ಇಚ್ಲಂಪಾಡಿ: ರಸ್ತೆ ಸಮಸ್ಯೆ- ವಾರದ 3 ದಿನ ಮಹಿಳೆಯನ್ನು ಹೊತ್ತುಕೊಂಡೇ ಆಸ್ಪತ್ರೆಗೆ ಸಾಗಾಟ

0

ನೆಲ್ಯಾಡಿ: ರಸ್ತೆ ಸಂಪರ್ಕವಿಲ್ಲದೇ ಇದ್ದುದರಿಂದ ಅನಾರೋಗ್ಯ ಪೀಡಿತ ಮಹಿಳೆಯೋರ್ವರನ್ನು ಎರಡು ದಿನಕ್ಕೊಮ್ಮೆ ಡಯಾಲಿಸಿಸ್‌ಗೆ ಹೊತ್ತುಕೊಂಡೇ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಪ್ರಕರಣವೊಂದು ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಿಂದ ವರದಿಯಾಗಿದೆ.


ಇಚ್ಲಂಪಾಡಿ ಗ್ರಾಮದ ಕೆರ್ನಡ್ಕ ನಿವಾಸಿ ಕೆ.ಗೋಪಾಲನ್ ಎಂಬವರ ಪತ್ನಿ ಸಾವಿತ್ರಿ(62ವ.)ಯವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಅವರನ್ನು ಎರಡು ದಿನಕ್ಕೊಮ್ಮೆ ಪುತ್ತೂರಿನ ಸಿಟಿ ಆಸ್ಪತ್ರೆಗೆ ಡಯಾಲಿಸಿಸ್‌ಗೆ ಕರೆದೊಯ್ಯಲಾಗುತ್ತಿದೆ. ಕೊರಮೇರು ಅಂಗನವಾಡಿ ಕೇಂದ್ರದ ನಿವೃತ್ತ ಸಹಾಯಕಿಯಾಗಿರುವ ಸಾವಿತ್ರಿ ಅವರು ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಮಂಗಳೂರಿನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಸುಮಾರು ಒಂದೂವರೆ ತಿಂಗಳು ಚಿಕಿತ್ಸೆ ಪಡೆದು ಮನೆಗೆ ಬಂದಿರುವ ಸಾವಿತ್ರಿಯವರನ್ನು ಇದೀಗ ಎರಡು ದಿನಕ್ಕೊಮ್ಮೆ, ವಾರದಲ್ಲಿ ಮೂರು ದಿನ ಪುತ್ತೂರಿನ ಸಿಟಿ ಆಸ್ಪತ್ರೆಗೆ ಡಯಾಲಿಸಿಸ್‌ಗೆ ಕರೆದೊಯ್ಯಬೇಕಾಗಿದೆ. ಆದರೆ ಸಾವಿತ್ರಿಯವರ ಮನೆಗೆ ರಸ್ತೆ ಸಂಪರ್ಕವಿಲ್ಲದೇ ಇರುವುದರಿಂದ ಸುಮಾರು 150 ಮೀ.ದೂರದ ತನಕ ಅವರನ್ನು ಕಾಲುದಾರಿಯಲ್ಲಿ ಹೊತ್ತುಕೊಂಡು ಬಂದು ಆಸ್ಪತ್ರೆಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಬಂದೊದಗಿದೆ.

ತೋಟದ ಮಧ್ಯೆ ಕಾಲುದಾರಿ:
ಇಚ್ಲಂಪಾಡಿ-ಪೆರಿಯಶಾಂತಿ ಡಾಮಾರು ರಸ್ತೆಯ ಕೆರ್ನಡ್ಕ ಎಂಬಲ್ಲಿಂದ ಸಾವಿತ್ರಿಯವರ ಮನೆಯು ಸುಮಾರು 250 ಮೀ.ದೂರದಲ್ಲಿದೆ. ಈ ಪೈಕಿ 100 ಮೀ.ನಷ್ಟು ದೂರ ವಾಹನ ಸಂಚಾರಕ್ಕೆ ಮಣ್ಣಿನ ರಸ್ತೆಯಿದ್ದು ಅಲ್ಲಿಂದ 150 ಮೀ.ನಷ್ಟು ದೂರ ಕಾಲುದಾರಿಯಲ್ಲಿ ಸಾಗಬೇಕಾಗಿದೆ. ಈ ಕಾಲು ದಾರಿಯ ಎರಡೂ ಬದಿಯೂ ಖಾಸಗಿಯವರ ತೋಟವಿದೆ. ಖಾಸಗಿ ಜಾಗದವರು ಸಾವಿತ್ರಿಯವರ ಮನೆಗೆ ಕಾಲುದಾರಿಗೆ ಜಾಗಬಿಟ್ಟುಕೊಟ್ಟಿದ್ದಾರೆ. ಇಲ್ಲಿ ದ್ವಿಚಕ್ರ ವಾಹನ ಮಾತ್ರ ಸಂಚರಿಸಬಹುದಾಗಿದ್ದು ಇತರೇ ವಾಹನ ಸಂಚಾರಕ್ಕೆ ಬೇಕಾದಷ್ಟು ಜಾಗವಿಲ್ಲ. ಮನೆ ತನಕ ರಸ್ತೆ ಇಲ್ಲದೇ ಇರುವುದರಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಾವಿತ್ರಿಯವರನ್ನು ಅವರ ಮಗ ಸತೀಶ್‌ರವರು ಅಸುಪಾಸಿನವರ ಸಹಕಾರದೊಂದಿಗೆ ಹೊತ್ತುಕೊಂಡೇ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ. ಇಲ್ಲಿ ಸಾವಿತ್ರಿಯವರ ಮನೆ ಮಾತ್ರ ಇದ್ದು ಪತಿ, ಮಗ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ವಾಸವಾಗಿದ್ದಾರೆ. ಮನೆಗೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಗ್ರಾಮ ಪಂಚಾಯತ್‌ಗೆ ಮನವಿಯೂ ಮಾಡಿದ್ದಾರೆ. ಆದರೆ ರಸ್ತೆ ಸಮಸ್ಯೆಗೆ ಪರಿಹಾರ ಸಿಗದೇ ಇರುವುದರಿಂದ ಇದೀಗ ಸಾವಿತ್ರಿಯವರನ್ನು ಹೊತ್ತುಕೊಂಡೇ ಆಸ್ಪತ್ರೆಗೆ ಕರೆದೊಯ್ಯಬೇಕಾದ ಅನಿವಾರ್ಯ ಪರಿಸ್ಥಿತಿ ಮನೆಯವರಿಗೆ ಬಂದೊದಗಿದೆ. ಸಾವಿತ್ರಿಯವರನ್ನು ಚಯರ್‌ವೊಂದರಲ್ಲಿ ಕುಳ್ಳಿರಿಸಿ ಹೊತ್ತುಕೊಂಡು ಆಸ್ಪತ್ರೆಗೆ ಕರೆದೊಯ್ಯುವ ದೃಶ್ಯವೊಂದು ಈಗ ವೈರಲ್ ಆಗಿದೆ.

ರಿಕ್ಷಾ ಬರುವಷ್ಟು ಅಗಲದ ರಸ್ತೆ ಆಗಲಿ:
ನಮಗೆ 36 ಸೆಂಟ್ಸ್ ಜಾಗವಿದ್ದು 30ಕ್ಕೂ ಹೆಚ್ಚು ವರ್ಷದಿಂದ ವಾಸ್ತವ್ಯ ಇದ್ದೇವೆ. ಮನೆಗೆ ಕಾಲುದಾರಿ ಮಾತ್ರ ಇದ್ದು ರಸ್ತೆ ಸಂಪರ್ಕಕ್ಕೆ ಸಂಬಂಧಿಸಿ ಗ್ರಾಮ ಪಂಚಾಯತಿಗೆ ಮನವಿಯೂ ಮಾಡಿದ್ದೇವೆ. ಪೊಲೀಸ್ ಠಾಣೆಗೂ ದೂರು ನೀಡಿದ್ದೇವೆ. ಎಲ್ಲರೂ ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ ರಸ್ತೆ ಸಂಪರ್ಕ ಆಗಿಲ್ಲ. ಇದೀಗ ನನ್ನ ತಾಯಿಯು ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಅವರಿಗೆ ಎರಡು ದಿನಕ್ಕೊಮ್ಮೆ ಡಯಾಲಿಸಿಸ್ ಮಾಡಬೇಕಾಗಿದೆ. ಮನೆಗೆ ರಸ್ತೆ ಇಲ್ಲದೇ ಇರುವುದರಿಂದ ಸ್ನೇಹಿತರ ಸಹಾಯದಿಂದ ಅವರನ್ನು ರಸ್ತೆಯ ತನಕ ಹೊತ್ತುಕೊಂಡೇ ಕರೆತಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ. ಆದ್ದರಿಂದ ತುರ್ತಾಗಿ ನಮ್ಮ ಮನೆ ತನಕ ಕನಿಷ್ಟ ಆಟೋ ರಿಕ್ಷಾ ಬರುವಷ್ಟು ಅಗಲದ ರಸ್ತೆಯಾದರೂ ನಿರ್ಮಾಣ ಮಾಡಿಕೊಡಬೇಕು.
-ಸತೀಶ್, ಸಾವಿತ್ರಿಯವರ ಮಗ

LEAVE A REPLY

Please enter your comment!
Please enter your name here