ಪುತ್ತೂರು: ಮೊಗೇರ ಸಮಾಜದ ವಿಧ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ಸರ್ಕಾರದ ಉನ್ನತ ಹುದ್ದೆಗಳನ್ನು ಪಡೆಯುವಂತಾಗಬೇಕು ಎಂದು ಕಂದಾಯ ಇಲಾಖೆಯ ಉಪತಹಶೀಲ್ದಾರ್ ವಿಜಯ್ ವಿಕ್ರಂ ಗಾಂಧಿಪೇಟೆ ಹೇಳಿದರು.
ಅವರು ಒಡಿಯೂರು ಶ್ರೀಗಳ ಜನ್ಮದಿನ – ಗ್ರಾಮೋತ್ಸವದ ಪ್ರಯುಕ್ತ ಮೊಗೇರ ಸಂಘ ಆಲಂಕಾರು ಮಂಡಲ ಮತ್ತು ತನ್ನಿಮಾನಿಗ ಮೊಗೇರ ಮಹಿಳಾ ಸಂಘ ಇದರ ಆಶ್ರಯದಲ್ಲಿ ಜು.30 ರಂದು ಕುಂಡಾಜೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಾಮೂಹಿಕ ವಿವಾಹ, ಕ್ರೀಡಾಕೂಟ, ನೇಮೋತ್ಸವ, ಶ್ರಮದಾನ, ಮೊಗೇರ್ಕಳ ಚರಿತ್ರೆ, ಹೀಗೆ ಸಮುದಾಯದಲ್ಲಿ ಹಲವು ಪ್ರಥಮಗಳನ್ನು ಆರಂಭಿಸಿದ ಕೀರ್ತಿ ಆಲಂಕಾರು ಮೊಗೇರ ಸಂಘಕ್ಕೆ ಇರುವುದು ನಮಗೆ ಹೆಮ್ಮೆ ತಂದಿದೆ ಎಂದರು.
ಮೊಗೇರ ಸಂಘದ ಗೌರವ ಸಲಹೆಗಾರ ಕರಿಯ ಗಾಣಂತಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಸೇವಾ ಕಾರ್ಯ ಚಟುವಟಿಕೆಯ ವರದಿಯನ್ನು ಜನಾರ್ಧನ ಗಾಣಂತಿ ವಾಚಿಸಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೊಗೇರ ಸಂಘದ ಅಧ್ಯಕ್ಷ ಬಾಲಕೃಷ್ಣ ಕೇಪುಳುರವರು, ಸಮುದಾಯದ ವಿಧ್ಯಾರ್ಥಿಗಳು ವೈಯುಕ್ತಿಕ ಸ್ವಚ್ಚತೆಯ ರೂಢಿ ಜೊತೆಗೆ ಜೀವನದಲ್ಲಿ ಉನ್ನತ ಗುರಿಯನ್ನು ಸಾಧಿಸುವುದರತ್ತ ಪ್ರಯತ್ನಶೀಲರಾಗಬೇಕು ಹಾಗೂ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಕುಂಡಾಜೆ ಘಟ ಸಮಿತಿ ಇದರ ಸಂಘಟನಾ ಕಾರ್ಯದರ್ಶಿ ಗುರುವಪ್ಪ ಕುಂಡಾಜೆ ಉಪಸ್ಥಿತರಿದ್ದರು. ಸಮುದಾಯದ ಮುಖಂಡ ಡಾ. ರಘು ಬೆಳ್ಳಿಪ್ಪಾಡಿ, ಕುಂಡಾಜೆ ಶಾಲಾ ಶಿಕ್ಷಕಿ ರೇಶ್ಮಾ ಶುಭಹಾರೈಸಿದರು. ಪ್ರಗತಿ ಪರ ಕೃಷಿಕ ಕೃಷ್ಣ ಕೆಮ್ಮಾರ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ನೀಡಿದರು. ಕುಂಡಾಜೆ ಶಾಲೆಯ ಮತ್ತು ಸ್ವಜಾತಿಯ 120 ಕ್ಕೂ ಹೆಚ್ಚು ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು. ಅಮರಶ್ರೀ ಹಾಗೂ ಅಶ್ವಿತಾ ಪ್ರಾರ್ಥಿಸಿದರು. ಕೃಷ್ಣ ಗಾಣಂತಿ ಸ್ವಾಗತಿಸಿದರು, ಮಹಾಬಲ ಪಡುಬೆಟ್ಟು ವಂದಿಸಿದರು. ಕಾರ್ಯದರ್ಶಿ ಸಂದೀಪ್ ಪಾಂಜೋಡಿ ಕಾರ್ಯಕ್ರಮ ನಿರ್ವಹಿಸಿದರು. ಮೊಗೇರ ಸಂಘ ಆಲಂಕಾರು ಮಂಡಲದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.