ಪುತ್ತೂರು: ಮನೆಯ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಯಾಗಿರುವ ಘಟನೆ ಸರ್ವೆ ಗ್ರಾಮದ ರೆಂಜಲಾಡಿಯಲ್ಲಿ ಜು.27ರಂದು ರಾತ್ರಿ ನಡೆದಿದೆ. ರೆಂಜಲಾಡಿ ನಿವಾಸಿ ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿರುವ ಮೋಹಿನಿ ಎಂಬವರ ಮನೆಗೆ ರಾತ್ರಿ ವೇಳೆ ಮರ ಮುರಿದು ಬಿದ್ದಿದ್ದು ಮನೆಯ ಹಿಂಭಾಗದ ಗೋಡೆ, ಶೀಟ್ ಸಂಪೂರ್ಣ ಕುಸಿದು ಬಿದ್ದಿದೆ. ಮನೆಯಲ್ಲಿ ಮೋಹಿನಿ ಮಾತ್ರ ವಾಸವಿದ್ದು, ಅವರು ಮಾಡಾವಿನಲ್ಲಿರುವ ತನ್ನ ತಾಯಿಯ ಮನೆಗೆ ಹೋಗಿದ್ದ ವೇಳೆ ಘಟನೆ ನಡೆದಿರುವುದರಿಂದ ಅನಾಹುತವೊಂದು ತಪ್ಪಿದಂತಾಗಿದೆ. ಘಟನೆಯಿಂದ ಸುಮಾರು 50 ಸಾವಿರ ರೂ. ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಸ್ಥಳಕ್ಕೆ ಗ್ರಾಮಕರಣಿಕರಾದ ಉಮೇಶ್ ಕಾವಡಿ, ಗ್ರಾಮ ಸಹಾಯಕ ಹರ್ಷಿತ್ ನೇರೋಳ್ತಡ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಮುಂಡೂರು ಗ್ರಾ.ಪಂ ಮಾಜಿ ಸದಸ್ಯ ರಾಮಚಂದ್ರ ಸೊರಕೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ವೆ ಎ ಒಕ್ಕೂಟದ ಸೇವಾನಿರತೆ ರೇಖಾ ರೈ ಅವರಿಗೆ ಮಾಹಿತಿ ನೀಡಿದ್ದು ಯೋಜನೆ ಮೂಲಕ ಅವಕಾಶವಿರುವ ಅಗತ್ಯ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ.