ಜು.31: ಪುತ್ತೂರಿನಲ್ಲಿ ‘ಮಾನವ ಕಳ್ಳ ಸಾಗಣಿಕೆ ತಡೆ ದಿನಾಚರಣೆ

0

ಪ್ರತಿ ಇಲಾಖೆ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಅರ್ಥಪೂರ್ಣ ಚಟುವಟಿಕೆಗಾಗಿ ಪೂರ್ವಭಾವಿ ಸಭೆ


ಪುತ್ತೂರು: ಮಾನವ ಕಳ್ಳ ಸಾಗಾಣಿಕೆ ನಿಯಂತ್ರಣಕ್ಕಾಗಿ ಹಾಗೂ ನಿಷೇಧಕ್ಕಾಗಿ ಮಾನವ ಕಳ್ಳ ಸಾಗಾಣಿಕೆ ದಿನಾಚರಣೆ ಆಚರಣೆಗೆ ತರಲಾಗಿದೆ. ಈ ಮೂಲಕ ಪ್ರತಿಯೊಬ್ಬರಲ್ಲಿಯೂ ಮಾನವ ಕಳ್ಳ ಸಾಗಾಣಿಕೆ ಕುರಿತು ಅರಿವು ಮೂಡಿಸುವ ಮೂಲಕ ಸಂಪೂರ್ಣ ನಿಯಂತ್ರಣ ಮಾಡುವ ಕುರಿತು ಜು.31ರಂದು ಪ್ರತಿ ಸರಕಾರಿ ಇಲಾಖೆ, ಸಾರ್ವಜನಿಕ ಸ್ಥಳಗಳಲ್ಲಿ ಅರ್ಥಪೂರ್ಣ ಚಟುವಟಿಕೆ ಮಾಡುವ ಕುರಿತು ಜು.22ರಂದು ಪುತ್ತೂರು ನ್ಯಾಯಾಲಯದಲ್ಲಿ ಇಲಾಖಾ ಮಟ್ಟದ ಪೂರ್ವ ಭಾವಿ ಸಭೆ ನಡೆಯಿತು.


5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಸರಿತಾ ಮತ್ತು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಮತ್ತು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಆರ್.ಪಿ.ಗೌಡ ಅವರ ಜಂಟಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಧಾನ ವ್ಯವಹಾರಿಕ ನ್ಯಾಯಾಧೀಶೆ, ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಹಾಗು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಅರ್ಚನಾ ಕೆ ಉಣ್ಣಿತಾನ್ 2ನೇ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ಯೋಗೇಂದ್ರ ಶೆಟ್ಟಿ, ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ಶಿವಣ್ಣ, ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರ ಉಪಸ್ಥಿತಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.


ಇಲಾಖೆಗಳಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಿರ್ವಹಿಸಬೇಕು:
ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಮತ್ತು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಆರ್.ಪಿ.ಗೌಡ ಅವರು ಮಾತನಾಡಿ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆಯ ಪಿಡುಗನ್ನು ಸ್ಥಳೀಯ ಮಟ್ಟದಲ್ಲಿ ತಡೆಗಟ್ಟುವುದು, ಮತ್ತು ಈ ಪಿಡುಗಿನ ಕುರಿತು ವ್ಯಾಪಕ ಪ್ರಚಾರ ಹಾಗು ಅರಿವು ಮೂಡಿಸುವುದು, ಸಮುದಾಯದ ಬೆಂಬಲ ಪಡೆಯುವುದು ಮತ್ತು ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸುವುದು ಸರಕಾರದ ಕರ್ತವ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಜು.31ರಂದು ಎಲ್ಲಾ ಸರಕಾರಿ ಕಚೇರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅರ್ಥಪೂರ್ಣವಾದ ಚಟುವಟಿಕೆಗಳನ್ನು ತಾಲೂಕು ಮತ್ತು ಗ್ರಾಮ ಮಟ್ಟದ್ಲಿ ಆಯೋಜಿಸಲು ಸುತ್ತೋಲೆ ಬಂದಿರುವಂತೆ ಎಲ್ಲಾ ಇಲಾಖೆಗಳಲ್ಲಿ ಇದನ್ನು ಯಶಸ್ವಿಯಾಗಿ ಕೈಗೊಳ್ಳುವಂತೆ ಹೇಳಿದರು.

ಶಾಲೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಹಿತಿ ಕಾರ್ಯಗಾರ ನಡೆಸಬೇಕು. ವಿದ್ಯಾರ್ಥಿಗಳಿಗೆ ಈ ಕುರಿತು ಅರಿವು ಮೂಡಿಸಲು ಅವರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಮ್ಮ ವಕೀಲರ ಸಂಘದಲ್ಲಿ ಅನುಭವಿ ವಕೀಲರಿದ್ದಾರೆ. ಹ್ಯೂಮನ್ ರೈಟ್ ಅನ್ನು ಕನ್ನಡದಲ್ಲಿ ಅರ್ಥ ಆಗುವ ರೀತಿಯಲ್ಲಿ ಮಾಡಬೇಕು. ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕುರಿತು ವಿವಿಧ ಇಲಾಖೆಗಳು ಸಹಭಾಗಿತ್ವದಲ್ಲಿ, ಸಮನ್ವಯತೆಯಲ್ಲಿ ಕಾರ್ಯನಿರ್ವಹಿಸುವ ಅವಶ್ಯಕತೆಯಿದೆ. ಸಮುದಾಯದಲ್ಲಿ ಮತ್ತು ನಿಮ್ಮ ವ್ಯಾಪ್ತಿಯಲ್ಲಿ ಮಹಿಳೆಯರ, ಮಕ್ಕಳ ಹಕ್ಕುಗಳು, ಕಾನೂನುಗಳ ಕುರಿತು ಜಾಗೃತಿ ಮೂಡಿಸಿ ಎಂದರು.

ಸಭೆಯಲ್ಲಿ ತಹಸೀಲ್ದಾರ್ ಶಿವಶಂಕರ, ತಾಲೂಕು ಆರೋಗ್ಯಾಧಿಕಾರಿ ಡಾ ದೀಪಕ್ ರೈ, ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಜ್ಯೋತಿ, ಗ್ರಾಮಾಂತರ ಪೊಲೀಸ್ ವೃತ್ತನಿರೀಕ್ಷಕ ರವಿ ಬಿ.ಎಸ್, ಮಹಿಳಾ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಎಮ್ ಎನ್ ರಾವ್, ಮಹಿಳಾ ಎಸ್ ಐ ಭವಾನಿ, ನಗರ ಪೊಲೀಸ್ ಠಾಣೆ ಎಸ್ ಐ ಶ್ರೀಕಾಂತ್ ರಾಥೋಡ್, ಸಂಪ್ಯ ಪೊಲೀಸ್ ಠಾಣೆಯ ಎಸ್ ಐ ಧನಂಜಯ, ಉಪ್ಪಿನಂಗಡಿ ಪೊಲೀಸ್ ಠಾಣೆಯ ಎಸ್ ಐ ರಾಜೇಶ್ ಕೆ ವಿ, ಸಂಚಾರ ಪೊಲೀಸ್ ಠಾಣೆ ಎ.ಎಸ್ ಐ ಚಿದಾನಂದ ರೈ, ಶಿಶಿ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಜಲಜಾಕ್ಷಿ, ಸರಕಾರಿ ಸಹಾಯಕ ಅಭಿಯೋಜಕಿ ಕವಿತಾ, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣ ನಾಯ್ಕ, ಅನಿಕೇತನ ಟ್ರಸ್ಟ್ ನ ಕೃಷ್ಣಪ್ರಸಾದ್ ನಟ್ಸಾರ್, ವಕೀಲರ ಸಂಘದ ಜೊತೆಕಾರ್ಯರ್ಶಿ ಸೀಮಾನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಹರಿಪ್ರಸಾದ್, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಸಹಿತ ಹಲವಾರು ಮಂದಿ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here