ಸ್ವಾರ್ಥದ ಪ್ರೀತಿ ಶಾಶ್ವತವಲ್ಲ : ಮಾಣಿಲ ಶ್ರೀ
ವಿಟ್ಲ: ಮನುಷ್ಯ ಜನ್ಮ ಶ್ರೇಷ್ಠವಾದುದು. ಮನುಷ್ಯ ತನ್ನ ತನವನ್ನು ಮರೆಯುತ್ತಿದ್ದಾನೆ. ಅದನ್ನು ನೆನಪಿಸುವ ಕೆಲಸ ವಾಗಬೇಕು. ನಮ್ಮಲ್ಲಿ ಪರಿಶುದ್ಧತೆ ಅಗತ್ಯ. ಜೀವನದಲ್ಲಿ ಭಕ್ತಿ ಮುಖ್ಯ. ಸ್ವಾರ್ಥದ ಪ್ರೀತಿ ಶಾಶ್ವತವಲ್ಲ. ನಾವು ಮಾಡುವ ಕೆಲಸದ ಬಗ್ಗೆ ನಮಗೆ ಅರಿವಿರಬೇಕು ಎಂದು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಾಲಕ್ಷ್ಮೀ ವ್ರತಾಚರಣೆ ಬೆಳ್ಳಿಹಬ್ಬ ಮಹೋತ್ಸವದ ಅಂಗವಾಗಿ 48 ದಿನಗಳ ಕಾಲ ನಡೆಯುವ ಸಾಮೂಹಿಕ ಶ್ರೀಲಕ್ಷ್ಮೀ ಪೂಜೆಯ ಹದಿನೈದನೇ ದಿನವಾದ ಜು.30 ರಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ನಾವೆಲ್ಲರೂ ಭಾವನಾತ್ಮಕವಾಗಿ ಬೆಳೆಯಬೇಕು. ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು. ಭಾವನಾತ್ಮಕ ಪ್ರತಿಕ್ರೀಯೆ ನಮ್ಮಲ್ಲಿರಬೇಕು. ನಾವೆಲ್ಲರೂ ಸ್ವಾರ್ಥ ಭಾವನೆಯಿಂದ ಹೊರಬರಬೇಕಿದೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಈ ವೈಶಿಷ್ಟ್ಯ ಇತಿಹಾಸದ ಪುಟ ಸೇರಬೇಕಿದೆ. ಗುರುಗಳ ಸಂಕಲ್ಪ ಇಲ್ಲಿ ಸಕಾರವಾಗುತ್ತಿದೆ. ವ್ಯರ್ಥ ಸಂಘರ್ಷವನ್ನು ನಿಲ್ಲಿಸಿ ಭಾವೈಕ್ಯತೆಯ ಜೀವನ ಸಾಗಿಸುವ ಮನಸ್ಸು ನಿಮ್ಮದಾಗಲಿ. ಎಲ್ಲರನ್ನು ನಮ್ಮವರೆಂದು ಕಾಣುವ ಮನಸ್ಸು ನಮ್ಮದಾಗಬೇಕು ಎಂದರು.
ಬರೆಪ್ಪಾಡಿ ತಂತ್ರಿವರ್ಯರಾದ ಪ್ರಸಾದ್ ಪಾಂಗಣ್ಣಾಯ ಧಾರ್ಮಿಕ ಉಪನ್ಯಾಸ ನೀಡಿದರು. ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢ ಶಾಲೆಯ ಶಿಕ್ಷಕ ಯತಿರಾಜ್, ವಕೀಲೆ ಅಶ್ವಿನಿ ತಚ್ಚಮೆ, ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ, ಕಾರ್ಯದರ್ಶಿ ಗೀತಾ ಪುರುಷೋತ್ತಮ ಮೊದಲಾದವರು ಉಪಸ್ಥಿತರಿದ್ದರು. ಅಶ್ವಿತ್ ಕುಲಾಲ್ ಪಡಂಗಡಿ ಕಾರ್ಯಕ್ರಮ ನಿರೂಪಿಸಿದರು.
ವೈದ್ಧಿಕ ಕಾರ್ಯಕ್ರಮ:
ವೈದ್ಧಿಕ ಕಾರ್ಯಕ್ರಮದ ಅಂಗವಾಗಿ ಗಣಪತಿ ಯಾಗ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ವಾಯನದಾನ, ಶ್ರೀಗುರು ಪೂಜೆ, ಬಾಲಭೋಜನ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ ನಡೆಯಿತು. ಬಳಿಕ ಶನಿಪೂಜೆ, ಧನ್ವಂತರಿ ಹವನ, ಸಾಮೂಹಿಕ ಕುಂಕುಮಾರ್ಚನೆ, ನಡೆದು ಮಧ್ಯಾಹ್ನ ಯಾಗದ ಪೂರ್ಣಾವತಿ, ಮಹಾಪೂಜೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.