ಪುತ್ತೂರು: ಸಾರಿಗೆ ಇಲಾಖೆಯ ಅನುಮತಿ ಪಡೆಯದೆ ಪಿಕಪ್ ವಾಹನವನ್ನು ಟಿಪ್ಪರ್ ವಾಹನಗಳನ್ನಾಗಿ ಬದಲಾಯಿಸಿ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದಾರೆ. ಕೂಡಲೇ ಟಿಪ್ಪರ್ ಪರಿವರ್ತಿತ ವಾಹನಗಳನ್ನು ಮೊದಲಿನಂತೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ದರ್ಬೆ ಗೂಡ್ಸ್ ವಾಹನ ಚಾಲಕ ಮತ್ತು ಮಾಲಕರ ಸಂಘವು ಪುತ್ತೂರು ಸಂಚಾರಿ ಠಾಣೆಯ ಅಧಿಕಾರಿ ಉದಯರವಿಯವರಿಗೆ ಮನವಿ ಸಲ್ಲಿಸಿರುತ್ತಾರೆ.
ಬೆಳೆಯುತ್ತಿರುವ ಪುತ್ತೂರು ನಗರದಲ್ಲಿ ಸರಕು ಸಾಗಾಟ ಉದ್ಯಮವನ್ನು ನಂಬಿ ಸುಮಾರು 50ಕ್ಕೂ ಮಿಕ್ಕಿ ಪಿಕಪ್ ವಾಹನಗಳನ್ನು ಸಣ್ಣ ಉದ್ಯಮಿಗಳು ಯಾ ಚಾಲಕರ ಮೂಲಕ ನಡೆಸಿಕೊಂಡು ಬರುತ್ತಿರುವವರಾಗಿದ್ದಾರೆ. ಇತ್ತೀಚೆಗೆ ಈ ಪರಿಸರದ ಸುಮಾರು 50ಕ್ಕೂ ಮಿಕ್ಕಿ ಪಿಕಪ್ ವಾಹನಗಳನ್ನು ಟಿಪ್ಪರ್ ಗಳನ್ನಾಗಿ ಪರಿವರ್ತಿಸಿ ಅಕ್ರಮವಾಗಿ ಬಾಡಿಗೆ ಮಾಡುತ್ತಿರುವುದು ಕಂಡು ಬಂದಿದೆ.
ಗ್ರಾಹಕರು ಟಿಪ್ಪರ್ ಪರಿವರ್ತಿತ ವಾಹನಗಳನ್ನೇ ಅವರವರ ಸರಕು ಸಾಗಾಟ ಇತ್ಯಾದಿ ಸಾಗಿಸಲು ಆದ್ಯತೆ ನೆಲೆಯಲ್ಲಿ ಒಯ್ಯುತ್ತಿದ್ದು, ಇದರಿಂದ ನಮ್ಮ ಪಿಕಪ್ ವಾಹನಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಪಿಕಪ್ ವಾಹನದವರು ಸರದಿ ಸಾಲಿನಲ್ಲಿ ನಿಲ್ಲುವುದು ಮಾತ್ರ ಆಗಿದ್ದು ಬಾಡಿಗೆ ಇಲ್ಲವಾಗಿದೆ. ಇದೇ ರೀತಿ ಮುಂದುವರೆದಲ್ಲಿ ನಮ್ಮ ಪಿಕಪ್ ವಾಹನದ ಚಾಲಕ, ಮಾಲಕರಿಗೆ ಆದಾಯವಿಲ್ಲದೆ ಅವರ ಕುಟುಂಬ ಉಪವಾಸ ಬೀಳಬೇಕಾದ ಪರಿಸ್ಥಿತಿ ಎದುರಾಗಿದೆ.
ಆದ್ದರಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪಿಕಪ್ ವಾಹನ ಚಾಲಕ, ಮಾಲಕರ ಹಿತದೃಷ್ಟಿಯಿಂದ ಕೂಡಲೇ ಪರಿವರ್ತಿತ ವಾಹನಗಳನ್ನು ಮೊದಲಿನಂತೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಮನವಿ ನೀಡುತ್ತಿರುವ ಸಂದರ್ಭದಲ್ಲಿ ದರ್ಬೆ ಗೂಡ್ಸ್ ವಾಹನ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ದಿನೇಶ್ ನಾಯ್ಕ್ ದರ್ಬೆ ಹಾಗೂ ಪಿಕಪ್ ವಾಹನ ಚಾಲಕ, ಮಾಲಕರು ಉಪಸ್ಥಿತರಿದ್ದರು.
ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ..
ಮನವಿ ಸ್ವೀಕರಿಸಿ ಮಾತನಾಡಿದ ಸಂಚಾರ ಠಾಣೆಯ ಠಾಣಾಧಿಕಾರಿ ಉದಯರವಿರವರು, ಪಿಕಪ್ ಅನ್ನು ಟಿಪ್ಪರ್ ನ್ನಾಗಿ ಬದಲಾಯಿಸಿ ಬಾಡಿಗೆ ಮಾಡುತ್ತಿರುವ ವಾಹನ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ, ಜೊತೆಗೆ ಆಟೋರಿಕ್ಷಾಗಳು ಕೇವಲ ಪ್ಯಾಸೆಂಜರ್ ಗಳನ್ನು ಕೊಂಡೊಯ್ಯಲು ಇರುವಂತಹುದು. ಆದರೆ ಆಟೋ ರಿಕ್ಷಾಗಳಲ್ಲಿ ಲೋಡುಗಟ್ಟಲೇ ಸಾಮಾನುಗಳನ್ನು ಕೊಂಡೊಯ್ಯುತ್ತಿರುವುದೂ ಕೂಡ ಗಮನಕ್ಕೆ ಬಂದಿರುತ್ತದೆ. ಅಂತವರ ವಿರುದ್ಧವೂ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿರುತ್ತಾರೆ ಎಂದು ದರ್ಬೆ ಗೂಡ್ಸ್ ವಾಹನ ಚಾಲಕ ಮತ್ತು ಮಾಲಕರ ಸಂಘವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ಸಾರಿಗೆ ಇಲಾಖೆಯ ಅನುಮತಿ ಪಡೆಯದೆ ಪಿಕಪ್ ನ್ನು ಟಿಪ್ಪರ್ ನ್ನಾಗಿ ಬದಲಾಯಿಸಿ ಬಾಡಿಗೆ – ಕ್ರಮ...