ಪೂಂಜರೇ… ನೀವು ಹೇಳಿದ ಹಾಗೂ ನಾವು ಬರೆದ ವಿಷಯದ ಬಗ್ಗೆ ನಿಮ್ಮ ಚಾನೆಲ್‌ನಲ್ಲೇನೇರಾನೇರ ಮಾತುಕತೆ ನಡೆಸಿ ವಿವಾದಕ್ಕೆ ಅಂತ್ಯ ಕಾಣಿಸೋಣವೇ?

0

ಪತ್ರಿಕೆಗೆ ತಾವು ಎಲ್ಲಾ ಕಡೆ ವಿರೋಧ ಮಾಡುವುದಾದರೂ ನಮ್ಮ ಅಡ್ಡಿ ಇಲ್ಲ. ನಮ್ಮ ಪತ್ರಿಕೆಗಳು ನಿಂತರೂ ಪರವಾಗಿಲ್ಲ

ಆದರೆ ಲಂಚ, ಭ್ರಷ್ಟಾಚಾರ ವಿರುದ್ಧದ ಪತ್ರಿಕೆಯ ಹೋರಾಟಕ್ಕೆ ಮಾತ್ರ ಬೆಂಬಲ ನೀಡಿ ನಿಮ್ಮ ಜನರನ್ನೂ ರಕ್ಷಿಸಿ

*ಸುದ್ದಿ ಬಿಡುಗಡೆ ದಾರಿ ತಪ್ಪಿದೆ, ಜನರು ಅದನ್ನು ನೋಡಿಕೊಳ್ಳುತ್ತಾರೆ ಎಂಬ ನಿಮ್ಮ ಮಾತು ಅರ್ಥವಾಗದೆ ಹೆದರಿ ಬೆಳ್ತಂಗಡಿ ಜನರ ಬಳಿ ಹೋಗಿದ್ದೆವು.
*ಸುದ್ದಿ ಸರಿ ದಾರಿಯಲ್ಲಿದೆ, ಧೈರ್ಯದಿಂದ ಪತ್ರಿಕೆ ನಡೆಸಿರಿ ಎಂದು ಜನತೆ ಹರಸಿದ್ದಾರೆ.
*ದಯವಿಟ್ಟು ಸುದ್ದಿ ಸಿಬ್ಬಂದಿಗಳ ಹೈಜಾಕ್ ಮಾಡುವುದನ್ನು, ತೊಂದರೆ ಕೊಡುವುದನ್ನು ಇನ್ನಾದರೂ ನಿಲ್ಲಿಸುತ್ತೀರಾ?
*ಸುದ್ದಿ ಉದಯ ಪತ್ರಿಕೆಗೆ ನಾವು ವಿರೋಧಿಗಳಲ್ಲ. ನೀವು ಸುದ್ದಿ ಪತ್ರಿಕೆಗೆ ಕೊಡುತ್ತಿರುವ ತೊಂದರೆಗೆ ಮಾತ್ರ ನಮ್ಮ ಆಕ್ಷೇಪ
*ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿಬಿಡುಗಡೆ ಹೋರಾಡುತ್ತಿರುವುದು ತಪ್ಪೇ? ಪೂಂಜರವರೇ?
*ಅದಕ್ಕಾಗಿ`ಸುದ್ದಿ’ ಪತ್ರಿಕೆಗೆ ವಿರುದ್ಧವಾಗಿ ಪುತ್ತೂರು, ಸುಳ್ಯದಲ್ಲಿಯೂ ಪತ್ರಿಕೆ ಪ್ರಾರಂಭಿಸುತ್ತೀರಾ?

ಪೂಂಜರೇ ಸುದ್ದಿ ಬಿಡುಗಡೆ ಪತ್ರಿಕೆ ದಾರಿ ತಪ್ಪಿದೆ, ಜನರು ನೋಡಿಕೊಳ್ಳುತ್ತಾರೆ ಎಂದು ಪತ್ರಿಕಾ ದಿನಾಚರಣೆಯಂದೇ ನೀವು ಹೇಳಿದ್ದನ್ನು ಕೇಳಿ, ಹೆದರಿ ನಿಮ್ಮಲ್ಲಿ ಆ ಬಗ್ಗೆ ವಿವರಣೆ ಮತ್ತು ಸರಿದಾರಿ ಏನೆಂದು ಕೇಳಿದ್ದೆವು. ಅದಕ್ಕೆ ನೀವು ಏನೂ ಉತ್ತರ ಕೊಡದೇ ಇದ್ದುದರಿಂದ ಸರಿಯಾದ ದಾರಿ ತಿಳಿಯಲು ಮತ್ತು ರಕ್ಷಣೆಗಾಗಿ ಜನರ ಬಳಿಗೆ ಹೋಗಿದ್ದೆವು. ನಾವು ಮಾತನಾಡಿಸಿದ ಎಲ್ಲಾ ಜನರು, ಏಜೆಂಟರು, ಪಂಚಾಯತ್‌ನವರು, ಸೊಸೈಟಿಯವರು, ಸಂಘ ಸಂಸ್ಥೆಗಳ ಪ್ರಮುಖರು, ಶಿಕ್ಷಣ ಸಂಸ್ಥೆಯವರು ಸುದ್ದಿ ಬಿಡುಗಡೆ ಪತ್ರಿಕೆ ಸರಿಯಾದ ದಾರಿಯಲ್ಲಿದೆ. ಹಾಗೆಯೇ ಮುಂದುವರಿಸಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿ ಹರಸಿದ್ದಾರೆ. ಅದು ನಮಗೆ ಮಾತ್ರವಲ್ಲ, ನಮ್ಮ ಹಳೆ ಮತ್ತು ಹೊಸ ಸಿಬ್ಬಂದಿಗಳಿಗೆ ಧೈರ್ಯ ನೀಡಿದೆ.

ಜಾಹೀರಾತಿನ ವಿಷಯಕ್ಕೆ ಬಂದಾಗ ನಿಮ್ಮಿಂದ ಲಾಭ ಪಡೆದಿರುವ ಅಥವಾ ನಿಮ್ಮ ನಿಯಂತ್ರಣದಲ್ಲಿರುವ ಅಥವಾ ನಿಮ್ಮ ಶಾಸಕತ್ವದ ಪ್ರಭಾವಕ್ಕೆ ಹೆದರುವ ಸಂಘ ಸಂಸ್ಥೆಗಳು, ವ್ಯಕ್ತಿಗಳು ನಿಮ್ಮ ಕೃಪೆಗಾಗಿ ನಿಮ್ಮ ಪತ್ರಿಕೆಗೆ ಮಾತ್ರ ಜಾಹೀರಾತು ನೀಡುವುದನ್ನು ಮುಂದುವರಿಸಿದ್ದಾರೆ. ಸುದ್ದಿ ಬಿಡುಗಡೆ ಪತ್ರಿಕೆ ತಾಲೂಕಿನಲ್ಲಿ ಅತ್ಯಂತ ಪ್ರಸಾರ ಹೊಂದಿದ್ದರೂ ಅದನ್ನು ಕಡೆಗಣಿಸಿದ್ದಾರೆ. ಆ ವಿಷಯದಲ್ಲಿ ಬೆಳ್ತಂಗಡಿ ಜನತೆ ನಮ್ಮ ಪತ್ರಿಕೆಗೆ ನ್ಯಾಯ ಒದಗಿಸಿ ಕೊಡುತ್ತಾರೆ ಎಂಬ ನಂಬಿಕೆ ನಮಗಿದೆ.
ಸುದ್ದಿ ಬಿಡುಗಡೆ ಪತ್ರಿಕೆಯು ಲಂಚ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವುದು ತಪ್ಪು ಎಂದು ನಿಮಗೆ ಅನಿಸಿದೆಯೇ? ಅದೇ ಕಾರಣಕ್ಕೆ ಬೆಳ್ತಂಗಡಿಯಲ್ಲಿರುವ ಸುದ್ದಿಬಿಡುಗಡೆಗೆ ವಿರೋಧ ಮಾಡಿದಂತೆ ಸುದ್ದಿ ಪತ್ರಿಕೆ ಇರುವ ಪುತ್ತೂರು, ಸುಳ್ಯದಲ್ಲಿಯೂ ಸುದ್ದಿಗೆ ವಿರೋಧವಾಗಿ ಪತ್ರಿಕೆ ಮಾಡಲು ಸಿದ್ದತೆ ನಡೆಸುತ್ತಿದ್ದೀರಾ?.
ಪತ್ರಿಕೆ ಮಾಡುವುದು ಪ್ರತಿಯೊಬ್ಬರ ಸ್ವಾತಂತ್ರ. ಆದರೆ ಸುದ್ದಿ ಬಿಡುಗಡೆ ಪತ್ರಿಕೆಯ ಸಿಬ್ಬಂದಿಗಳನ್ನೇ ಹೈಜಾಕ್ ಮಾಡುವುದನ್ನು, ಅವರನ್ನು ಸುದ್ದಿ ಪತ್ರಿಕೆಯ ವಿರೋಧಿಗಳನ್ನಾಗಿ ಮಾಡುವುದನ್ನೇ ತಮ್ಮ ಉದ್ಧೇಶವಾಗಿ ಮಾಡಿಕೊಳ್ಳಬೇಡಿ.
ಪೂಂಜರೇ ಬೆಳ್ತಂಗಡಿಯಲ್ಲಿ ಲಂಚ, ಭ್ರಷ್ಟಾಚಾರದ ಪಿಡುಗನ್ನು ನಿವಾರಿಸಲು ಪ್ರಯತ್ನಿಸಿ, ಜನರನ್ನು ರಕ್ಷಿಸಿ
ಶಾಸಕ ಹರೀಶ್ ಪೂಂಜರವರೇ ಸುದ್ದಿ ಬಿಡುಗಡೆ ಪತ್ರಿಕೆಗೆ ತಾವು ಎಲ್ಲಾ ಕಡೆ ವಿರೋಧ ಮಾಡುವುದಾದರೂ ನಮ್ಮ ಅಡ್ಡಿ ಇಲ್ಲ. ನಮ್ಮ ಪತ್ರಿಕೆಗಳು ನಿಂತರೂ ಪರವಾಗಿಲ್ಲ. ಆದರೆ ಲಂಚ, ಭ್ರಷ್ಟಾಚಾರ ವಿರುದ್ಧದ ಪತ್ರಿಕೆಯ ಹೋರಾಟಕ್ಕೆ ಮಾತ್ರ ಬೆಂಬಲ ನೀಡಿರಿ. ಒಂದು ವೇಳೆ ಬೆಂಬಲ ನೀಡಲು ಸಾಧ್ಯವಾಗದಿದ್ದರೆ ಅದಕ್ಕೆ ವಿರೋಧ ಮಾತ್ರ ಮಾಡಬೇಡಿ ಎಂದು ವಿನಂತಿಸುತ್ತಿದ್ದೇನೆ. ಪುತ್ತೂರಿನಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಲಂಚ, ಭ್ರಷ್ಟಾಚಾರದ ವಿರುದ್ಧ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ, ಸುಳ್ಯದ ಶಾಸಕಿ ಭಾಗೀರಥೀ ಮುರುಳ್ಯ ಅವರೂ ಕೂಡ ಅದನ್ನೇ ಮಾಡುತ್ತಿದ್ದಾರೆ.ಜನರಿಗೆ ರಕ್ಷಣೆ ನೀಡುತ್ತಿದ್ದಾರೆ. ಅವರಂತೆ ತಾವು ಕೂಡ ಬೆಳ್ತಂಗಡಿ ತಾಲೂಕಿನಲ್ಲಿ ಲಂಚ, ಭ್ರಷ್ಟಾಚಾರ ಪಿಡುಗನ್ನು ನಿವಾರಿಸಲು ಪ್ರಯತ್ನಿಸುತ್ತಿಲ್ಲ ಯಾಕೆ?. ಬೆಳ್ತಂಗಡಿ ತಾಲೂಕಿನ ಬಡ ಜನರ, ಜನಸಾಮಾನ್ಯರ, ಬಹುಮತದಲ್ಲಿ ತಮ್ಮನ್ನು ಆರಿಸಿದ ಮತದಾರರ ಹಿತಾಸಕ್ತಿಗಾಗಿಯಾದರೂ ತಾವು ಆ ರೀತಿ ಮಾಡುತ್ತೀರಿ ಎಂಬ ಭರವಸೆಯೊಂದಿಗೆ ಆ ಕುರಿತು ವಿಶೇಷ ಮನವಿಯನ್ನು ಮಾಡುತ್ತಿದ್ದೇನೆ.
ಸುದ್ದಿ ಉದಯ ಪತ್ರಿಕೆ, ಸಿಬ್ಬಂದಿಗಳ ಮೇಲೆ ನಮಗೆ ಯಾವುದೇ ವಿರೋಧವಿಲ್ಲ. ನೀವು ನಮ್ಮ ಪತ್ರಿಕೆಗೆ ತೊಂದರೆ ಕೊಡುವುದಕ್ಕೆ ಮಾತ್ರ ಆಕ್ಷೇಪ
ಪೂಂಜರೇ.. ನಿಮ್ಮ ಸುದ್ದಿ ಉದಯ ಪತ್ರಿಕೆಯ ಮತ್ತು ಅದರ ಸಿಬ್ಬಂದಿಗಳ ಮೇಲೆ ನಮಗೆ ಯಾವುದೇ ವಿರೋಧವಿಲ್ಲ. ಯಾಕೆಂದರೆ ಅದರಲ್ಲಿ ಹೆಚ್ಚಿನವರು ನಮ್ಮಲ್ಲಿ ಕೆಲಸ ಮಾಡಿದವರೇ ಆಗಿದ್ದಾರೆ. ನಿಷ್ಪಕ್ಷಪಾತ ಪತ್ರಿಕೆ ನಡೆಸುವುದಕ್ಕೆ ಅವರಿಗೆ ನಮ್ಮ ಬೆಂಬಲವಿದೆ. ಆದರೆ ನೀವು ಪತ್ರಿಕೆಯ ನೆಪದಲ್ಲಿ ಸುದ್ದಿಬಿಡುಗಡೆ ಪತ್ರಿಕೆಗೆ ತೊಂದರೆ ಕೊಡುತ್ತಿದ್ದೀರಲ್ಲ ಅದಕ್ಕೆ ಮಾತ್ರ ನಮ್ಮ ಆಕ್ಷೇಪ. ಆದುದರಿಂದ ಅದಕ್ಕೊಂದು ಪರಿಹಾರ ಕಂಡುಕೊಳ್ಳಲೇ ಬೇಕು. ಅದಕ್ಕಾಗಿ ನೀವು ಬೆಳ್ತಂಗಡಿಯ ಸುದ್ದಿ ಬಿಡುಗಡೆ ಪತ್ರಿಕೆಯ ಬಗ್ಗೆ ಹೇಳಿದ ವಿಷಯವನ್ನು ಮತ್ತು ನಾನು ಆ ಬಗ್ಗೆ ಪತ್ರಿಕೆಯಲ್ಲಿ ಬರೆದಿರುವುದನ್ನು ಎದುರುಗಡೆ ಇಟ್ಟುಕೊಂಡು ನಿಮ್ಮ ಚಾನೆಲ್‌ನಲ್ಲಿ ಅಥವಾ ಯಾವುದೇ ಚಾನೆಲ್‌ನಲ್ಲಿ ಚರ್ಚಿಸೋಣ. ನಿಮ್ಮದು ತಪ್ಪಾಗಿದ್ದಲ್ಲಿ ನೀವು, ನನ್ನ ತಪ್ಪಾಗಿದ್ದಲ್ಲಿ ನಾನು ಒಪ್ಪಿಕೊಂಡು ಬೆಳ್ತಂಗಡಿಯ ಜನತೆಯ ಹಿತಾಸಕ್ತಿಗಾಗಿ ವಿವಾದಕ್ಕೆ ಶಾಶ್ವತ ಅಂತ್ಯ ಹಾಕೋಣವೇ? ಈ ವಿಷಯದಲ್ಲಿ ಇದು ಕೊನೆಯ ಲೇಖನವಾಗಲಿ ಎಂದು ಆಶಿಸುತ್ತೇನೆ.

LEAVE A REPLY

Please enter your comment!
Please enter your name here