ನರಿಮೊಗರು ಗ್ರಾ.ಪಂ ಗ್ರಾಮ ಸಭೆ

0

ರಾತ್ರಿ ಪಾಳಿಯಲ್ಲೂ ಲೈನ್‌ಮೆನ್ ಕರ್ತವ್ಯ ನಿರ್ವಹಿಸಲು ವ್ಯವಸ್ಥೆಯಾಗಲಿ-ಗ್ರಾಮಸ್ಥರ ಆಗ್ರಹ
ಮುಕ್ವೆಯಲ್ಲಿ ಬಿರುಕು ಬಿಟ್ಟ ತಡೆಗೋಡೆ, ರೂ.17 ಲಕ್ಷ ನೀರು ಪಾಲು-ಆರೋಪ

ಪುತ್ತೂರು: ಗ್ರಾಮಾಂತರ ಪ್ರದೇಶದಲ್ಲಿ ರಾತ್ರಿ ವೇಳೆ ಕರೆಂಟ್ ಹೋದರೆ ಮರುದಿವಸ ಲೈನ್‌ಮೆನ್ ಡ್ಯೂಟಿ ಪ್ರಾರಂಭಿಸಿದ ಮೇಲೆ ಕರೆಂಟ್ ಬರುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಆಗಲೇಬೇಕು ಎಂದು ಗ್ರಾಮಸ್ಥ ರವೀಂದ್ರ ರೈ ನೆಕ್ಕಿಲು ಹೇಳಿದರು.


ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಲು ಲೈನ್‌ಮೆನ್‌ಗಳನ್ನು ನೇಮಕಗೊಳಿಸಬೇಕು ಮತ್ತು ಅದಕ್ಕೆಂದೇ ಪ್ರತ್ಯೇಕ ವಾಹನದ ವ್ಯವಸ್ಥೆ ಮೆಸ್ಕಾಂ ಮಾಡಬೇಕು ಎಂದು ಆಗ್ರಹಿಸಿದರು. ಗ್ರಾಮಸ್ಥರು ಧ್ವನಿಗೂಡಿಸಿದರು. ಪೊಲೀಸ್ ಇಲಾಖೆಗೆ `ಹೊಯ್ಸಳ’ ಎನ್ನುವ ಪ್ರತ್ಯೇಕ ವಿಭಾಗ ಮತ್ತು ವಾಹನದ ವ್ಯವಸ್ಥೆ ಇದ್ದಂತೆ ಮೆಸ್ಕಾಂಗೂ ವ್ಯವಸ್ಥೆ ಮಾಡಬೇಕೆಂದು ರವೀಂದ್ರ ರೈ ನೆಕ್ಕಿಲು ಆಗ್ರಹಿಸಿದರು. ನಿಮ್ಮ ಬೇಡಿಕೆಯನ್ನು ಮೇಲಿನ ಇಲಾಖೆಗೆ ತಿಳಿಸುವುದಾಗಿ ಮೆಸ್ಕಾಂ ಜೆಇ ಸುಂದರ್ ಹೇಳಿದರು.

ಬಿರುಕು ಬಿಟ್ಟ ತಡೆಗೋಡೆ, ರೂ.17 ಲಕ್ಷ ನೀರು ಪಾಲು-ಆರೋಪ
ಮುಕ್ವೆ ಚಂದ್ರಮ್‌ಸಾಗ್ ಎಂಬಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಮಾಡಿರುವ ತಡೆಗೋಡೆ ಬಿರುಕು ಬಿಟ್ಟಿದ್ದು 17 ಲಕ್ಷ ರೂ ನೀರು ಪಾಲಾಗುವ ಸಾಧ್ಯತೆ ಇದೆ. ಆ ರೀತಿಯ ಕಳಪೆ ಕಾಮಗಾರಿ ಮಾಡಿದ್ದರೂ ಸಂಬಂಧಪಟ್ಟವರ ವಿರುದ್ಧ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ಗ್ರಾಮಸ್ಥ ರಾಘವೇಂದ್ರ ಪ್ರಶ್ನಿಸಿದರು. ಸ್ಥಳೀಯವಾಗಿ ನಾಲ್ಕು ಮನೆಗಳಿಗೆ ತಡೆಗೋಡೆ ಅವಶ್ಯವಿದ್ದರೂ ಒಬ್ಬರ ಮನೆಗೆ ಮಾತ್ರ ತಡೆಗೋಡೆ ಮಾಡಿ ಬಾಕಿ ನಾಲ್ಕು ಮನೆಗೆ ಯಾಕಿಲ್ಲ ಎಂದು ಕೆಲ ಗ್ರಾಮಸ್ಥರು ಪ್ರಶ್ನಿಸಿದರು. 17 ಲಕ್ಷ ರೂ ಅನುದಾನದಲ್ಲಿ ಮಾಡಿರುವ ತಡೆಗೋಡೆ ಬಿರುಕು ಬಿಟ್ಟಿದೆ ಎಂದಾದರೆ ಇದಕ್ಕೆ ಅರ್ಥವೇನು ಎಂದು ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥ ಪ್ರಕಾಶ್ ಪುರುಷರಕಟ್ಟೆ ಧ್ವನಿಗೂಡಿಸಿದರು.

ಸ್ಮಶಾನಕ್ಕೆ ಜಾಗ ಕಾಯ್ದಿರಿಸಲು ಆಗ್ರಹ:
ಸದಸ್ಯ ಬಾಬು ಶೆಟ್ಟಿ ಮಾತನಾಡಿ ವೀರಮಂಗಲ ಆನಾಜೆಯಲ್ಲಿ 10 ಎಕ್ರೆ ಜಾಗ 2014ರಲ್ಲಿ ಅರಣ್ಯ ಇಲಾಖೆ ಡ್ರೀಮ್ಡ್ ಪಾರೆಸ್ಟ್ ಜಾಗವಾಗಿ ಮಾಡಿದ್ದು ಅಲ್ಲಿ 1 ಎಕ್ರೆ ಜಾಗವನ್ನು ಸ್ಮಶಾನಕ್ಕೆಂದು ಕಾಯ್ದಿರಿಸಬೇಕೆಂದು ಅರಣ್ಯಾಧಿಕಾರಿಯವರಲ್ಲಿ ಮನವಿ ಮಾಡಿದರು. ಗ್ರಾ.ಪಂನಿಂದ ನೀವು ಅರ್ಜಿ ಕೊಡಿ, ಮುಂದಿನ ಪ್ರೊಸೀಜರ್ ನೋಡಿಕೊಂಡು ಜಾಗ ಕಾಯ್ದಿರಿಸಲು ಪ್ರಯತ್ನಿಸಲಾಗುವುದು ಎಂದು ಉಪ ವಲಯಾರಣ್ಯಾಧಿಕಾರಿ ಕುಮಾರಸ್ವಾಮಿ ಹೇಳಿದರು.

ಕಾಟಾಚಾರಕ್ಕೆ ವನಮಹೋತ್ಸವ ಮಾಡಬಾರದು:
ಅರಣ್ಯ ಇಲಾಖೆ ವತಿಯಿಂದ ನಡೆಯುವ ವನ ಮಹೋತ್ಸವ ನಾಮಕಾವಸ್ಥೆಗೆ ಆಗಬಾರದು, ಸಾರ್ವಜನಿಕರ ಅಥವಾ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ವನಮಹೋತ್ಸವ ಮಾಡಬೇಕು, ವನಮಹೋತ್ಸವದ ಉದ್ದೇಶ ಈಡೇರಬೇಕು, ಕಾಟಾಚಾರಕ್ಕೆ ಮಾಡಬಾರದು ಎಂದು ಗ್ರಾಮಸ್ಥ ಸುರೇಶ್ ಪ್ರಭು ಹೇಳಿದರು.

ನರಿಮೊಗರುನಲ್ಲಿ ಆರೋಗ್ಯ ಕೇಂದ್ರ ತೆರೆಯಲು ಮತ್ತೆ ಒತ್ತಾಯ:
ನರಿಮೊಗರು ಗ್ರಾ.ಪಂ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರ ತೆರೆಯಬೇಕೆಂದು ನಾವು ಹಲವು ವರ್ಷಗಳಿಂದ ಬೇಡಿಕೆಯಿಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಆದಷ್ಟು ಬೇಗ ನರಿಮೊಗರು ಕೇಂದ್ರ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರ ತೆರೆಯಲು ಸಂಬಂಧಪಟ್ಟವರು ಕ್ರಮ ವಹಿಸಬೇಕು, ಈ ಬಗ್ಗೆ ಆರೋಗ್ಯ ಸಚಿವರಿಗೂ ಮನವಿ ಕೊಡಬೇಕು ಎಂದು ಗ್ರಾಮಸ್ಥ ವೇದನಾಥ ಸುವರ್ಣ ಒತ್ತಾಯಿಸಿದರು. ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಎ ಉತ್ತರಿಸಿ ಈ ಬಗ್ಗೆ ನಿರ್ಣಯ ಮಾಡಿ ಸಂಬಂಧಪಟ್ಟವರಿಗೆ ಕಳುಹಿಸುತ್ತೇವೆ ಎಂದು ಹೇಳಿದರು.

ಹಂದಿ ಸಾಕಾಣಿಕೆ-ಶುಚಿತ್ವ ಸಮಸ್ಯೆ
ಮುಕ್ವೆ ನೆರಿಗೇರಿ ಪ್ರದೇಶದಲ್ಲಿ ಹಂದಿ ಸಾಕಾಣಿಕೆಯಿಂದ ಸಮಸ್ಯೆಯಾಗಿದೆ, ಹಂದಿ ಸಾಕಾಣಿಕೆಗೆ ನಮ್ಮ ವಿರೋಧವಿಲ್ಲ, ಆದರೆ ಶುಚಿತ್ವವಿಲ್ಲದ ಕಾರಣ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರಾದ ಹಸನ್ ಹಾಗೂ ಇನ್ನೋರ್ವರು ಹೇಳಿದರು. ಪಿಡಿಓ ರವಿಚಂದ್ರ ಯು ಉತ್ತರಿಸಿ ಹಂದಿ ಸಾಕಾಣಿಕೆದಾರರ ಸಂಘದವರೇ ಈ ವಿಚಾರದಲ್ಲಿ ಗ್ರಾ.ಪಂಗೆ ಬಂದಿದ್ದರು, ಶುಚಿತ್ವ ಕಾಪಾಡುವ ಬಗ್ಗೆ ಅವರು ಒಪ್ಪಿಕೊಂಡಿದ್ದಾರೆ, ಇನ್ನೊಮ್ಮೆ ಅವರ ಮೂಲಕ ವಿಚಾರ ತಿಳಿಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದರು.

ಕಳ್ಳತನಗೊಂಡ ಮೊಬೈಲ್ ಸಿಗಲೇ ಇಲ್ಲ..!
2 ವರ್ಷದ ಹಿಂದೆ ಪುರುಷರಕಟ್ಟೆ ಅಂಗಡಿಯೊಂದರಿಂದ ಮೊಬೈಲ್ ಫೋನ್ ಕಳ್ಳತನವಾಗಿತ್ತು. ಆ ಬಳಿಕ ಅದರ ದಾಖಲೆಗಳನ್ನು ನಾವು ಪೊಲೀಸ್ ಇಲಾಖೆಗೆ ನೀಡಿದ್ದೆವು, ಆದರೂ ಮೊಬೈಲ್ ಪತ್ತೆ ಮಾಡಲು ಪೊಲೀಸರಿಂದ ಸಾಧ್ಯವಾಗಿಲ್ಲ, ಯಾಕೆ ಹೀಗಾಯಿತು ಎಂದು ಗ್ರಾಮಸ್ಥ ಸಲೀಂ ಮಾಯಂಗಳ ಪೊಲೀಸ್ ಇಲಾಖೆಯ ಪರವಾಗಿ ಮಾಹಿತಿ ನೀಡಿದ ಪುತ್ತೂರು ನಗರ ಠಾಣೆಯ ಎಎಸ್ಸೈ ಚಕ್ರಪಾಣಿ ಅವರಲ್ಲಿ ಕೇಳಿದರು. ಈ ವಿಚಾರವನ್ನು ನೋಟ್ ಮಾಡಿಕೊಂಡು ಪರಿಶೀಲನೆ ಮಾಡುತ್ತೇವೆ ಎಂದು ಚಕ್ರಪಾಣಿ ಹೇಳಿದರು.

ವಿದ್ಯುತ್ ಬಿಲ್ ಹೆಚ್ಚಳ-ಚರ್ಚೆ
ಗ್ರಾಮಸ್ಥ ಸುಭಾಶ್ಚಂದ್ರ ಶೆಣೈ ಮಾತನಾಡಿ ವಿದ್ಯುತ್ ಬಿಲ್ ಹೆಚ್ಚಳಗೊಂಡಿದ್ದು ಅದನ್ನು ಕಡಿಮೆಗೊಳಿಸಲು ಆಗ್ರಹಿಸಿ ಗ್ರಾ.ಪಂ ಮೂಲಕ ನಿರ್ಣಯ ಮಾಡಿ ಕಳುಹಿಸಬೇಕೆಂದು ಹೇಳಿದರು. ಸದಸ್ಯ ಬಾಬು ಶೆಟ್ಟಿ ಮಾತನಾಡಿ ವಿದ್ಯುತ್ ಬಿಲ್ ವಿಧಾನಸಭಾ ಚುನಾವಣೆಗೂ ಮುನ್ನ ಎಪ್ರಿಲ್‌ನಲ್ಲಿ ಹೆಚ್ಚಳಗೊಂಡಿದ್ದು ಚುನಾವಣೆ ಹಿನ್ನೆಲೆಯಲ್ಲಿ ಸ್ಥಗೊತಗೊಂಡು ಬಳಿಕ ಹೆಚ್ಚಳವಾಗಿದೆ ಎಂದು ಹೇಳಿದರು. ಸುಭಾಶ್ಚಂದ್ರ ಶೆಣೈ ಮಾತನಾಡಿ ಹಿಂದಿನ ಸರಕಾರದ ಇತರ ಯೋಜನೆಗಳನ್ನು ಈಗಿನ ಸರಕಾರ ರದ್ದುಪಡಿಸಿದ್ದು ಅದರಂತೆ ವಿದ್ಯುತ್ ಬಿಲ್ ಹೆಚ್ಚಳವನ್ನೂ ತಡೆ ಹಿಡಿಯಬಹುದಿತ್ತಲ್ಲಾ ಎಂದು ಕೇಳಿದರು. ಸದಸ್ಯ ನವೀನ್ ಕುಮಾರ್ ರೈ ಧ್ವನಿಗೂಡಿಸಿದರು. ಗ್ರಾಮಸ್ಥ ರವೀಂದ್ರ ರೈ ನೆಕ್ಕಿಲು ಮಾತನಾಡಿ ಸರಕಾರ ವಿದ್ಯುತ್ ಫ್ರೀ ಮಾಡಿರುವಾಗ ಇದೆಲ್ಲಾ ಚರ್ಚೆ ಯಾಕೆ ಎಂದು ಕೇಳಿದರು. ಸುಭಾಶ್ಚಂದ್ರ ಶೆಣೈ ಮಾತನಾಡಿ ವಾಣಿಜ್ಯ ಉದ್ದೇಶಗಳ ವಿದ್ಯುತ್ ಉಚಿತ ಇಲ್ಲ ಎಂದರು. ಚರ್ಚೆ ನಡೆಯುತ್ತಿರುವ ಮಧ್ಯೆ ಪ್ರವೇಶಿಸಿದ ಮೆಸ್ಕಾಂ ಜೆಇ ಸುಂದರ್ ಮಾತನಾಡಿ ಇದು ಸರಕಾರಿ ಮಟ್ಟದ ವಿಚಾರ, ನಮ್ಮಲ್ಲಿ ಚರ್ಚಿಸಿ ಪ್ರಯೋಜನವಿಲ್ಲ ಎಂದರು.

ತ್ಯಾಜ್ಯ ಸಮಸ್ಯೆ-ವಿದ್ಯುತ್ ಕಂಬ ಅಪಾಯಕಾರಿ ಸ್ಥಿತಿಯಲ್ಲಿ:
ಗ್ರಾಮಸ್ಥ ವೃಷಭರಾಜ್ ಜೈನ್ ಮಾತನಾಡಿ ಎಂ.ಜಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದು ಹೋಗುತ್ತಾರೆ. ಇದರ ಬಗ್ಗೆ ಗ್ರಾ.ಪಂ ಗಮನ ಕೊಡಬೇಕು ಎಂದು ಅವರು ಆಗ್ರಹಿಸಿದರು. ಸುರುಳಿಮಜಲು ಎಂಬಲ್ಲಿ ವಿದ್ಯುತ್ ಕಂಬವೊಂದು ಅಪಾಯಕಾರಿ ಸ್ಥಿತಿಯಲ್ಲಿದ್ದು ಸಂಬಂಧಪಟ್ಟವರು ಅದಕ್ಕೆ ಬದಲಿ ವ್ಯವಸ್ಥೆ ಮಾಡಬೇಕೆಂದು ಅವರು ಆಗ್ರಹಿಸಿದರು.

ಖಾಸಗೀ ಜಾಗಕ್ಕೆ ಕಾಂಕ್ರೀಟ್ ರಸ್ತೆ-ಆರೋಪ
ಪುರುಷರಕಟ್ಟೆ ಓಂಕಾರ್ ಲೇಔಟ್‌ಲ್ಲಿ ಖಾಸಗೀ ಜಾಗಕ್ಕೆ ಕಾಂಕ್ರೀಟ್ ರಸ್ತೆ ಆಗಿದೆ. ಇದು ಯಾವ ಅನುದಾನದಲ್ಲಿ ಆದದ್ದು ಎಂದು ಸಲೀಂ ಮಾಯಂಗಳ ಕೇಳಿದರು. ಪಿಡಿಓ ರವಿಚಂದ್ರ ಉತ್ತರಿಸಿ ಅದು ಶಾಸಕರ ಅನುದಾನದಲ್ಲಿ ಆದ ರಸ್ತೆ, ಹೆಚ್ಚಿನ ಮಾಹಿತಿ ನಮಗೆ ಇಲ್ಲ ಎಂದು ಹೇಳಿದರು. ಉಪಾಧ್ಯಕ್ಷ ಸುಧಾಕರ ಕುಲಾಲ್ ಮಾತನಾಡಿ ಶಾಸಕರ ವಿಶೇಷ ಅನುದಾನದಲ್ಲಿ ಅಲ್ಲಿಗೆ ರಸ್ತೆ ಆಗಿದೆ ಎಂದು ಹೇಳಿದರು. ಸಲೀಂ ಮಾಯಂಗಳ ಮಾತನಾಡಿ ಖಾಸಗೀ ರಸ್ತೆಗೆ ಹೇಗೆ ಕಾಂಕ್ರೀಟ್ ಮಾಡಿಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಗ್ರಾಮಸ್ಥ ರಾಘವೇಂದ್ರ ನಾಯಕ್ ಮಾತನಾಡಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೆ ಹೇಗೆ ಎಂದು ಕೇಳಿದರು. ಸದ್ರಿ ರಸ್ತೆ ವಿಚಾರವನ್ನು ಸಂಬಂಧಪಟ್ಟ ಇಲಾಖೆಗೆ ಬರೆದು ಕಳುಹಿಸಿ ಎಂದು ಸದಸ್ಯ ಬಾಬು ಶೆಟ್ಟಿ ಹೇಳಿದರು.

ನರಿಮೊಗರುವಿನಲ್ಲಿ ಪಶು ಚಿಕಿತ್ಸಾಲಯ ಬೇಕು:
ವೇದನಾಥ ಸುವರ್ಣ ಮಾತನಾಡಿ ನರಿಮೊಗರು ವ್ಯಾಪ್ತಿಯಲ್ಲಿ ಪಶು ಚಿಕಿತ್ಸಾಲಯ ಇಲ್ಲ, ಮದ್ಯಾಹ್ನದ ವರೆಗಾದರೂ ಪಶು ವೈದ್ಯಾಧಿಕಾರಿ ಇರುವಂತೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು. ಉಪಾಧ್ಯಕ್ಷ ಸುಧಾಕರ ಕುಲಾಲ್ ಮಾತನಾಡಿ ಇದು ಹಲವು ವರ್ಷಗಳ ಬೇಡಿಕೆ ಎಂದು ಹೇಳಿದರು. ವೇದನಾಥ ಸುವರ್ಣ ಮಾತನಾಡಿ ಗ್ರಾ.ಪಂನವರು ಪ್ರಯತ್ನ ಮಾಡಿದರೆ ಮಾಡಬಹುದು, ಕೇವಲ ಅಭಿಪ್ರಾಯ ಹೇಳಿದರೆ ಸಾಲದು ಎಂದು ಹೇಳಿದರು.

ಅಕ್ರಮ-ಸಕ್ರಮ ಸಮಸ್ಯೆ ಬಗೆಹರಿಸಲು ಆಗ್ರಹ:
ಗ್ರಾಮಸ್ಥ ಝುಬೈರ್ ಮಾತನಾಡಿ ಜಾಗದ ಅಕ್ರಮ ಸಕ್ರಮ ಮಾಡಿಸಿಕೊಳ್ಳಲು ಸಾಧ್ಯವಾಗದೇ ಹಲವರು ತೊಂದರೆಗೆ ಸಿಲುಕಿದ್ದು ಅದಕ್ಕೆ ಪರ್ಯಾಯ ವ್ಯವಸ್ಥೆ ಆಗಬೇಕಿದೆ ಎಂದು ಹೇಳಿದರು. ರವೀಂದ್ರ ರೈ ಧ್ವನಿಗೂಡಿಸಿ ಇದು ಇಡೀ ತಾಲೂಕಿನಲ್ಲಿ ಇರುವ ಸಮಸ್ಯೆ, ಅದನ್ನು ಯಾರಿಗೂ ಸರಿಪಡಿಸಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಗೃಹ ಜ್ಯೋತಿ ಯೋಜನೆ-ಸ್ಷಷ್ಟ ಮಾಹಿತಿ ಕೊಡಿ
ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಂಡರೂ ಜನರಲ್ಲಿ ಗೊಂದಲವಿದೆ. ಯಾವ ತಿಂಗಳಿನಿಂದ ಬಿಲ್ ಕಟ್ಟಬಾರದು ಎಂಬಿತ್ಯಾದಿ ವಿಷಯಗಳ ಬಗ್ಗೆ ಸ್ಪಷ್ಟನೆ ನೀಡಬೇಕು. ಪತ್ರಿಕಾ ಪ್ರಕಟನೆ ಮೂಲಕವಾದರೂ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಕೊಡಬೇಕು ಎಂದು ಸುರೇಶ್ ಪ್ರಭು ಅವರು ಮೆಸ್ಕಾಂ ಇಲಾಖಾ ಅಧಿಕಾರಿಯವರಲ್ಲಿ ಹೇಳಿದರು.

ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ ವೇದನಾಥ ಸುವರ್ಣ:
ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಮೂಲಕ ರೂ 2000 ಸಾವಿರ ಹಾಗೂ ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ವರೆಗೆ ವಿದ್ಯುತ್ ಫ್ರೀ ಮಾಡಿರುವ ಸರಕಾರಕ್ಕೆ ಗ್ರಾಮಸ್ಥ ವೇದನಾಥ ಸುವರ್ಣ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸಿದರು.

ಉತ್ತಮ ಅಭಿವೃದ್ಧಿಯಾಗಿದೆ-ಸುಕನ್ಯಾ
ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದ ತಾ.ಪಂ ಪುತ್ತೂರು ಇದರ ಯೋಜನಾಧಿಕಾರಿ ಸುಕನ್ಯಾ ಮಾತನಾಡಿ ಗ್ರಾಮ ಸಭೆಗಳಲ್ಲಿ ಹೆಚ್ಚಿನ ಜನರು ಭಾಗವಹಿಸುವ ಹಾಗೆ ಮಾಡಬೇಕು. ನರಿಮೊಗರು ಗ್ರಾ.ಪಂ ಅಭಿವೃದ್ಧಿ ಕಾರ್ಯದಲ್ಲಿ ಉತ್ತಮವಾಗಿದೆ. ಉದ್ಯೋಗ ಖಾತರಿಯಲ್ಲಿ ಎರಡನೇ ಸ್ಥಾನ ಪಡೆದಿದ್ದು ಮುಂದಕ್ಕೆ ಒಂದನೇ ಸ್ಥಾನ ಪಡೆಯುವಂತಾಗಲಿ ಎಂದು ಹಾರೈಸಿದರು.

ಅಭಿವೃದ್ಧಿಯಲ್ಲಿ ನಮ್ಮ ಗ್ರಾ.ಪಂ ಸಾಧನೆ ಮಾಡಿದೆ-ಸುಧಾಕರ ಕುಲಾಲ್
ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್ ಮಾತನಾಡಿ ಪುತ್ತೂರು ತಾಲೂಕಿನಲ್ಲಿ ಅತೀ ಹೆಚ್ಚು ವಸತಿ ಕೊಟ್ಟ ಹೆಗ್ಗಳಿಕೆ ನಮ್ಮ ಪಂಚಾಯತ್‌ಗೆ ಇದ್ದು ೭೫ ಮನೆಗಳನ್ನು ನೀಡಿದ್ದೇವೆ ಎಂದು ಹೇಳಿದರು. ಉದ್ಯೋಗ ಖಾತರಿಯಲ್ಲಿ ಅತ್ಯುತ್ತಮ ಸಾಧನೆಯಾಗಿದ್ದು ತಾಲೂಕಿನಲ್ಲಿ ೨ನೇ ಸ್ಥಾನ ನಮ್ಮ ಪಂಚಾಯತ್ ಪಡೆದುಕೊಂಡಿದೆ. ನಮ್ಮ ಅಧ್ಯಕ್ಷ/ಉಪಾಧ್ಯಕ್ಷ ಅವಧಿ ಕೊನೆಗೊಳ್ಳುತ್ತಿದ್ದು ನಮ್ಮ ಅವಧಿಯಲ್ಲಿ ಗ್ರಾ.ಪಂ ಅಭಿವೃದ್ಧಿಯಲ್ಲಿ ಸಾಧನೆ ಮಾಡಿದೆ ಎಂದು ಹೇಳಲು ಸಂತೋಷವಾಗುತ್ತಿದೆ, ಸಹಕರಿಸಿದ ಗ್ರಾಮಸ್ಥರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಸುಧಾಕರ ಕುಲಾಲ್ ಹೇಳಿದರು.

ಗ್ರಾಮಸ್ಥರ ಸಹಕಾರದಿಂದ ಅಭಿವೃದ್ಧಿ-ವಿದ್ಯಾ ಎ
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಎ ಮಾತನಾಡಿ ನರಿಮೊಗರು ಗ್ರಾ.ಪಂ ವ್ಯಾಪ್ತಿಯಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳಾಗಿದ್ದು ಗ್ರಾಮಸ್ಥರ ಸಹಕಾರವಿದ್ದಾಗ ಅಭಿವೃದ್ಧಿ ಸುಲಭವಾಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ಇಲಾಖಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪಿಡಿಓ ರವಿಚಂದ್ರ ಯು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶೇಕ್ ಖಲಂದರ್ ಆಲಿ ವಂದಿಸಿದರು.ಸಿಬ್ಬಂದಿಗಳಾದ ಮಾಧವ, ಸನತ್, ಅಶ್ವಿನಿ, ಭವ್ಯ, ಶೋಭಾ, ಗ್ರಂಥಾಲಯ ಮೇಲ್ವಿಚಾರಕ ವರುಣ್ ಕುಮಾರ್, ಪುನರ್ವಸತಿ ಮೇಲ್ವಿಚಾರಕಿ ಮೀರಮ್ಮ ಸಹಕರಿಸಿದರು.

LEAVE A REPLY

Please enter your comment!
Please enter your name here