ಗ್ರಾಮಾಂತರ, ನಗರ ಮಂಡಲಾಧ್ಯಕ್ಷರ ಅವಧಿ ಮುಗಿದಿದ್ದರೂ ಎಂ.ಪಿ.ಚುನಾವಣೆ ತನಕ ಮುಂದುವರಿಯಲು ಪಕ್ಷದಿಂದ ಸೂಚನೆ
ಪುತ್ತಿಲ ಪರಿವಾರ-ಬಿಜೆಪಿ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಕಾರ್ಯಕರ್ತರ ಆಗ್ರಹ
ಭಿನ್ನಾಭಿಪ್ರಾಯ ಶಮನವಾಗದೇ ಇದ್ದರೆ ಜಿ.ಪಂ,ತಾ.ಪಂ ಚುನಾವಣೆಯಲ್ಲಿಯೂ ಗೊಂದಲ?
ಪುತ್ತೂರು:ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಮತ್ತು ನಗರ ಮಂಡಲದ ಅಧ್ಯಕ್ಷರ ಅಧಿಕಾರದವಧಿ ಈಗಾಗಲೇ ಮುಕ್ತಾಯವಾಗಿದ್ದರೂ ಮುಂಬರುವ ಲೋಕಸಭಾ ಚುನಾವಣೆ ತನಕ ಮುಂದುವರಿಯುವಂತೆ ಪಕ್ಷ ಸೂಚನೆ ನೀಡಿದೆ.ಈ ನಡುವೆ ವಿಧಾನಸಭೆ ಚುನಾವಣೆ ಬಳಿಕ ಗ್ರಾ.ಪಂ. ಉಪಚುನಾವಣೆಯಲ್ಲೂ ಪಕ್ಷ ಹಿನ್ನಡೆ ಅನುಭವಿಸಿರುವ ಹಿನ್ನೆಲೆಯಲ್ಲಿ ಮಂಡಲ ಅಧ್ಯಕ್ಷರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಸಮಾಧಾನದ ಸಂದೇಶಗಳು ಹರಿದಾಡುತ್ತಿದ್ದು ಹೊಸ ಅಧ್ಯಕ್ಷರ ಆಯ್ಕೆಗೆ ಅವಕಾಶ ಮಾಡಿಕೊಡುವ ಉzಶದಿಂದ ಗ್ರಾಮಾಂತರ ಮಂಡಲ ಅಧ್ಯಕ್ಷರು ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.
ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮತ್ತು ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರ ಅವಧಿ ಐದು ತಿಂಗಳ ಹಿಂದೆಯೇ ಪೂರ್ಣಗೊಂಡಿದ್ದರೂ ಲೋಕಸಭಾ ಚುನಾವಣೆಯ ತನಕ ಮುಂದುವರಿಯುವಂತೆ ಪಕ್ಷ ಸೂಚಿಸಿರುವ ಹಿನ್ನೆಲೆಯಲ್ಲಿ ಹುದ್ದೆಯಲ್ಲಿ ಮುಂದುವರಿಯುತ್ತಿದ್ದಾರೆ.ಸಾಮಾನ್ಯವಾಗಿ ಪಕ್ಷದ ಅಧ್ಯಕ್ಷರ ಮೂರು ವರ್ಷದ ಅವಧಿ ಮುಗಿದ ಬಳಿಕ ಮತ್ತೆ ಹೆಚ್ಚು ಸಮಯ ಅವರನ್ನು ಮುಂದುವರೆಸುವ ಸಂಪ್ರದಾಯ ಬಿಜೆಪಿಯಲ್ಲಿಲ್ಲ.ಹೊಸದಾಗಿ ಅಧ್ಯಕ್ಷರ ನೇಮಕವಾಗುವ ತನಕ ಮಾತ್ರ ಮುಂದುವರೆಸಲಾಗುತ್ತದೆ.ಮಾತ್ರವಲ್ಲದೆ ಹಾಲಿ ಅಧ್ಯಕ್ಷರ ಅವಧಿ ಪೂರ್ಣಗೊಂಡ ಬೆನ್ನಲ್ಲೇ ಹೊಸ ಅಧ್ಯಕ್ಷರ ನೇಮಕ ಬಹುತೇಕ ನಡೆಯುತ್ತದೆ.ಆದರೆ ಪುತ್ತೂರಿನಲ್ಲಿ ಬಿಜೆಪಿ ಮಂಡಲಗಳ ಅಧ್ಯಕ್ಷರುಗಳ ಮೂರು ವರ್ಷಗಳ ಅವಧಿ ಕಳೆದ ಫೆ.14ಕ್ಕೆ ಮುಗಿದಿತ್ತು.ಆದರೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹುದ್ದೆಯಲ್ಲಿ ಮುಂದುವರಿಯಲು ಅವರಿಗೆ ಪಕ್ಷದ ಸೂಚನೆಯಿತ್ತು.ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರದ ಅವಧಿಯೂ ಈಗಾಗಲೇ ಮುಕ್ತಾಯಗೊಂಡಿದ್ದರೂ ನೂತನ ರಾಜ್ಯಾಧ್ಯಕ್ಷರ ನೇಮಕವಾಗಿಲ್ಲ.ಮತ್ತೊಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧಿಕಾರದ ಅವಧಿ ಮುಕ್ತಾಯವಾಗಿದ್ದರೂ ಮುಂದಿನ ಲೋಕಸಭಾ ಚುನಾವಣೆಯ ತನಕ ಅವರನ್ನೇ ಮುಂದುವರಿಸಲಾಗಿದೆ.ಜಿಲ್ಲಾಧ್ಯಕ್ಷ ಸುದರ್ಶನ್ ಅವರ ಅಧಿಕಾರದ ಅವಧಿಯೂ ಮುಗಿದಿದ್ದರೂ ಅವರನ್ನೂ ಚುನಾವಣೆ ಹಿನ್ನೆಲೆಯಲ್ಲಿ ಮುಂದುವರಿಸಲಾಗಿದೆ.ರಾಷ್ಟ್ರ, ರಾಜ್ಯ, ಜಿಲ್ಲಾ ಅಧ್ಯಕ್ಷರನ್ನು ಚುನಾವಣೆ ಹಿನ್ನೆಲೆಯಲ್ಲಿ ಮುಂದುವರಿಸಿರುವಂತೆ ಅದೇ ಮಾನದಂಡವನ್ನು ಮಂಡಲದ ಅಧ್ಯಕ್ಷರಿಗೂ ವಿಸ್ತರಿಸಲಾಗಿದ್ದು ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲ ಅಧ್ಯಕ್ಷರುಗಳನ್ನೂ ಮುಂದಿನ ಲೋಕಸಭಾ ಚುನಾವಣೆ ಮುಗಿಯುವ ತನಕ ಹುದ್ದೆಯಲ್ಲಿ ಮುಂದುವರಿಯಲು ಪಕ್ಷ ಸೂಚಿಸಿದೆ.
ಗ್ರಾ.ಪಂ.ಉಪಚುನಾವಣೆಯಲ್ಲಿ ಸೋಲು-ಸಾಜ ರಾಜೀನಾಮೆಗೆ ಸಿದ್ಧತೆ?:
ಲೋಕಸಭಾ ಚುನಾವಣೆ ಮುಗಿಯುವ ತನಕ ಅಧ್ಯಕ್ಷತೆ ಹುದ್ದೆಯಲ್ಲಿ ಮುಂದುವರಿಯಲು ಪಕ್ಷ ಸೂಚಿಸಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದ್ದಲ್ಲದೆ ಇದೀಗ ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿಯೂ ಪಕ್ಷ ಬೆಂಬಲಿತರು ಹೀನಾಯ ಸೋಲು ಅನುಭವಿಸಿರುವ ಕಾರಣಕ್ಕಾಗಿ ನೈತಿಕ ಹೊಣೆ ಹೊತ್ತು ಪಕ್ಷದ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.ಹೊಸ ಅಧ್ಯಕ್ಷರ ಆಯ್ಕೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಅವರು ರಾಜೀನಾಮೆಗೆ ನಿರ್ಧರಿಸಿದ್ದಾರೆ.ಆದರೆ, ಲೋಕಸಭೆ ಚುನಾವಣೆ ತನಕ ಮುಂದುವರಿಯಲು ಪಕ್ಷ ಈಗಾಗಲೇ ಸೂಚಿಸಿರುವುದರಿಂದ ರಾಜೀನಾಮೆ ನಿರ್ಧಾರವನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗದೆ ಸುಮ್ಮನಾಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.ಮತ್ತೊಂದೆಡೆ, ಗ್ರಾ.ಪಂ.ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಬ್ಬರೂ ಪರಾಭವಗೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆಕ್ಷೇಪಾರ್ಹ ಮತ್ತು ನಿಂದನೆಯ ಸಂದೇಶಗಳನ್ನು ರವಾನಿಸುತ್ತಿದ್ದು ಇದರಿಂದ ಮನನೊಂದಿರುವ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು, ತನ್ನಿಂದಾಗಿ ಪಕ್ಷಕ್ಕೆ ಯಾವುದೇ ತೊಂದರೆಯಾಗುವುದು ಬೇಡ.ಈಗಾಗಲೇ ತನ್ನ ಅಧ್ಯಕ್ಷತೆಯ ಅವಧಿ ಮುಗಿದಿರುವುದರಿಂದ ಹುದ್ದೆಯಲ್ಲಿ ಅಂಟಿಕೊಂಡಿರುವ ಜಾಯಮಾನ ನನ್ನದಲ್ಲ ಎಂದು, ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪುತ್ತೂರಿನಲ್ಲಿ ಸದ್ಯ ಹೊಸ ತಂಡ ರಚನೆ ಕಷ್ಟ?:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ೪ ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರ ಎದುರು ಪರಾಭವಗೊಂಡಿದ್ದರು. ಬಿಜೆಪಿ ೩ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.ನಂತರದ ಬೆಳವಣಿಗೆಯಲ್ಲಿ ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯ ಶಮನಗೊಳಿಸುವ ನಿಟ್ಟಿನಲ್ಲಿ ಸಂಧಾನ ಮಾತುಕತೆ ನಡೆದರೂ ಅದಿನ್ನೂ ಫಲಪ್ರದವಾಗದೇ ಇರುವುದರಿಂದ ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿಯೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳೀರ್ವರು ಕಣಕ್ಕಿಳಿದರು.ಆರ್ಯಾಪು ಗ್ರಾ.ಪಂ.ನಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿ ಪುತ್ತಿಲ ಪರಿವಾರ ಖಾತೆ ತೆರೆದಿದ್ದರೆ, ನಿಡ್ಪಳ್ಳಿಯಲ್ಲಿ ಸೋತರೂ ಮತಗಳಿಕೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.ಈ ಹಿಂದೆ ಬಿಜೆಪಿ ಬೆಂಬಲಿತ ಸದಸ್ಯರೇ ಪ್ರತಿನಿಧಿಸುತ್ತಿದ್ದ ಈ ಎರಡೂ ಸ್ಥಾನಗಳ ಉಪಚುನಾವಣೆಯಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವುದು ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ.ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಭಿನ್ನಾಭಿಪ್ರಾಯ ಸರಿಯಾಗದೆ ಬಿಜೆಪಿಗೆ ಹೊಸ ಅಧ್ಯಕ್ಷರ ನೇಮಕವಾಗುವುದು ಕಷ್ಟ ಸಾಧ್ಯ.ಒಂದೊಮ್ಮೆ ಹೊಸ ತಂಡ ರಚನೆಯಾದರೂ ಮುಂಬರುವ ಜಿ.ಪಂ.,ತಾ.ಪಂ.ಚುನಾವಣೆ ಸಂದರ್ಭವೂ ಮತ್ತೆ ಇದೇ ರೀತಿಯ ಪರಿಸ್ಥಿತಿ ಮರುಕಳಿಸುವ ಸಾಧ್ಯತೆ ಇದೆ ಎಂದು ಅಧ್ಯಕ್ಷರಾಗಲು ಯಾರೂ ಮುಂದೆ ಬರುತ್ತಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.ಒಟ್ಟಾರೆ ಪುತ್ತೂರು ಬಿಜೆಪಿಗೆ ಹೊಸ ತಂಡ ರಚನೆ ವಿಳಂಬವಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಹೇಳಲಾಗುತ್ತಿದೆ.
ಯಾವುದೇ ಕ್ಷಣ ಹುದ್ದೆ ಬಿಟ್ಟುಕೊಡಲು ರೆಡಿ
ನನ್ನ ಅಧ್ಯಕ್ಷತೆ ಅವಧಿ ಈಗಾಗಲೇ ಮುಗಿದಿರುವುದರಿಂದ ನಾನು ಯಾವುದೇ ಕ್ಷಣದಲ್ಲಿ ಹುದ್ದೆ ಬಿಟ್ಟುಕೊಡಲು ಸಿದ್ಧ. ಹುದ್ದೆಗೆ ಅಂಟಿ ಕೊಂಡಿರುವ ಜಾಯಮಾನ ನನ್ನದಲ್ಲ ಎಂದು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಪ್ರತಿಕ್ರಿಯಿಸಿದ್ದಾರೆ.
ನನ್ನಿಂದಾಗಿ ಪಕ್ಷಕ್ಕೆ ಒಳಿತಾಗುವುದಿದ್ದರೆ ಹೊಸ ಅಧ್ಯಕ್ಷರ ಆಯ್ಕೆಗೆ ಅವಕಾಶವಾಗುವ ನಿಟ್ಟಿನಲ್ಲಿ ಯಾವುದೇ ಸಮಯ ಬೇಕಾದರೂ ಅಧ್ಯಕ್ಷತೆ ಹುದ್ದೆ ಬಿಟ್ಟುಕೊಡಲು ನಾನು ಸಿದ್ಧ ಎಂದು ಹೇಳಿರುವ ಸಾಜ, ಪುತ್ತಿಲ ಪರಿವಾರದವರು ಮತ್ತೆ ಮಾತೃ ಪಕ್ಷಕ್ಕೆ ಬರುವುದಕ್ಕೆ ನಮ್ಮ ಯಾವುದೇ ಆಕ್ಷೇಪವಿಲ್ಲ.ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಬರುವವರನ್ನು ಪಕ್ಷ ಯಾವತ್ತೂ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.ಪುತ್ತಿಲ ಪರಿವಾರದವರ ಬೇಡಿಕೆ ಈಗಾಗಲೇ ಪಕ್ಷದ ಹಿರಿಯರ ಬಳಿಗೆ ಹೋಗಿರುವುದರಿಂದ ಹಿರಿಯರೇ ಮಾತುಕತೆ ಮಾಡಿ ವಿವಾದ ಬಗೆಹರಿಸಲಿದ್ದಾರೆ ಒಂದೊಮ್ಮೆ ನೀವು ಮಾತನಾಡಿ ಎಂದು ಪಕ್ಷ ಸೂಚಿಸಿದರೆ ನಮ್ಮಿಂದಾದ ಪ್ರಯತ್ನ ನಡೆಸುತ್ತೇವೆ ಎಂದು ಸಾಜ ಹೇಳಿದ್ದಾರೆ.
ಜಿಲ್ಲಾ ಉಪಾಧ್ಯಕ್ಷ ಸ್ಥಾನ-ಪಕ್ಷದ ನಾಯಕರ ವಾಗ್ದಾನ ನಾಮಕಾವಸ್ಥೆ ಹುದ್ದೆ ಬೇಡವೆಂದು ನಿರಾಕರಿಸಿದ ಪುತ್ತಿಲ
ಅರುಣ್ ಕುಮಾರ್ ಪುತ್ತಿಲ ಅವರಿಗೆ ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡುವುದಾಗಿ ಪಕ್ಷದ ನಾಯಕರು ವಾಗ್ದಾನ ಮಾಡಿದ್ದರು.ಆದರೆ ಅದನ್ನು ಪುತ್ತಿಲ ಅವರು ನಿರಾಕರಿಸಿದ್ದಾರೆ.ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರೊಂದಿಗೆ ಮಾತುಕತೆ ನಡೆಸಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಚುನಾವಣೆ ಮುಗಿದ ಮೂರು ದಿನಗಳ ಬಳಿಕ ಪಕ್ಷದ ಜಿಲ್ಲಾ ನಾಯಕರ ಕೋರ್ ಕಮಿಟಿಯೊಂದು ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಪುತ್ತಿಲ ಅವರಿಗೆ ಪಕ್ಷದಲ್ಲಿ ಹುದ್ದೆ ನೀಡುವ ಕುರಿತು ಅಭಿಪ್ರಾಯ ಸಂಗ್ರಹಣೆ ಮಾಡಿತ್ತು.ಬೇರೆ ಪಕ್ಷದಿಂದ ಬಂದವರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ.ಇನ್ನು ಪರಿವಾರ ಸಂಘಟನೆಯವರನ್ನು ಸೇರಿಸಿಕೊಳ್ಳುವುದಕ್ಕೆ ಆಕ್ಷೇಪಿಸುತ್ತೇವೆಯೇ ಎಂದು ಕೇಳಿದ್ದ ಮಂಡಲ ಬಿಜೆಪಿ ಪ್ರಮುಖರು, ಪುತ್ತಿಲ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ, ಅವರಿಗೆ ಪಕ್ಷದಲ್ಲಿ ಹುದ್ದೆ ನೀಡುವುದಕ್ಕೆ ನಮ್ಮಿಂದ ಯಾವುದೇ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದ್ದರು.ಆದರೆ ಸದ್ಯ ಪಕ್ಷದ ಸದಸ್ಯತನ ಅಭಿಯಾನ ನಡೆದು ಹೊಸ ತಂಡ ರಚನೆಯಾಗಬೇಕು.ಅಲ್ಲಿಯವರೆಗೆ ಜಿಲ್ಲೆಯ ಉಪಾಧ್ಯಕ್ಷ ಸ್ಥಾನವನ್ನು ಮಾತ್ರ ನೀಡಲು ಅವಕಾಶವಿದೆ ಎಂದು ಹೇಳಿದ್ದ ಜಿಲ್ಲಾ ನಾಯಕರು ಪುತ್ತಿಲ ಅವರೊಂದಿಗೆ ಗುರುತಿಸಿಕೊಂಡಿರುವ ಡಾ.ಸುರೇಶ್ ಪುತ್ತೂರಾಯ ಅವರಿಗೆ ಈ ವಿಚಾರ ತಿಳಿಸಿದ್ದರು.ಪುತ್ತಿಲರಿಗೆ ಸದ್ಯ ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡುವುದು.ಬಳಿಕ ಬೇರೆ ಹುದ್ದೆ ನೀಡುವ ಕುರಿತು ಭರವಸೆ ನೀಡಿದ್ದರು.ಆದರೆ ಪುತ್ತಿಲ ಪರಿವಾರ ಇದಕ್ಕೆ ಸಮ್ಮತಿ ಸೂಚಿಸದೆ ಪುತ್ತಿಲ ಅವರಿಗೆ ಜಿಲ್ಲಾಧ್ಯಕ್ಷ ಹುದ್ದೆಯನ್ನೇ ನೀಡಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರು.ಆದರೆ ಬಿಜೆಪಿ ಸಿದ್ಧಾಂತದ ಪ್ರಕಾರ ನೇರವಾಗಿ ಜಿಲ್ಲಾಧ್ಯಕ್ಷ ಹುದ್ದೆಗೆ ನೇಮಕ ಸಾಧ್ಯವಿಲ್ಲವೆನ್ನುವ ಕಾರಣಕ್ಕಾಗಿ ಪುತ್ತಿಲ ಅವರಿಗೆ ಜಿಲ್ಲಾಧ್ಯಕ್ಷ ಹುದ್ದೆ ನೀಡುವುದು ಅಸಾಧ್ಯ ಎಂದು ಜಿಲ್ಲಾ ನಾಯಕರು ಸ್ಪಷ್ಟಪಡಿಸಿದ್ದರು.ಇದರಿಂದಾಗಿ ಮಾತುಕತೆ ಮುರಿದು ಬಿದ್ದು ಗ್ರಾ.ಪಂ.ಉಪಚುನಾವಣೆಯಲ್ಲಿಯೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ. ಮುಂದಿನ ಜಿ.ಪಂ., ತಾ.ಪಂ., ಲೋಕಸಭಾ ಚುನಾವಣೆಗೆ ಮೊದಲು ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯವನ್ನು ಮೇಲಿನವರೇ ಸರಿಮಾಡಬೇಕು ಎಂದು ಆಗ್ರಹಿಸುತ್ತಿರುವ ಕಾರ್ಯಕರ್ತರು, ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಪೇಜಾವರ ಸ್ವಾಮೀಜಿಯವರು ಒಟ್ಟಿಗೆ ಕುಳಿತು ಚರ್ಚಿಸಿದರೆ ಒಂದು ಗಂಟೆಯೊಳಗೆ ಸಮಸ್ಯೆ ಪರಿಹಾರವಾಗಲು ಸಾಧ್ಯವಿದೆ.ಆದರೆ ಈ ಕುರಿತು ಯಾರೂ ಮನಸ್ಸು ಮಾಡುತ್ತಿಲ್ಲ ಎನ್ನುವ ಮಾತೂ ಕಾರ್‍ಯಕರ್ತರಿಂದ ಕೇಳಿ ಬರುತ್ತಿದೆ.
ನಾಮಕಾವಸ್ಥೆ ಹುದ್ದೆ ನನಗೆ ಬೇಡ ಸರಿಯಾಗದೇ ಇದ್ದರೆ ಜಿ.ಪಂ.,ತಾ.ಪಂ.ಚುನಾವಣೆಯಲ್ಲಿಯೂ ಸಮಸ್ಯೆ
ಈ ಹಿಂದೆಯೂ ನನಗೆ ಜಿಲ್ಲಾ ಉಪಾಧ್ಯಕ್ಷ ಹುದ್ದೆ ಕೊಡುತ್ತೇನೆಂದು ಹೇಳಿ ಹುದ್ದೆಯನ್ನು ಸೃಷ್ಟಿಸಿ ಕೊಡಲು ನಿರ್ಧರಿಸಿ ಬಳಿಕ ನೇಮಕಾತಿ ಪತ್ರವನ್ನು ಹರಿದು ಹಾಕಿರುವುದು ಎಲ್ಲರಿಗೂ ಗೊತ್ತೇ ಇದೆ.ಅದೇ ರೀತಿ ಈ ಬಾರಿಯೂ ನಾಮಕಾವಸ್ಥೆಗೆ ಹುದ್ದೆ ನೀಡುವ ಮಾತಾಡಿದ್ದಾರೆ.ಇದು ನನಗೆ ಅಗತ್ಯವಿಲ್ಲ,ಕೊಡುವುದಾದರೆ ಸರಿಯಾದ ಸ್ಥಾನಮಾಡ ನೀಡಲಿ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.ವಿವಾದ ಸರಿಮಾಡುವುದಾದರೆ ಮಾಡಲಿ ಇಲ್ಲವಾದಲ್ಲಿ ಮುಂದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿಯೂ ಅನುಭವಿಸುತ್ತಾರೆ ಎಂದು ಪುತ್ತಿಲ ಹೇಳಿದ್ದಾರೆ.