂತಿದ್ದು ಮರದಡಿಯಿಂದಲೇ ವಿದ್ಯುತ್ ತಂತಿ ಹಾದು ಹೋಗಿದೆ. ಈ ಮರ ಎಲ್ಲಾದರೂ ಬಿದ್ದರೆ ಜೀವ ಹಾನಿಯಾಗುತ್ತದೆ ಎಂದು ಹೇಳುವುದು ಯಾಕೆಂದರೆ ಮರದ ಪಕ್ಕದಲ್ಲೇ ಬಸ್ಸು ತಂಗುದಾಣವಿದೆ. ಪ್ರತಿನಿತ್ಯ ಈ ತಂಗುದಾಣ ಹಾಗೂ ಮರದಡಿಯಲ್ಲಿ ಸಾರ್ವಜನಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ನಿಂತಿರುತ್ತಾರೆ. ಇದಲ್ಲದೆ ದ್ವಿಚಕ್ರ ವಾಹನ ಸವಾರರು ಸೇರಿದಂತೆ ವಾಹನ ಸವಾರರು ತಮ್ಮ ವಾಹನಗಳನ್ನು ಮರದಡಿಯಲ್ಲಿ ನಿಲ್ಲಿಸಿ ವಿಶ್ರಾಂತಿ ಪಡೆದುಕೊಳ್ಳುವುದು ಕೂಡ ಇದೆ. ಎಲ್ಲಾದರೂ ಮರ ಬಿದ್ದರೆ ಜೀವ ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಿದೆ.
ಗ್ರಾಪಂ ವರದಿ ಕಳಿಸಿತ್ತು
ಈ ಮರದ ವ್ಯಾಪ್ತಿ ಬರುವುದು ಅರಿಯಡ್ಕ ಗ್ರಾಮ ಪಂಚಾಯತ್‌ಗೆ ಆದರೆ ಇದು ರಾಜ್ಯ ರಸ್ತೆಯ ಬದಿಯಲ್ಲಿ ಬರುವುದರಿಂದ ಕೆದಂಬಾಡಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಮರವನ್ನು ತೆರವುಗೊಳಿಸಬೇಕು ಅಲ್ಲವೆ ಮರದ ಕೊಂಬೆಗಳನ್ನು ಕಟಾವು ಮಾಡುವಂತೆ ಅರಣ್ಯ ಇಲಾಖೆಗೆ ಹಾಗೂ ಪಿಡಬ್ಲ್ಯೂಡಿ ಇಲಾಖೆಗೆ ಮನವಿ ಮಾಡಿತ್ತು. ಕಳೆದ ಒಂದು ವರ್ಷದಿಂದ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡುತ್ತಲೇ ಬಂದಿದ್ದರೂ ಇದುವರೇಗೆ ಯಾವುದೇ ಪ್ರಯೋಜವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಮರ ತೆರವುಗೊಳಿಸುವುದು ಅಥವಾ ಗೆಲ್ಲುಗಳನ್ನು ಕಟಾವು ಮಾಡುವುದು ಎರಡಲ್ಲಿ ಒಂದನ್ನಾದರೂ ಮಾಡಲೇಬೇಕಾಗಿದೆ ಎನ್ನುವುದು ಸಾರ್ವಜನಿಕರು ಆಗ್ರಹವಾಗಿದೆ.
ಈ ಮರ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ. ಮರವನ್ನು ಅಥವಾ ಮರದ ಗೆಲ್ಲುಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ, ಪಿಡಬ್ಲ್ಯೂಡಿ ಇಲಾಖೆಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಮರ ರಸ್ತೆಗೆ ವಾಲಿ ನಿಂತಿದ್ದು ಮರದಡಿಯಲ್ಲೇ ವಿದ್ಯುತ್ ತಂತಿಯೂ ಇದೆ. ಜೀವ ಹಾನಿ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.
——————-ರತನ್ ರೈ ಕುಂಬ್ರ, ಅಧ್ಯಕ್ಷರು ಕೆದಂಬಾಡಿ ಗ್ರಾಪಂ