ಪುತ್ತೂರು: ರಸ್ತೆ ಬದಿಯಲ್ಲಿದೆ ಬೃಹದಾಕಾರದ ಮರಗಳು..!-ಭೀತಿಯಲ್ಲೇ ವಾಹನ ಸವಾರರ ಪ್ರಯಾಣ

0

ಯೂಸುಫ್ ರೆಂಜಲಾಡಿ


ಪುತ್ತೂರು: ಮಳೆಗಾಲ ಬಂತೆಂದರೆ ಸಾಕು, ಮಳೆ, ಗಾಳಿಗೆ ಮರ ಬೀಳುವುದು, ಮರದ ಗೆಲ್ಲು ಮುರಿದು ಬೀಳುವುದು, ಪ್ರಾಕೃತಿಕ ಅಪಾಯ ಸಂಭವಿಸುವುದು ಇವೆಲ್ಲ ಸಾಮಾನ್ಯ. ಅದೇ ನಿತ್ಯ ಸಾವಿರಾರು ವಾಹನಗಳ, ಜನರ ಓಡಾಟವಿರುವ ರಸ್ತೆ ಬದಿಯಲ್ಲಿರುವ ಬೃಹದಾಕಾರದ ಮರಗಳು, ಮರದ ಗೆಲ್ಲುಗಳು ಮುರಿದು ಬಿದ್ದರೆ ಏನಾದೀತು..? ಮೊದಲೇ ರಸ್ತೆ ಬದಿಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಜನರ ಮೇಲೋ, ವಾಹನಗಳ ಮೇಲೋ ಬಿದ್ದು ದುರಂತ ಸಂಭವಿಸಿದರೆ ಅದಕ್ಕೆ ಯಾರು ಹೊಣೆಗಾರರು..? ಇಂತಹ ಪ್ರಶ್ನೆಗಳು ನಿತ್ಯ ಜನರನ್ನು ಕಾಡುತ್ತಿದೆ. ಮರ ವಾಹನಗಳ ಮೇಲೆ ಬಿದ್ದು ಹಲವು ಅನಾಹುತಗಳು ಸಂಭವಿಸಿರುವ ಉದಾಹರಣೆ ಕೂಡಾ ಇದೆ. ಮರಗಳಿಂದಾಗಿ ಏನಾದರೂ ಅಪಾಯ ಸಂಭವಿಸಿದರೆ ಎಲ್ಲರೂ ಬೊಟ್ಟು ಮಾಡುವುದು, ಟೀಕಿಸುವುದು ಅರಣ್ಯ ಇಲಾಖೆಯನ್ನೇ ಆದರೆ ವಾಸ್ತವಾಂಶ ಮಾತ್ರ ಬೇರೆಯೇ ಇದೆ. ರಸ್ತೆ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವುದಕ್ಕಾಗಲೀ, ಪ್ರಾಕೃತಿಕ ವಿಕೋಪ ಸಂಭವಿಸಿ ಮರಗಳಿಂದಾಗಿ ಅನಾಹುತ ಸಂಭವಿಸಿದಾಗ ಅದನ್ನು ತರವುಗೊಳಿಸುವುದಕ್ಕಾಗಲೀ ಅರಣ್ಯ ಇಲಾಖೆಯಲ್ಲಿ ಅದಕ್ಕೆ ಬೇಕಾಗುವ ಪ್ರತ್ಯೇಕ ಅನುದಾನಗಳಿಲ್ಲ. ಮಾತ್ರವಲ್ಲದೇ ಮರಗಳನ್ನು ಕಡಿಯಬೇಕು ಎನ್ನುವ ರೂಲ್ಸ್ ಕೂಡಾ ಅರಣ್ಯ ಇಲಾಖೆಯಲ್ಲಿಲ್ಲ.


ಹಲವು ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಬೃಹದಾಕಾರದ ಮರಗಳು ಅಪಾಯಕಾರಿ ಸ್ಥಿತಿಯಲ್ಲಿರುವುದರಿಂದ ಮುಖ್ಯವಾಗಿ ವಾಹನ ಸವಾರರು ಪ್ರಾಣ ಭೀತಿಯಿಂದಲೇ ಸಂಚರಿಸುತ್ತಾರೆ. ಆದರೂ ಮರವನ್ನು ತೆರವುಗೊಳಿಸುವ ಗೋಜಿಗೆ ಯಾರೂ ಹೋಗುತ್ತಿಲ್ಲ. ಮೆಸ್ಕಾಂ ಇಲಾಖೆಯನ್ನು ಕೇಳಿದರೆ ಅವರು ಅರಣ್ಯ ಇಲಾಖೆಯತ್ತ ಬೆರಳು ತೋರಿಸುತ್ತಾರೆ. ಅರಣ್ಯ ಇಲಾಖೆಯವರನ್ನು ಕೇಳಿದರೆ ನಮ್ಮಲ್ಲಿ ಮರಗಳನ್ನು ತೆರವುಗೊಳಿಸಲು ಅನುದಾನವಿಲ್ಲ, ಅವಕಾಶವಿಲ್ಲ ಎಂಬ ಉತ್ತರ ಲಭಿಸುತ್ತದೆ. ತೆಂಗಿನ ಮರಗಳೂ ಅನೇಕ ಕಡೆಗಳಲ್ಲಿ ರಸ್ತೆ ಬದಿಯಲ್ಲಿದ್ದು ಅದನ್ನು ಕೂಡಾ ತೆರವುಗೊಳಸಬೇಕೆನ್ನುವ ಆಗ್ರಹ ಕೇಳಿ ಬಂದಿದೆ.


ಪುತ್ತೂರು ಮತ್ತು ಕಡಬ ತಾಲೂಕಿನಲ್ಲೂ ಹಲವು ಅಪಾಯಕಾರಿ ಮರಗಳು ರಸ್ತೆ ಬದಿಯಲ್ಲೇ ಅಪಾಯವನ್ನು ಆಹ್ವಾನಿಸುತ್ತದೆಯಾದರೂ ಅದನ್ನು ತೆರವುಗೊಳಿಸಲು ಸಂಬಂಧಪಟ್ಟ ಯಾವುದೇ ಇಲಾಖೆಗಳು ಮುಂದೆ ಬರುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕರದ್ದು. ಅರಣ್ಯ ಇಲಾಖೆಯಲ್ಲಿ ಪ್ರಾಕೃತಿಕ ವಿಕೋಪದಡಿ ಅನುದಾನದ ವ್ಯವಸ್ಥೆ ಸರಿಯಾಗಿಲ್ಲ. ತುರ್ತು ಸಂದರ್ಭಗಳಲ್ಲಿ ಮರ ಬಿದ್ದು ಸಂಚಾರಕ್ಕೆ ತೊಂದರೆಯುಂಟಾದಾಗ ಕೆಲವೊಮ್ಮೆ ಅರಣ್ಯ ಇಲಾಖೆ ಅದನ್ನು ತೆರವುಗೊಳಿಸಿತ್ತಾದರೂ ಅದಕ್ಕೆ ಪ್ರತ್ಯೇಕವಾದ ಸಾಕಷ್ಟು ಅನುದಾನ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಪಾಯಕಾರಿ ಮರ ತೆರವಿಗೆ ಅನುದಾನ ಮೀಸಲಿಡಿ
ಹೆಚ್ಚಾಗಿ ಮಳೆಗಾಲದಲ್ಲಿ ಮಾತ್ರ ಅಪಾಯಕಾರಿ ಮರ ಎನ್ನುವ ಸಮಸ್ಯೆ ಉದ್ಭವವಾಗುತ್ತಿದ್ದು ಬೃಹದಾಕಾರದ ಅಪಾಯಕಾರಿ ಮರಗಳನ್ನು ಕಡಿಯಲು ಅಥವಾ ಗೆಲ್ಲು ಸವರಲು ಪ್ರಾಕೃತಿಕ ವಿಕೋಪದಡಿ ಒಂದಷ್ಟು ಮೊತ್ತವನ್ನು ಅದಕ್ಕೆಂದೇ ಪ್ರತ್ಯೇಕ ಮೀಸಲಿರಿಸುವುದು ಅಥವಾ ಪ್ರತ್ಯೇಕ ಟಾಸ್ಕ್‌ಫೋರ್ಸ್ ನೇಮಕ ಮಾಡುವುದು ಅಗತ್ಯವಾಗಿದೆ. ಹಾಗಾಗಿ ಪ್ರಾಕೃತಿಕ ವೀಕೋಪಕ್ಕೆಂದೇ ಅಗತ್ಯ ಅನುದಾನ ಮೀಸಲಿರಿಸುವ ಮೂಲಕ ಅಪಾಯಕಾರಿ ಎನಿಸಿದ ಮರಗಳನ್ನು ಕಡಿಯಲು ಇಲ್ಲವೇ ಗೆಲ್ಲುಗಳನ್ನು ಸವರುವ ವಿಚಾರದಲ್ಲಿ ಜಿಲ್ಲಾಡಳಿತ ಅಥವಾ ಸಂಬಂಧಿಸಿದವರು ಚಿಂತನೆ ನಡೆಸಬೇಕಿದೆ ಎನ್ನುವ ಆಗ್ರಹ ಕೂಡಾ ಕೇಳಿ ಬಂದಿದೆ.

ಮೆಸ್ಕಾಂಗೂ ನಷ್ಟ
ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಕಂಬಗಳು ಮುರಿದು ಬೀಳುವ ಪ್ರಮೇಯ ಹಲವು ಕಡೆಗಳಲ್ಲಿ ನಡೆದಿದ್ದು ಇದರಿಂದ ಮೆಸ್ಕಾಂ ಇಲಾಖೆ ಸಾಕಷ್ಟು ನಷ್ಟ ಅನುಭವಿಸುತ್ತಿದೆ. ಹಾಗಾಗಿ ಅಂತಹ ಅಪಾಯಕಾರಿ ಮರಗಳನ್ನು ಮೊದಲೇ ತೆರವುಗೊಳಿಸಿದ್ದಲ್ಲಿ ಅಥವಾ ಗೆಲ್ಲುಗಳನ್ನು ಸವರಿದ್ದಲ್ಲಿ ಸಂಭಾವ್ಯ ಅಪಾಯಗಳನ್ನು ಮತ್ತು ನಷ್ಟಗಳನ್ನು ತಪ್ಪಿಸಬಹುದಾಗಿದೆ.

ರಸ್ತೆ ಬದಿಗಳಲ್ಲಿ ಹಲವಾರು
ಮರಗಳಿದ್ದು ಅದನ್ನು ಕಡಿಯಲು ಅವಕಾಶವಿಲ್ಲ. ತೀರಾ ಅಪಾಯಕಾರಿ ಎನಿಸಿದ್ದನ್ನು ಅನೇಕ ಸಂದರ್ಭಗಳಲ್ಲಿ ನಾವು ತೆರವುಗೊಳಿಸಿದ ನಿದರ್ಶನಗಳಿವೆ. ಮರ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಹಲವು ಅರ್ಜಿಗಳು ನಮ್ಮ ಇಲಾಖೆಗೆ ಬರುತ್ತಿದೆ, ಹಾಗೆಂದು ಮರಗಳನ್ನು ಕಡಿಯಲು ಆಗುವುದಿಲ್ಲ. ನಾವು ಮರಗಳನ್ನು ಕಡಿಯುವುದಕ್ಕೆ ಆದ್ಯತೆ ಕೊಡುವ ಬದಲು ಅರಣ್ಯವನ್ನು ರಕ್ಷಿಸಲು ಆದ್ಯತೆ ನೀಡುತ್ತಿದ್ದೇವೆ.
-ಕಿರಣ್ ಬಿ.ಎಸ್, ವಲಯಾರಣ್ಯಾಧಿಕಾರಿ ಪುತ್ತೂರು

LEAVE A REPLY

Please enter your comment!
Please enter your name here