ಕಸ್ತೂರಿರಂಗನ್ ವರದಿ ಜಾರಿಗೆ : ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ – ಮಲೆನಾಡಿನ ಜನರಲ್ಲಿ ಮತ್ತೆ ಆತಂಕ

0

ವರದಿ ತಿರಸ್ಕರಿಸಿದ್ದಾಗಿ ಹೇಳಿದ್ದ ಮಾಜಿ ಸಚಿವ ಮಾಧು ಸ್ವಾಮಿ
ವಿವಾದಾತ್ಮಕ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರಕಾರ ತಿರಸ್ಕರಿಸಿದ್ದು,ಈ ಕುರಿತು ಕೇಂದ್ರ ಸರಕಾರಕ್ಕೆ ಅಭಿಪ್ರಾಯ ತಿಳಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಹಿಂದಿನ ಬಿಜೆಪಿ ಸರಕಾರದ ಕಾನೂನು ಸಚಿವ ಮಾಧು ಸ್ವಾಮಿ ಅಂದು ಹೇಳಿದ್ದರು. ಆರಂಭದಿಂದಲೂ ಕಸ್ತೂರಿ ರಂಗನ್ ವರದಿಗೆ ರಾಜ್ಯ ಸರಕಾರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ.ಈಗಲೂ ಸರಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ.ವರದಿ ತಿರಸ್ಕಾರ ಮಾಡಿದ್ದೇವೆ ಎಂದು ಅವರು ಅಂದು ಸ್ಪಷ್ಟಪಡಿಸಿದ್ದರು.ಇದೀಗ ಕಸ್ತೂರಿ ರಂಗನ್ ವರದಿ ಅನ್ವಯ ಪರಿಸರ ಇಲಾಖೆಯಿಂದ ಅಧಿಸೂಚನೆಯಾಗಿದ್ದು,ಈ ಸಂಬಂಧ ತಮ್ಮ ಆಕ್ಷೇಪವನ್ನು ಕೇಂದ್ರ ಸರಕಾರಕ್ಕೂ ಮನವರಿಕೆ ಮಾಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.ಪಶ್ಚಿಮಘಟ್ಟದ ಜನತೆಗೆ ಇದರಿಂದ ಅನ್ಯಾಯವಾಗಲಿದೆ.ಈಗಾಗಲೇ ಎರಡು ಬಾರಿ ರಾಜ್ಯ ಸರಕಾರ ಆಕ್ಷೇಪಣೆ ಸಲ್ಲಿಸಿದೆ.ಅರಣ್ಯ ಪ್ರದೇಶದಲ್ಲಿರುವ ಜನರು ಮತ್ತು ಜನವಸತಿ ಪ್ರದೇಶಗಳ ಎತ್ತಂಗಡಿ ಸರಿಯಲ್ಲ.ಈ ಕುರಿತು ಸಮಗ್ರ ವಿವರವನ್ನು ಕೇಂದ್ರಕ್ಕೆ ತಿಳಿಸಲಾಗುವುದು ಎಂದು ಸಚಿವ ಮಾಧು ಸ್ವಾಮಿ ಹೇಳಿದ್ದರು.ಇದೀಗ ಬದಲಾದ ಸರಕಾರದ ಅರಣ್ಯ ಸಚಿವ ಈಶ್ವರ ಖಂಡ್ರೆ ಕಸ್ತೂರಿ ರಂಗನ್ ವರದಿ ಜಾರಿಗೆ ಸರಕಾರ ಬದ್ಧ ಎಂದು ಹೇಳಿದ್ದಾರೆ.

ಬೆಂಗಳೂರು: ವಿಜ್ಞಾನಿ ಡಾ|ಕೆ.ಕಸ್ತೂರಿರಂಗನ್ ನೇತೃತ್ವದ ಸಮಿತಿಯು ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ನೀಡಿರುವ ವರದಿಯನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಏಟ್ರಿಯಾ ವಿಶ್ವವಿದ್ಯಾಲಯ, ಸ್ವಿಸ್ ಗ್ಲೋಬಲ್ ನೆಟ್‍ವರ್ಕ್ (ಸ್ವಿಸ್ನೆಕ್ಸ್) ಮತ್ತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ಸಹಭಾಗಿತ್ವದಲ್ಲಿ ಶನಿವಾರ ಆಯೋಜಿಸಿದ್ದ ಅಂತರ ಪ್ರಭೇದಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕಸ್ತೂರಿರಂಗನ್ ವರದಿಯ ಶಿಫಾರಸುಗಳು ಅನುಷ್ಠಾನದ ಕುರಿತು ಸಂಜಯ್ ಕುಮಾರ್ ನೇತೃತ್ವದ ಸಮಿತಿ ಪರಿಶೀಲನೆ ನಡೆಸುತ್ತಿದೆ. ಈ ಸಮಿತಿಯು ಡಿಸೆಂಬರ್ ವೇಳೆಗೆ ತನ್ನ ಅಭಿಪ್ರಾಯಗಳನ್ನು ನೀಡಲಿದ್ದು, ನಂತರ ಸರ್ಕಾರವು ವರದಿಯ ಶಿಫಾರಸುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಿದೆ ಎಂದು ಖಂಡ್ರೆ ಹೇಳಿದರು.

ಪಶ್ಚಿಮ ಘಟ್ಟಗಳ ಬಹುಭಾಗ ಕರ್ನಾಟಕದಲ್ಲಿದೆ. 11 ಜಿಲ್ಲೆಗಳ ವ್ಯಾಪ್ತಿಯಲ್ಲಿ ಪಶ್ಚಿಮ ಘಟ್ಟಗಳು ವ್ಯಾಪಿಸಿವೆ.ಕಸ್ತೂರಿರಂಗನ್ ಸಮಿತಿ ನೀಡಿರುವ ವರದಿ 10 ವರ್ಷಗಳಿಂದ ಬಾಕಿ ಇದೆ.ಅದಕ್ಕೂ ಹಿಂದೆ ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿ ನೀಡಿದ್ದ ವರದಿಯೂ ಅನುಷ್ಠಾನಕ್ಕೆ ಬಂದಿರಲಿಲ್ಲ.ಈಗ ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಜನರ ಹಿತಾಸಕ್ತಿಯನ್ನು ರಕ್ಷಿಸಿಕೊಂಡೇ ವರದಿಯ ಜಾರಿಗೆ ಸರ್ಕಾರ ಮುಂದಾಗಿದೆ.ಇತರ ಆರು ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ಜತೆ ಸಮಾಲೋಚನೆ ನಡೆಸಿ ವರದಿಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಪಶ್ಚಿಮ ಘಟ್ಟಗಳಲ್ಲಿನ ಜೀವವೈವಿಧ್ಯ ಹಾಗೂ ಅಳಿವಿನಂಚಿನಲ್ಲಿರುವ ಪ್ರಭೇದಗಳ ಕುರಿತು ಅರಿವು ಮೂಡಿಸಲು ಶಾಲಾ ಹಂತದಿಂದ ಪದವಿ ಕಾಲೇಜುಗಳವರೆಗೆ ಪಠ್ಯಕ್ರಮದಲ್ಲಿ ಈ ವಿಷಯಗಳನ್ನು ಸೇರಿಸುವ ಅಗತ್ಯವಿದೆ. ವನ್ಯಜೀವಿ ಮತ್ತು ಪರಿಸರ ಕುರಿತು ಗ್ರಾಮ ಪಂಚಾಯಿತಿಗಳ ಹಂತದಿಂದ ಜಾಗೃತಿ ಅಭಿಯಾನಗಳನ್ನು ನಡೆಸಬೇಕಿದೆ ಎಂದರು.

ಮಲೆನಾಡಿನ ಜನತೆ ಮತ್ತೆ ಆತಂಕದಲ್ಲಿ: ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಕೇಂದ್ರ ಪರಿಸರ ಇಲಾಖೆ 2022ರ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿದ್ದು ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿತ್ತು.ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗುವ ಆತಂಕ ಎದುರಾಗಿದೆ.ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಗಾಡ್ಗಿಳ್ ವರದಿಯು 2010ರಲ್ಲಿ ಸಲ್ಲಿಕೆಯಾಗಿತ್ತು.ಆದರೆ ಗಾಡ್ಗಿಳ್ ವರದಿ ಅವೈಜ್ಞಾನಿಕವಾಗಿದೆ ಎಂದು ಇಸ್ರೋ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚನೆ ಮಾಡಲಾಗಿತ್ತು.ಕಸ್ತೂರಿ ರಂಗನ್ ಸಮಿತಿಯ ಅಧ್ಯಯನವನ್ನು ಮಾಡಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲು ವರದಿಯನ್ನು ನೀಡಿತ್ತು.ಅದರಂತೆ ಗುಜರಾತ್ ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕರ್ನಾಟಕ ವ್ಯಾಪ್ತಿಯನ್ನು ಸೇರಿಸಿತ್ತು.ಕರ್ನಾಟಕದ 20668 ಚದರ ಕಿ.ಮೀ.ಪ್ರದೇಶ ¾ಪರಿಸರ ಸೂಕ್ಷ್ಮ ವಲಯ¿ ವ್ಯಾಪ್ತಿಗೆ ಒಳಪಡುತ್ತದೆ.ಅಂದರೆ ಕರುನಾಡಿನ ಸಾವಿರಾರು ಹಳ್ಳಿಯ ಜನರ ಬದುಕು ಬೀದಿಗೆ ಬೀಳುವ ಆತಂಕ ಎದುರಾಗಿದೆ.

ಕಡಬ ತಾಲೂಕಿನ 13 ಗ್ರಾಮಗಳೂ ಸೂಕ್ಷ್ಮ ವಲಯ ಪಟ್ಟಿಯಲ್ಲಿ: ಕಡಬ ತಾಲೂಕಿನ ಕೌಕ್ರಾಡಿ, ಗೋಳಿತೊಟ್ಟು, ಶಿರಾಡಿ, ಆಲಂತಾಯ, ಸಿರಿಬಾಗಿಲು, ಬಲ್ಯ, ಕೊಂಬಾರು, ಬಿಳಿನೆಲೆ, ದೋಳ್ಪಾಡಿ, ಬಳ್ಪ, ಏನೆಕಲ್ಲು, ಸುಬ್ರಮಣ್ಯ, ಐನೆಕಿದು ಗ್ರಾಮಗಳೂ ಕಸ್ತೂರಿ ರಂಗನ್ ವರದಿಯಲ್ಲಿವೆ.ಸುಳ್ಯ ತಾಲೂಕಿನ ನಾಲ್ಕೂರು, ಕೂತ್ಕುಂಜ, ದೇವಚಳ್ಳ, ಹರಿಹರ-ಪಲ್ಲತಡ್ಕ, ಬಾಳುಗೋಡು, ಮಡಪ್ಪಾಡಿ, ಉಬರಡ್ಕ ಮಿತ್ತೂರು, ಕಲ್ಮಕಾರು, ಅರಂತೋಡು, ಅಲೆಟ್ಟಿ, ಸಂಪಾಜೆ, ತೊಡಿಕಾನ ಗ್ರಾಮಗಳನ್ನು ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸಲಾಗಿದೆ.ಬೆಳ್ತಂಗಡಿ ತಾಲೂಕಿನ ನಾರಾವಿ, ಮಲವಂತಿಗೆ, ಕುತ್ಲೂರು, ಸುಲ್ಕೇರಿಮೊಗ್ರು, ಶಿರ್ಲಾಲು, ನಾವರಾ, ಸವಣಾಲು, ಚಾರ್ಮಾಡಿ, ಸುಲ್ಕೇರಿ, ನಾವೂರು, ನೆರಿಯ, ನಾಡ, ಪುದುವೆಟ್ಟು, ಶಿಶಿಲ, ಕಳೆಂಜ, ಶಿಬಾಜೆ, ರೆಖ್ಯಾ ಗ್ರಾಮಗಳು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಬರಲಿದೆ.ಒಂದು ವೇಳೆ ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನಗೊಳಿಸಿದರೆ ಈ ಗ್ರಾಮಗಳ ಜನತೆಯ ಅಭಿವೃದ್ಧಿಗೆ ಹಿನ್ನಡೆ ಆಗುವ ಅಪಾಯವಿದೆ.ವರದಿಯಲ್ಲಿ ಹೇಳಿರುವಂತೆ, ಕನಿಷ್ಠ ಮೂಲಭೂತ ಸೌಕರ್ಯಗಳಿಂದಲೂ ಜನತೆ ವಂಚಿತವಾಗುವ ಅಪಾಯವಿದ್ದು, ಇದೇ ಕಾರಣಕ್ಕೆ ಜನರು ಈ ವರದಿಯನ್ನು ವಿರೋಧಿಸುತ್ತಿದ್ದಾರೆ.

ಜನ ಹೆದರಬೇಕಾಗಿಲ್ಲ ಎಂದಿದ್ದರು ಮಾಜಿ ಸಚಿವ ಅಂಗಾರ: ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಈಗಾಗಲೇ ಕೇಂದ್ರ ಪರಿಸರ ಇಲಾಖೆ ಅಧಿಸೂಚನೆ ಹೊರಡಿಸಿದೆ.ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸಂಬಂಧಪಟ್ಟ ಕೇಂದ್ರ ಸರಕಾರದ ಸಚಿವರು, ಇಲಾಖೆಯ ಮುಖ್ಯಸ್ಥರನ್ನು ಭೇಟಿ ಮಾಡಿ ವರದಿ ಜಾರಿಗೊಳಿಸದಂತೆ ಚರ್ಚಿಸಲಿದ್ದೇವೆ.ನಾವು ಜನತೆಯ ಪರವಾಗಿ ಎಂದಿಗೂ ಇದ್ದೇವೆ, ಅಗತ್ಯ ಬಿದ್ದರೆ ವರದಿ ಜಾರಿಯ ವಿರುದ್ದ ಕಾನೂನು ಹೋರಾಟಕ್ಕೂ ಸಿದ್ದ.ಯಾವುದೇ ಕಾರಣಕ್ಕೂ ಜನತೆ ಗೊಂದಲಕ್ಕೆ ಒಳಗಾಗಬಾರದು ಎಂದು ಹಿಂದಿನ ಸಚಿವರಾಗಿದ್ದ ಸುಳ್ಯ ಕ್ಷೇತ್ರದ ಮಾಜಿ ಶಾಸಕ ಎಸ್.ಅಂಗಾರ ಹೇಳಿದ್ದರು.

ದೋಳ್ಪಾಡಿ ಗ್ರಾಮ ಕೈಬಿಡಲು ಶಿಫಾರಸ್ಸು ಭರವಸೆ ನೀಡಿದ್ದ ಜಿಲ್ಲಾಧಿಕಾರಿ: ಉದ್ದೇಶಿತ ಕಸ್ತೂರಿ ರಂಗನ್ ವರದಿಯಲ್ಲಿ ದೋಳ್ಪಾಡಿ ಗ್ರಾಮ ಸೇರ್ಪಡೆಯಾಗಿದ್ದಲ್ಲಿ ಈ ಗ್ರಾಮವನ್ನು ಕೈಬಿಡುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಕಳೆದ ಫೆ.20ರಂದು ದೋಳ್ಪಾಡಿಯಲ್ಲಿ ನಡೆದಿದ್ದ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಆಗಿನ ಜಿಲ್ಲಾಧಿಕಾರಿ ಎಂ.ಆರ್.ರವಿ ಕುಮಾರ್ ಗ್ರಾಮಸ್ಥರಿಗೆ ಭರವಸೆ ನೀಡಿದ್ದರು.

LEAVE A REPLY

Please enter your comment!
Please enter your name here