ಮಂಗಳೂರು:ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಫಲಾನುಭವಿಗಳೆಂದು ನೋಂದಾಯಿತರಾಗಿ ವಿವಿಧ ಧನಸಹಾಯಗಳನ್ನು ಪಡೆಯುತ್ತಿರುವ ಅನರ್ಹ ಕಾರ್ಮಿಕರು ಮತ್ತು ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸ ನಿರ್ವಹಿಸದೇ ಇರುವ ಕಾರ್ಮಿಕರ ನೋಂದಣಿಯನ್ನು ರದ್ದುಪಡಿಸಲು ಕಾರ್ಮಿಕ ಇಲಾಖೆಯಿಂದ ಬೋಗಸ್ ಕಾರ್ಡು ರದ್ದತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಗುರುತಿನ ಚೀಟಿ ಪಡೆದಿರುವ ಅನರ್ಹ ಕಾರ್ಮಿಕರ ನೋಂದಣಿಯನ್ನು ರದ್ದುಪಡಿಸಿ, ಮಂಡಳಿಯ ಯಾವುದೇ ಸೌಲಭ್ಯಗಳನ್ನು ನೀಡದಂತೆ ತಡೆಹಿಡಿಯಲು ಕ್ರಮಕೈಗೊಳ್ಳಲಾಗುತ್ತಿದೆ.ಅನರ್ಹ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಲ್ಲಿ ಅಥವಾ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸ ಹೊರತುಪಡಿಸಿ ಅನ್ಯವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಫಲಾನುಭವಿಗಳು ತಕ್ಷಣವೇ ಕಟ್ಟಡ ಕಾರ್ಮಿಕರ ಗುರುತಿನ ಚೀಟಿಯನ್ನು ಸ್ವಯಂ ಇಚ್ಛೆಯಿಂದ ಸಂಬಂಧಪಟ್ಟ ಹಿರಿಯ ಕಾರ್ಮಿಕ ನಿರೀಕ್ಷಕರು/ಕಾರ್ಮಿಕ ನಿರೀಕ್ಷಕರ ಕಚೇರಿಗೆ ಹಿಂದಿರುಗಿಸಿ ಸದಸ್ಯತ್ವ ರದ್ದುಗೊಳಿಸುವಂತೆ ಸೂಚಿಸಲಾಗಿದೆ.
ತಪ್ಪಿದಲ್ಲಿ ಇಲಾಖಾ ಅಧಿಕಾರಿಗಳು, ನಿರೀಕ್ಷಕರು ಖುದ್ದಾಗಿ ಪರಿಶೀಲಿಸಿ, ಅನರ್ಹ ಕಾರ್ಮಿಕರು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ದ.ಕ.ಉಪವಿಭಾಗ-1ರ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.