ಬನ್ನೂರು: ಲಾರಿಯಿಂದ ಲಕ್ಷಾಂತರ ರೂ.ನಗದು ಕಳವು, ಕಂಡಕ್ಟರ್ ನಾಪತ್ತೆ – ದೂರು

0

ಪುತ್ತೂರು: ಅಡಿಕೆ ಸಾಗಾಟದ ಲಾರಿಯೊಂದರಿಂದ ಲಕ್ಷಾಂತರ ರೂಪಾಯಿ ನಗದು ಕಳವಾಗಿರುವ ಮತ್ತು ಲಾರಿಯ ಕಂಡಕ್ಟರ್ ನಾಪತ್ತೆಯಾಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೂಣೆಯಲ್ಲಿರುವ ಅಝರ್ ಟ್ರೇಡಿಂಗ್ ಮತ್ತು ಪುತ್ತೂರಿನಲ್ಲಿರುವ ಅಝರ್ ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಮಾಲಕ ಬನ್ನೂರು ನಿವಾಸಿ ಅಝರ್ ಕಂಪೌಂಡ್‌ನ ಕಲಂದರ್ ಇಬ್ರಾಹಿಂ ನೌಷದ್ ಎಂಬವರ ಲಕ್ಷಾಂತರ ರೂಪಾಯಿ ನಗದು ಕಳವಾಗಿದೆ. ಅವರು ಲಾರಿಯ ಮೂಲಕ ಪುತ್ತೂರಿನಿಂದ ಪೂಣೆಗೆ ಅಡಿಕೆ ಸಾಗಾಟ ಮಾಡಿಸಿ ಜು.18ರಂದು ಲಾರಿ ಹಿಂದಿರುಗುವಾಗ ಪೂಣೆಯ ಅಝರ್ ಟ್ರೇಡಿಂಗ್ ಸಂಸ್ಥೆಯ ಸಿಬ್ಬಂದಿ ಸಫ್ರಝ್ ಅವರು ಲಾರಿ ಚಾಲಕ ಅಬ್ದುಲ್ ರವೂಫ್ ಕಬಕ ಮತ್ತು ಕಂಡಕ್ಟರ್ ಶಿವಕುಮಾರ್ ಯಾನೆ ಶಿವು ಅವರಲ್ಲಿ ಕಲಂದರ್ ಇಬ್ರಾಹಿಂ ನೌಷದ್ ಅವರಿಗೆ ನೀಡಲೆಂದು ರೂ.10ಲಕ್ಷ ನಗದು ನೀಡಿದ್ದರು. ಬಳಿಕ ಲಾರಿ ಅಲ್ಲಿಂದ ಹೊರಟು ತೊಕ್ಕೊಟ್ಟುವಿನಲ್ಲಿ ಚಾಲಕ ಅಬ್ದುಲ್ ರವೂಫ್ ಅವರು ಲಾರಿ ನಿಲ್ಲಿಸಿ ಮಾರ್ಕೆಟ್‌ಗೆ ಹೋಗಿ ಹಿಂದಿರುಗುವಾಗ ಕಂಡಕ್ಟರ್ ಶಿವಕುಮಾರ್ ಯಾನೆ ಶಿವು ಅವರು ನಾಪತ್ತೆಯಾಗಿದ್ದರು. ಲಾರಿಯಲ್ಲಿಟ್ಟಿದ್ದ ಹಣದ ಕಟ್ಟು ಕೂಡಾ ನಾಪತ್ತೆಯಾಗಿತ್ತು. ಘಟನೆ ಕುರಿತು ಲಾರಿ ಚಾಲಕ ಮಾಲಕರಿಗೆ ತಿಳಿಸಿದ್ದು, ಅದರಂತೆ ಕಲಂದರ್ ಇಬ್ರಾಹಿಂ ಅವರು ಕಂಡಕ್ಟರ್ ಶಿವಕುಮಾರ್ ಯಾನೆ ಶಿವು ಹಣವನ್ನು ಲಾರಿಯಿಂದ ಕಳವು ಮಾಡಿಕೊಂಡು ಪರಾರಿಯಾಗಿರುವ ಬಗ್ಗೆ ಸಂಶಯವಿರುತ್ತದೆ ಎಂದು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here