ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭಾರತಿ ಜಿಲ್ಲಾ ಶೈಕ್ಷಣಿಕ ಸಹಮಿಲನ ಉದ್ಘಾಟನೆ

0

ಭಗವದ್ಗೀತೆ ಭಾರತ ದೇಶದ ಮಣ್ಣಿನ ಸತ್ವ ಮತ್ತು ತತ್ವ : ಡಾ. ಪ್ರಭಾಕರ್ ಭಟ್

ಪುತ್ತೂರು, ಜು.22: ಶಾಲೆಯೆಂದರೆ ಅದು ಕಟ್ಟಡವಲ್ಲ, ಆ ಕಟ್ಟಡಕ್ಕೆ ಜೀವಧಾರೆ ತರುವವರು ಶಿಕ್ಷಕರು. ಶಿಕ್ಷಕರೆಂದರೆ ಶಾಲೆಯ ಆತ್ಮ. ಆ ಆತ್ಮದಿಂದ ಮಾತ್ರ ಶಾಲೆಯನ್ನು ಉನ್ನತಿಗೆ ತೆಗೆದುಕೊಂಡು ಹೋಗಲು ಸಾಧ್ಯ. ಶಿಕ್ಷಕರು ಪಾಠದ ಜೊತೆಗೆ ಪಠ್ಯೇತರ ವಿಷಯಗಳನ್ನು ಮಂಡಿಸುವುದರಿಂದ ವಿದ್ಯಾರ್ಥಿಗಳ ವಿಕಾಸದ ಬೆಳವಣಿಗೆಗೆ ಕಾರಣವಾಗುವುದು ಎಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಮುಳಿಯ ಜುವೆಲ್ಲರ‍್ಸ್ ಮತ್ತು ಸಮೂಹ ಸಂಸ್ಥೆಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು.


ಸಂಸ್ಕೃತವೆಂಬುವುದು ಭಾರತೀಯ ಕೀಲಿ ಕೈ. ಶಿಕ್ಷಣದಲ್ಲಿ ಭಾರತೀಯತೆ ಬರಬೇಕು. ಸಮಗ್ರ ವ್ಯಕ್ತಿಯ ವಿಕಾಸವಾಗಬೇಕಾದರೆ ಆತ್ಮಿಕ, ಆಧ್ಯಾತ್ಮಿಕ ಶಿಕ್ಷಣವನ್ನು ವಿದ್ಯಾಭಾರತಿ ನೀಡುತ್ತದೆ. ವಿದ್ಯಾಭಾರತಿಯಿಂದ ಸಂಸ್ಕೃತವನ್ನು ಉಳಿಸುವ ಕಾರ್ಯವನ್ನು ಕೈಗೊಳ್ಳುತ್ತಿದೆ. ಆದ್ದರಿಂದ ವಿದ್ಯಾಭಾರತಿ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಮೂಲಕ ಸಂಸ್ಕೃತದ ಜ್ಞಾನ ಭಂಡಾರ ಬೆಳೆಯಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ಸಾಮಾನ್ಯ ವಿದ್ಯಾರ್ಥಿ ಕೂಡ ತನ್ನ ಹೊಟ್ಟೆಪಾಡನ್ನು ನೋಡುತ್ತಾನೆ. ಈಗೀಗ ಹಣದ ಆಧಾರದ ಮೇಲೆಯೇ ಶಿಕ್ಷಣವು ನಡೆಯುತ್ತದೆ. ಆದರೆ ವಿದ್ಯಾಭಾರತಿ ಇದೆಲ್ಲಕ್ಕಿಂತಲೂ ವಿಭಿನ್ನವಾಗಿದೆ. ಭಗವದ್ಗೀತೆ ಈ ದೇಶದ ಮಣ್ಣಿನ ಸತ್ವ ಮತ್ತು ತತ್ವ, ಶಿಕ್ಷಕರು ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಮಹತ್ವವನ್ನು ತಿಳಿಸಿಕೊಡುವುದು ಉತ್ತಮ. ನಮ್ಮ ಮಾತಿನಂತೆ ನಾವು ನಡೆದುಕೊಳ್ಳಬೇಕು. ಮಾತಾಜಿ ಅನ್ನುವ ಶಬ್ಧ ತಾಯಿಗೆ ಹತ್ತಿರವಾಗುವಂತದ್ದು. ಹಾಗಾಗಿ ಮಾತಾಜಿ ಅನ್ನುವಂತದ್ದು ಮಕ್ಕಳ ಮಾತಿನಲ್ಲಿ ರಾರಾಜಿಸುತ್ತಿರುತ್ತದೆ. ಭಾರತದ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸಂಬಂಧ ತಾಯಿ ಮಕ್ಕಳ ಭಾವನೆಯನ್ನು ಸೃಷ್ಟಿಮಾಡಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣವಾಗಬೇಕು. ನಾವು ಹಳೆಯ ವಿಷಯಗಳನ್ನು ಅರಿತುಕೊಳ್ಳುವುದರೊಂದಿಗೆ ಹೊಸ ಹೊಸ ಪುಸ್ತಕಗಳನ್ನು ಓದಿ ಜ್ಞಾನವನ್ನು ಬೆಳೆಸಿಕೊಂಡು ಚಿಂತನೆಗಳು ಎತ್ತರಕ್ಕೇರಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ವಿದ್ಯಾಭಾರತಿ ಮಟ್ಟದಲ್ಲಿ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ವಿದ್ಯಾಭಾರತಿ ಪ್ರಾಂತ ಕಾರ‍್ಯದರ್ಶಿ ಹಾಗೂ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಸಂಚಾಲಕ ವಸಂತ ಮಾಧವ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾಧಕ್ಷ ಲೋಕಯ್ಯ ಡಿ ಸ್ವಾಗತಿಸಿ, ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಕಾರ‍್ಯದರ್ಶಿ ರಮೇಶ್ ಕೆ ವಂದಿಸಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಭಾಗ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.

ವಿಶೇಷ ಉಪನ್ಯಾಸ ಕಾರ್ಯಕ್ರಮ:
ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಶೈಕ್ಷಣಿಕ ಸಹಮಿಲನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಭಾರತೀಯ ಜ್ಞಾನ ಪರಂಪರೆ ಕುರಿತು ಮಾತನಾಡಿ, ಭಾರತದ ವಿದ್ಯಾರ್ಥಿಗಳಿಗೆ ಸಮಾನತೆಯಾದ ಶಿಕ್ಷಣ ಸಿಗಬೇಕು. ಭಾರತಕ್ಕೂ ವಿದೇಶಕ್ಕೂ ಜ್ಞಾನ ಪರಂಪರೆ ಇದೆಯೇ ಎಂಬುವುದು ಪ್ರಶ್ನೆ . ಆದರೆ ನಮ್ಮ ಭಾರತದಲ್ಲಿ ಉತ್ತಮ ಶಿಕ್ಷಣ ಪರಂಪರೆ ಇದೆ ಎನ್ನುವುದು ಹೆಮ್ಮೆಯ ವಿಷಯ. ಜ್ಞಾನದಲ್ಲಿ ರಮಿಸುವ ದೇಶ ಎಂದರೆ ಭಾರತ. ಉತ್ತಮ ಜ್ಞಾನ ಹಾಗೂ ಮಾಹಿತಿ ಸಿಗುವುದು ಭಾರತದಲ್ಲಿ ಮಾತ್ರ ಎಂದು ಹೇಳಿದರು.

LEAVE A REPLY

Please enter your comment!
Please enter your name here