ಪುತ್ತೂರು: 35 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸಿ ಬಿಲ್ಡಿಂಗ್ ಕಾಂಟ್ರಾಕ್ಟರ್ ಎಂಬ ಹೆಸರು ಗಳಿಸಿಕೊಂಡು ಮನೆ ಮಾತಾಗಿರುವ ಉದ್ಯಮಿ ಜೆ.ಕೆ ಕನ್‌ಸ್ಟ್ರಕ್ಷನ್ ಸಂಸ್ಥೆಯ ಜಯಕುಮಾರ್ ಆರ್.ನಾಯರ್ ಹಾಗೂ ಅವರ ಪತ್ನಿ ಸುನೀತಾ ಜೆ.ನಾಯರ್ ದಂಪತಿಗೆ ಜು.29ರಂದು ವೈವಾಹಿಕ ಜೀವನದ ಬೆಳ್ಳಿಹಬ್ಬದ ಸಂಭ್ರಮವಾಗಿದೆ.
ವೈವಾಹಿಕ ಜೀವನದ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಉದ್ಯಮಿ ಜಯಕುಮಾರ್ ಆರ್.ನಾಯರ್‌ರವರು ರೋಟರಿ ಕ್ಲಬ್ ಪುತ್ತೂರು ಈಸ್ಟ್ ಸದಸ್ಯರಾಗಿದ್ದು, ಶನಿವಾರ ದಿನದಂದು ರೋಟರಿ ಮನೀಷಾ ಸಭಾಂಗಣದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ವತಿಯಿಂದ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಜಯಕುಮಾರ್ ನಾಯರ್ ದಂಪತಿಗೆ ಶುಭಾಶಯ ಸಲ್ಲಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಜಯಕುಮಾರ್ ನಾಯರ್ ದಂಪತಿ ಸಂಭ್ರಮದ ಕೇಕ್ ಕತ್ತರಿಸುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದರು. ಈ ಸಂದರ್ಭದಲ್ಲಿ ಜಯಕುಮಾರ್ ನಾಯರ್ ದಂಪತಿ ಪುತ್ರ ಬಿಟೆಕ್ ಸಿವಿಲ್ ಇಂಜಿನಿಯರ್ ಸಿದ್ಧಾರ್ಥ್ ಜೆ.ನಾಯರ್, ಪುತ್ರಿ ಫಾರ್ಮ್ ಡಿ ಓದುತ್ತಿರುವ ಸಿಂಧ್ಯಾ ಜೆ.ನಾಯರ್, ಕುಟುಂಬಿಕರು, ಸ್ನೇಹಿತರು, ಹಿತೈಷಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವೈವಾಹಿಕ ಜೀವನದ ಕುರಿತು ಮಾತನಾಡಿದ ಸಂಪನ್ಮೂಲ ವ್ಯಕ್ತಿ, ನಿವೃತ್ತ ಉಪನ್ಯಾಸಕ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಚಂದ್ರಹಾಸ ರೈಯವರು, ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ. ಹುಡುಗ-ಹುಡುಗಿಯ ಎರಡು ಕುಟುಂಬಗಳ ಒಪ್ಪುಗೆಯ ಆಧಾರದಲ್ಲಿ ಮದುವೆ ನಡೆಯುತ್ತದೆ. ಹುಡುಗ-ಹುಡುಗಿ ಇವರುಗಳ ಮನಸ್ಸುಗಳ ನಡುವೆ ಮದುವೆ ನಡೆಯುತ್ತದೆ ಎಂಬುದು ವಾಡಿಕೆ. ಮದುವೆಯಾದ ಬಳಿಕ ಗಂಡ-ಹೆಂಡತಿ ಪರಸ್ಪರ ಅರಿತು, ಕಷ್ಟ-ಸುಖಗಳನ್ನು ಹಂಚಿಕೊಂಡು ಅನ್ಯೋನ್ಯತೆಯಿಂದ ಬಾಳಿದಾಗ ಬದುಕು ಸಾರ್ಥಕವೆನಿಸುತ್ತದೆ. ಇದಕ್ಕೆ ತಾಜಾ ಉದಾಹರಣೆ ಇಂದಿಲ್ಲಿ ತಮ್ಮ ವೈವಾಹಿಕ ಜೀವನದ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಜಯಕುಮಾರ್ ನಾಯರ್ ದಂಪತಿ ಎಂದು ಹೇಳಿ ವೈವಾಹಿಕ ಜೀವನದ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಉದ್ಯಮಿ ಜಯಕುಮಾರ್ ನಾಯರ್ ದಂಪತಿಗೆ ಶುಭ ಹಾರೈಸಿದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಿತ್ರಂಪಾಡಿ ಮಾತನಾಡಿ, ನೆರೆಯ ಕೇರಳ ರಾಜ್ಯದಿಂದ 35 ವರ್ಷದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಆಗಮಿಸಿ ಬದುಕನ್ನು ಕಂಡುಕೊಂಡವರು ಜಯಕುಮಾರ್ ನಾಯರ್. ಅವರ ಕಠಿಣ ತಪಸ್ಸಿನ ಫಲವಾಗಿ ಇಂದು ಓರ್ವ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ ಮಾತ್ರವಲ್ಲ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಸ್ವಾಗತಿಸಿ, ಮಾತನಾಡಿ, ಉದ್ಯಮಿ ಜಯಕುಮಾರ್ ನಾಯರ್‌ರವರು ತನ್ನ ಸ್ವಂತ ದುಡಿಮೆಯಿಂದ ನೆಲೆ ಕಂಡವರು ಮಾತ್ರವಲ್ಲ, ಹಲವಾರು ಮಂದಿ ಫಲಾನುಭವಿಗಳಿಗೆ ಸಹಾಯಹಸ್ತ ನೀಡುವ ಮೂಲಕ ಸಹಕಾರ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಯಕುಮಾರ್ ದಂಪತಿ 50ನೇ ವರ್ಷದ ಸಂಭ್ರಮವನ್ನು ಕಾಣುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಸೇರ್ಪಡೆ:
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ, ಪ್ರಗತಿಪರ ಕೃಷಿಕ, ಉದ್ಯಮಿಯಾಗಿರುವ ವಿಜಯಕುಮಾರ್ ಸೊರಕೆಯವರನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಿತ್ರಂಪಾಡಿಯವರು ರೋಟರಿ ಪಿನ್ ತೊಡಿಸಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್‌ಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು.
ದಾಮೋದರ್ ಪಾಟಾಳಿ ಪ್ರಾರ್ಥಿಸಿದರು. ಕಾರ್ಯದರ್ಶಿ ರವಿಕುಮಾರ್ ರೈ ವರದಿ ಮಂಡಿಸಿ, ವಂದಿಸಿದರು. ಕ್ಲಬ್ ನಿಕಟಪೂರ್ವ ಅಧ್ಯಕ್ಷ ಶರತ್ ಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಕೋಶಾಧಿಕಾರಿ ಶಶಿಧರ್ ಕಿನ್ನಿಮಜಲುರವರು ಸದಸ್ಯತನದ ಸಂಪೂರ್ಣ ಮೊತ್ತ ಪಾವತಿಸಿದ ಸದಸ್ಯರ ಪಟ್ಟಿಯನ್ನು ವಾಚಿಸಿದರು. ಬಳಿಕ ದಾಮೋದರ್ ಪಾಟಾಳಿಯವರ ನೇತೃತ್ವದಲ್ಲಿ ಮನರಂಜನೆ ಕಾರ್ಯಕ್ರಮ ನೆರವೇರಿತು.
ಪರಸ್ಪರ ಹಾರ ಹಾಕುವ ಮೂಲಕ 25 ವರ್ಷದ ಹಿಂದಿನ ಸಂಭ್ರಮದ ಮೆಲುಕು..
ಸಮಾರಂಭದಲ್ಲಿ ದಾಂಪತ್ಯ ಜೀವನದ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಉದ್ಯಮಿ ಜಯಕುಮಾರ್ ನಾಯರ್ ಹಾಗೂ ಸುನೀತಾ ಜೆ.ನಾಯರ್ ದಂಪತಿ ಪರಸ್ಪರ ಹಾರ ಹಾಕುವ ಮೂಲಕ ತನ್ನ 25 ವರ್ಷದ ಹಿಂದಿನ ಮದುವೆ ಸಂಭ್ರಮವನ್ನು ಮೆಲುಕು ಹಾಕಿಕೊಂಡರು. ಬಳಿಕ ಕ್ಲಬ್ ವತಿಯಿಂದ ದಾಂಪತ್ಯ ಜೀವನದ ಬೆಳ್ಳಿಹಬ್ಬದ ಸಂಭ್ರಮವನ್ನು ಆಚರಿಸುತ್ತಿರುವ ಜಯಕುಮಾರ್ ನಾಯರ್ ದಂಪತಿಯನ್ನು ಶಾಲು ಹೊದಿಸಿ ಸನ್ಮಾನಿಸಿ ಶುಭ ಕೋರಿ ಸಂಭ್ರಮದ ಸಾಕ್ಷಿಗಳಾದರು.
ಜೀವನವನ್ನು ಎಂಜಾಯ್ ಮಾಡಿ..
ದಾಂಪತ್ಯ ಜೀವನದ ಬೆಳ್ಳಿಹಬ್ಬವನ್ನು ಆಚರಿಸಿದ ಜಯಕುಮಾರ್ ನಾಯರ್‌ರವರು ಮಾತನಾಡಿ, 25 ವರ್ಷದ ಹಿಂದೆ ತಾನು ಮದುವೆಯಾಗಿರುವ ಸಂದರ್ಭದಲ್ಲಿ ಶುಭಾಶಯ ಮಾಡಲು ಬಂದ ಐವರು ಗೆಳೆಯರು ಇಂದು ಕೂಡ ಇಲ್ಲಿ ಉಪಸ್ಥಿತರಿದ್ದಾರೆ. ಜೀವನದಲ್ಲಿ ಎಲ್ಲರೂ ಹಣ ಮಾಡುವ ಉದ್ಧೇಶವನ್ನು ಹೊಂದಿರುವುದು ಸಹಜ ಮತ್ತು ಇದು ವ್ಯಕ್ತಿಯ ಸಣ್ಣ ಪ್ರಾಯದಲ್ಲಿ ಎಲ್ಲವೂ ಸಾಧ್ಯವೆನಿಸುವುದು. ಆದರೆ ಪ್ರಾಯ ಕಳೆದಂತೆ ಅದು ಸಾಧ್ಯವೆನಿಸಲಾರದು. ಬದುಕಿರುವ ಸಂದರ್ಭದಲ್ಲಿ ತಾನೂ ಸುಖದಲ್ಲಿ ಬದುಕಿ ಮತ್ತೊಬ್ಬರಿಗೆ ಸಹಾಯಹಸ್ತ ನೀಡುವ ಮೂಲಕ ಹಣವನ್ನು ಉತ್ತಮ ಕಾರ್ಯಕ್ಕೆ ವಿನಿಯೋಗ ಮಾಡುತ್ತಾ ಜೀವನವನ್ನು ಎಂಜಾಯ್ ಮಾಡುವಂತಿರಬೇಕು ಎಂದರು.