ಪುತ್ತೂರಿನಲ್ಲಿ ಶಾಸಕರು ಬದಲಾದಂತೆ ಕಚೇರಿಯೂ ಬದಲಾಗುತ್ತಿದೆ! – ಪುಡಾ ಕಚೇರಿ ಇರುವಲ್ಲಿ ಶಾಸಕರ ಕಚೇರಿ ಆರಂಭಕ್ಕೆ ಅಶೋಕ್‌ಕುಮಾರ್ ರೈ ಸಿದ್ಧತೆ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಉರಿಮಜಲು ರಾಮ್ ಭಟ್ ಅವರ ಕಾಲದಿಂದ ಶಾಸಕರು ಬದಲಾದಂತೆ ಅವರ ಕಚೇರಿಯ ವಿನ್ಯಾಸ ಬದಲಾಗುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಕಳೆದ ಎರಡು ಮೂರು ಚುನಾವಣೆಯ ಬಳಿಕ ಶಾಸಕರ ಕಚೇರಿಯೂ ಬದಲಾಗುತ್ತಿರುವ ವಿದ್ಯಾಮಾನ ನಡೆಯುತ್ತಿರುವುದು ಆಶ್ಚರ್ಯವಾದರೂ ಸತ್ಯ.

ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ಸಾರ್ವಜನಿಕರ ಅಹವಾಲು ಸ್ವೀಕರಿಸಲು, ಸಮಸ್ಯೆಗಳನ್ನು ಆಲಿಸಲು ಶಾಸಕರ ಪ್ರತ್ಯೇಕ ಕಚೇರಿ ಇರುತ್ತದೆ. ಪುತ್ತೂರಿನಲ್ಲಿ ಈ ಭಾರಿಯ ಶಾಸಕ ಅಶೋಕ್ ಕುಮಾರ್ ರೈ ಅವರು ಸಾರ್ವಜನಿಕರು ಕೂರಲು ಸಾಕಷ್ಟು ಸ್ಥಳಾವಕಾಶ ಬೇಕೆಂದು ವಿಶಾಲವಾದ ಕಚೇರಿಯನ್ನು ತಾಲೂಕು ಆಡಳಿತ ಸೌಧದ ಪಕ್ಕದಲ್ಲಿರುವ ನಗರಯೋಜನಾ ಪ್ರಾಧಿಕಾರದ ಕಚೇರಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡದಲ್ಲಿ ಕಚೇರಿಯನ್ನು ಆರಂಭಿಸಲು ನಿರ್ಧರಿಸಿದ್ದಾರೆ. ಈ ಹಿಂದೆ ಸಂಜೀವ ಮಠಂದೂರುರವರು 2018ರಲ್ಲಿ ಮೊದಲ ಬಾರಿ ಶಾಸಕರಾದ ಬೆನ್ನಲ್ಲೇ ತಾಲೂಕು ಆಡಳಿತ ಸೌಧದ ಮೊದಲ ಮಹಡಿಯ ಕೊಠಡಿಯನ್ನು ಬಳಸಿಕೊಂಡಿದ್ದರು. ಅವರ ಚೇಂಬರ್‌ನಲ್ಲಿ ತುಳುಲಿಪಿಯಲ್ಲಿ ತುಳು ಭಾಷೆಯ ಫಲಕ ಅಳವಡಿಸಿದ್ದರು. ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ರೈಯವರು ಶಾಸಕರಾಗಿ ಆಯ್ಕೆಯಾಗಿ ಎರಡೂವರೇ ತಿಂಗಳಾಗುತ್ತಾ ಬಂದಿದ್ದು, ಹೊಸ ಕಚೇರಿ ಸಿದ್ಧಪಡಿಸುತ್ತಿದ್ದಾರೆ. ಸದ್ಯ ಅವರು ದರ್ಬೆಯಲ್ಲಿರುವ ತಮ್ಮ ಸ್ವಂತ ಕಟ್ಟಡದ ಒಂದು ಭಾಗವನ್ನು ಶಾಸಕರ ಕಚೇರಿಯಾಗಿ ಬಳಸುತ್ತಿದ್ದಾರೆ. ಪ್ರಸ್ತುತ ಪುರಭವನದ ಪಕ್ಕದಲ್ಲಿರುವ ಹಳೆಯ ಸಹಾಯಕ ಆಯುಕ್ತರ ಕಚೇರಿ ಸಂಕೀರ್ಣದ ಮೇಲ್ಮಹಡಿಯಲ್ಲಿ ಆಶೋಕ್ ಕುಮಾರ್ ರೈಯವರ ಶಾಸಕರ ಕಚೇರಿ ನವೀಕರಣ ಕಾರ್ಯ ನಡೆಯುತ್ತಿದೆ. ಇಲ್ಲಿದ್ದ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಕಚೇರಿಯನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಮಿನಿ ವಿಧಾನಸೌಧದಲ್ಲಿ ಸಂಜೀವ ಮಠಂದೂರು ಕಾರ್ಯ ನಿರ್ವಹಿಸುತ್ತಿದ್ದ ಕಚೇರಿ ಚೆನ್ನಾಗಿದ್ದರೂ, ಸಾರ್ವಜನಿಕರು ಕೂರಲು ಸಾಕಷ್ಟು ಸ್ಥಳಾವಕಾಶ ಇಲ್ಲದಿರುವ ಕಾರಣ ಅದನ್ನು ಬಳಸದೇ ಇರಲು ನಿರ್ಧರಿಸಿzನೆ ಎಂಬುದು ಅಶೋಕ್ ಕುಮಾರ್ ರೈಯವರ ಅಭಿಮತ. ಹೊಸ ಶಾಸಕರ ಕಚೇರಿಯ ನವೀಕರಣ ಕಾರ್ಯ ಭರದಿಂದ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಮುಗಿಯಲಿದ್ದು,ಬಳಿಕ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದ್ದಾರೆ.

1978ರಿಂದ 1985ರವರೆಗೆ ಜನತಾ ಪಾರ್ಟಿ ಮತ್ತು ಬಿಜೆಪಿ ಶಾಸಕರಾಗಿದ್ದ ಉರಿಮಜಲು ರಾಮ ಭಟ್‌ರವರು ಪುತ್ತೂರು ಮುಖ್ಯರಸ್ತೆಯ ಮಹಾಲಿಂಗೇಶ್ವರ ದೇವಳದ ಸಮೀಪ ಈಗಿನ ವಾಣಿ ಪ್ರಿಂಟರ್‍ಸ್‌ನ ಮುಂಭಾಗದಲ್ಲಿ ಕಚೇರಿ ಹೊಂದಿದ್ದರು. ಆ ಕಟ್ಟಡ ಈಗಿಲ್ಲ. ಬಳಿಕ ಶಾಸಕರಾದ ಕಾಂಗ್ರೆಸ್‌ನ ವಿನಯ ಕುಮಾರ್ ಸೊರಕೆಯವರು ಆಗಿನ ಬ್ಲಾಕ್ ಅಭಿವೃದ್ಧಿ ಮಂಡಳಿ (ಬಿಡಿಒ- ತಾಲೂಕು ಬೋರ್ಡ್)ಯ ಹಳೆಯ ಕಟ್ಟಡದಲ್ಲಿ 10 ವರ್ಷ ಕಚೇರಿ ಹೊಂದಿದ್ದರು. 1994ರಲ್ಲಿ ಶಾಸಕರಾದ ಬಿಜೆಪಿಯ ಡಿ.ವಿ. ಸದಾನಂದ ಗೌಡರು, ಇಲ್ಲೇ ಪಕ್ಕದಲ್ಲಿ ತಾಲೂಕು ಬೋರ್ಡ್‌ಗೆ ಸೇರಿದ ಇನ್ನೊಂದು ಹಳೆಯ ಕಟ್ಟಡದಲ್ಲಿ ಕಚೇರಿ ಆರಂಭಿಸಿದರು. ಬಳಿಕ ಅದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ನೀಡಲಾಗಿದ್ದು, ಶಾಸಕರು ತಾಲೂಕು ಪಂಚಾಯತ್‌ನಲ್ಲಿ ಕಚೇರಿ ತೆರೆದರು. 2004ರಲ್ಲಿ ಶಕುಂತಳಾ ಶೆಟ್ಟಿಯವರು ಬಿಜೆಪಿಯಿಂದ ಶಾಸಕರಾದಾಗ ಮತ್ತು 2008ರಲ್ಲಿ ಮಲ್ಲಿಕಾ ಪ್ರಸಾದ್ ಬಿಜೆಪಿಯಿಂದ ಶಾಸಕರಾದಾಗ ತಾ.ಪಂ ಕಟ್ಟಡದ ಮೊದಲ ಮಹಡಿಯಲ್ಲಿ ಕಚೇರಿ ಹೊಂದಿದ್ದರು. 2012ರಲ್ಲಿ ಶಕುಂತಳಾ ಶೆಟ್ಟಿಯವರು ಕಾಂಗ್ರೆಸ್‌ನಿಂದ ಶಾಸಕರಾದಾಗ ಕಚೇರಿಯನ್ನು ಪಕ್ಕದ ಸಾಮರ್ಥ್ಯ ಸೌಧ ಕಟ್ಟಡಕ್ಕೆ ಸ್ಥಳಾಂತರಿಸಿದರು. 2018ರಲ್ಲಿ ಸಂಜೀವ ಮಠಂದೂರುರವರು ತಾಲೂಕು ಆಡಳಿತ ಸೌಧದಲ್ಲಿ ಕಚೇರಿ ತೆರೆದರು. ಈಗ 2023ರಲ್ಲಿ ಅಶೋಕ್ ಕುಮಾರ್ ರೈ ಅವರ ಕಚೇರಿ ನಗರಸಭೆಯ ಕಟ್ಟಡವಾದ ಹಾಲಿ ಪುಡಾ ಕಚೇರಿ ಇರುವ ಸ್ಥಳದಲ್ಲಿ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here