ಸವಣೂರು :ಕಡಬ ತಾಲೂಕಿನ ಸವಣೂರು ಗ್ರಾಮದ ಮೊಗರು ಸ.ಹಿ.ಪ್ರಾ.ಶಾಲಾ ಕೊಠಡಿಯೊಂದು ಬಿರುಕು ಬಿಟ್ಟು ಅಪಾಯದ ಅಂಚಿನಲ್ಲಿದ್ದು, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೆ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ,ಪ್ರಸ್ತುತ ಶಾಲೆಯಲ್ಲಿ 105 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.
ನಿರಂತರ ಸುರಿದ ಮಳೆಯಿಂದಾಗಿ ಶಾಲಾ ಕೊಠಡಿಯ ಮೂಲೆಯೊಂದು ಬಿರುಕು ಬಿಟ್ಟಿದ್ದು,ಕಟ್ಟಿರುವ ಕಲ್ಲುಗಳು ಬೀಳತೊಡಗಿವೆ.ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ.ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರು ಭೇಟಿ ನೀಡಿದ್ದು,ಅಪಾಯಕಾರಿಗಿರುವ ಕಟ್ಟಡವನ್ನು ತೆರವುಗೊಳಿಸಲಾಗುವುದು.ಅಲ್ಲದೆ ನೂತನ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ,ಗ್ರಾಮ ಪಂಚಾಯತ್ ಸದಸ್ಯ ಎಂ.ಎ.ರಫೀಕ್ ,ಪ್ರಭಾರ ಮುಖ್ಯಗುರು ಜಿಸ್ತಿನಾ ಡಿಸೋಜ ಉಪಸ್ಥಿತರಿದ್ದರು.