ವರದಿ: ಸಂತೋಷ್ ಕುಮಾರ್ ಶಾಂತಿನಗರ
ಪುತ್ತೂರು: ರಾಜ್ಯಾದ್ಯಂತ ಸಂಚಲನ ಸೃಷ್ಠಿಸಿದ್ದ ಕೋಡಿಂಬಾಡಿ ಪರನೀರು ನಿವಾಸಿ ವಿನಯಾರವರ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ತುಂಬೆಯ ದಯಾನಂದ ಪೂಜಾರಿಯನ್ನು ಜೈಲಿನಿಂದ ಬಿಡುಗಡೆಗೊಳಿಸದಂತೆ ಪೊಲೀಸ್ ಇಲಾಖೆ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಿದೆ.
2008ರಲ್ಲಿ ಬಂಟ್ವಾಳ ತಾಲೂಕಿನ ತುಂಬೆ ಸಮೀಪ ಕೋಡಿಂಬಾಡಿಯ ಪರನೀರು ಎಂಬಲ್ಲಿಯ ಶೀನಪ್ಪ ಪೂಜಾರಿಯವರ ಪತ್ನಿ ವಿನಯಾರವರನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದಿರುವ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ತುಂಬೆಯ ದಯಾನಂದ ಪೂಜಾರಿಯನ್ನು ತಪ್ಪಿತಸ್ಥ ಎಂದು 2013ರಲ್ಲಿ ಘೋಷಿಸಿದ್ದ ಪುತ್ತೂರು ಜಿಲ್ಲಾ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ವಿನಯಾರವರ ಶವವನ್ನು ಮಣ್ಣು ಹಾಕಿ ಮುಚ್ಚಲು ಸಹಕರಿಸಿದ ಆರೋಪ ಎದುರಿಸುತ್ತಿದ್ದ ಬಂಟ್ವಾಳ ಪೊನ್ಮಲದ ಆನಂದ ಪೂಜಾರಿಯನ್ನು ನ್ಯಾಯಾಲಯ ದೋಷಮುಕ್ತಗೊಳಿಸಿತ್ತು.
ಜೀವಾವಧಿ ಶಿಕ್ಷೆಗೊಳಗಾಗಿ ಜೈಲಿನಲ್ಲಿರುವ ದಯಾನಂದ ಪೂಜಾರಿಯನ್ನು ಸನ್ನಡತೆಯ ಆಧಾರದಲ್ಲಿ ಇದೀಗ ಜೈಲಿನಿಂದ ಬಿಡುಗಡೆ ಮಾಡಲು ಜೈಲಾಧಿಕಾರಿಗಳು ಸಿದ್ಧತೆ ನಡೆಸಿದ್ದು ಪೊಲೀಸ್ ಇಲಾಖೆಯಿಂದ ವರದಿ ಕೇಳಲಾಗಿತ್ತು. ಪೊಲೀಸ್ ಇಲಾಖೆಯವರು ವಿನಯಾರವರ ಮನೆಯವರ ಅಭಿಪ್ರಾಯ ಕೇಳಿದ್ದರು. ವಿನಯಾರವರ ಪತಿ ಶೀನಪ್ಪ ಪೂಜಾರಿ, ಮೈದುನ ಪದ್ಮಪ್ಪ ಪೂಜಾರಿ ಪರನೀರು ಮತ್ತಿತರರು ದಯಾನಂದ ಪೂಜಾರಿ ಬಿಡುಗಡೆಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಬಳಿಕ ಪೊಲೀಸ್ ಇಲಾಖೆ ಕೂಡ ಅಪರಾಧಿಯ ಬಿಡುಗಡೆಗೆ ತಮ್ಮ ಆಕ್ಷೇಪಣೆ ಇರುವುದಾಗಿ ಸರಕಾರಕ್ಕೆ ವರದಿ ಸಲ್ಲಿಸಿದೆ.
ಬೆಚ್ಚಿ ಬೀಳಿಸಿತ್ತು ವಿನಯಾ ಮರ್ಡರ್: ಕಬಕ ಸಮೀಪದ ಮುರದಲ್ಲಿರುವ ಗೌಡ ಸಭಾಭವನದಲ್ಲಿ ನಡೆದಿದ್ದ ಮದುವೆಯ ಕಾರ್ಯಕ್ರಮಕ್ಕೆಂದು ಮನೆಯಿಂದ ಹೊರಟು ಬಂದಿದ್ದ ವಿನಯಾರವರು ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದರು. ನಾಪತ್ತೆಯಾದ ದಿನದಂದೇ ಬಂಟ್ವಾಳ ತಾಲೂಕಿನ ತುಂಬೆ ಸಮೀಪದಲ್ಲಿ ಆಕೆ ಕೊಲೆಗೀಡಾಗಿದ್ದರು.
ವಿನಯಾರವರ ಸಂಬಂಧಿಕನೂ ಆಗಿರುವ ತುಂಬೆಯ ದಯಾನಂದ ಪೂಜಾರಿ ಎಂಬಾತ ವಿನಯಾರವರನ್ನು ಕೊಲೆ ಮಾಡಿ ಅವರಲ್ಲಿದ್ದ ಚಿನ್ನಾಭರಣ ದೋಚಿ ಶವವನ್ನು ಹೊಂಡವೊಂದರಲ್ಲಿ ಹಾಕಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದ. ಶವವನ್ನು ಮಣ್ಣು ಹಾಕಿ ಮುಚ್ಚಲು ಆತನಿಗೆ ಆನಂದ ಪೂಜಾರಿ ಎಂಬಾತ ಸಹಕರಿಸಿದ್ದರು. ಅರೆಬೆತ್ತಲೆ ಸ್ಥಿತಿಯಲ್ಲಿ ವಿನಯಾ ಅವರ ಶವ ಪತ್ತೆಯಾಗಿತ್ತು. ಕೊಲೆಗೆ ಮುನ್ನ ಆರೋಪಿ ಆಕೆಯ ಮೇಲೆ ಬಲಾತ್ಕಾರ ಎಸಗಿದ್ದ ಎನ್ನುವುದೂ ತನಿಖೆಯಿಂದ ಬೆಳಕಿಗೆ ಬಂದಿತ್ತು.
ಮದುವೆಗೆ ಹೋದ ವಿನಯಾ ನಿಗೂಢವಾಗಿ ನಾಪತ್ತೆಯಾಗಿದ್ದರು: ಉಪ್ಪಿನಂಗಡಿಯಲ್ಲಿ ಮೆಕ್ಯಾನಿಕ್ ಆಗಿರುವ ಕೋಡಿಂಬಾಡಿಯ ಪರನೀರು ನಿವಾಸಿ ಶೀನಪ್ಪ ಪೂಜಾರಿಯವರ ಪತ್ನಿ ವಿನಯಾರವರು 2008ರ ಸೆಪ್ಟೆಂಬರ್ 12ರಂದು ಕಬಕ ಬಳಿಯ ಮುರದಲ್ಲಿರುವ ಗೌಡ ಸಮುದಾಯ ಭವನದಲ್ಲಿ ನಡೆದ ಮದುವೆಯ ಕಾರ್ಯಕ್ರಮಕ್ಕೆಂದು ಸುಮಾರು 15 ಪವನ್ ಚಿನ್ನಾಭರಣ ಧರಿಸಿಕೊಂಡು ಹೋಗಿದ್ದವರು ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದರು. ಮದುವೆಯ ಹಾಲ್‍ನಲ್ಲಿ ತನಗೆ ಸಿಕ್ಕಿದ್ದ ತನ್ನ ಆಪ್ತರಲ್ಲಿ ಮಾತನಾಡಿದ್ದ ವಿನಯಾರವರು ತಾನು ಮುರದಲ್ಲಿರುವ ಮುತ್ತಮ್ಮಕ್ಕನ ಮನೆಗೆ ಹೋಗಿ ಬರುವುದಾಗಿ ತಿಳಿಸಿದ್ದರು. ಬಿ.ಸಿ. ರೋಡಿಗೆ ಹೋಗಿ ಬರುವು ದಾಗಿಯೂ ಕೆಲವರಲ್ಲಿ ಹೇಳಿದ್ದರು. ಆದರೆ, ಅಲ್ಲಿಗೂ ಹೋಗದೆ ತನ್ನ ತವರು ಮನೆಗಾಗಲೀ, ಪತಿಯ ಮನೆಗಾಗಲೀ ಬಾರದೆ ಕಾಣೆಯಾಗಿದ್ದರು. ಶೀನಪ್ಪ ಪೂಜಾರಿಯವರು ನೀಡಿದ್ದ ದೂರಿನ ಆಧಾರದಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದ ಪುತ್ತೂರು ನಗರ ಠಾಣಾ ಅಂದಿನ ಎಸ್. ಐ.ಗಳಾದ ಜಯಾನಂದ ಮತ್ತು ಕು. ಅರ್ಚನಾರವರು ಮದುವೆಯ ಮನೆಯವರಾದ ಸೇಡಿಯಾಪು ನಿವಾಸಿಗಳನ್ನು, ಕಾರು ಚಾಲಕರನ್ನು, ಸ್ಟುಡಿಯೋದವರನ್ನು ಹಾಗೂ ಮುರದಲ್ಲಿರುವ ಮುತ್ತಮ್ಮಕ್ಕನವರ ಸಹಿತ ಹಲವರನ್ನು ವಿಚಾರಣೆಗೊಳಪಡಿಸಿದ್ದರು. ಆದರೆ, ತನಿಖೆಯಲ್ಲಿ ಹೆಚ್ಚಿನ ಪ್ರಗತಿ ಕಂಡು ಬಂದಿರಲಿಲ್ಲ.
ಉತ್ತಮ ನಡವಳಿಕೆಯ ಮಹಿಳೆಯೋರ್ವರಿಗೆ ಅನ್ಯಾಯವಾಗಿದ್ದರೂ ಪೊಲೀಸರು ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ವ್ಯಾಪಕ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕೋಡಿಂಬಾಡಿಯಲ್ಲಿ ಸೆಪ್ಟೆಂಬರ್ 16ರಂದು ಸಭೆ ನಡೆಸಿದ್ದ ಬಿಲ್ಲವ ಗ್ರಾಮ ಸಮಿತಿಯ ಪ್ರಮುಖರು ಪ್ರಕರಣದ ಸಮಗ್ರ ತನಿಖೆ ನಡೆಸಬೇಕು, ಪ್ರಕರಣದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂದು ಪತ್ತೆ ಹಚ್ಚಬೇಕು, ಇಲ್ಲದಿದ್ದಲ್ಲಿ ವಿವಿಧ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ರಾಜಕೀಯ ರಹಿತ ಪ್ರತಿಭಟನೆ ನಡೆಸಲಾಗುವುದು ಎಂದು ಪೊಲೀಸ್ ಇಲಾಖೆಯನ್ನು ಎಚ್ಚರಿಸಿದ್ದರು. ಸೆಪ್ಟೆಂಬರ್ 17ರಂದು ಪರನೀರು ಮನೆಗೆ ಭೇಟಿ ನೀಡಿದ್ದ ಅಂದಿನ ಶಾಸಕಿ ಮಲ್ಲಿಕಾ ಪ್ರಸಾದ್‍ರವರು ಘಟನೆಯ ಸತ್ಯಾಸತ್ಯತೆಯನ್ನು ಕಂಡು ಹಿಡಿಯುವುದಕ್ಕಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಪೆÇಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು.
ನಾಪತ್ತೆಯಾಗುವ ಮುನ್ನ ವಿನಯಾರವರ ಮೊಬೈಲ್ ಫೋನ್‍ಗೆ ಬಂದ ಮತ್ತು ಹೋದ ಕರೆಗಳ ಪ್ರಿಂಟೌಟ್ ತೆಗೆಸಿದ್ದ ಪೊಲೀಸರು ಕರೆಗಳ ಆಧಾರದಲ್ಲಿ ತನಿಖೆ ಮುಂದುವರಿಸಿದ್ದರು. ಸೆಪ್ಟೆಂಬರ್ 12ರಂದು ವಿನಯಾರವರ ಮೊಬೈಲ್ ಫೋನ್‍ಗೆ 20ಕ್ಕೂ ಅಧಿಕ ಬಾರಿ ಕರೆ ಮಾಡಿದ್ದ ತುಂಬೆಯ ದಯಾನಂದ ಪೂಜಾರಿ ಎಂಬಾತನ ಮೇಲೆ ಸಂಶಯಗೊಂಡ ಪೊಲೀಸರು ಆತನ ಮೊಬೈಲ್ ಫೋನ್‍ಗೆ ಕರೆ ಮಾಡಿದಾಗ ಸ್ವಿಚ್ಚ್ ಆಫ್ ಬರುತ್ತಿತ್ತು. ಬಳಿಕ ಆತನನ್ನು ಹುಡುಕಿಕೊಂಡು ವಿನಯಾರವರ ಸಂಬಂಧಿಕರೊಂದಿಗೆ ತುಂಬೆಗೆ ತೆರಳಿದ್ದ ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಈ ಮಧ್ಯೆ ಪ್ರಕರಣವನ್ನು ಮುಚ್ಚಿಹಾಕಲು ಪೆÇಲೀಸರು ಯತ್ನಿಸುತ್ತಿದ್ದಾರೆ ಎಂದು ಸಂಶಯಗೊಂಡ ಮಹಿಳಾ ಸಂಘಟನೆಗಳು ಹಾಗೂ ಸ್ಥಳೀಯ ನಾಗರಿಕರು ಪ್ರತಿಭಟನೆ ನಡೆಸುವುದಾಗಿ ಮತ್ತೆ ಎಚ್ಚರಿಸಿದ್ದರಲ್ಲದೆ ಜನಪ್ರತಿನಿಧಿಗಳಿಗೂ ಒತ್ತಡ ಹಾಕಿದ್ದರು. ಅಂದು ಸಚಿವರಾಗಿದ್ದ ಕೃಷ್ಣ. ಜೆ. ಪಾಲೇಮಾರ್ ಮತ್ತು ಸಂಸದರಾಗಿದ್ದ ಡಿ. ವಿ. ಸದಾನಂದ ಗೌಡರವರು ಘಟನೆಯ ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದರು.
ಬಳಿಕ ತೀವ್ರ ಶೋಧ ಆರಂಭಿಸಿದ್ದ ಪೊಲೀಸರು ಸೆಪ್ಟೆಂಬರ್ 17ರಂದು ದಯಾನಂದ ಪೂಜಾರಿಯನ್ನು ತುಂಬೆಯಲ್ಲಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ವಿನಯಾ ಅವರ ನಾಪತ್ತೆ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ನೀಡದ ದಯಾನಂದ ಪೂಜಾರಿ ತನ್ನ ಮೊಬೈಲ್ ಫೋನ್‍ನ್ನು ಮಂಗಳೂರಿನಲ್ಲಿ ರಿಪೇರಿಗೆ ಕೊಟ್ಟಿರುವುದಾಗಿ ತಿಳಿಸಿದ್ದ. ಪ್ರಭಾರ ಡಿವೈಎಸ್‍ಪಿಯಾಗಿದ್ದ ಬಿ. ಕೆ. ಮಂಜಯ್ಯರವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿಸಿದ್ದ ನಗರ ಠಾಣಾ ಪೊಲೀಸರು ತಮ್ಮ ವಶದಲ್ಲಿದ್ದ ದಯಾನಂದ ಪೂಜಾರಿಯವರನ್ನು ಮಂಗಳೂರಿಗೆ ಕರೆದುಕೊಂಡು ಹೋಗಿ ಮೊಬೈಲ್ ಅಂಗಡಿಯವರು ಸೇರಿದಂತೆ ತುಂಬೆ, ಬಿ. ಸಿ.ರೋಡ್, ಕಂಕನಾಡಿ ಮುಂತಾದೆಡೆ ಹಲವರನ್ನು ವಿಚಾರಣೆ ನಡೆಸಿದ್ದರು. ಆದರೆ, ಯಾವುದೇ ಪೂರಕ ಮಾಹಿತಿ ಸಿಕ್ಕಿರಲಿಲ್ಲ. ಬಳಿಕವೂ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ತೀವ್ರ ಒತ್ತಡ ಬರುತ್ತಿದ್ದಂತೆಯೇ ಪೊಲೀಸರು ದಯಾನಂದ ಪೂಜಾರಿ ನಿಕಟ ಸಂಪರ್ಕ ಹೊಂದಿದ್ದ ಬೆಳ್ತಂಗಡಿಯ ಫೈನಾನ್ಸೊಂದರ ನೌಕರರನ್ನು ಹಾಗೂ ಧರ್ಮಸ್ಥಳ, ಉಜಿರೆ, ಕಕ್ಕೆಪದವು, ಮಡಂತ್ಯಾರ್, ಬಂಟ್ರಕಲ್ಲು ಮುಂತಾದೆಡೆ ಹಲವರನ್ನು ವಿಚಾರಣೆಗೊಳಪಡಿಸಿದ್ದರು. ಅಲ್ಲದೆ, ಮಂಗಳೂರಿನಿಂದ ಬೆಳ್ತಂಗಡಿಗೆ ಆಗಮಿಸಿದ್ದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಕುಮಾರ್‍ರವರು ದಯಾನಂದ ಪೂಜಾರಿಯನ್ನು ವಿಚಾರಣೆ ನಡೆಸಿದ್ದರೂ ಪ್ರಕರಣದ ಬಗ್ಗೆ ಮಾಹಿತಿ ಲಭಿಸಿರಲಿಲ್ಲ.
ಸೆ. 12ರಂದು ಮಧ್ಯಾಹ್ನ 1.30ಕ್ಕೆ ಮುರದಿಂದ ನಾಪತ್ತೆಯಾಗಿದ್ದ ವಿನಯಾರವರು ಅದೇ ದಿನ ಸಂಜೆ 3 ಗಂಟೆ ವೇಳೆಗೆ ಫರಂಗಿಪೇಟೆಯಲ್ಲಿ ವ್ಯಕ್ತಿಯೊಬ್ಬರ ಜತೆ ನಿಂತುಕೊಂಡು ಮಾತನಾಡುತ್ತಿದ್ದರು ಎಂದು ಸ್ಥಳೀಯ ಅಂಗಡಿಯೊಂದರ ನೌಕರರು ಪೊಲೀಸರಿಗೆ ತಿಳಿಸಿದ್ದರು. ಆದ್ದರಿಂದ ವಿನಯಾರವರನ್ನು ಅಪಹರಿಸಿರುವ ಸಾಧ್ಯತೆಗಳು ಕಡಿಮೆಯಾಗಿದ್ದು ಅವರಾಗಿಯೇ ಹೋಗಿರಬೇಕು ಎಂಬ ಶಂಕೆ ವ್ಯಕ್ತವಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಶದಲ್ಲಿರುವ ದಯಾನಂದ ಪೂಜಾರಿಯಿಂದ ಹೆಚ್ಚಿನ ಮಾಹಿತಿ ದೊರೆಯದೇ ಇದ್ದುದರಿಂದ ಈತ ಪ್ರಕರಣದಲ್ಲಿ ನಿರಪರಾಧಿಯಾಗಿರಬಹುದು ಎಂದು ಭಾವಿಸಿದ್ದ ಪೊಲೀಸರು ಆತನನ್ನು ಬಿಡುಗಡೆಗೊಳಿಸಲು ಸೆ. 19ರಂದು ರಾತ್ರಿ ಸಿದ್ಧತೆ ನಡೆಸಿದ್ದರು. ದಯಾನಂದ ಪೂಜಾರಿ ಕಡೆಯಿಂದಲೂ ಒತ್ತಡ ಬಂದಿದ್ದರಿಂದ ಪೊಲೀಸರು ಈ ನಿರ್ಣಯ ಕೈಗೊಂಡಿದ್ದರು ಎನ್ನಲಾಗಿತ್ತು. ಆದರೆ, ಆ ವೇಳೆಗಾಗಲೇ ಪೊಲೀಸ್ ಠಾಣೆಗೆ ಬಂದಿದ್ದ ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಪರಿಸರದ ಯುವಕರು ಎಸ್. ಐಯವರಿಗೆ ಒತ್ತಡ ಹೇರಿದ್ದರು. ನಾಪತ್ತೆ ಪ್ರಕರಣ ನಡೆದು ಏಳು ದಿನ ಕಳೆದರೂ ಸಂಶಯಿತ ವ್ಯಕ್ತಿ ಮೂರು ದಿನಗಳಿಂದ ತಮ್ಮೊಂದಿಗೇ ಇದ್ದರೂ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಕೊನೇಯ ಬಾರಿಗೆ ಎಂಬಂತೆ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ದಯಾನಂದನ ತೀವ್ರ ವಿಚಾರಣೆ ನಡೆಸಿದ್ದರು.ಎಸ್.ಐ. ಕು. ಅರ್ಚನಾ ಅವರು ಕೊನೇಯ ಪ್ರಯತ್ನದ ಟ್ರೀಟ್ ಮೆಂಟ್ ನೀಡಿದ್ದರು. ಈ ವೇಳೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದ ದಯಾನಂದ ಪೂಜಾರಿ ತಾನು ವಿನಯಾರವರನ್ನು ಕೊಲೆ ಮಾಡಿ ಬಂಟ್ವಾಳ ತಾಲೂಕಿನ ತುಂಬೆ ಮತ್ತು ಪುದು ಗ್ರಾಮದ ಮಧ್ಯೆ ಇರುವ ಮಾರಿಪಳ್ಳ ಪಕ್ಕದಲ್ಲಿರುವ ಕೆಮುಡೇಲು ಎಂಬಲ್ಲಿಯ ನಿರ್ಜನ ಪ್ರದೇಶದ ಕಾಡೊಂದರ ಮಧ್ಯೆ ಇಳಿಜಾರಿನಂತಿರುವ ಜಾಗದಲ್ಲಿನ ಹೊಂಡದಲ್ಲಿ ಶವ ಹಾಕಿರುವುದಾಗಿ ಒಪ್ಪಿಕೊಂಡಿದ್ದನಲ್ಲದೆ ಸ್ವಲ್ಪ ಚಿನ್ನವನ್ನು ಮಂಗಳೂರಿನ ಜುವೆಲ್ಲರ್ಸ್ ಒಂದಕ್ಕೆ ಮಾರಾಟ ಮಾಡಿದ್ದೆನೆ, ಉಳಿದ ಚಿನ್ನ ನನ್ನಲ್ಲೇ ಇದೆ ಎಂದು ಹೇಳಿಕೆ ನೀಡಿದ್ದ. ಬಳಿಕ ಮಧ್ಯ ರಾತ್ರಿ ವೇಳೆಗೆ ಆತನನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದ ಪೊಲೀಸರು ಆತ ನೀಡಿದ್ದ ಮಾಹಿತಿಯನ್ನು ಖಚಿತಪಡಿಸಿಕೊಂಡು ಸೆ. 20ರಂದು ಸಂಜೆ ವೇಳೆಗೆ ಶವವನ್ನು ಹೊಂಡದಿಂದ ಮೇಲಕ್ಕೆತ್ತಿದ್ದರು. ಮಂಗಳೂರು ಎ.ಸಿ. ಪ್ರಭುಲಿಂಗ, ಬಂಟ್ವಾಳ ತಹಶೀಲ್ದಾರ್ ಮಂಜುನಾಥರವರ ಸಮ್ಮುಖದಲ್ಲಿ ಶವವನ್ನು ಮೇಲಕ್ಕೆತ್ತಲಾಗಿತ್ತು.
ಸೆ. 12ರಂದು ಕೊಲೆ: 13ರಂದು ಮಣ್ಣು : ತನ್ನ ಮನೆಯ ಕೆಲವು ಫರ್ಲಾಂಗಿನಷ್ಟು ದೂರದಲ್ಲಿರುವ ಕಾಡಿನಲ್ಲಿ ಸೆ. 12ರಂದು ಸಂಜೆ ವಿನಯಾರವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ದಯಾನಂದ ಪೂಜಾರಿ ಬಳಿಕ ತುಂಬೆಯಲ್ಲಿ ನಡೆದಿದ್ದ ಕೋಳಿ ಅಂಕಕ್ಕೆ ಹೋಗಿದ್ದ. ಸೆ. 13ರಂದು ಪಕ್ಕದ ಮನೆಯವರಿಂದ ಹಾರೆ, ಪಿಕ್ಕಾಸು ತಂದು ಶವದ ಮೇಲೆ ಮಣ್ಣು ಹಾಕಿದ್ದ ಎಂದು ಪೆÇಲೀಸರು ಮಾಹಿತಿ ಕಲೆ ಹಾಕಿದ್ದರು. ಹಾರೆ, ಪಿಕ್ಕಾಸು ತರುವ ವೇಳೆ ತನಗೆ ಅರ್ಜೆಂಟ್ ಕೆಲಸ ಇದೆ ಎಂದು ಮನೆಯವರಲ್ಲಿ ಆತ ತಿಳಿಸಿರುವುದಾಗಿ ತಿಳಿದು ಬಂದಿತ್ತು.
ದಯಾನಂದನ ಕರೆಗೆ ಓಗೊಟ್ಟಿದ್ದ ವಿನಯಾ : ಬನ್ನೂರು ಸಮೀಪದ ಗೋಳ್ತಿಲದ ವಿನಯಾರವರನ್ನು ಪರನೀರು ಶೀನಪ್ಪ ಪೂಜಾರಿಯವರಿಗೆ ಮದುವೆ ಮಾಡಿಕೊಡಲಾಗಿತ್ತು. ಶೀನಪ್ಪ ಪೂಜಾರಿಯವರ ಸಹೋದರ ವಾಸು ಪೂಜಾರಿಯವರಿಗೆ ಶಂಭೂರು ಸಮೀಪದ ಯುವತಿಯೊಂದಿಗೆ ಮದುವೆಯಾಗಿತ್ತು. ವಾಸು ಪೂಜಾರಿಯವರ ಪತ್ನಿಯ ಸಹೋದರಿಯೊಂದಿಗೆ ತುಂಬೆಯ ಮಜ್ಜಿಮನೆ ನಿವಾಸಿ ಮುತ್ತಪ್ಪ ಪೂಜಾರಿಯವರ ಪುತ್ರ ದಯಾನಂದನಿಗೆ ಮದುವೆ ಮಾಡಿಕೊಡಲಾಗಿತ್ತು. ಈ ಮದುವೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವಿನಯಾರವರಿಗೂ ಮದುಮಗ ದಯಾನಂದನಿಗೂ ಆತ್ಮೀಯತೆ ಬೆಳೆದಿತ್ತು. ಬಳಿಕ ಇವರೊಂದಿಗೆ ನಿಕಟ ಸಂಪರ್ಕ ಬೆಳೆದು ವಿಶ್ವಾಸಾರ್ಹತೆ ಮೂಡಿತ್ತು. ಇದೇ ಹಿನ್ನಲೆಯಲ್ಲಿ ದಯಾನಂದನ ಕರೆಗೆ ಓಗೊಟ್ಟು ತೆರಳಿದ ವಿನಯಾರವರು ಆತನಿಂದಲೇ ಕೊಲೆಗೀಡಾಗಿದ್ದರು.
ಚಿನ್ನಾಭರಣಕ್ಕಾಗಿ ತಾನು ವಿನಯಾರವರನ್ನು ಕೊಲೆ ಮಾಡಿದ್ದೆ ಎಂದು ಪೊಲೀಸರಿಗೆ ದಯಾನಂದ ಹೇಳಿಕೆ ನೀಡಿದ್ದ: ವಿನಯಾರವರ ಶವದ ಮೇಲೆ ಮಣ್ಣು ಹಾಕಿ ಮುಚ್ಚಲು ಸಹಕರಿಸಿದ ಆರೋಪದಲ್ಲಿ ಬಂಟ್ವಾಳ ತಾಲೂಕು ಕೊಡ್ಮಣ್ ನಿವಾಸಿ ಡೋಗ್ರ ಪೂಜಾರಿಯವರ ಪುತ್ರ ಆನಂದ ಪೂಜಾರಿ (33ವ)ಯನ್ನು ಪೆÇಲೀಸರು ಬಂಧಿಸಿದ್ದರು. ಬಳಿಕ ಆನಂದ ಪೂಜಾರಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ದಯಾನಂದ ಪೂಜಾರಿ ಜೈಲಿನಲ್ಲಿಯೇ ಇದ್ದ. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆಗಿನ ನ್ಯಾಯಾಧೀಶರಾಗಿದ್ದ ಟಿ.ಜಿ. ಶಿವಶಂಕರೇ ಗೌಡರವರು ಪ್ರಮುಖ ಆರೋಪಿ ದಯಾನಂದ ಪೂಜಾರಿ ತಪ್ಪಿತಸ್ಥ ಎಂದು 2013ರ ಜುಲೈ 17ರಂದು ಘೋಷಿಸಿದ್ದರಲ್ಲದೆ ಜುಲೈ 20ರಂದು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದರು.
ಆನಂದ ಪೂಜಾರಿಯನ್ನು ನ್ಯಾಯಾಲಯ ದೋಷಮುಕ್ತಗೊಳಿಸಿತ್ತು. ಇದೀಗ ದಯಾನಂದ ಪೂಜಾರಿಯನ್ನು ಸನ್ನಡತೆ ಆಧಾರದಲ್ಲಿ ಜೈಲಿನಿಂದ ಬಿಡುಗಡೆಗೊಳಿಸಲು ಜೈಲಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ವಿನಯಾರವರ ಮನೆಯವರು ಮತ್ತು ಪುತ್ತೂರು ನಗರ ಠಾಣಾ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದಾರೆ. ವಿನಯಾರವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಮಟ್ಟದ ಪ್ರಮುಖ ವಾಹಿನಿಯವರೂ ಕೋಡಿಂಬಾಡಿಗೆ ಆಗಮಿಸಿ ವಿಶೇಷ ವರದಿ ಪ್ರಸಾರ ಮಾಡಿದ್ದರು.