ಶೀಘ್ರವೇ ನ್ಯಾಯ ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ
ಉಪ್ಪಿನಂಗಡಿ: ತನ್ನ ಮನೆಗಿರುವ ಏಕೈಕ ದಾರಿಯನ್ನು ನೆರೆ ಮನೆಯಾತ ಅತಿಕ್ರಮಿಸಿ ವಿಧವೆ ಮಹಿಳೆ ಮತ್ತಾಕೆಯ ಇಬ್ಬರು ಪುಟ್ಟ ಮಕ್ಕಳನ್ನು ಸತಾಯಿಸುತ್ತಿರುವ ಪ್ರಕರಣದಲ್ಲಿ ಅಧಿಕಾರಿಗಳು ತಕ್ಷಣ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನಿರ್ದೇಶನ ನೀಡಿದ ಘಟನೆ ಉಪ್ಪಿನಂಗಡಿ ಗ್ರಾಮದ ಪದಾಳ ಎಂಬಲ್ಲಿ ಜು.23ರಂದು ನಡೆದಿದೆ.
ಪ್ರಕರಣ ಬೆಳಕಿಗೆ ಬಂದ ಬಗೆ:
ಗ್ರಾಮದ ಪದಾಳದಲ್ಲಿ ಸರ್ವೆ ನಂಬರ್ 85/4ಪಿ1ರಲ್ಲಿ ಹೊನ್ನಮ್ಮ ಅವರಿಗೆ 94ಸಿಯಡಿ ಜಾಗ ಮಂಜೂರಾತಿಯಾಗಿದ್ದು, ಅವರು ಮೃತಪಟ್ಟ ನಂತರ ಅವರ ಮಗ ಚಂದ್ರಶೇಖರ ತನ್ನ ಪತ್ನಿ ರತ್ನಾವತಿ ಮತ್ತಿಬ್ಬರು ಪುಟ್ಟ ಮಕ್ಕಳೊಂದಿಗೆ ಈ ಮನೆಯಲ್ಲಿ ವಾಸ್ತವ್ಯವಿದ್ದರು. ಚಂದ್ರಶೇಖರ ಅವರು ಕೂಡಾ ಮೃತಪಟ್ಟ ನಂತರ ಚಂದ್ರಶೇಖರ ಅವರ ಅಕ್ಕ ಅವರು ಈ ಮನೆಗೆ ಬಂದಿದ್ದು, ಸಣ್ಣ ಮಕ್ಕಳೊಂದಿಗೆ ಇವರು ಈ ಮನೆಯಲ್ಲಿ ಸಂಸಾರ ನಡೆಸುತ್ತಿದ್ದರು. ಇವರ ಮನೆಗೆ ಹೋಗಲು ಪುಳಿತ್ತಡಿ- ಕಜೆಕ್ಕಾರು ಗ್ರಾಮ ಪಂಚಾಯತ್ ರಸ್ತೆಯಿಂದ ಸಂಪರ್ಕ ರಸ್ತೆ ಇದ್ದು, ಸದ್ರಿ ರಸ್ತೆಯನ್ನು ಸಮೀಪದ ನಿವಾಸಿ ತನ್ನ ಹಕ್ಕಿನ ಭೂಮಿಯೊಳಗೆ ಬರುತ್ತಿದೆ ಎಂದು ವಾದಿಸಿ ಬೇಲಿ ಹಾಕಿ ಸಂಚಾರಕ್ಕೆ ತಡೆಯೊಡ್ಡಿದ್ದರು. ಈ ಬಗ್ಗೆ 26.04.2021 ಮತ್ತು 2.03.2022ರಂದು ಪುತ್ತೂರಿನ ಸಹಾಯಕ ಆಯುಕ್ತರ ಕಚೇರಿಗೆ ಲಿಖಿತ ಮನವಿ ಸ್ಪಂದಿಸಿದ್ದರೂ, ಅದಕ್ಕೆ ಸ್ಪಂದನೆಯೇ ಸಿಕ್ಕಿರಲಿಲ್ಲ. ಜು.23ರಂದು ಇದೇ ಮನೆಯಲ್ಲಿ ವಾಸ್ತವ್ಯವಿದ್ದ ಚಂದ್ರಶೇಖರ ಅವರ ಅಕ್ಕನ ಗಂಡ ಮೃತಪಟ್ಟಿದ್ದು, ಅವರ ಮೃತ ಶರೀರವನ್ನು ಮನೆಗೆ ತರಲು ದಾರಿಯಿಲ್ಲದೆ, ಈ ಮೃತದೇಹವನ್ನು ಮುಖ್ಯರಸ್ತೆಯಲ್ಲಿಯೇ ಇಟ್ಟು ಪ್ರತಿಭಟಿಸಲು ಆ ಕುಟುಂಬ ನಿರ್ಧರಿಸಿತ್ತು. ಈ ಬಗ್ಗೆ ವಿಷಯ ತಿಳಿದ ಶಾಸಕ ಅಶೋಕ್ ಕುಮಾರ್ ರೈಯವರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ಈ ಕುಟುಂಬದ ಸಮಸ್ಯೆಯನ್ನು ಆಲಿಸಿದರು. ಈ ಬಗ್ಗೆ ಅವರು ಅಧಿಕಾರಿಗಳಲ್ಲಿ ವಿಚಾರಿಸಿದಾಗ ದಾರಿಯನ್ನು ಕಬಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ತಕರಾರು ಎಸಿ ಕೋರ್ಟ್‌ನಲ್ಲಿ ಇರುವ ವಿಷಯ ಬೆಳಕಿಗೆ ಬಂತು.
ಈ ಬಗ್ಗೆ ಶಾಸಕರು ಸಹಾಯಕ ಕಮಿಷನರ್ ರವರನ್ನು ಸಂಪರ್ಕಿಸಿ ಅಸಹಾಯಕ ಕುಟುಂಬವೊಂದರ ಬದುಕಿನ ಪ್ರಶ್ನೆ ಇದಾಗಿರುವುದರಿಂದ ಪ್ರಕರಣವನ್ನು ತ್ವರಿತ ವಿಚಾರಣೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಸೂಚಿಸಿದರು.
ಈ ಸಂದರ್ಭ ಸ್ಥಳದಲ್ಲಿದ್ದ ಪಂಚಾಯತ್ ಪಿಡಿಒ ಅವರು ಕೂಡಾ ಪ್ರತಿಕ್ರಿಯಿಸಿ ಇಲ್ಲಿದ್ದ ಕಾಲು ದಾರಿಗೆ ಈ ಮೊದಲು ಗ್ರಾ.ಪಂ. ವತಿಯಿಂದ ಬೀದಿ ದೀಪವನ್ನು ಕೂಡಾ ಹಾಕಲಾಗಿತ್ತು. ಈಗ ಅದಕ್ಕೂ ಬೇಲಿ ಹಾಕಲಾಗಿ ಅತಿಕ್ರಮಿಸಲಾಗಿದೆ ಎಂದರು.
ಅಂತಿಮವಾಗಿ ಶವವನ್ನು ಮನೆಗೆ ಕೊಂಡೊಯ್ಯಲಾಗದೆ ಆಸ್ಪತ್ರೆಯಿಂದ ನೇರವಾಗಿ ಸ್ಮಶಾನಕ್ಕೆ ಕೊಂಡೊಯ್ದು ಶವ ಸಂಸ್ಕಾರ ನಡೆಸಬೇಕಾದ ಅನಿವಾರ್ಯತೆ ರತ್ನಾವತಿ ಕುಟುಂಬದ್ದಾಗಿತ್ತು.
ನೆರೆಮನೆಯಾತ ಭೂಮಿಯನ್ನು ಖರೀದಿಸುವುದಕ್ಕಿಂತಲೂ ಮುನ್ನ ಆ ಪ್ರದೇಶದಲ್ಲಿ ಇದ್ದ ರಸ್ತೆಯನ್ನು ಮಾತ್ರವಲ್ಲದೆ ಪಂಚಾಯತ್ ಆಡಳಿತ ಸದ್ರಿ ರಸ್ತೆಗೆ ಬೀದಿ ದೀಪ ಅಳವಡಿಸಿದ ದಾಖಲೆಯೂ ಇದ್ದರೂ ರಸ್ತೆಯನ್ನು ಊರ್ಜಿತದಲ್ಲಿರಿಸಲು ಇಲಾಖಾಧಿಕಾರಿಗಳಿಗೆ ಹಾಗೂ ಆಡಳಿತಗಾರರಿಗೆ ಅಸಾಧ್ಯವಾಗಿರುವುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.
ಈ ಸಂದರ್ಭ ಶಾಸಕರೊಂದಿಗೆ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜರಾಮ್ ಕೆ.ಬಿ., ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ತೌಸೀಫ್ ಯು.ಟಿ., ಧನಂಜಯ ನಟ್ಟಿಬೈಲ್, ಅಬ್ದುರ್ರಹ್ಮಾನ್ ಕೆ., ಕಾಂಗ್ರೆಸ್ ಮುಖಂಡರಾದ ಆದಂ ಕೊಪ್ಪಳ, ವೆಂಕಪ್ಪ ಪೂಜಾರಿ ಮರುವೇಲು, ಶಬೀರ್ ಕೆಂಪಿ, ಫಯಾಝ್ ಯು.ಟಿ. ಸ್ಥಳೀಯರಾದ ಸಿರಾಜ್ ಕಾರ್ಗಿಲ್ ಮತ್ತಿತರರಿದ್ದರು.